ಕನ್ನಡ ಸುದ್ದಿ  /  Lifestyle  /  International Women Day 2024 Gift Ideas Can Be Given To Your Loving Ladies Including Watch Handbag Bgy

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಜೀವನದ ಭಾಗವಾಗಿರುವ ನಿಮ್ಮ ಪ್ರೀತಿಯ ಹೆಣ್ಮಕ್ಕಳಿಗೆ ಈ ಉಡುಗೊರೆಗಳನ್ನು ಕೊಟ್ಟುನೋಡಿ

International women day 2024: ಮಹಿಳಾ ದಿನಾಚರಣೆಯಂದು ನಿಮ್ಮ ಜೀವನದಲ್ಲಿ ಎಲ್ಲವೂ ಆಗಿರುವ ಮಹಿಳೆಯರಿಗೆ ಪ್ರೀತಿ-ಗೌರವ ನೀಡಿ ಶುಭಕೋರಿ. ಮೆಚ್ಚುವಂತಹ ಉಡುಗೊರೆಗಳನ್ನು ನೀಡಿ ಅವರ ಸಂಭ್ರಮಕ್ಕೆ ನೀವೇ ಕಾರಣರಾಗಿ. ಆದರೆ ಯಾರಿಗೆ ಯಾವ ಉಡುಗೊರೆ ಕೊಡುವುದು ಎಂಬ ಗೊಂದಲವಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಮ್ಮ ಪ್ರೀತಿಯ ಹೆಣ್ಣು ಮಕ್ಕಳಿಗೆ ನೀಡಬಹುದಾದ ಗಿಫ್ಟ್‌ ಐಡಿಯಾಗಳು
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಮ್ಮ ಪ್ರೀತಿಯ ಹೆಣ್ಣು ಮಕ್ಕಳಿಗೆ ನೀಡಬಹುದಾದ ಗಿಫ್ಟ್‌ ಐಡಿಯಾಗಳು (PC: Unsplash)

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024: ಮಹಿಳೆ, ಕುಟುಂಬದ ಕಣ್ಣಾಗಿ, ತಾಯಿ, ಪತ್ನಿ, ಮಗಳು, ಅಕ್ಕ-ತಂಗಿ ಹೀಗೆ ಅನೇಕ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸಿಕೊಂಡು ಹೋಗಬಲ್ಲ ಚೈತನ್ಯ. ಕುಟುಂಬ ಜೊತೆಗೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯ ಪಾತ್ರ ವಿಶೇಷವಾದದ್ದು. ಅವರ ತ್ಯಾಗವನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

ಆದರೆ ನಿಮ್ಮ ಜೀವನದ ಒಂದೊಂದು ಹಂತದಲ್ಲೂ ವಿಶೇಷ ಪಾತ್ರ ವಹಿಸುವ ಸ್ತ್ರೀಯರಿಗೆ ʻಮಹಿಳಾ ದಿನಾಚರಣೆʼಯಂದು ಶುಭಾಶಯಗಳನ್ನು ಮಾತ್ರ ತಿಳಿಸಿದರೆ ಸಾಕೇ? ಅದಕ್ಕೂ ಹೆಚ್ಚಿನದಾಗಿ ಪ್ರೀತಿಯ ಉಡುಗೊರೆಯನ್ನು ಕೊಟ್ಟು ಆ ಸಂಭ್ರಮವನ್ನು ಇಮ್ಮಡಿಗೊಳಿಸಬೇಕು ಅಂದುಕೊಂಡಿದ್ದೀರಾ ? ಮಹಿಳೆಯರಿಗಾಗಿ ಮೀಸಲಿರುವ ಈ ದಿನದಂದು ಅವರಿಗೆ ಕೊಡಬಲ್ಲ ಉಡುಗೊರೆಗಳ ಮಾಹಿತಿ ಇಲ್ಲಿದೆ.

ತಾಯಿಗೆ ಯಾವ ಉಡುಗೊರೆ ಕೊಡೋದು ?

ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನಿಮ್ಮ ತಾಯಿಗೆ ಯಾವ ಉಡುಗೊರೆ ಕೊಟ್ಟರೆ ಒಳ್ಳೇಯದು ಎಂದು ಯೋಚಿಸ್ತಿದ್ದೀರಾ? ತಾಯಿಗೆ ಕೊಡಬಹುದಾದ ಅತಿ ದೊಡ್ಡ ಉಡುಗೊರೆಯೆಂದರೆ ಅದು ನಿಮ್ಮ ಸಮಯ ಮಾತ್ರ. ಒತ್ತಡದ ಜೀವನದ ನಡುವೆ ಅವರಿಗಾಗಿ ಬಿಡುವು ಮಾಡಿಕೊಂಡು ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಿರಿ. ಇದಲ್ಲದೇ ಅಡುಗೆ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಅವರಿಗೆ, ಅಡುಗೆ ಕೆಲಸದಲ್ಲಿಯೇ ಸಹಾಯ ಮಾಡಿ. ಇದಲ್ಲದೆ, ನೀವು ಏನಾದರೂ ಉಡುಗೊರೆಯನ್ನು ನೀಡಲು ಬಯಸಿದರೆ, ಅವರಿಗೊಪ್ಪುವ ಬಣ್ಣದ ಸೀರೆ ಅಥವಾ ಬಳೆಗಳನ್ನು ನೀಡಬಹುದು. ಆನ್‌ಲೈನ್ ವೆಬ್‌ಸೈಟ್‌ಗಳ ಮೂಲಕವೂ ನೀವು ಅವರಿಗೆ ವಿಶೇಷ ಉಡುಗೊರೆಯನ್ನು ಖರೀದಿಸಬಹುದು.

ಜೀವ-ಜೀವನದ ಪಾಲುದಾರಳು ಪತ್ನಿ

ಪತಿಯಿಂದ ಉಡುಗೊರೆ ಪಡೆದುಕೊಳ್ಳುವ ಪತ್ನಿಯ ಖುಷಿ ಪದಗಳಿಗೆ ಸಿಗಲಾರದಂಥದ್ದು. ಅದಕ್ಕಾಗಿಯೇ ನಿಮ್ಮ ಹೆಂಡತಿಗೆ ವಿಶೇಷ ಉಡುಗೊರೆಯನ್ನು ನೀಡುವ ಮೂಲಕ ಆ ಖುಷಿಯನ್ನು ಇಮ್ಮಡಿಗೊಳಿಸಿ. ಕಿವಿಯೋಲೆಗಳು, ವಾಚ್‌, ಹೂವುಗಳನ್ನು ಉಡುಗೊರೆಯಾಗಿ ಆಯ್ಕೆ ಮಾಡಬಹುದು. ಅದಕ್ಕೆ ಹೊರತಾಗಿಯೂ ಅವರ ಆಸಕ್ತಿಯನ್ನು ಹೆಚ್ಚಿಗೆ ತಿಳಿದಿರುವ ನೀವು ಅದಕ್ಕೊಪ್ಪುವ ಉಡುಗೊರೆಯನ್ನೇ ಕೊಡಬಹುದು. ನಿಮಗಾಗಿ ಜೀವನವನ್ನೇ ಮುಡಿಪಾಗಿರಿಸಿ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ರುಚಿಕರ ಅಡುಗೆಗಳನ್ನು ತಯಾರಿಸಿ ಉಣಬಡಿಸುವ ಅವರಿಗೆ ಒಂದು ದಿನದ ಬಿಡುವು ನೀಡಿ. ಆರಾಮವಾಗಿ ಹೊರಗಡೆ ಸುತ್ತಾಡಿಸಿಕೊಂಡು ಅವರಿಗಿಷ್ಟವಾಗುವ ರೆಸ್ಟೋರೆಂಟ್‌ ನಲ್ಲಿ ಮೆಚ್ಚುಗೆಯಾಗುವ ಆಹಾರವನ್ನು ಕೊಡಿಸಬಹುದು.

ಮಗಳೆಂಬ ದೇವತೆಗಿರಲಿ ಅಪ್ಪನ ಪ್ರೀತಿ-ಕಾಳಜಿ

ನಿಮ್ಮ ಮಗಳು ಚಿಕ್ಕವಳಾಗಿದ್ದರೆ ಚಿಂತಿಸದೆ ಅವಳಿಗಿಷ್ಟವಾಗುವ ಚಾಕೊಲೇಟ್, ಕೇಕ್ ಅಥವಾ ಯಾವುದೇ ನೆಚ್ಚಿನ ಉಡುಗೊರೆಯನ್ನು ನೀಡಬಹುದು. ಇದಲ್ಲದೆ, ಈ ದಿನ ನೀವು ಅವಳಿಗಾಗಿ ಮೀಸಲಿಟ್ಟು ಅವಳ ಬೇಡಿಕೆಗಳಿಗೆ ಓಗೊಡಬಹುದು. ನಿಮ್ಮ ಮಗಳು ದೊಡ್ಡವಳಾಗಿದ್ದರೆ ಈ ದಿನ ಆಕೆಯೊಂದಿಗೆ ಡ್ರೈವ್‌ ಹೋಗೋದೋ, ಇಲ್ಲವೇ ಆನ್‌ಲೈನ್‌ ನಲ್ಲಿ ಉಡುಗೊರೆಗಳ ಆಯ್ಕೆಯನ್ನು ಅವಳಿಗೆ ಬಿಟ್ಟುಕೊಡಬಹುದು.

ಅಕ್ಕರೆ ತೋರುವ ಅಕ್ಕ- ತಂಗಿಯರಿದ್ದರೆ ತಪ್ಪದೇ ಶುಭಕೋರಿ

ಹೆಣ್ಣು ದೌರ್ಬಲ್ಯವಲ್ಲ, ಆಶೀರ್ವಾದ ಎಂಬುದನ್ನು ನಿಮ್ಮ ಸಹೋದರಿಗೆ ಹೇಳಿ. ಸ್ವಯಂ ರಕ್ಷಣೆಯ ಅರಿವು ಮೂಡಿಸುವುದರ ಜೊತೆಗೆ ಸಮಾಜದಲ್ಲಿ ಹೇಗಿರಬೇಕು ಎಂಬುದರ ಅರಿವು ಮೂಡಿಸಿ. ಅವರ ಬೆಂಗಾವಲಾಗಿ ಎಂದಿಗೂ ಇರುವ ಭರವಸೆ ನೀಡುವ ಜೊತೆಗೆ ಅವರಿಗೆ ಪರ್ಸ್, ಹ್ಯಾಂಡ್ ಬ್ಯಾಗ್‌ ಅಥವಾ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು.

ಜೀವದ ಗೆಳತಿಯರಿಗೆ ಮನಕ್ಕೊಪ್ಪುವ ಉಡುಗೊರೆಯಿರಲಿ

ಬಾಲ್ಯದ ಗೆಳತಿಯರು, ಕಾಲೇಜು ಜೀವನದ ಗೆಳತಿಯರು ಅಥವಾ ಜೀವನದುದ್ದಕ್ಕೂ ನಿಮ್ಮೊಂದಿಗೆ ಇರ ಬಯಸುವ ಜೀವದ ಗೆಳತಿಗೆ ಮಹಿಳಾ ದಿನಾಚರಣೆಯಂದು ಉಡುಗೊರೆ ಕೊಡಬಯಸುತ್ತೀರಾ..? ಯಾವ ಆಯ್ಕೆ ಸೂಕ್ತವೆನ್ನುವ ಯೋಚನೆಯಲ್ಲಿದ್ದೀರಾ..? ಹೆಣ್ಣುಮಕ್ಕಳಿಗೆ ಚಾಕೊಲೇಟ್, ಹೂವುಗಳು ಅಥವಾ ಪುಸ್ತಕಗಳೇ ಹೆಚ್ಚಿಗೆ ಪ್ರಿಯವಾಗುತ್ತದೆ. ಇವು ನಿಮ್ಮ ಬಗ್ಗೆ ಅವರಲ್ಲಿ ವಿಶೇಷ ಭಾವನೆ ಮೂಡಿಸುವಲ್ಲಿ ನೆರವಾಗುತ್ತದೆ.. ಇದಕ್ಕೆ ಹೊರತಾಗಿ ಟ್ರೆಂಡ್‌ಗೆ ತಕ್ಕಂತೆ ಶೋಕೇಸ್‌ನಲ್ಲಿಡಲು ಯೋಗ್ಯವಾದ ಉಡುಗೊರೆಗಳು, ಇಂಡೋರ್‌ ಗಿಡಗಳು, ಇಲ್ಲವಾದರೆ ಧನ್ಯವಾದ ತಿಳಿಸುವ ಕಾರ್ಡನ್ನು ಉಡುಗೊರೆಯಾಗಿ ನೀಡಬಹುದು.

ಬರಿಯ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಸಂದರ್ಭಗಳಲ್ಲಿ ಮಾತ್ರವೇ ನಿಮ್ಮ ಜೀವನದಲ್ಲಿ ಪ್ರಿಯರಾಗಿರುವ ಮಹಿಳೆಯರಿಗೆ ಶುಭಕೋರಿ ಉಡುಗೊರೆ ನೀಡಿದರೆ ಸಾಲದು. ಅಂತರರಾಷ್ಟ್ರೀಯ ಮಹಿಳಾ ದಿನದಂದು ನಿಮ್ಮ ಜೀವನದಲ್ಲಿ ಅವರ ಪಾತ್ರವನ್ನು ಅವರಿಗೆ ಅರಿವಾಗುವಂತೆ ಉಡುಗೊರೆ ನೀಡುವ ಮೂಲಕ ತಿಳಿಸಿ ನೋಡಿ, ಜೀವನ ಸರಳ ಸುಂದರವಾಗುತ್ತದೆ.