ಕನ್ನಡ ಸುದ್ದಿ  /  Lifestyle  /  International Women Day 2024 Global Women Issues Gender Equality Problem In America Switzerland Russia Rsm

Women's Day Special: ಹೆಂಡತಿಗೆ ಹೊಡೆಯುವುದೂ ಈ ದೇಶದಲ್ಲಿ ಹಕ್ಕು, ಸಮಾನ ವೇತನ ವಿಶ್ವದೆಲ್ಲೆಡೆ ಮರೀಚಿಕೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ವಿಶ್ವ ಮಹಿಳಾ ದಿನ: ಹೆಣ್ಣನ್ನು ಶಕ್ತಿ ಸ್ವರೂಪಿ ಎಂದೆಲ್ಲಾ ಹಾಡಿ ಹೊಗಳುವ ನಾವು ನಿಜವಾಗಿಯೂ ಸಲ್ಲಬೇಕಾದ ಗೌರವ ನೀಡುತ್ತಿದ್ದೇವೆಯೇ? ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ನಿಮಗೂ ಸಾಕಷ್ಟು ಗೊತ್ತಿದೆ. ಅಮೆರಿಕ, ನೈಜೀರಿಯಾ, ಈಜಿಪ್ಟ್ ದೇಶಗಳಲ್ಲಿ ಈ ಮಹಿಳಾ ವಿರೋಧಿ ಕಾನೂನುಗಳು ಅಧಿಕೃತವಾಗಿಯೇ ಅಸ್ತಿತ್ವದಲ್ಲಿವೆ.

ಮಹಿಳೆಗೆ ತನ್ನದೇ ಆದ ಅಸ್ತಿತ್ವವಿದೆ (ಎಡಚಿತ್ರ), ಎನ್‌ಫೀಲ್ಡ್‌-ಬುಲೆಟ್ ಬೈಕ್‌ನಲ್ಲಿ ದೇಶ ಸುತ್ತುವ ಯುವತಿ ಆತ್ಮಿಕಾ ರಾಮಚಂದ್ರ (ಬಲಚಿತ್ರ)
ಮಹಿಳೆಗೆ ತನ್ನದೇ ಆದ ಅಸ್ತಿತ್ವವಿದೆ (ಎಡಚಿತ್ರ), ಎನ್‌ಫೀಲ್ಡ್‌-ಬುಲೆಟ್ ಬೈಕ್‌ನಲ್ಲಿ ದೇಶ ಸುತ್ತುವ ಯುವತಿ ಆತ್ಮಿಕಾ ರಾಮಚಂದ್ರ (ಬಲಚಿತ್ರ)

ನಾವು ಭಾರತೀಯರು ನಾರಿಯನ್ನು ಶಕ್ತಿ ಸ್ವರೂಪಿ ಎಂದು ಪೂಜಿಸುತ್ತೇವೆ. ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಚಿಕ್ಕಮ್ಮ, ದೊಡ್ಡಮ್ಮ ಎಂದು ಹೇಳುತ್ತಾ ಹೋದರೆ ಆಕೆಯ ಪಾತ್ರಕ್ಕೆ ಕೊನೆಯೇ ಇಲ್ಲ. ಅವರಿಲ್ಲದೆ ನಮ್ಮ ಬದುಕಿಲ್ಲ. ಅವರನ್ನು ಹೀಗೆಲ್ಲಾ ಹಾಡಿ ಹೊಗಳುತ್ತೇವೆ, ಆದರೆ ಆಕೆಗೆ ನಿಜವಾಗಿಯೂ ಸಲ್ಲಬೇಕಾದ ಗೌರವವನ್ನು ನೀಡುತ್ತಿದ್ದೇವೆಯೇ? ನಮ್ಮದು ಇಂದಿಗೂ ಪುರುಷ ಪ್ರಧಾನ ಸಮಾಜ.

ಮೊನ್ನೆ ನನ್ನ ಸೋದರ ಸಂಬಂಧಿ ಪದ್ಯಾಣ ರಾಮಚಂದ್ರ ಅವರ ಮಗಳು ಆತ್ಮಿಕ ರಾಮಚಂದ್ರ ಮನೆಗೆ ಬಂದಿದ್ದಳು. ಬೆಂಗಳೂರಿನಿಂದ ಆಕೆ ರಾಯಲ್ ಎನ್‌ಫೀಲ್ಡ್‌-ಬುಲೆಟ್ ಬೈಕ್‌ನಲ್ಲಿ ಬಂದಿದ್ದಳು. ರಸ್ತೆಯಲ್ಲಿ ಹೋಗುವರೆಲ್ಲಾ, 'ಇದೇನಿದು ಹುಡುಗಿ ಬೈಕ್, ಅದರಲ್ಲೂ ಬುಲೆಟ್ ಓಡಿಸುತ್ತಿದ್ದಾಳೆ' ಎನ್ನುವ ನೋಟವನ್ನು ಬೀರುತ್ತಿದ್ದರು. ನಮಗೆ ಅನ್ನಿಸಿದ್ದ ಮಾಡಲು ನಮ್ಮ ಜೆಂಡರ್ ಎಂದಿಗೂ ಅಡ್ಡಿಯಾಗಬಾರದು. ಮಂಗಳೂರಿನಲ್ಲಿ ಪ್ರಸಿದ್ಧರಾಗಿದ್ದ ಪಗೋ, ಪದ್ಯಾಣ ಗೋಪಾಲಕೃಷ್ಣ ಭಟ್ ಅವರ ಮೊಮ್ಮಗಳು ಆತ್ಮಿಕ. ಇಂದಿನ ನಮ್ಮ ಸಮಾಜದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಮಾದರಿ. ಬೈಕ್ ಇರಬಹುದು , ಚಾರಣ, ಡೆನ್ಮಾರ್ಕ್, ಸ್ಪೇನ್, ಮಂಗಳೂರು, ಬೆಂಗಳೂರು ಅಥವಾ ಮೈಸೂರು ನಿರ್ಭಿಡೆಯಿಂದ ಹೊರಟು ಬಿಡುತ್ತಾಳೆ. ಗಂಡು ಪ್ರಾಣಿಗೆ ಟಕ್ಕರ್ ಕೊಡಬೇಕು ಎನ್ನುವುದು ಅವಳ ಸಿದ್ಧಾಂತವಲ್ಲ. ತನ್ನಿಚ್ಛೆಯ ಬದುಕನ್ನು ಬದುಕುವ ಕಲೆ ಆಕೆಗೆ ದಕ್ಕಿದೆ.

ಮಹಿಳೆಗೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯವಿಲ್ಲ ಎಂದುಕೊಳ್ಳುವ ಮುನ್ನ ಕೆಳಗಿನ ಒಂದಷ್ಟು ಸಾಲುಗಳನ್ನು ದಯವಿಟ್ಟು ಓದಿ. ಹೀಗಿದ್ದ ಮಾತ್ರಕ್ಕೆ ಭಾರತ ಪರವಾಗಿಲ್ಲ ಎಂದಲ್ಲ. ನಾವು ರಸ್ತೆಯಲ್ಲಿ ಹೆಣ್ಣುಮಕ್ಕಳನ್ನು ಸ್ಟೇರ್ -ದುರುಗುಟ್ಟಿ ನೋಡುವುದು ಬಿಡಬೇಕು. ಇದು ನಮ್ಮ ಸಮಾಜದ ದೊಡ್ಡ ವ್ಯಸನವಾಗಿದೆ. ರಸ್ತೆಯಲ್ಲಿ ನಡೆಯುವ ಹೆಣ್ಣು ಮಗಳು ನಿಮ್ಮ ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳತಿಯಂತೆ ಮತ್ತೊಬ್ಬರಿಗೂ ಕೂಡ ಅಮ್ಮ, ಅಕ್ಕ ಇತ್ಯಾದಿ ಎನ್ನುವುದನ್ನು ಮರೆಯಬೇಡಿ. ಮೇಲು-ಕೀಳು ಬಿಟ್ಟು ನಾವು ಒಂದು ಎಂದು ನಡೆಯುವುದರಲ್ಲಿ ಸುಖವಿದೆ.

1) ಅಮೆರಿಕಾದ 7 ರಾಜ್ಯಗಳಲ್ಲಿ ಇಂದಿಗೂ ಅತ್ಯಾಚಾರ ಎಸಗಿದ (ರೇಪಿಸ್ಟ್) ವ್ಯಕ್ತಿ ಮಗುವಿನ ಕಸ್ಟಡಿ ಪಡೆಯಬಹದು . ಅಂದರೆ ಆಕಸ್ಮಿಕವಾಗಿ ಇಂತಹ ಸಮಯದಲ್ಲಿ ಸಂತ್ರಸ್ತೆಯು (ವಿಕ್ಟಿಮ್) ಮಗುವಿಗೆ ಜನ್ಮವಿತ್ತರೆ ಅತ್ಯಾಚಾರಿಯು ಆ ಮಗುವಿನ ಪೂರ್ಣ ಜವಾಬ್ದಾರಿ (ಫುಲ್ ಕಸ್ಟಡಿ) ಅಥವಾ ಜಂಟಿ ಜವಾಬ್ದಾರಿ (ಜಾಯಿಂಟ್ ಕಸ್ಟಡಿ) ಪಡೆಯಬಹುದು.

2) ಸೌದಿ ಅರೇಬಿಯಾ ಹೆಂಗಸಿಗರಿಗೆ ಮತದಾನದ ಅವಕಾಶ ನೀಡಿದ್ದು 2015ರಲ್ಲಿ. ತೀರಾ ಇತ್ತೀಚಿನವರೆಗೆ ಹೆಂಗಸರು ಅಲ್ಲಿ ಡ್ರೈವ್ ಮಾಡುವಂತಿರಲಿಲ್ಲ.

3) ಈಜಿಪ್ಟ್‌ನಲ್ಲಿ ಮದುವೆಯಾದ ಹೆಂಗಸು ತರಕಾರಿ, ಹಾಲು-ಹಣ್ಣು ಇತ್ಯಾದಿ ತರಲು ಮಾತ್ರ ಹೊರಗೆ ಹೋಗಬಹುದು. ಇದಲ್ಲದೆ ಬೇರೆ ಕಾರಣಗಳಿಗೆ ಮನೆಯಿಂದ ಹೊರ ಹೋಗಲು ಆಕೆಗೆ ಗಂಡನ ಅನುಮತಿ ಬೇಕು.

4) ಇಂದಿಗೂ ಜಗತ್ತಿನ 30 ಕ್ಕೂ ಹೆಚ್ಚು ದೇಶಗಳಲ್ಲಿ ಹೆಂಗಸರು ಪಾಸ್‌ಪೋರ್ಟ್‌ ಪಡೆಯಲು ಗಂಡನ ಅನುಮತಿ ಪತ್ರ ಬೇಕು ಎನ್ನುವ ನಿಯಮಗಳಿವೆ.

5) ನೈಜಿರಿಯಾ ದೇಶದಲ್ಲಿ ಹೆಂಡತಿಯ ತಪ್ಪನ್ನ ತಿದ್ದಲು ಆಕೆಯನ್ನು ಹೊಡೆಯಬಹುದು ಎಂದು ಕಾನೂನು ಅನುಮತಿ ನೀಡಿದೆ.

6) ಲಿಂಗ ತಾರತಮ್ಯದ ವಿರುದ್ಧ ಮಂಡಿಸಿದ ಮಸೂದೆ ರಷ್ಯಾ ದೇಶದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಜಾಗತಿಕ ಮಟ್ಟದ ಹೋಲಿಕೆಯಲ್ಲಿ ಪರವಾಗಿಲ್ಲ ಎನ್ನಿಸಿದರೂ, ರಾಜಕೀಯದಲ್ಲಿ ಮಹಿಳೆಯರನ್ನು ಆರಿಸಲು ರಷ್ಯಾ ಸಿದ್ದವಿಲ್ಲ. ಹೀಗಾಗಿ ಮಹಿಳೆಯರ ಸಂಖ್ಯೆ ರಾಜಕೀಯದಲ್ಲಿ ಕಡಿಮೆ. ಅದರಲ್ಲೂ ಅಧ್ಯಕ್ಷ ಗಾದಿಯಲ್ಲಿ ಮಹಿಳೆಯನ್ನು ಊಹಿಸಲು ಕೂಡ ಸಾಧ್ಯವಿಲ್ಲ ಎನ್ನುವುದು ರಷ್ಯನ್ ಸಮಾಜದ ಅಭಿಪ್ರಾಯ.

7) 1959 ರಲ್ಲಿ ಸ್ವಿಟ್ಜರ್‌ಲೆಂಡ್ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಡುವುದನ್ನು ಶೇ 67 ರಷ್ಟು ಗಂಡಸರು ವಿರೋಧಿಸಿದ್ದರು. 1971 ರಿಂದ ಸ್ವಿಸ್ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು. ಅದೂ ಎಲ್ಲಾ ರಾಜ್ಯಗಳಲ್ಲಿ ಅಲ್ಲ. ಸ್ವಿಸ್‌ನ ಕೊನೆಯ ರಾಜ್ಯ ಮತದಾನದ ಹಕ್ಕು ನೀಡಿದ್ದು 1991 ರಲ್ಲಿ!

8) ಇನ್ನು ಸಮಾನ ವೇತನ ಎನ್ನುವುದು ತೀರಾ ಅಸಹ್ಯ ಪದವಾಗಿ ಹೋಗಿದೆ . ಕಟ್ಟಡ ಕಟ್ಟುವ ಕೂಲಿ ಮಹಿಳೆಯಿಂದ ಕೋಡಿಂಗ್ ಬರೆಯುವ ಮಹಿಳೆಯವರೆಗೆ, ಭಾರತದಿಂದ ಅಮೆರಿಕ, ಯೂರೋಪ್ ಎಲ್ಲೆಡೆ ವೇತನದಲ್ಲಿ ಲಿಂಗ ಅಸಮಾನತೆ ಇಂದಿಗೂ ಎದ್ದು ಕಾಣುವಷ್ಟಿದೆ.

ಬರೆಯುತ್ತಾ ಹೋದರೆ ಜಗತ್ತಿನ ವಿವಿಧ ಪ್ರದೇಶದ ನಾನು ಕಂಡ ಕಥೆಗಳ ಸಣ್ಣ ಹೊತ್ತಿಗೆ ಮಾಡಿ ಬಿಡಬಹದು! ಇವೆಲ್ಲಾ ಸರಿಯಾಗದೆ ಬೂಟಾಟಿಕೆಯ ಮಹಿಳಾ ದಿನಾಚರಣೆಗೆ ಅರ್ಥವೆಲ್ಲಿದೆ? ನಮ್ಮ ಮಗಳನ್ನು, ಅಮ್ಮನನ್ನು, ಅಕ್ಕ-ತಂಗಿಯರನ್ನು, ಗೆಳತಿಯನ್ನು ಪ್ರೀತಿಸುವ, ಪೂಜಿಸುವ ನಾವು ನಮಗೆ ಸಂಬಂಧಿಸದ ಸ್ತ್ರೀ ಬಗ್ಗೆಯೂ ಅದೇ ಭಾವವನ್ನು ಹೊಂದದ ತನಕ ಮಹಿಳಾ ದಿನಾಚರಣೆಗೆ ಪೂರ್ಣ ಗೌರವ ನೀಡಿದಂತೆ ಆಗುವುದಿಲ್ಲ. ಮಹಿಳೆಗೆ ನಿಜಕ್ಕೂ ದಕ್ಕಬೇಕಾದ ಗೌರವವನ್ನು, ಆತ್ಮ ಸಮ್ಮಾನವನ್ನು ನೀಡುವ ದಾರಿಯಲ್ಲಿ ನಾವು ಸಾಗಬೇಕಿದೆ.

ರಂಗನೋಟ- ರಂಗಸ್ವಮಿ ಮೂಕನಹಳ್ಳಿಯವರ ಬರಹ
ರಂಗನೋಟ- ರಂಗಸ್ವಮಿ ಮೂಕನಹಳ್ಳಿಯವರ ಬರಹ