ಕನ್ನಡ ಸುದ್ದಿ  /  Lifestyle  /  International Women's Day 2023: Gift Ideas For Women's Day

ಅಂತರರಾಷ್ಟ್ರೀಯ ಮಹಿಳಾ ದಿನ 2023: ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವ ಯೋಚನೆ ಇದೆಯೇ? ಈ ಉಡುಗೊರೆಗಳನ್ನು ನಿಮ್ಮವರು ಮೆಚ್ಚಬಹುದು ನೋಡಿ!

International women's day 2023: ಇನ್ನೆರಡು ದಿನದಲ್ಲಿ ಮಹಿಳಾ ದಿನ. ಮಹಿಳೆಯರನ್ನು ಸಂಭ್ರಮಿಸುವ, ಗೌರವಿಸುವ ಈ ದಿನದಂದು ನಿಮ್ಮ ಜೀವನದಲ್ಲಿ ಪ್ರೀತಿ ಪಾತ್ರರಾದ ಮಹಿಳೆಗೆ ವಿಶೇಷ ಉಡುಗೊರೆ ನೀಡಿ ಖುಷಿ ಪಡಿಸಬೇಕೇ? ಬಹುಶಃ ಈ ಐಡಿಯಾಗಳು ನಿಮಗೆ ಸಹಾಯವಾಗಬಹುದು ನೋಡಿ.

ಉಡುಗೊರೆ
ಉಡುಗೊರೆ

ಮಾರ್ಚ್‌ 8, ಅಂತರರಾಷ್ಟ್ರೀಯ ಮಹಿಳಾದಿನ. ಮಹಿಳೆಯರ ಯಶಸ್ಸು, ಸಾಧನೆ, ಅವರ ದಿಟ್ಟ ಹೆಜ್ಜೆಗಳನ್ನು ಗುರುತಿಸಿ ಗೌರವಿಸುವ ದಿನ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಇರುವನ್ನು ಸಾಬೀತು ಪಡಿಸಿದ್ದಾರೆ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ತಂತ್ರಜ್ಞಾನ, ವೈಜ್ಞಾನಿಕ ಹೀಗೆ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಮುನ್ನೆಲೆಯಲ್ಲಿ ಇರುವುದು ಸಂತಸದ ವಿಷಯ.

ಪ್ರತಿಯೊಬ್ಬ ಪುರುಷನು ತನ್ನ ಮನೆಯಿಂದಲೇ ಹೆಣ್ಣುಮಕ್ಕಳನ್ನು ಗೌರವಿಸುವ ಪರಿಪಾಠವನ್ನು ಬೆಳೆಸಿಕೊಳ್ಳುವ ಜೊತೆಗೆ, ಈ ವಿಶೇಷ ದಿನದ ಆಚರಣೆಯನ್ನು ಸಂಭ್ರಮಿಸಬೇಕು. ಇಷ್ಟು ವರ್ಷ ಮಹಿಳಾದಿನದಂದು ನಿಮ್ಮ ತಾಯಿ, ತಂಗಿ, ಸಂಗಾತಿ, ಪ್ರೇಮಿ ಹೀಗೆ ನಿಮ್ಮ ಬಾಳಿನಲ್ಲಿ ಪ್ರಮುಖರೆನ್ನಿಸಿದ ಹೆಣ್ಣುಮಗಳಿಗೆ ಕೇವಲ ವಿಷ್‌ ಮಾಡುವ ಮೂಲಕ ತೃಪ್ತಿ ಪಡಿಸಿದ್ದೀರಾ? ಹಾಗಾದರೆ ಈ ವರ್ಷ ವಿಶೇಷ ಉಡುಗೊರೆ ನೀಡುವ ಮೂಲಕ ಅವರಿಗೆ ಸರ್ಪ್ರೈಸ್‌ ನೀಡಬಹುದು. ಆ ಮೂಲಕ ಅವರ ಖುಷಿಯನ್ನು ಇಮ್ಮಡಿಗೊಳಿಸಬಹುದು.

ಫೋಟೊ ಅಲ್ಬಮ್‌

ಮಹಿಳೆಯರು ಕೆಲವೊಂದು ವಿಷಯಗಳಲ್ಲಿ ಭಾವುಕರಾಗುವುದು ಹೆಚ್ಚು. ಅವರು ಹೊರಗಿನ ಪ್ರಪಂಚಕ್ಕಿಂತ ತಮ್ಮ ಮನೆ, ಕುಟುಂಬ ಇದರಲ್ಲೇ ಹೆಚ್ಚು ಸಂತಸ ಕಂಡುಕೊಳ್ಳುತ್ತಾರೆ. ಹಾಗಾಗಿ ಈ ಎಲ್ಲಾ ಸುಂದರ ಕ್ಷಣಗಳನ್ನು ಕಟ್ಟಿಕೊಡುವಂತಹ ಫೋಟೊಗಳನ್ನೆಲ್ಲಾ ಸಂಗ್ರಹಿಸಿ ಫೋಟೊ ಅಲ್ಬಮ್‌ ರಚಿಸಿ, ಅವರಿಗೆ ಗಿಫ್ಟ್‌ ನೀಡಬಹುದು. ಬಹುಶಃ ಇದಕ್ಕಿಂತ ಬೆಸ್ಟ್‌ ಗಿಫ್ಟ್‌ ಅನ್ನು ಅವರು ನಿಮ್ಮಿಂದ ನಿರೀಕ್ಷೆ ಮಾಡಲಾರರು.

ಡ್ರೆಸ್‌ ಅಥವಾ ಸೀರೆ

ಹೆಣ್ಣುಮಕ್ಕಳಿಗೆ ಉಡುಗೊರೆ ನೀಡುವುದು ಎಂದ ಕೂಡಲೇ ತಲೆಯಲ್ಲಿ ಬರುವುದು ಡ್ರೆಸ್‌. ಇದು ಹೆಣ್ಣುಮಕ್ಕಳಿಗೆ ಇಷ್ಟವಾಗುವುದರಲ್ಲೂ ಸಂಶಯವಿಲ್ಲ. ಡ್ರೆಸ್‌ ಅಥವಾ ಸೀರೆಯ ಮೇಲೆ ಅವರಿಗೆ ವಿಶೇಷ ಬಂಧವಿರುತ್ತದೆ. ಅದರಲ್ಲೂ ತಮ್ಮ ಪ್ರೀತಿ ಪಾತ್ರರು ನೀಡಿದ್ದಾರೆ ಎಂದರೆ ಇನ್ನಷ್ಟು ಮೆಚ್ಚಿಕೊಳ್ಳುತ್ತಾರೆ. ಆ ಕಾರಣಕ್ಕೆ ಈ ಮಹಿಳಾದಿನಕ್ಕೆ ನಿಮ್ಮೊಲವಿನವರಿಗೆ ಅವರು ಮೆಚ್ಚುವ ಉಡುಪನ್ನು ಉಡುಗೊರೆಯಾಗಿ ನೀಡಬಹುದು.

ಪುಸ್ತಕಗಳು

ನಿಮ್ಮ ಜೀವನದಲ್ಲಿ ಮೊದಲ ಮಹಿಳೆ ಅಂದರೆ ನಿಮ್ಮ ತಾಯಿಯಿಂದ ಹಿಡಿದು, ಅಕ್ಕ-ತಂಗಿ, ಸ್ನೇಹಿತೆ, ಸಂಗಾತಿ, ಸಹೋದ್ಯೋಗಿ ಇವರಿಗೆ ಮಹಿಳಾ ದಿನದಂದು ಪುಸ್ತಕವನ್ನು ಉಡುಗೊರೆ ನೀಡುವ ಮೂಲಕ ಖುಷಿ ಪಡಿಸಬಹುದು. ಅವರು ಇಷ್ಟಪಡುವ ವಿಷಯ ಯಾವುದು ಎಂಬುದನ್ನು ಮೊದಲೇ ತಿಳಿದುಕೊಂಡು ಆ ವಿಷಯದ ಮೇಲೆ ಸೂಕ್ತ ಪುಸ್ತಕವನ್ನು ಆರಿಸಿಕೊಡಿ. ಕೆಲವೊಮ್ಮೆ ನಿಮ್ಮ ಪ್ರೀತಿ ಪಾತ್ರರು ಬಹಳ ದಿನದಿಂದ ಹುಡುಕುತ್ತಿದ್ದು, ಸಿಗದೇ ಇರುವ ಪುಸ್ತಕವನ್ನು ಸರ್ಪ್ರೈಸ್‌ ರೂಪದಲ್ಲಿ ನೀಡಿದರೆ ಇನ್ನೂ ಹೆಚ್ಚು ಖುಷಿ ಪಡುತ್ತಾರೆ. ಪುಸಕ್ತ ಕೊಡುವ ಮೊದಲು ಚಂದನೆಯ ಗಿಫ್ಟ್‌ ಪ್ಯಾಕ್‌ ಮಾಡಿ ಕೊಡುವುದನ್ನು ಮರೆಯಬೇಡಿ.

ಮೇಕಪ್‌ ಕಿಟ್‌

ಮೇಕಪ್‌ ಅನ್ನು ಮೆಚ್ಚದ ಹುಡುಗಿಯರು ಬಹುಶಃ ಕಡಿಮೆ ಎನ್ನಬಹುದು. ಮೇಕಪ್‌ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಹಂಗಿಲ್ಲ. ನಿಮ್ಮ ಮನೆಯ ಹೆಣ್ಣುಮಕ್ಕಳು ಮೆಚ್ಚುವ ಬ್ರ್ಯಾಂಡ್‌ನ ಮೇಕಪ್‌ ಐಟಂಗಳನ್ನೆಲ್ಲಾ ಹುಡುಕಿ ಮೇಕಪ್‌ ಕಿಟ್‌ ರೂಪದಲ್ಲಿ ಉಡುಗೊರೆ ರೂಪದಲ್ಲಿ ಕೊಡಬಹುದು. ಕಾಂಪ್ಯಾಕ್ಟ್‌, ಫೌಂಡೇಶನ್‌, ಲಿಪ್‌ಸ್ಟಿಕ್‌, ಐಲೈನರ್‌, ಐಶ್ಯಾಡೋ, ಫೇಸ್‌ಕ್ರೀಮ್‌, ಸನ್‌ಸ್ಕ್ರೀನ್‌ ಕ್ರೀಮ್‌ಗಳನ್ನು ಕಿಟ್‌ನಲ್ಲಿ ಇರಿಸಿ.

ಆಭರಣದ ಸೆಟ್‌

ಹೆಣ್ಣುಮಕ್ಕಳಿಗೆ ಸೀರೆ, ಒಡವೆ ಇದ್ದರೆ ಪ್ರಪಂಚವನ್ನೇ ಮರೆಯುತ್ತಾರೆ. ಈ ಮಹಿಳಾ ದಿನಾಚರಣೆಯಂದು ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ವಿಶೇಷ ಉಡುಗೊರೆ ನೀಡಿ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಬೇಕು ಎನ್ನುವ ಹಂಬಲವಿದ್ದರೆ ಸರ, ಬಳೆ, ಕಿವಿಯೋಲೆ, ಬ್ರಾಸ್ಲೇಟ್‌ನಂತಹ ಉಡುಗೊರೆ ನೀಡಬಹುದು. ಒಡವೆ ಅವರಿಗೆ ವಿಶೇಷ ಗಿಫ್ಟ್‌ ಎನ್ನಿಸುವುದರಲ್ಲಿ ಸಂಶಯವಿಲ್ಲ.

ಜಿಮ್‌ ಪರಿಕರಗಳು

ಇತ್ತೀಚಿನ ಹೆಣ್ಣುಮಕ್ಕಳು ಫಿಟ್‌ನೆಸ್‌ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಜಿಮ್‌ ಅಥವಾ ಯೋಗ ಸೆಂಟರ್‌ನಲ್ಲಿ ಬೆವರಿಸುವುದು ಅವರ ದೈನಂದಿನ ಹವ್ಯಾಸವಾಗಿರುತ್ತದೆ. ಆ ಕಾರಣಕ್ಕೆ ಅಂತಹವರಿಗಾಗಿ ಜಿಮ್‌ ಬ್ಯಾಗ್‌, ಜಿಮ್‌ ಸೂಟ್‌, ಯೋಗ ಮ್ಯಾಟ್‌ ಇಂತಹ ಪರಿಕರಗಳನ್ನು ಉಡುಗೊರೆ ನೀಡಬಹುದು.

ಅಡುಗೆ ಸಾಮಗ್ರಿಗಳು

ಹೆಣ್ಣು ಮಕ್ಕಳು ಹೆಚ್ಚಾಗಿ ಅಡುಗೆ ಮನೆಯಲ್ಲಿ ಸಮಯ ಕಳೆಯುವುದರಿಂದ ಅಡುಗೆಮನೆ ಪರಿಕರಗಳ ಮೇಲೆ ಅವರಿಗೆ ಒಲವು ಜಾಸ್ತಿ ಇರುತ್ತದೆ, ಆ ಕಾರಣಕ್ಕೆ ಅಡುಗೆ ಮನೆಯನ್ನು ಸಿಂಗರಿಸುವ ಹಾಗೂ ಅಡುಗೆಯನ್ನು ಸುಲಭ ಮಾಡುವ ಉಪಕರಣಗಳನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ಅವರ ಮಹಿಳಾ ದಿನದ ಸಂಭ್ರಮವನ್ನು ಹೆಚ್ಚಿಸಬಹುದು.

ವಿಭಾಗ