ಅಂತರರಾಷ್ಟ್ರೀಯ ಮಹಿಳಾ ದಿನ 2023: ಮಹಿಳಾದಿನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಗೊತ್ತೆ? ಈ ವರ್ಷದ ಥೀಮ್‌ ಏನು?-international women s day 2023 history significance and theme ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಂತರರಾಷ್ಟ್ರೀಯ ಮಹಿಳಾ ದಿನ 2023: ಮಹಿಳಾದಿನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಗೊತ್ತೆ? ಈ ವರ್ಷದ ಥೀಮ್‌ ಏನು?

ಅಂತರರಾಷ್ಟ್ರೀಯ ಮಹಿಳಾ ದಿನ 2023: ಮಹಿಳಾದಿನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಗೊತ್ತೆ? ಈ ವರ್ಷದ ಥೀಮ್‌ ಏನು?

International women's day: ಪ್ರತಿ ವರ್ಷ ಮಾರ್ಚ್‌ 8ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಮಹಿಳಾದಿನದ ಆರಂಭದ ಹಿಂದಿನ ಇತಿಹಾಸವೇನು, ಈ ಆಚರಣೆಯ ಮಹತ್ವವೇನು? ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ಮಹಿಳಾ ದಿನವನ್ನು ಆಚರಿಸುವುದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಹಿಳಾ ದಿನ
ಮಹಿಳಾ ದಿನ

ಪ್ರತಿವರ್ಷ ಮಾರ್ಚ್‌ ತಿಂಗಳ ಆರಂಭದಿಂದ ಅಂತ್ಯದವರೆಗೆ ಮಹಿಳೆಯರಿಗೆ ಸಂಭ್ರಮ. ಮಾರ್ಚ್‌ ಎಂದರೆ ಹೆಣ್ಣುಮಕ್ಕಳ ತಿಂಗಳು. ಮಾರ್ಚ್‌ ತಿಂಗಳ 8 ತಾರೀಕಿನಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

ಮಾರ್ಚ್‌ ತಿಂಗಳು ಪೂರ್ತಿ ಮಹಿಳೆಯರ ಸಾಧನೆಯ ಇತಿಹಾಸ, ಸಮಕಾಲೀನ ಸಮಾಜಕ್ಕೆ ಮಹಿಳೆಯರ ಕೊಡುಗೆ ಈ ವಿಷಯಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಈ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ಮಹಿಳಾ ದಿನವು ಲಿಂಗಭೇದ, ತಾರತಮ್ಯದಿಂದ ಮುಕ್ತವಾಗಿರುವ ಲಿಂಗ ಸಮಾನತೆಯ ಬಗ್ಗೆ ಜಗತ್ತಿಗೆ ಕರೆ ನೀಡುತ್ತದೆ. ಲಿಂಗ ಭೇದವನ್ನು ದೂರ ಮಾಡುವ ನಿಟ್ಟಿನಲ್ಲಿ ಮಹಿಳಾದಿನ ಸಂಭ್ರಮಿಸುವ ಜೊತೆಗೆ ಹೆಣ್ಣುಮಕ್ಕಳನ್ನು ಗೌರವಿಸಲಾಗುತ್ತದೆ.

ಮಹಿಳಾ ದಿನದ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಇತಿಹಾಸವೇನು? ಈ ದಿನದ ಆಚರಣೆಯ ಮಹತ್ವವೇನು? ಮಾರ್ಚ್‌ 8ರಂದೇ ಈ ದಿನವನ್ನು ಯಾವ ಕಾರಣಕ್ಕೆ ಆಚರಿಸಲಾಗುತ್ತದೆ. ಈ ಕುರಿತ ಒಂದು ವಿಸ್ತ್ರತ ವರದಿ ಇಲ್ಲಿದೆ.

ಅಂತರರಾಷ್ಟ್ರೀಯ ಮಹಿಳಾದಿನ 2023

ಪ್ರತಿದಿನ ವರ್ಷದಂತೆ ಈ ಮಾರ್ಚ್‌ 8 ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಾರ್ಚ್‌ 8 ಈ ವರ್ಷ ಬುಧವಾರ ಬಂದಿದೆ. ಹಿಂದೂಗಳ ಸಾಂಪ್ರದಾಯಿಕ ಹೋಳಿ ಹಬ್ಬ ಕೂಡ ಅಂದೇ ಇರುವ ಕಾರಣ ಎರಡೂ ಸಂಭ್ರಮ ಜೊತೆಯಾಗಿದೆ.

2023 ಮಹಿಳಾ ದಿನದ ಥೀಮ್‌

ಪ್ರತಿ ವರ್ಷವೂ ಮಹಿಳಾ ದಿನವನ್ನು ಒಂದೊಂದು ಥೀಮ್‌ ಅಥವಾ ಪರಿಕಲ್ಪನೆ ಇರಿಸಿಕೊಂಡು ಆಚರಿಸಲಾಗುತ್ತದೆ. ಈ ವರ್ಷ ʼDigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನʼ. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂದಿನ 67ನೇ ಅಧಿವೇಶನದ ಆದ್ಯತೆಯ ಥೀಮ್‌ನೊಂದಿಗೆ ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ʼಲಿಂಗ ಸಮಾನತೆ ಮತ್ತು ಪ್ರತಿ ಮಹಿಳೆ ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣʼ ಎನ್ನುವುದು ಈ ವರ್ಷದ ಪರಿಕಲ್ಪನೆಯ ಒಟ್ಟಾರೆ ಸಾರಾಂಶ.

ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ

ಯುನೆಸ್ಕೊ ಪ್ರಕಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹುಟ್ಟಿಗೆ ಕಾರಣವಾಗಿದ್ದು, ಇಪ್ಪತ್ತನೇ ಶತಮಾನದ ಆರಂಭದ ದಿನಗಳಲ್ಲಿ ಯೂರೋಪ್‌ ಹಾಗೂ ಉತ್ತರ ಅಮೇರಿಕಾ ದೇಶಗಳಲ್ಲಿ ನಡೆದ ಕಾರ್ಮಿಕ ಚಳವಳಿಯ ಸಂದರ್ಭದಲ್ಲಿ.

ʼ1909 ಫೆಬ್ರುವರಿ 28ರಂದು ಮೊದಲ ವರ್ಷದ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಆಚರಿಸಲಾಯಿತು. 1908ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್‌ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸೋಷಿಯಲಿಸ್ಟ್‌ ಪಾರ್ಟಿ ಆಫ್‌ ಅಮೇರಿಕಾ ಈ ದಿನವನ್ನು ಮಹಿಳೆಯರಿಗೆ ಸರ್ಮಪಿಸಿತ್ತು, ಅಲ್ಲದೆ ಆಗ ತಮ್ಮ ಕೆಲಸದ ಕಠಿಣ ಪರಿಸ್ಥಿತಿಗಳ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. 1917ರಲ್ಲಿ ರಷ್ಯಾದ ಮಹಿಳೆಯ ಪ್ರತಿಭಟನೆ ಆರಂಭಿಸಿದ್ದರು. ಬ್ರೆಡ್‌ ಅಂಡ್‌ ಪೀಸ್‌ (ಆಹಾರ ಮತ್ತು ಶಾಂತಿ) ಈ ಸ್ಲೋಗನ್‌ನೊಂದಿಗೆ ಫೆಬ್ರುವರಿಯ ಕೊನೆಯ ಭಾನುವಾರ (ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಅಂದು ಮಾರ್ಚ್‌ 8) ಮುಷ್ಕರ ಹೂಡಿದ್ದರು. ಹೆಣ್ಣುಮಕ್ಕಳ ಈ ಆಂದೋಲನವು ಅಂತಿಮವಾಗಿ ರಷ್ಯಾದಲ್ಲಿ ಮಹಿಳೆಯರ ಮತದಾನದ ಹಕ್ಕಿನ ಜಾರಿಗೆ ಕಾರಣವಾಯಿತು.

1945ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಯ ತತ್ವವನ್ನು ದೃಢೀಕರಿಸುವ ಮೊದಲ ಅಂತರರಾಷ್ಟ್ರೀಯ ಒಪ್ಪಂದವಾಯಿತು. ಆದರೆ 1975ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಇದು ಅಧಿಕೃತವಾಗಿ ಮಹಿಳಾ ದಿನ ಆಚರಣೆಯ ಪ್ರಥಮ ವರ್ಷವಾಯಿತು.

1977ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲು ನಿರ್ಧರಿಸಲಾಯಿತು. ಅಂದಿನಿಂದ, ವಿಶ್ವಸಂಸ್ಥೆಯು ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯ (ಥೀಮ್‌) ಮೂಲಕ ಈ ದಿನವನ್ನು ಸ್ಮರಿಸುತ್ತದೆ.

ಮಹಿಳಾ ದಿನವನ್ನು ಪ್ರತಿನಿಧಿಸುವ ಬಣ್ಣಗಳು

ಮಹಿಳಾ ದಿನಾಚರಣೆಗೂ ಬಣ್ಣಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ನೇರಳೆ, ಹಸಿರು ಹಾಗೂ ಬಿಳಿ ಬಣ್ಣದ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ನೇರಳೆ ನ್ಯಾಯ ಹಾಗೂ ಘನತೆ, ಹಸಿರು ಭರವಸೆ ಹಾಗೂ ಬಿಳಿ ಶಾಂತಿಯನ್ನು ಈ ಬಣ್ಣಗಳು ಪ್ರತಿನಿಧಿಸುತ್ತವೆ.

2023 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ

ಹೃದಯಸ್ಪರ್ಶಿ ಭಾವನೆಗಳ ಮೂಲಕ ಮಹಿಳೆಯರ ಜೀವನಕ್ಕೆ ವಿಶೇಷ ವಿಶೇಷ ಸ್ಥಾನ ಕಲ್ಪಿಸುವ ಮೂಲಕ 2023ರ ಮಹಿಳಾ ದಿನವನ್ನು ಆಚರಿಸಬಹುದು. ಈ ವರ್ಷದ ಮಹಿಳಾ ದಿನದಂದು ನಿಮ್ಮ ಪ್ರೀತಿ ಪಾತ್ರರನ್ನು ಅವರ ಇಷ್ಟದ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಡಿನ್ನರ್‌ ಪಾರ್ಟಿ ಕೊಡಿಸಿ, ಅಪರೂಪದ ಉಡುಗೂರೆ ನೀಡಿ ಹರ್ಷ ಪಡಿಸಬಹುದು, ಮಹಿಳಾ ಲೇಖಕಿಯರು ಬರೆದ ಪುಸ್ತಕಗಳನ್ನು ನೀಡುವ ಮೂಲಕ ಖುಷಿ ಪಡಿಸಬಹುದು. ಮಹಿಳೆಯರ ಹಕ್ಕು, ಲಿಂಗ ಸಮಾನತೆ ಬಗ್ಗೆ ತಿಳಿವಳಿಕೆ ನೀಡಬಹುದು, ಇಷ್ಟದ ಸಿನಿಮಾಕ್ಕೆ ಕರೆದೊಯ್ಯಬಹುದು ಹೀಗೆ ಹಲವು ವಿಧದ ಮೂಲಕ ಅವರ ದಿನವನ್ನು ಸಂಭ್ರಮಿಸಬಹುದು ಹಾಗೂ ಅವರನ್ನು ಸಂಭ್ರಮಿಸಬಹುದು.

ಆದರೆ ಒಂದು ವಿಷಯ ಗಮನದಲ್ಲಿರಲಿ. ಹೆಣ್ಣುಮಕ್ಕಳ ದಿನವೊಂದು ಇದೆ ಎಂಬ ಕಾರಣಕ್ಕೆ ಅಂದು ಮಾತ್ರ ಹೆಣ್ಣುಮಕ್ಕಳನ್ನು ಪ್ರೀತಿ ಗೌರವಿಸುವುದು ಸರಿಯಲ್ಲ. ಪ್ರತಿ ದಿನವೂ ಹೆಣ್ಣುಮಕ್ಕಳ ದಿನ ಎಂಬಂತೆ ಅವರನ್ನು ಪ್ರೀತಿಸಿ ಗೌರವಿಸಿ.

mysore-dasara_Entry_Point