ಅಂತರರಾಷ್ಟ್ರೀಯ ಮಹಿಳಾ ದಿನ 2023: ಮಹಿಳೆಯರೇ, ಸ್ವಯಂ ಕಾಳಜಿಯನ್ನು ಮರೆತಿದ್ದೀರಾ? ಇಲ್ಲಿವೆ ನೋಡಿ ನಿಮಗಾಗಿ ಕೆಲವು ಟಿಪ್ಸ್
International women's day: ಮಹಿಳೆಯರ ದಿನ ಎಂದರೆ ಕೇವಲ ಒಂದು ದಿನ ಸಂಭ್ರಮವಲ್ಲ. ಅಂದಿನ ಮಟ್ಟಿಗೆ ಮಹಿಳೆಯರ ಸಾಧನೆಯನ್ನು ಗುರುತಿಸುವುದಲ್ಲ. ಹೆಣ್ಣುಮಕ್ಕಳು ತಮ್ಮನ್ನು ತಾವು ಪ್ರತಿದಿನ ಪ್ರೀತಿಸಬೇಕು. ತಮ್ಮ ದೇಹ, ಮನಸ್ಸಿನ ಮೇಲೆ ಕಾಳಜಿ ವಹಿಸಬೇಕು, ಆ ಮೂಲಕ ಮಹಿಳಾ ದಿನಾಚರಣೆಗೆ ಸೂಕ್ತ ಅರ್ಥ ಸಿಗುವಂತೆ ಮಾಡಬಹುದು.
ಮಾರ್ಚ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳಾ ದಿನಾಚರಣೆ ಎಂದರೆ ಮಹಿಳೆಯರ ಸಾಧನೆಯನ್ನು ನೆನಪಿಸಿಕೊಳ್ಳುವುದು, ಲಿಂಗ ಸಮಾನತೆಯನ್ನು ಸಾರುವುದು, ಮಹಿಳೆಯರ ಹಕ್ಕಿಗಾಗಿ ಹೋರಾಟ ನಡೆಸುವುದು ಇಷ್ಟೇ ಅಲ್ಲ. ಮಹಿಳೆಯರ ಪ್ರಗತಿಯನ್ನು ಬಿಂಬಿಸುವ ಜೊತೆಗೆ ಅವರಲ್ಲಿ ಸ್ವ ಯೋಗಕ್ಷೇಮದ ಬಗ್ಗೆ ಕಾಳಜಿ ಮೂಡಿಸುವುದು ಮುಖ್ಯವಾಗುತ್ತದೆ. ಇದರಿಂದ ಆರೋಗ್ಯಕರ ಹಾಗೂ ಸಂತಸದ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯ. ಆದರೆ ಹಲವು ಹೆಣ್ಣುಮಕ್ಕಳು ಸ್ವ ಕಾಳಜಿ ಅಥವಾ ಯೋಗಕ್ಷೇಮದ ಮೇಲೆ ಗಮನ ಹರಿಸುವುದು ಕಡಿಮೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸ್ವ ಕಾಳಜಿ ಮಾಡುವ ಕೆಲವು ಭಿನ್ನ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ. ಚರ್ಮದ ಕಾಳಜಿಯಿಂದ ಧ್ಯಾನದವರೆಗೆ ಈ ಸಲಹೆಗಳು ನಿಮ್ಮ ಮನಸ್ಸಿಗೆ ಶಾಂತಿ ನೀಡಿ, ದೇಹ ಮನಸ್ಸನ್ನು ಪುನಶ್ಚೇತನಗೊಳಿಸಿ, ನಿಮ್ಮನ್ನು ನೀವು ಸಂಭ್ರಮಿಸಲು ಸಹಾಯ ಮಾಡುತ್ತವೆ.
ಫೇಶಿಯಲ್
ಹೆಣ್ಣುಮಕ್ಕಳು ಕೆಲಸದಲ್ಲಿರಲಿ ಅಥವಾ ಮನೆಯಲ್ಲಿರಲಿ. ತಮ್ಮ ಮೇಲೆ ಕಾಳಜಿ ವಹಿಸುವುದು ಬಹಳ ಅಗತ್ಯ. ಕಾಳಜಿ ಎಂದರೆ ಕೇವಲ ಆರೋಗ್ಯ ಮಾತ್ರವಲ್ಲ. ಸೌಂದರ್ಯದ ಕಾಳಜಿಯನ್ನೂ ಮಾಡಬೇಕು. ಸೌಂದರ್ಯ ಕಾಪಾಡಿಕೊಳ್ಳುವ ಸಲುವಾಗಿ ಮನೆಯಲ್ಲಿ ಫೇಶಿಯಲ್ ಮಾಡಿಕೊಳ್ಳಬಹುದು. ಹಣ್ಣುಗಳು, ತರಕಾರಿ, ಜೇನುತುಪ್ಪ, ಹಾಲು, ಮೊಸರು, ಅರಿಸಿನಿ ಮುಂತಾದ ಪದಾರ್ಥಗಳಿಂದ ಫೇಶಿಯಲ್ ಮಾಡಿಕೊಳ್ಳಬಹುದು. ಇದರಿಂದ ಚರ್ಮ ಮೃದುವಾಗುವುದರ ಜೊತೆಗೆ ಕಾಂತಿಯೂ ಹೆಚ್ಚುತ್ತದೆ.
ಅರೋಮಾ ಥೆರಪಿ
ಅರೋಮಾ ಥೆರಪಿ ಪಡೆಯಲು ನೀವು ಪ್ರಕೃತಿ ಚಿಕಿತ್ಸಾಲಯಗಳಿಗೆ ಹೋಗಬೇಕು ಎಂದೇನಿಲ್ಲ. ಎಸ್ಸೆನ್ಷಿಯಲ್ ಎಣ್ಣೆಗಳನ್ನು ತರಿಸಿಕೊಳ್ಳಿ. ಡಿಫ್ಯೂಸರ್‌ಗಳು ಮನೆಯಲ್ಲಿರಲಿ. ಇದರಿಂದ ನೀವು ಮನೆಯ ಒಳಗಡೆ ಶಾಂತಿ ಹಾಗೂ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಬಹುದು. ಎಸ್ಸೆನ್ಷಿಯಲ್ ಎಣ್ಣೆಯನ್ನು ಸ್ನಾನಕ್ಕೂ ಬಳಸಬಹುದು. ಚರ್ಮದ ಆರೋಗ್ಯವೃದ್ಧಿಗೂ ಇದು ಸಹಕಾರಿ. ಇದನ್ನು ಸ್ನಾನದ ನೀರಿನೊಂದಿಗೆ ಬೆರೆಸಿ ಸ್ನಾನ ಮಾಡುವುದರಿಂದ ನೈಸರ್ಗಿಕ ಪರಿಮಳ ಸಿಗುತ್ತದೆ.
ಡಾನ್ಸ್ ಮಾಡಿ
ಮಾನಸಿಕ ದುಗುಡಗಳಿಂದ ದೂರವಾಗಬೇಕು ಎಂದರೆ ಡಾನ್ಸ್ ಮಾಡಿ. ಮನೆಯಲ್ಲಿ ಒಬ್ಬರೇ ಇದ್ದಾಗ ಗಟ್ಟಿಯಾಗಿ ಮ್ಯೂಸಿಕ್ ಹಾಕಿಕೊಂಡು ಮನಸೋಇಚ್ಛೆ ಡಾನ್ಸ್ ಮಾಡಿ. ಇದರಿಂದ ದೇಹಕ್ಕೂ ಒಳ್ಳೆಯದು ಮನಸ್ಸು ಹಗುರಾಗುತ್ತದೆ. ಮಾನಸಿಕ ಒತ್ತಡ, ಚಿಂತೆ, ಆತಂಕ ದೂರವಾಗಿ ಮನಸ್ಸಿಗೆ ಚೈತನ್ಯ ಸಿಗುತ್ತದೆ.
ಸಣ್ಣ ನಿದ್ದೆ
ಮನೆಗೆಲಸ ಗಂಡ, ಮಕ್ಕಳ ಚಾಕರಿ ಇದರಿಂದ ಹೆಣ್ಣುಮಕ್ಕಳು ಹೈರಾಣಾಗುವುದು ಸಾಮಾನ್ಯ. ಕೆಲವೊಮ್ಮೆ ನಿಮಗಾಗಿ ಸಮಯವೇ ಇರುವುದಿಲ್ಲ. ಸಿಕ್ಕ ಸಮಯದಲ್ಲಿ ಒಂದು ಸಣ್ಣ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ದೇಹ, ಮನಸ್ಸು ಎರಡೂ ಚುರುಕಾಗುತ್ತದೆ. ಮಾನಸಿಕ ದುಗುಡ, ದುಮ್ಮಾನಗಳನ್ನು ಮರೆಯಲು ಇದು ಉತ್ತಮ ಹಾದಿ.
ಯೋಗ ಪ್ರಯೋಗಗಳಿಗೆ ಒಡ್ಡಿಕೊಳ್ಳಿ
ನಮ್ಮನ್ನು ನಾವು ಪ್ರೀತಿಸಲು ಆರಂಭಿಸಿದಾಗ ಎಲ್ಲವೂ ಸುಂದರವಾಗಿರುತ್ತದೆ. ಈ ಹಾದಿಯಲ್ಲಿ ಯೋಗ, ಧ್ಯಾನ ನಿಮಗೆ ಬಹಳಷ್ಟು ಸಹಾಯ ಮಾಡುತ್ತವೆ. ಸಾಮಾನ್ಯ ಯೋಗ ವಿಧಾನಗಳಿಗಿಂತ ಹೊಸ ರೀತಿಯ ಯೋಗ ಪ್ರಯೋಗಗಳಿಗೆ ನಿಮ್ಮನ್ನು ತೆರೆದುಕೊಳ್ಳಿ. ಏರಿಯಲ್ ಯೋಗ, ಹಾಟ್ ಯೋಗದಂತಹ ಹೊಸ ಹೊಸ ವಿಧಾನಗಳನ್ನು ಕಲಿಯಿರಿ. ಇದರಿಂದ ಮೋಜು ಸಿಗುವ ಜೊತೆಗೆ ದೇಹ, ಮನಸ್ಸಿಗೆ ಒಂದಿಷ್ಟು ಹೊತ್ತು ವಿಶ್ರಾಂತಿ, ನೆಮ್ಮದಿ ಸಿಗುತ್ತದೆ.
ಸಂಗೀತಕ್ಕೆ ಕಿವಿಯಾಗಿ
ಸಂಗೀತವನ್ನು ಆಲಿಸುವುದು ಒಂದು ರೀತಿ ಧ್ಯಾನ. ಇದು ಮನಸ್ಸಿನ ಒತ್ತಡ, ಆತಂಕ, ಭಯ, ಚಿಂತೆಗಳನ್ನು ದೂರ ಮಾಡಿ ಮನಸ್ಸನ್ನು ನಿರ್ಮಲಗೊಳಿಸುವ ಶಕ್ತಿ ಹೊಂದಿದೆ. ಕೆಲಸ ಮಾಡುವಾಗ ಅಥವಾ ಬಿಡುವಿನ ವೇಳೆಯಲ್ಲಿ ಕಿವಿಯಲ್ಲಿ ಇಯರ್‌ಫೋನ್ ಸಿಕ್ಕಿಸಿಕೊಂಡು ಅಥವಾ ಫೋನ್‌ನಲ್ಲಿ ಸಂಗೀತ ಹಾಕಿಕೊಂಡು ಆಲಿಸಿ. ನಿಮ್ಮ ಮನಸ್ಸಿಗೆ ಖುಷಿ ಕೊಡುವ ಹಾಡುಗಳು ಅಥವಾ ಸಂಗೀತದ ಪ್ರಕಾರಗಳನ್ನು ಆರಿಸಿಕೊಳ್ಳಿ.
ವಿಭಾಗ