ಕನ್ನಡ ಸುದ್ದಿ  /  Lifestyle  /  International Womens Day 2024 6 Tips For Working Women To Overcome Workplace Anxiety How To Overcome From Anxiety Rst

Womens Day 2024: ಆಫೀಸ್‌ನಲ್ಲಿ ಕಾಡುವ ಆತಂಕಕ್ಕೆ ಆತ್ಮವಿಶ್ವಾಸವೇ ಮದ್ದು; ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ ಮಹತ್ವದ ಸಲಹೆ

ಉದ್ಯೋಗಸ್ಥ ಮಹಿಳೆಯರು ವೃತ್ತಿಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಮನೆ-ಕಚೇರಿ ಎರಡನ್ನೂ ನಿಭಾಯಿಸುವುದು ಬಹುದೊಡ್ಡ ಸವಾಲಾದರೆ, ಕಚೇರಿಯಲ್ಲಿ ಕೆಲಸದ ಒತ್ತಡ, ಮ್ಯಾನೇಜರ್‌ ವರ್ತನೆ, ಕೆಲಸದ ಅವಧಿ, ಸಹೋದ್ಯೋಗಿಗಳ ನಡವಳಿಕೆ ಈ ಎಲ್ಲವೂ ಆಕೆಯಲ್ಲಿ ಕೆಲಸದ ಸ್ಥಳದ ಆತಂಕಕ್ಕೆ ಕಾರಣವಾಗಬಹುದು, ಇದು ಆಕೆಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಆಫೀಸ್‌ನಲ್ಲಿ ಕಾಡುವ ಆತಂಕಕ್ಕೆ ಆತ್ಮವಿಶ್ವಾಸವೇ ಮದ್ದು; ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ ಮಹತ್ವದ ಸಲಹೆ
ಆಫೀಸ್‌ನಲ್ಲಿ ಕಾಡುವ ಆತಂಕಕ್ಕೆ ಆತ್ಮವಿಶ್ವಾಸವೇ ಮದ್ದು; ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ. ಸ್ವಾವಲಂಬಿಯಾಗಿ ಬದುಕಬೇಕು ಎಂಬ ಹೆಣ್ಣಿನ ಮನದಾಳವು ವೃತ್ತಿರಂಗದಲ್ಲಿ ಆಕೆ ಸಾಕಷ್ಟು ಸವಾಲುಗಳನ್ನು ಎದುರಿಸುವಂತೆ ಮಾಡುತ್ತದೆ. ಕಚೇರಿಯಲ್ಲಿನ ಹಲವು ಅಂಶಗಳು ಕೆಲಸದ ಸ್ಥಳದ ಆತಂಕ (workplace anxiety) ಎದುರಾಗಲು ಕಾರಣವಾಗುತ್ತದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಿದಾಗ ಆತಂಕ ಕಾಡುವುದು ಸಹಜ. ಈ ಆತಂಕವು ವೃತ್ತಿಯಲ್ಲಿರುವ ಎಲ್ಲರನ್ನೂ ಕಾಡುತ್ತದೆ. ಆದರೆ ಇದು ಹೆಚ್ಚು ಪರಿಣಾಮ ಬೀರುವುದು ಹೆಣ್ಣುಮಕ್ಕಳ ಮೇಲೆ. ಕಚೇರಿ ಕೆಲಸ ಹಾಗೂ ಮನೆಗೆಲಸ ಎರಡನ್ನೂ ನಿಭಾಯಿಸುವ ಜೊತೆಗೆ ಕಚೇರಿಯಲ್ಲಿ ಕೆಲಸದ ಅವಧಿ, ಮ್ಯಾನೇಜರ್‌ ವರ್ತನೆ, ಸಹೋದ್ಯೋಗಿಗಳ ವರ್ತನೆ, ಅತಿಯಾದ ಕೆಲಸ ಈ ಎಲ್ಲವೂ ಕೆಲಸದ ಸ್ಥಳದ ಆತಂಕ ಹೆಚ್ಚುವಂತೆ ಮಾಡುತ್ತವೆ.  

ಅತಿಯಾದ ವರ್ಕ್‌ಲೋಡ್‌ಗಿಂತ ಹೆಣ್ಣುಮಕ್ಕಳನ್ನು ಹೆಚ್ಚು ಕಾಡುವುದು ಮ್ಯಾನೇಜರ್‌ ನಡವಳಿಕೆ ಹಾಗೂ ದೀರ್ಘವಾದ ಕೆಲಸದ ಅವಧಿ, ಶಿಫ್ಟ್‌ಗಳು. ಇದು ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇಲ್ಲದೆ ಇದು ವೃತ್ತಿಯಲ್ಲಿನ ಆತಂಕಕ್ಕೆ ಕಾರಣವಾಗುತ್ತದೆ. ಅಲ್ಲದೆ ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಕೆಲವೊಮ್ಮೆ ಲಿಂಗ ತಾರತಮ್ಯ, ಹೆಣ್ಣುಮಕ್ಕಳಿಂದ ಸಾಧ್ಯವಿಲ್ಲ ಎಂದು ದೂರ ಇಡುವುದು, ಜವಾಬ್ದಾರಿ ನೀಡದೇ ಇರುವುದು ಇದರಿಂದಲೂ ಅವರು ಕೆಲಸದ ಸ್ಥಳದಲ್ಲಿ ಆತಂಕವನ್ನು ಎದುರಿಸಬಹುದು. ಇದು ಅವರ ಸ್ವಾಭಿಮಾನ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಕೆಲಸ ಸ್ಥಳದಲ್ಲಿ ಆತಂಕ ಎದುರಾಗಬಹುದು.

ಕೆಲಸದ ಹೊರೆಯನ್ನು ನಿಭಾಯಿಸುವ ವಿಚಾರ ಬಂದಾಗ ಸಮಯ ನಿರ್ವಹಣೆ ಹಾಗೂ ಉತ್ಪಾದಕ ಅವಧಿಯನ್ನು ಗುರುತಿಸುವುದು ಮುಖ್ಯ. ನೀವು ನಿಮ್ಮ ಬಾಸ್‌ ಅಥವಾ ಮ್ಯಾನೇಜರ್‌ ಜೊತೆ ವ್ಯವಹರಿಸುವಾಗ ನಿಮ್ಮ ಸಮಯ ನಿರ್ದಿಷ್ಟ ಗಡಿ ಹೊಂದಿಸಿಕೊಳ್ಳಿ. ಕೆಲಸದ ಮೂಲಕ ನಿಮ್ಮನ್ನು ನೀವು ನಿರೂಪಿಸಿಕೊಳ್ಳಿ.

ಕೆಲಸದ ಸ್ಥಳದ ಆತಂಕವನ್ನು ಯಶಸ್ವಿಯಾಗಿ ಎದುರಿಸಲು ಮಹಿಳೆಯರು ಗಡಿಗಳನ್ನು ಹೇರಿಕೊಳ್ಳುವುದು, ಸ್ವಯಂ ಆರೈಕೆಗೆ ಸಮಯ ಕಂಡುಕೊಳ್ಳುವುದು, ನಿಮ್ಮ ಮೇಲೆ ನೀವು ವಿಶ್ವಾಸ ಹೊಂದುವುದು ಬಹಳ ಮುಖ್ಯವಾಗುತ್ತದೆ.

ಕೆಲಸದ ಸ್ಥಳದ ಆತಂಕದಿಂದ ಹೊರಬರುವುದು ಹೇಗೆ?

ಸ್ವಯಂ ಕಾಳಜಿಯತ್ತ ಗಮನ ನೀಡಿ: ವೃತ್ತಿಯಲ್ಲಿರುವ ಹೆಣ್ಣುಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಆರೈಕೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮ, 7 ರಿಂದ 8 ಗಂಟೆಗಳ ಕಾಲ ನಿದ್ದೆ, ವಿಶ್ರಾಂತಿಯ ಕ್ಷಣಗಳನ್ನು ಒಳಗೊಂಡತೆ ಸ್ವಯಂ ಆರೈಕೆಯ ದಿನಚರಿಯನ್ನು ರೂಢಿಸಿಕೊಳ್ಳುವುದರಿಂದ ಒತ್ತಡ ಹಾಗೂ ಆತಂಕ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಮ್ಮ ಮೇಲೆ ನಾವು ಗಮನ ನೀಡಿದಾಗ ಕೆಲಸದಲ್ಲಿ ನಮ್ಮ ಉತ್ಪಾದಕತೆಯ ಪ್ರಮಾಣವೂ ಹೆಚ್ಚುತ್ತದೆ. ಇದರಿಂದ ಮನಸ್ಸಿನಲ್ಲಿ ಕೆಲಸದ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವೂ ಹೆಚ್ಚುತ್ತದೆ.

ಸಮಯ ನಿರ್ವಹಣೆ: ಉತ್ಪಾದಕತೆಯನ್ನು ವೃದ್ಧಿಸಿ, ಒತ್ತಡ ಕಡಿಮೆ ಮಾಡಿಕೊಳ್ಳಲು ಸಮಯ ನಿರ್ವಹಣೆಯ ಕೌಶಲವನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಕೆಲಸಗಳಿಗೆ ಆದ್ಯತೆ ನೀಡಿ. ನಿರ್ದಿಷ್ಟ ಗುರಿಗಳನ್ನು ಇರಿಸಿಕೊಂಡು ಕೆಲಸ ಮಾಡಿ. ಎಲ್ಲಾ ಯೋಜನೆಗಳನ್ನು ವಿಂಗಡಿಸಿಕೊಳ್ಳಿ. ವೇಳಾಪಟ್ಟಿ ರಚಿಸಿ, ಅದರಂತೆ ಕೆಲಸ ಮಾಡಿ. ಸಮಯ ನಿರ್ವಹಣೆಯು ಸಾಕಷ್ಟು ಒತ್ತಡ ಕಡಿಮೆ ಮಾಡುತ್ತದೆ. ಮಾತ್ರವಲ್ಲ, ಇದರಿಂದ ನಿಮ್ಮ ಉತ್ಪಾದಕ ಮಟ್ಟವೂ ವೃದ್ಧಿಯಾಗುತ್ತದೆ.

ನಿರ್ದಿಷ್ಟ ಗುರಿಗಳನ್ನು ಹೊಂದಿಸಿಕೊಳ್ಳಿ: ವೃತ್ತಿ ಹಾಗೂ ವೈಯಕ್ತಿಕ ಜೀವನದದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಚೇರಿ ಕೆಲಸ ಹಾಗೂ ವೈಯಕ್ತಿಕ ಬದುಕಿಗೆ ನಿರ್ದಿಷ್ಟ ಗಡಿ ಹೊಂದಿಸಿಕೊಳ್ಳಬೇಕು. ಕೆಲಸದ ಸಮಯ, ವೈಯಕ್ತಿಕ ಬದ್ಧತೆಗಳ ಬಗ್ಗೆ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ನಿಮ್ಮ ನಿರೀಕ್ಷೆಗಳನ್ನು ಸ್ವಷ್ಟವಾಗಿ ತಿಳಿಸಿ.

ಬೆಂಬಲ ನೀಡುವ ಬಳಗ: ಕೆಲಸ ಸ್ಥಳದಲ್ಲಿ ಆತಂಕವನ್ನು ನಿರ್ವಹಿಸಲು ಬಲವಾದ ಬೆಂಬಲ ಬಳಗವನ್ನು ಹೊಂದುವುದು ಬಹಳ ಮುಖ್ಯ. ನಿಮ್ಮ ಕೆಲಸ, ಪ್ರಯತ್ನವನ್ನು ಅರ್ಥ ಮಾಡಿಕೊಳ್ಳುವ ಸಹೋದ್ಯೋಗಿಗಳು ಹಾಗೂ ಮಾರ್ಗದರ್ಶಕರು ಹಾಗೂ ಸ್ನೇಹಿತರ ಬಳಗ ನಿಮ್ಮೊಂದಿಗೆ ಇದ್ದರೆ ಆತಂಕ ಎಂದಿಗೂ ಕಾಡುವುದಿಲ್ಲ. ಅನುಭವವನ್ನು ಹಂಚಿಕೊಳ್ಳುವುದು, ಸಲಹೆ ಪಡೆಯುವುದು ಹಾಗೂ ಇತರರಿಂದ ಪ್ರೋತ್ಸಾಹ ಪಡೆಯುವುದು ಸೌಹಾರ್ದತೆಯ ಭಾವವನ್ನು ನೀಡುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ ಹೆಚ್ಚು ಖುಷಿ ಇರುವಂತೆ ಹಾಗೂ ಆತಂಕ ಕಡಿಮೆಯಾಗುವಂತೆ ಮಾಡುತ್ತದೆ.

ದೃಢವಾಗಿರಿ: ಅಗತ್ಯಗಳು, ಆಲೋಚನೆ ಹಾಗೂ ಕಾಳಜಿಗಳನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಲು ವೃತ್ತಿಪರ ಸಂವಹನಗಳಲ್ಲಿ ದೃಢತೆಯನ್ನು ಬೆಳೆಸಿಕೊಳ್ಳಿ. ಕೆಲಸದ ಸ್ಥಳ ವೃತ್ತಿ ಹಾಗೂ ಸಂಬಂಧಗಳ ವಿಚಾರದಲ್ಲಿ ದೃಢತೆ ಬೆಳೆಸಿಕೊಳ್ಳಿ. ನಿಮ್ಮ ನಿಲುವನ್ನು ಸ್ವಷ್ಟವಾಗಿ ವ್ಯಕ್ತಪಡಿಸಿ. ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಆತ್ಮವಿಶ್ವಾಸವಿರಲಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಆರೋಗ್ಯಕರ ಸಂಬಂಧ ಬೆಳೆಸಿ. ತಪ್ಪುಗ್ರಹಿಕೆಗಳಿಂದ ದೂರವಿರಿ. ಒಟ್ಟಾರೆ ವೃತ್ತಿಪರ ಅನುಭವ ಹೆಚ್ಚಿಸುವ ಕ್ರಮಗಳನ್ನು ರೂಢಿಸಿಕೊಳ್ಳಿ.

ಕೌಶಲ ಹೆಚ್ಚಿಸಿಕೊಳ್ಳಿ: ನಿಮ್ಮ ಕ್ಷೇತ್ರ ಹಾಗೂ ಕೆಲಸಕ್ಕೆ ಸಂಬಂಧಿಸಿ ಹೊಸ ಕೌಶಲ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಹೊಸ ಹೊಸ ತಂತ್ರಗಳನ್ನು ಕಲಿಯಿರಿ. ನಿರಂತರ ಕಲಿಯುವಿಕೆಯು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ ಆತ್ಮವಿಶ್ವಾಸ ವೃದ್ಧಿಯಾಗಲೂ ಸಹಕರಿಸುತ್ತದೆ. ನಿಮ್ಮ ಕೆಲಸದಲ್ಲಿ ಪರಿಪೂರ್ಣ ಭಾವ ಕಂಡರೆ ಯಾರೂ ನಿಮ್ಮನ್ನು ಕಡೆಗಣಿಸಲು ಸಾಧ್ಯವಿಲ್ಲ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನಿಮ್ಮದಾಗಿರಲಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ