ಕನ್ನಡ ಸುದ್ದಿ  /  Lifestyle  /  International Womens Day 2024 Career Oriented Courses For College Going Girls Help Them Start A Career Later Arc

Womens Day 2024: ಓದಿನ ಜತೆ ಈ ಕೋರ್ಸ್‌ಗಳನ್ನೂ ಮಾಡ್ಕೊಳ್ಳಿ, ಭವಿಷ್ಯಕ್ಕೆ ಹೆಲ್ಪ್‌ ಆಗುತ್ತೆ; ಕಾಲೇಜು ಹುಡುಗಿಯರಿಗೆ ಸಲಹೆ

ಆಧುನಿಕ ಯುಗದಲ್ಲಿ ಕರಿಯರ್‌ ಪ್ರಾರಂಭಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಯಾರು ಯಾವಾಗ ಬೇಕಾದರೂ ಕರಿಯರ್‌ ಪ್ರಾರಂಭಿಸಬಹುದು. ಆದರೆ ವಿದ್ಯೆ ಕಲಿತಿರಬೇಕೆಷ್ಟೇ. ಕಾಲೇಜು ದಿನಗಳಲ್ಲಿ ಹೆಣ್ಣು ಮಕ್ಕಳು ಹವ್ಯಾಸ ಎಂದು ಕಲಿತ ವಿದ್ಯೆಗಳು ಮುಂದೆ ಜೀವನ ನಿರ್ವಹಣೆಗೆ ದಾರಿಯಾದ ಉದಾಹರಣೆಗಳು ನಮ್ಮಲ್ಲಿವೆ. (ಬರಹ: ಅರ್ಚನಾ ವಿ. ಹೆಗಡೆ)

ಓದಿನ ಜತೆ ಈ ಕೋರ್ಸ್‌ಗಳನ್ನೂ ಮಾಡ್ಕೊಳ್ಳಿ, ಭವಿಷ್ಯಕ್ಕೆ ಹೆಲ್ಪ್‌ ಆಗುತ್ತೆ; ಕಾಲೇಜು ಹುಡುಗಿಯರಿಗೆ ಸಲಹೆ
ಓದಿನ ಜತೆ ಈ ಕೋರ್ಸ್‌ಗಳನ್ನೂ ಮಾಡ್ಕೊಳ್ಳಿ, ಭವಿಷ್ಯಕ್ಕೆ ಹೆಲ್ಪ್‌ ಆಗುತ್ತೆ; ಕಾಲೇಜು ಹುಡುಗಿಯರಿಗೆ ಸಲಹೆ

ಕಲಿಕೆ ಅನ್ನುವುದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಅನ್ನುವುದು ಎಷ್ಟು ಸತ್ಯವೋ, ಅದೇ ರೀತಿ ಕೆಲವೊಂದನ್ನು ಸಮಯವಿರುವಾಗಲೇ ಕಲಿಯುವುದು ಕೂಡ ಅತಿ ಅವಶ್ಯಕ ಎನ್ನುವುದು ಕೂಡ ಅಷ್ಟೇ ಸತ್ಯ. ಶಾಲೆ–ಕಾಲೇಜುಗಳ ಶೈಕ್ಷಣಿಕ ಕಲಿಕೆಯ ಜೊತೆಗೆ ಕಲಿಯುವ ಕೌಶಲ ತರಬೇತಿಗಳು ಕೂಡಾ ಹೆಣ್ಣು ಮಕ್ಕಳಿಗೆ ಅಷ್ಟೇ ಮಹತ್ವದ್ದಾಗಿದೆ. ಕೆಲವೊಮ್ಮೆ ಹೆಣ್ಣು ಮಕ್ಕಳು ಜೀವನ ರೂಪಿಸಿಕೊಳ್ಳಲು ಅವುಗಳು ನೆರವಾಗುತ್ತದೆ. ಮದುವೆ, ಸಂಸಾರ, ಮಕ್ಕಳ ಲಾಲನೆ–ಪಾಲನೆಯ ಸಮಯದಲ್ಲಿ ತಾವು ಮಾಡುತ್ತಿರುವ ಉದ್ಯೋಗಗಳನ್ನು ಬಿಡುವ ಮಹಿಳೆಯರು ನಮ್ಮಲ್ಲಿ ಸಾಕಷ್ಟಿದ್ದಾರೆ. ಮನೆ, ಕೆಲಸ ಎರಡನ್ನೂ ನಿಭಾಯಿಸುವುದು ಕಷ್ಟವೆನಿಸಿದಾಗ ಹೊರಗಡೆಯ ಕೆಲಸದಿಂದ ವಿಮುಖರಾಗುವವರೇ ಹೆಚ್ಚು. ಕ್ರಮೇಣ ಅವೆಲ್ಲವೂ ಒಂದು ಹಂತಕ್ಕೆ ಬಂದಾಗ ಮತ್ತೆ ಏನಾದರೂ ಹೊಸತನ್ನು ಪ್ರಾರಂಭಿಸಬೇಕೆಂಬ ಬಯಕೆ ಹಲವು ಮಹಿಳೆಯರಲ್ಲಿ ಮೂಡುವುದು ಸಹಜ. ಹೊಸತನ್ನೇನಾದರೂ ಮಾಡಿದರೆ ಎಂಬ ಆಲೋಚನೆಯೇನೋ ಸರಿ, ಆದರೆ ಮಾಡುವುದು ಏನು? ಈ ಪ್ರಶ್ನೆ ಹಲವರಲ್ಲಿ ಕಾಡುತ್ತದೆ. ಆಗ ಹೊಸ ಕೋರ್ಸ್‌ಗೆ ಸೇರಿ ಕಲಿತು ಆನಂತರ ಕರಿಯರ್‌ ಪ್ರಾರಂಭಿಸಬೇಕೆಂದರೆ ಸಮಯ ಸಾಗಿ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿಯೇ ಮಹಿಳೆಯರಿಗೆ ನೆರವಾಗುವುದು ಅವರು ಕಾಲೇಜು ದಿನಗಳಲ್ಲಿ ಕಲಿತ ಕೌಶಲ ತರಬೇತಿಗಳು. ತಮ್ಮ ಆಸಕ್ತಿಯ ವಿಷಯ ಎಂದು ಕಲಿತ ವಿದ್ಯೆ ಅವರ ಕೈ ಹಿಡಿಯುತ್ತದೆ. ಕಾಲೇಜು ದಿನಗಳಲ್ಲಿ ಹೆಣ್ಣುಮಕ್ಕಳು ಹವ್ಯಾಸ ಎಂದು ಕಲಿತ ವಿದ್ಯೆಗಳು ಮುಂದೆ ಜೀವನ ನಿರ್ವಹಣೆಗೆ ದಾರಿಯಾದ ಉದಾಹರಣೆಗಳು ನಮ್ಮಲ್ಲಿವೆ. ಹಾಗಾಗಿ ಶಾಲಾ–ಕಾಲೇಜು ದಿನಗಳಲ್ಲಿ ನಿಮ್ಮಿಷ್ಟದ ಯಾವುದಾದರೊಂದು ವಿಷಯಗಳನ್ನು ಕಲಿತಿಟ್ಟುಕೊಂಡರೆ ಮುಂದೆ ಅದೇ ಕರಿಯರ್‌ ಅಥವಾ ಸಮಯ ಕಳೆಯಲು ಆಧಾರವಾಗಬಲ್ಲದು.

ಕಾಲೇಜು ದಿನಗಳಲ್ಲಿ ಕಲಿಯಬಹುದಾದ ಜೀವನ ಕೌಶಲಗಳು

* ಕೆಲವರು ಯಾರದೋ ಕೈ ಮೇಲೆ ಅಚ್ಚಾಗಿರುವ ಮೆಹಂದಿ ಡಿಸೈನ್‌ ನೋಡಿ ಅದರಂತೆಯೇ ಬಿಡಿಸುತ್ತಾರೆ. ಅಷ್ಟೇ ಏಕೆ ಯಾವುದೋ ರದ್ದಿ ಪೇಪರ್‌ನಲ್ಲಿ ನೋಡಿರುವ ಡಿಸೈನ್ಅನ್ನು ಸಹ ಅದೆಷ್ಟೋ ದಿನಗಳ ನಂತರವೂ ಅದರಂತೆಯೇ ಬಿಡಿಸುತ್ತಾರೆ. ಅಂತಹ ಕಲೆಯಲ್ಲಿ ಆಸಕ್ತಿ ಇರುವವರು ಮೆಹಂದಿ ಡಿಸೈನ್‌ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದು. ಮುಂದೆ ಅದನ್ನೇ ಪ್ರೊಫೆಷನ್‌ ಆಗಿಸಿಕೊಳ್ಳಬಹುದು. ಮದುವೆ, ಪಾರ್ಟಿಗಳಿಗೆ ಮೆಹಂದಿ ಆರ್ಡರ್‌ಗಳನ್ನು ತೆಗೆದುಕೊಳ್ಳಬಹುದು.

* ಟೇಲರಿಂಗ್‌ ಅನ್ನುವುದು ಎಂದಿಗೂ ಹಳೆಯದಾಗದ ಕೋರ್ಸ್‌. ಅಂಗಡಿಗೆ ಹೋಗಿ, ಹತ್ತು ಸಾವಿರ ಕೊಟ್ಟು ಸೀರೆ ತೆಗೆದುಕೊಂಡರೂ, ಬ್ಲೌಸ್‌ ಸ್ಟಿಚ್‌ ಮಾಡಿಸಲು ಮಾತ್ರ ಟೇಲರ್‌ ಬೇಕೇ ಬೇಕು. ಅದರಲ್ಲೂ ಈಗ ಬ್ಲೌಸ್‌ ಡಿಸೈನ್‌ ಅನ್ನುವುದು ದೊಡ್ಡ ಉದ್ಯೋಗ ಸೃಷ್ಟಿಸಿದೆ. ಸಿಂಪಲ್‌ ಬ್ಲೌಸ್‌ ಒಂದಡೆಯಾದರೆ, ಅದರ ಮೇಲೆ ಕಸೂತಿ ವರ್ಕ್‌ ಮಾಡಿಸುವುದು ಈಗಿನ ಟ್ರೆಂಡ್‌. ಹಾಗಾಗಿ ಸ್ಟಿಚಿಂಗ್‌ ಜೊತೆಗೆ ಕಸೂತಿ ವರ್ಕ್‌ಗಳನ್ನು ಸಹ ಕಲಿತು, ಅದನ್ನೇ ಕರಿಯರ್‌ ಆಗಿಸಿಕೊಳ್ಳಬಹುದು.

* ಶಾಲಾ, ಕಾಲೇಜು ದಿನಗಳಲ್ಲಿ ಸಂಗೀತಾಭ್ಯಾಸ ಮಾಡಿಕೊಂಡರೆ ಮುಂದೆ ಸಂಗೀತ ಕ್ಲಾಸ್‌ಗಳನ್ನು ತೆರೆಯಬಹುದು. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಗಳ ಜೊತೆಗೆ ಹಾರ್ಮೋನಿಯಂ, ವೀಣೆ ಕಲಿಯಬಹುದು. ಇಂದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಗೀತ ಕಲಿಯುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ.

* ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಇರುವ ಅತಿ ದೊಡ್ಡ ಬಿಸೆನೆಸ್‌ ಅಂದ್ರೆ ಬ್ಯೂಟಿ ಪಾರ್ಲರ್‌. ಅದರಲ್ಲೂ ಬ್ರೈಡಲ್‌ ಮೇಕಪ್‌ ಅನ್ನುವುದು ದೊಡ್ಡ ಉದ್ಯೋಗವಾಗಿದೆ. ಹಾಗಾಗಿ ಬ್ಯೂಟಿಷನ್‌ ಕೋರ್ಸ್‌ ಮಾಡಿಕೊಂಡರೆ ತಮ್ಮದೆ ಬ್ಯೂಟಿ ಪಾರ್ಲರ್‌ ತೆಗೆದು ಅದರಲ್ಲಿ ಹಣ ಗಳಿಸಬಹುದು.

* ಬರವಣಿಗೆ ನಿಮ್ಮ ಹವ್ಯಾಸವಾಗಿದ್ದರೆ ಅದರಲ್ಲೇ ನೀವು ಮುಂದುವರಿಯಬಹುದು. ಶಾಲಾ, ಕಾಲೇಜು ದಿನಗಳಲ್ಲಿ ಬರವಣಿಗೆಯನ್ನು ಕರಗತ ಮಾಡಿಕೊಂಡರೆ ಕಂಟೆಂಟ್‌ ರೈಟಿಂಗ್‌, ಕಾಪಿರೈಟಿಂಗ್ ನಂತಹ ವರ್ಕ್‌ ಫ್ರಾಮ್‌ ಹೋಮ್‌ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

* ಡಿಸೈನಿಂಗ್‌ನಲ್ಲಿ ನಿಮಗೆ ಆಸಕ್ತಿ ಇದ್ದರೆ ಕಾಲೇಜು ದಿನಗಳಲ್ಲಿ ವೆಬ್‌ ಡಿಸೈನ್‌, ಗ್ರಾಫಿಕ್ಸ್‌ ಡಿಸೈನ್ ನಂತಹ ಕೋರ್ಸ್‌ಗಳನ್ನು ಕಲಿತರೆ ಮುಂದೆ ಅದು ನಿಮಗೆ ಸಹಾಯವಾಗಬಲ್ಲದು.

* ಕೆಲವರು ಬೇರೆ ಬೇರೆ ಭಾಷೆಗಳನ್ನು ಮಾತನಾಡುವುದರಲ್ಲಿ ನೈಪುಣ್ಯತೆಯನ್ನು ಸಾಧಿಸಿರುತ್ತಾರೆ. ಅಂತಹವರು ಕಾಲೇಜು ದಿನಗಳಲ್ಲಿ ಭಾಷೆಗಳನ್ನು ಉದಾಹರಣೆಗೆ ಫ್ರೆಂಚ್‌, ಜರ್ಮನ್‌, ಫಾರೆನ್‌ ಇಂಗ್ಲೀಷ್‌ ಮುಂತಾದವುಗಳನ್ನು ಸರಿಯಾಗಿ ಅಭ್ಯಾಸ ಮಾಡಿದರೆ ಮುಂದೆ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ತೆರೆದು ಅದರಲ್ಲಿ ಆನ್‌ಲೈನ್‌ ಮುಖಾಂತರ ಟೀಚಿಂಗ್‌ ಮಾಡಬಹುದು. ಇತ್ತೀಚಿಗೆ ಆನ್‌ಲೈನ್‌ ಟೀಚಿಂಗ್‌ ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

* ಕಾಲೇಜು ದಿನಗಳಲ್ಲಿ ಕಾಮರ್ಸ್‌ ತೆಗೆದುಕೊಂಡವರು ಮಾಡಿಕೊಳ್ಳಬಹುದಾದ ಕೋರ್ಸ್‌ ಅಂದರೆ ಟ್ಯಾಲಿ. ನೀವು ಟ್ಯಾಲಿ ಕಲಿತುಕೊಂಡರೆ ಯಾವುದಾದರೂ ಕಂಪನಿಗಳಿಗೆ ಔಟ್‌ ಸೋರ್ಸಿಂಗ್‌ ಮಾಡಿಕೊಡಬಹುದು.

* ಕೆಲವರಿಗೆ ಡ್ಯಾನ್ಸ್‌ ಮಾಡುವುದೆಂದರೆ ನೀರು ಕುಡಿದಿಷ್ಟೇ ಸುಲಭ. ಅಂತಹವರು ಡ್ಯಾನ್ಸ್‌ ಕಲಿತುಕೊಳ್ಳಬಹುದು. ಕೇವಲ ಭರತನಾಟ್ಯ, ಕುಚುಪುಡಿಯಂತಹ ಶಾಸ್ತ್ರೀಯ ಡ್ಯಾನ್ಸ್‌ ಗಳಷ್ಟೇ ಅಲ್ಲ, ಬದಲಿಗೆ ವೆಸ್ಟರ್ನ್‌ ಡ್ಯಾನ್ಸ್‌ಗಳನ್ನು ಸಹ ಕಲಿಯಬಹುದು. ಅವರು ಮುಂದೆ ತಾವೇ ಸ್ವತಃ ಕೊರಿಯೊಗ್ರಾಫಿ ಸಹ ಮಾಡಬಹುದು. ಇಲ್ಲವೇ ಕೆಲವು ಶಾಲೆಗಳಿಗೆ ಡ್ಯಾನ್ಸ್‌ ಟೀಚರ್‌ ಆಗಿಯೂ ಸೇರಿಕೊಳ್ಳಬಹುದು.

ಈಗಿನ ದಿನಗಳಲ್ಲಿ ಕಲಿಕಾ ಕ್ಷೇತ್ರ ಬಹಳಷ್ಟು ದೊಡ್ಡದಾಗಿದೆ. ಆಸಕ್ತಿಗೆ ತಕ್ಕಂತೆ ವಿದ್ಯೆ ಕಲಿಯಬಹುದು. ಕಲಿತ ವಿದ್ಯೆಯಿಂದ ತಮ್ಮ ಕಾಲ ಮೇಲೆ ತಾವೇ ನಿಲ್ಲಬಹುದು. ನಿಮ್ಮ ಆಸಕ್ತಿಗಳೇ ಮುಂದೆ ಜೀವನ ನಿರ್ವಹಣೆಗೆ ಸಹಾಯವಾಗಬಲ್ಲದು.

ವಿಭಾಗ