Women's Day Special: ಆತ್ಮವಿಶ್ವಾಸದಿಂದ ಮತ್ತೆ ವೃತ್ತಿಜೀವನ ಆರಂಭಿಸುವ ಸವಾಲು ಎದುರಿಸಲು ನಾನು ಕಂಡುಕೊಂಡ ಮಾರ್ಗವಿದು: ಡಾ. ಲಕ್ಷ್ಮಿ ಎಚ್
International Women's Day 2024: ಮದುವೆ, ಮಕ್ಕಳು, ಕುಟುಂಬಕ್ಕಾಗಿ ವೃತ್ತಿ ಬದುಕು ತ್ಯಾಗ ಮಾಡುವ ಮಹಿಳೆಯರ ಸಂಖ್ಯೆ ದೊಡ್ಡದು. ಇವರಲ್ಲಿ ಹಲವರು ಮತ್ತೆ ಕೆರಿಯರ್ ರಿಸ್ಟಾರ್ಟ್ ಮಾಡುವ ಉತ್ಸಾಹ ತೋರುತ್ತಾರೆ. ತಮ್ಮ ವೃತ್ತಿ ಬದುಕನ್ನು ಮತ್ತೆ ಆರಂಭಿಸಿದ ಕಥೆಯನ್ನು ಅಸೋಸಿಯೇಟ್ ಪ್ರೊಫೆಸರ್ ಡಾ. ಲಕ್ಷ್ಮಿ ಎಚ್ ಅವರು 'ಎಚ್ಟಿ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ.
ನಮ್ಮದಷ್ಟೇ ಅಲ್ಲ, ಬಹುತೇಕ ಸಮಾಜಗಳಲ್ಲಿ ಮಹಿಳೆಯರು ವೃತ್ತಿಜೀವನ ಆಕಾಂಕ್ಷೆ ಮತ್ತು ಕೌಟುಂಬಿಕ ಜವಾಬ್ದಾರಿ ಇವೆರಡನ್ನೂ ಸಮತೋಲನ ಮಾಡಿಕೊಂಡು ಸಾಗುತ್ತಿರುವ ಸಂದರ್ಭದಲ್ಲಿ ಯಾವುದೋ ಒಂದು ಹಂತದಲ್ಲಿ ತಿರುವಿಗೆ ಬಂದು ನಿಲ್ಲುತ್ತಾರೆ. ವಿಶೇಷವಾಗಿ ಮದುವೆ ಮತ್ತು ಹೆರಿಗೆಯ ನಂತರ ಮಹಿಳೆ ಸಮಾಜದ ನಿರೀಕ್ಷೆ ಭಾರದಿಂದ ವೃತ್ತಿ ಜೀವನಕ್ಕೆ ಸಹಜವಾಗಿಯೇ ವಿರಾಮ ನೀಡಬೇಕಾಗಿ ಬರುತ್ತದೆ. ಹಾಗಿದ್ದರೂ ಕೆಲವು ಮಹಿಳೆಯರು ಹೊಂದಾಣಿಕೆ ಮತ್ತು ದೃಢ ಸಂಕಲ್ಪದಿಂದ ವಿರಾಮದ ಬಳಿಕ ಮತ್ತೆ ವೃತ್ತಿ ಪ್ರಾರಂಭಿಸಿ ಭಿನ್ನವಾಗಿ ನಿಲ್ಲುತ್ತಾರೆ. ಬೋಧನಾ ಕ್ಷೇತ್ರದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ನಾನು ಕೂಡ ಇಂಥ ಸವಾಲುಗಳಿಗೆ ಮತ್ತು ರೂಪಾಂತರಗಳಿಗೆ ಸಾಕ್ಷಿಯಾಗಿದ್ದೇನೆ.
ತಾತ್ಕಾಲಿಕವಾದರೂ, ವೃತ್ತಿಯಿಂದ ದೂರ ಉಳಿಯುವ ನಿರ್ಧಾರದಿಂದ ಅನೇಕ ಸವಾಲುಗಳು ಎದುರಾಗುತ್ತವೆ. ಎಲ್ಲರಂತೆ ನನಗೂ ಕೂಡ ವಿರಾಮದ ಬಳಿಕ ಮತ್ತೆ ವೃತ್ತಿ ಆರಂಭಿಸುವುದು ಭಯ ಉಂಟುಮಾಡಿದ ವಿಚಾರವಾಗಿತ್ತು. ಶಿಕ್ಷಣ ವಲಯವು ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಅಲ್ಲದೇ ಶಿಕ್ಷಣ ವಿಧಾನಗಳು ಬದಲಾಗುತ್ತವೆ ಮತ್ತು ಸಂಶೋಧನೆಯಲ್ಲಿ ಪ್ರಗತಿಯಾಗುತ್ತವೆ. ಇವೆಲ್ಲಾ ಕಾರಣಗಳು ವೃತ್ತಿ ಜೀವನಕ್ಕೆ ಮರಳುವವರಿಗೆ ಕ್ಷೇತ್ರವು ಅಪರಿಚಿತವಾಗುವಂತೆ ಮಾಡಬಹುದು ಅಥವಾ ವಿಮುಖರನ್ನಾಗಿ ಮಾಡಬಹುದು. ನಾನು ವೃತ್ತಿ ಜೀವನ ಆರಂಭಿಸಿದ್ದು 2010ರಲ್ಲಿ. ನಾನು ಆರು ತಿಂಗಳ ಅವಧಿಯ ನನ್ನ ಮೊದಲ ವಿರಾಮ(ಹೆರಿಗೆ ರಜೆ) ತೆಗೆದುಕೊಂಡಿದ್ದು 2012ರಲ್ಲಿ. ಎರಡನೇ ಬಾರಿ ವಿರಾಮ ತೆಗೆದುಕೊಂಡಿದ್ದು 2019ರಲ್ಲಿ.
ಈ ಸವಾಲುಗಳನ್ನು ಎದುರಿಸಲು ನಾನು ಒಂದು ಮಾರ್ಗ ಕಂಡುಕೊಂಡೆ. ಕೌಶಲ್ಯ ವರ್ಧಿಸಿಕೊಳ್ಳಲು ಮತ್ತು ವೃತ್ತಿಪರ ಅಭಿವೃದ್ಧಿ ಸಾಧಿಸಲು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಂಡೆ. ಪಿಎಚ್‌ಡಿಯಂತಹ ಶಿಕ್ಷಣ ಕಲಿಕೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದು, ಕಾರ್ಯಾಗಾರಗಳಿಗೆ ಹಾಜರಾಗುವುದು ಮತ್ತು ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸುವ ಮೂಲಕ ಶಿಕ್ಷಣ ಕ್ಷೇತ್ರದ ಇತ್ತೀಚಿನ ಹೊಸ ಬೆಳವಣಿಗೆಗಳನ್ನು ತಿಳಿದುಕೊಂಡು ಅಪ್-ಟು-ಡೇಟ್ ಆದೆ. ಆನ್‌ಲೈನ್ ಕಲಿಕೆ ಮತ್ತು ಸಂಪರ್ಕ ಹೊಂದುವುದಕ್ಕೆ ತಂತ್ರಜ್ಞಾನದ ಸಮರ್ಥ ಬಳಕೆ ಮಾಡಿಕೊಂಡೆ. ಆ ಮೂಲಕ ವೃತ್ತಿಜೀವನದ ವಿರಾಮದಿಂದ ಉಂಟಾಗುವ ಅಂತರವನ್ನು ಕಡಿಮೆ ಮಾಡಿಕೊಡೆ.
ವಿರಾಮದ ಬಳಿಕ ವೃತ್ತಿ ಪ್ರಾರಂಭಿಸುವಲ್ಲಿ ಯಶಸ್ಸು ದೊರಕಬೇಕೆಂದರೆ ಅದಕ್ಕೆ ಮೂಲ ಕಾರಣ ಮಹಿಳೆಯರ ಸುತ್ತ ಇರುವ ಸಪೋರ್ಟ್ ಸಿಸ್ಟಮ್. ಅಂದರೆ ಬೆಂಬಲ ನೀಡುವವರು. ನಾನೆಷ್ಟು ಅದೃಷ್ಟವಂತೆ ಎಂದರೆ ನನ್ನ ಸುತ್ತಲೂ ನನ್ನನ್ನು ಅರ್ಥಮಾಡಿಕೊಳ್ಳುವ ಉದ್ಯೋಗದಾತರು, ಸಹೋದ್ಯೋಗಿಗಳು, ಮಾರ್ಗದರ್ಶಕರು ಮತ್ತು ಬೆಂಬಲಕ್ಕೆ ನಿಲ್ಲುವ ಕುಟುಂಬ ಸದಸ್ಯರಿದ್ದರು. ಒಂದು ಗಟ್ಟಿಯಾದ ನೆರವಿನ ವ್ಯವಸ್ಥೆಯೂ ಬದುಕಿನಲ್ಲಿ ಬಹಳ ವ್ಯತ್ಯಾಸ ಉಂಟು ಮಾಡುತ್ತದೆ. ನನಗೆ ಸಹೋದ್ಯೋಗಿಗಳು ಮತ್ತು ಮಾರ್ಗದರ್ಶಕರು ಅವರ ಸ್ವಂತ ಅನುಭವದಿಂದ ಗಳಿಸಿದ ಒಳನೋಟ ಮತ್ತು ಸಲಹೆಗಳನ್ನು ನೀಡುವ ಮೂಲಕ ಮಾರ್ಗದರ್ಶನ ಮಾಡಿದರು. ಪ್ರೋತ್ಸಾಹಿಸಿದರು.
ಎರಡನೇ ಇನ್ನಿಂಗ್ಸ್ ಮಹತ್ವದ ತಿರುವು:
ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ನಲ್ಲಿ ನನಗೆ ಸಿಕ್ಕ ಮಹತ್ವದ ತಿರುವು ಎಂದರೆ ಪಿಎಚ್‌ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು. ಅನಂತರ ಪ್ರತಿಷ್ಠಿತ ಜರ್ನಲ್ ನಲ್ಲಿ ನನ್ನ ಸಂಶೋಧನಾ ಪ್ರಬಂಧ ಪ್ರಕಟವಾಯಿತು. ಅದೆಲ್ಲದರಿಂದಾಗಿ ನನಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಬೋಧನೆ ಮಾಡುವ ಅವಕಾಶ ಸಿಕ್ಕಿತು. ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಕ್ಕಾಗಿ ಮನ್ನಣೆಯೂ ಪ್ರಾಪ್ತವಾಯಿತು. ಈ ಮಹತ್ವದ ಕ್ಷಣಗಳು ನನ್ನ ಉದ್ದೇಶವನ್ನು ಮತ್ತೆ ದೃಢೀಕರಿಸಿತು ಮತ್ತು ಬೋಧನೆ, ಸಂಶೋಧನೆಯಲ್ಲಿನ ನನ್ನ ಹುಮ್ಮಸ್ಸಿಗೆ ಜೀವ ತಂದಿತು. ಮತ್ತೆ ಗಳಿಸಿದ ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ನಾನು ವಿದ್ಯಾರ್ಥಿಗಳ ಜೀವನದಲ್ಲಿ ಅರ್ಥಪೂರ್ಣ ಪರಿಣಾಮ ಉಂಟುಮಾಡಬೇಕೆಂದು ನಿರ್ಧರಿಸಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತೆ ನನ್ನ ವೃತ್ತಿ ಬದುಕು ಆರಂಭಿಸಿದೆ.
ಕೊನೆಯದಾಗಿ ಹೇಳುವುದಾದರೆ, ಮದುವೆ ಮತ್ತು ಮಕ್ಕಳ ಬಳಿಕ ವೃತ್ತಿ ಜೀವನ ಪುನರಾರಂಭಿಸುವ ಪ್ರಯಾಣವು ಸವಾಲುಗಳೊಂದಿಗೆ ಆರಂಭವಾಗುತ್ತವೆ. ಆದರೆ ಇದು ಮಹಿಳೆಯರ ದೃಢನಿರ್ಧಾರ, ಸಹನಾ ಶಕ್ತಿ ಹಾಗೂ ಯಶಸ್ಸಿನಿಂದ ಗುರುತಿಸಲ್ಪಡುವ ಪ್ರಯಾಣವಾಗಿದೆ. ಅಸೋಸಿಯೇಟ್ ಪ್ರೊಫೆಸರ್ ಆಗಿ ನಾನು ದೃಢನಿಶ್ಚಯದ ರೂಪಾಂತರ ಶಕ್ತಿಗೆ ಸಾಕ್ಷಿಯಾಗಿ ನಿಂತಿದ್ದೇನೆ ಮತ್ತು ವೃತ್ತಿ ಜೀವನದ ತೃಪ್ತಿಯು ಸಾಮಾಜಿಕ ನಿರೀಕ್ಷೆಗಳ ಗಡಿಯನ್ನು ಮೀರಿದ್ದಾಗಿದೆ.
ಸಹ ಮಹಿಳಾ ಓದುಗರಿಗೆ ಸಂದೇಶ
ಆತ್ಮೀಯ ಸಹ ಮಹಿಳಾ ಓದುಗರೇ, ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಕೌಟುಂಬಿಕ ಜವಾಬ್ದಾರಿಗಳ ಜೊತೆಗೆ ವೃತ್ತಿಜೀವನದ ಆಕಾಂಕ್ಷೆಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಮತೋಲನದ ಪ್ರಯಾಣವನ್ನು ಮಾಡುತ್ತಿರುವ ಪ್ರತಿಯೊಬ್ಬ ಮಹಿಳೆಯರ ದೃಢನಿಶ್ಚಯ, ಸಹನಾ ಶಕ್ತಿ ಮತ್ತು ಶಕ್ತಿ ಸಾಮರ್ಥ್ಯವನ್ನು ಸಂಭ್ರಮಿಸೋಣ. ಈ ಸಂದರ್ಭದಲ್ಲಿ ಒಂದು ಮಾತು ನೆನಪಿಡಿ, ಈ ಸವಾಲುಗಳನ್ನು ಎದುರಿಸುತ್ತಿರುವವರು ನೀವೊಬ್ಬರೇ ಅಲ್ಲ. ನಾವೆಲ್ಲರೂ ಒಟ್ಟಾಗಿ ಪರಸ್ಪರ ಸಹಕಾರ, ಬೆನ್ನುತಟ್ಟುವಿಕೆಯಿಂದ ವೃತ್ತಿ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಬಹುದಾಗಿದೆ. ಆತ್ಮವಿಶ್ವಾಸ, ಸಂಕಲ್ಪ ಮತ್ತು ಬೆಳೆಯುವ ಮನಸ್ಥಿತಿ ಜೊತೆಗೆ ನಮ್ಮ ಪ್ರಯಾಣ ಮುಂದುವರಿಸೋಣ. ಪ್ರತಿಯೊಬ್ಬರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು!
-ಡಾ. ಲಕ್ಷ್ಮಿ.ಎಚ್
ಅಸೋಸಿಯೇಟ್ ಪ್ರೊಫೆಸರ್,
ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್,
ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ