Women's Day Special: ಹೆಣ್ಣಿಗೆ ಸ್ವಾತಂತ್ರ್ಯ ನೀಡುವುದು, ಅವಕಾಶ ಕೊಡುವುದು ಎಂಬ ಪರಿಕಲ್ಪನೆಯೇ ಕೀಳುಮಟ್ಟದ್ದು: ಮೇದಿನಿ ಕೆಸವಿನಮನೆ ಬರಹ-international womens day 2024 concept of giving freedom and opportunity to women is inferior says medini kesavinamane mg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Women's Day Special: ಹೆಣ್ಣಿಗೆ ಸ್ವಾತಂತ್ರ್ಯ ನೀಡುವುದು, ಅವಕಾಶ ಕೊಡುವುದು ಎಂಬ ಪರಿಕಲ್ಪನೆಯೇ ಕೀಳುಮಟ್ಟದ್ದು: ಮೇದಿನಿ ಕೆಸವಿನಮನೆ ಬರಹ

Women's Day Special: ಹೆಣ್ಣಿಗೆ ಸ್ವಾತಂತ್ರ್ಯ ನೀಡುವುದು, ಅವಕಾಶ ಕೊಡುವುದು ಎಂಬ ಪರಿಕಲ್ಪನೆಯೇ ಕೀಳುಮಟ್ಟದ್ದು: ಮೇದಿನಿ ಕೆಸವಿನಮನೆ ಬರಹ

International Women's Day 2024: ಯಾವುದೇ ಬೇಧ ತೋರದ ಪ್ರಕೃತಿ ಗಂಡು ಹೆಣ್ಣನ್ನು ಸಮಾನವಾಗಿ ಕಂಡು ಒಂದೇ ರೀತಿಯ ಹುಟ್ಟು-ಸಾವು-ಬದುಕನ್ನು ನೀಡಿರುವಾಗ ಮಾನವರು ಇಂತಹ ಸ್ವಾತಂತ್ರ್ಯ, ಅವಕಾಶ ಕೊಡುವುದು ಎನ್ನುವುದೇ ಅಸಂಬದ್ಧ ಎಂಬುದು ಸಾಗರದ ಲೇಖಕಿ ಮೇದಿನಿ ಕೆಸವಿನಮನೆ ಅವರ ಮಾತು. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮೇದಿನಿ ಕೆಸವಿನಮನೆ ಅವರ ಬರಹ ಇಲ್ಲಿದೆ.

ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ)
ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ)

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣಿನ ಸ್ಥಾನಮಾನ, ಗೌರವವನ್ನು ಹೆಚ್ಚಿಸಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಗೃಹದೊಳಗೆ ಬಂಧಿಸಲಾಗಿದ್ದ ಚಿತ್ರಣವನ್ನು ಬದಲಿಸಿ ಆಕೆಯನ್ನು ಬಯಲಲ್ಲಿ ಸ್ವಚ್ಛಂದವಾಗಿರಲು ಅವಕಾಶ ಕೊಟ್ಟಿದ್ದೇವೆಂದು ಹೇಳಲಾಗುತ್ತದೆ. ಶಿಕ್ಷಣ, ಉದ್ಯೋಗ, ಸೇವೆ, ರಾಜಕೀಯ ಕ್ಷೇತ್ರಗಳಲ್ಲಿ ಮೀಸಲು ಕೊಟ್ಟು ಮಹದುಪಕಾರ ಮಾಡಿದ್ದೇವೆಂದು ತಮಗೆ ತಾವೇ ಬೆನ್ನು ತಟ್ಟಿಕೊಳ್ಳುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಇದು ನಿಜವೆ? ವಾಸ್ತವವಾಗಿ ಹೆಣ್ಣು ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿದ್ದಾಳೆಯೆ? ಸಮಾನತೆ ಎಂದು ಭಾಷಣ ಮಾಡುವ ಅದೆಷ್ಟು ಜನರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ, ಅವಕಾಶ ನೀಡಿದ್ದಾರೆ?

ಹಾಗೆ ನೋಡಿದರೆ, ಈ ಸ್ವಾತಂತ್ರ್ಯ ನೀಡುವುದು, ಅವಕಾಶ ಕೊಡುವುದು ಎಂಬ ಪರಿಕಲ್ಪನೆಯೇ ಕೀಳುಮಟ್ಟದ್ದು. ಯಾವುದೇ ಬೇಧ ತೋರದ ಪ್ರಕೃತಿ ಗಂಡು ಹೆಣ್ಣನ್ನು ಸಮಾನವಾಗಿ ಕಂಡು, ಒಂದೇ ರೀತಿಯ ಹುಟ್ಟು, ಸಾವು, ಬದುಕನ್ನು ನೀಡಿರುವಾಗ ಮಾನವರು ಇಂತಹ ಸ್ವಾತಂತ್ರ್ಯ, ಅವಕಾಶ ಕೊಡುವುದು ಎಂಬುದು ನಿಜಕ್ಕೂ ಅಸಂಬದ್ಧ. ನನಗಂತೂ ಈ ಆರ್ಥಿಕ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಅವಕಾಶ ಎಂಬುದನ್ನೆಲ್ಲಾ ನೋಡಿದಾಗ ಆಶ್ಚರ್ಯವಾಗುತ್ತದೆ. ದುಡಿಯುವ ಅವಕಾಶ ಕಲ್ಪಿಸಿದೆವು ಎಂದು ಹೇಳುವಾಗ ಉಂಟಾದ 'ಡ್ರಾ ಬ್ಯಾಕ್' ಯಾರು ಗಮನಿಸಿದರು? ಹೆಣ್ಣು ಉದ್ಯೋಗಕ್ಕೆ ಹೊರ ಹೋದಳು, ದುಡಿಯಲು ನಿಂತಳು, ಸರಿ. ಆದರೆ ಸಂಬಳವನ್ನು ತನಗೆ ಬೇಕಾದ ಹಾಗೆ ಖರ್ಚು ಮಾಡುವ ಸ್ವಾತಂತ್ರ್ಯ ಹೊಂದಿದಳೇ? ಹೊರಗೆ ಹೋಗಿ ದುಡಿಯುತ್ತಾಳೆಂದ ಮಾತ್ರಕ್ಕೆ ಗಂಡ ಅಥವಾ ಮನೆಯವರು ಗೃಹಕೆಲಸಕ್ಕೆ ಸಹಕರಿಸುವರೆ? ಸಹಕರಿಸಿದರೆ ಸರಿ. ಇಲ್ಲದಿದ್ದರೆ ಆಕೆ ಒಳಗೂ ಹೊರಗೂ ದುಡಿಯುವ ಯಂತ್ರವಾದಳೇ ಹೊರತೂ ಅವಳಿಗೆ ಸಿಕ್ಕಿದ್ದೇನು ?

ಮನೆ , ಮಕ್ಕಳು, ಉದ್ಯೋಗವನ್ನು ನಿಭಾಯಿಸಿಕೊಂಡು ಹೊಸದೇನೋ ಮಾಡುತ್ತೇನೆಂದು ಹೊರಟರೆ, ಆಕೆಯನ್ನು ಆಡಿಕೊಳ್ಳುವವರು ಅದೆಷ್ಟು ಮಂದಿ! ಅಬ್ಬಾ, ಅವಳು ತನ್ನೆಲ್ಲಾ ರೆಕ್ಕೆಗಳನ್ನು ಕತ್ತರಿಸಿಕೊಂಡು ಮೂಲೆಗೆ ಸೇರಲೇಬೇಕು. ಹೊಗಳಿಕೆಯೂ ಹೊನ್ನ ಶೂಲವಾಗಿ ಅವಳನ್ನು ಮನೆಯ ಒಳಗೂ ಹೊರಗೂ ಇರಿಯುತ್ತದೆ. ಆದರೆ ಗಂಡಿಗೆ ಈ ಸಮಸ್ಯೆಗಳಾವುವೂ ಇಲ್ಲ. ಹೆಣ್ಣು ದುಡಿಯುತ್ತಿರುವ ಬಹುತೇಕ ಜಾಗಗಳಲ್ಲಿ ಇತ್ತೀಚಿನವರೆಗೂ ಸರಿಯಾದ ಶೌಚಾಲಯ ಇರಲಿಲ್ಲವೆಂಬುದು ಜಗತ್ತಿಗೇ ತಿಳಿದ ಸತ್ಯ. ಇದೇ ಕಾರಣಕ್ಕಾಗಿ ಎಷ್ಟೋ ಹೆಣ್ಣುಮಕ್ಕಳು ಶಾಲೆಬಿಟ್ಟ, ಉದ್ಯೋಗ ತ್ಯಜಿಸಿದ ಉದಾಹರಣೆಗಳಿವೆ. ಗಂಡು ಹೊರಹೋಗಿ ರಸ್ತೆ ಬದಿಯಲ್ಲಿ, ಬಯಲಿನಲ್ಲಿ ಅಥವಾ ಇನ್ನೆಲ್ಲೋ ಹೋಗಿಬಂದ ಹಾಗೆ ಹೆಣ್ಣು ಹೋಗಬಲ್ಲಳೇ? "ನಿನಗೆ ಸ್ವಾತಂತ್ರ್ಯ ಬೇಕಲ್ಲವೇ? ಹಾಗಾದರೆ ಹೋಗು ಅದೇ ರೀತಿ" ಎಂದರೆ ಅದು ಸಮಾನತೆಯನ್ನು ಕಲ್ಪಿಸುವ ಪರಿಯಾಗುತ್ತದೆಯೆ? ಅವಳಿಗೊಂದು ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯ ಎಲ್ಲೆಡೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ದುರಂತ ಸತ್ಯವಲ್ಲದೇ ಮತ್ತೇನು? ಸಮಾನತೆ ಉಂಟಾಗಬೇಕಾದುದು ಎಲ್ಲಿ? ಹೇಗೆ? "ಸುದೃಢಗೊಳಿಸುವುದು" ಎಂಬ ಪರಿಕಲ್ಪನೆಯ ಅರ್ಥವೇನು? ಇಲ್ಲಿ ಆಗಬೇಕಾಗಿರುವುದು ಮನಸ್ಥಿತಿಯ ಬದಲಾವಣೆ. ಅದಾದಾಗ ಪರಿಸ್ಥಿತಿ ತಾನಾಗಿಯೇ ಬದಲಾಗುತ್ತದೆ, ಅಲ್ಲವೇ?

ತಾನು ಓದಿಲ್ಲ, ಉದ್ಯೋಗ ಮಾಡಿಲ್ಲ , ಆ ಕಾರಣಕ್ಕೆ ಸೊಸೆ/ ಮಗಳು ಹೊರಹೋಗಬಾರದು ಅಥವಾ ಇದಕ್ಕೆ ವ್ಯತಿರಿಕ್ತವಾಗಿ ದುಡಿಯಲೇಬೇಕು ಎಂಬ ಮನೋಭಾವದ ಸ್ತ್ರೀಯರೂ ಕೂಡಾ ಮಹಿಳೆಯರ ಬದುಕಿಗೆ ಸವಾಲೇ ಸರಿ. ಇವರನ್ನು ತಿದ್ದಿ ತಮ್ಮ ದಾರಿಯಲ್ಲಿ ನಡೆಯುವುದು, ಸವಾಲನ್ನು ಸಾಧ್ಯತೆಯಾಗಿ ಪರಿಣಮಿಸಿಕೊಳ್ಳುವುದು ಸುಲಭವಲ್ಲ. ನಿಜವಾದ ಸಮಾನತೆ ಎಂಬುದು ಹುಟ್ಟಿನಿಂದಲೇ ಇರಬೇಕು. ಆದರೆ ಸಮಾನತೆ ಎಂಬುದನ್ನು ಅರ್ಥೈಸುವಲ್ಲಿ ಸಮಾಜ ವಿಫಲವಾಗಿದೆ. ಅದೆಷ್ಟೋ ಸಂಘ ಸಂಸ್ಥೆಗಳು ಕೂಡಾ ಮಹಿಳಾ ಸ್ವಾತಂತ್ರ್ಯ, ನ್ಯಾಯದ ಹೆಸರಿನಲ್ಲಿ ಮತ್ತಷ್ಟು ಕ್ಷೋಭೆಯನ್ನೇ ಉಂಟುಮಾಡುತ್ತಿವೆ. ಮದುವೆಯೆಂಬುದು ವಿಚ್ಛೇದನದಲ್ಲಿ ಕೊನೆಯಾಗುವುದನ್ನೇ ಮಹಿಳಾ ಸ್ವಾತಂತ್ರ್ಯ ಎಂದುಕೊಂಡ ಕೆಲ ವಕೀಲರ ಕಣ್ಣಿಗೆ ಅಥವಾ ಮಹಿಳಾ‌ಸಂಘಗಳಿಗೆ ಎಲ್ಲಾ ಸಂಸಾರದಲ್ಲೂ ಬಿರುಕೇ ಕಾಣುತ್ತದೆ. ದುಡ್ಡು ಮಾಡುವುದನ್ನೇ ಗುರಿಯಾಗಿಸಿಕೊಂಡ ಹೋರಾಟಗಾರರ ಕಣ್ಣಿಗೆ ಕಾಣುವವರೆಲ್ಲರೂ ಶೋಷಿತೆಯರ ಹಾಗೇ ಕಾಣುತ್ತಾರೆ. ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯ ಎಂಬುದು ತನ್ನ ಮೌಲ್ಯವನ್ನು ಕಳೆದುಕೊಂಡು ಸ್ವೇಚ್ಛಾಚಾರವಾಗಿ ಬಯಲಾಗುತ್ತದೆ.

ಗಂಡಿನಂತೆ ಬಟ್ಟೆ ಧರಿಸುವುದು, ಸಿಗರೇಟ್ , ಮದ್ಯ ಸೇವನೆ ಇವುಗಳನ್ನು ಸಮಾನತೆ ಎನ್ನಲಾಗದು. ಅದು ಒಂದು ರೀತಿಯ ಅಹಂಕಾರವಷ್ಟೇ. ಆಕೆಯ ಬದುಕಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸ್ವಾತಂತ್ರ್ಯ ಆಕೆಯ ಕೈಯಲ್ಲಿ ಇರಬೇಕು. ತನ್ನ ಇತಿಮಿತಿಯನ್ನು ತಾನೇ ನಿರ್ಧರಿಸುವಂತಿರಬೇಕು. ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಅರಿವು ಆಕೆಗೆ ಇರಬೇಕು. ಅನ್ಯಾಯದ ವಿರುದ್ಧ ಹೋರಾಡಲು ಆಕೆಯೊಂದಿಗೆ ನಿಲ್ಲಬೇಕು. ಉಳಿದಿದ್ದು ಆಕೆಯೇ ಎದುರಿಸುತ್ತಾಳೆ‌. ಈ ಮನೋಭಾವವನ್ನು ಆಕೆಯಲ್ಲಿ ತುಂಬಬೇಕು. ಅಲ್ಲಿಗೆ ಮಹಿಳಾ ಸಮಾನತೆ, ಸ್ವಾತಂತ್ರ್ಯ ಎಂಬುದಕ್ಕೆ ಒಂದು ಅರ್ಥ ಸಿಗುತ್ತದೆಯೇ ಹೊರತೂ ಮತ್ಯಾವುದರಿಂದಲ್ಲ.

ಬರಹ: ಮೇದಿನಿ ಕೆಸವಿನಮನೆ