Women's Day 2024: ವಯಸ್ಸಿಗೆ ಬಂದ ಮಗಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು: ಅಮ್ಮ-ಅಪ್ಪನ ಸಾರ್ವಕಾಲಿಕ ಪ್ರಶ್ನೆಗೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Women's Day 2024: ವಯಸ್ಸಿಗೆ ಬಂದ ಮಗಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು: ಅಮ್ಮ-ಅಪ್ಪನ ಸಾರ್ವಕಾಲಿಕ ಪ್ರಶ್ನೆಗೆ ಇಲ್ಲಿದೆ ಉತ್ತರ

Women's Day 2024: ವಯಸ್ಸಿಗೆ ಬಂದ ಮಗಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು: ಅಮ್ಮ-ಅಪ್ಪನ ಸಾರ್ವಕಾಲಿಕ ಪ್ರಶ್ನೆಗೆ ಇಲ್ಲಿದೆ ಉತ್ತರ

ಡಾ ರೂಪಾ ರಾವ್: ಮಗಳು 'ಲೀವ್‌ ಮಿ ಅಲೋನ್' ಎಂದಾಗ ಸಹಜವಾಗಿಯೇ ಹೆತ್ತವರಿಗೆ ಇರಿಸುಮುರಿಸು. ಮಗಳಿಗೆ ಸ್ವಾತಂತ್ರ್ಯ ಕೊಡಬೇಕು ಎನ್ನುವುದು ಸರಿ. ಆದರೆ ಆ ಸ್ವಾತಂತ್ರ್ಯ ಹೇಗಿರಬೇಕು? ಎಷ್ಟಿರಬೇಕು? ಸ್ವಾತಂತ್ರ್ಯದೊಂದಿಗೆ ಬರುವ ಜವಾಬ್ದಾರಿ ನಿರ್ವಹಿಸುವಂತೆ ಮಗಳನ್ನು ಸದೃಢಗೊಳಿಸುವುದು ಹೇಗೆ? -ಈ ಬರಹ ಓದಿ.

 ವಯಸ್ಸಿಗೆ ಬಂದ ಮಗಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು? ಪ್ರೋಷಕರಿಗೆ ಉತ್ತರ
ವಯಸ್ಸಿಗೆ ಬಂದ ಮಗಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು? ಪ್ರೋಷಕರಿಗೆ ಉತ್ತರ

ಪ್ರಶ್ನೆ: ಹರೆಯದ ಹೆಣ್ಣುಮಗಳೊಂದಿಗೆ ಅಮ್ಮ-ಅಪ್ಪನ ಬಂಧ ಹೇಗಿರಬೇಕು? ಸ್ವಾತಂತ್ರ್ಯ-ಮಾರ್ಗದರ್ಶನದ ಸಮತೋಲನ ಹೇಗೆ?

ಉತ್ತರ: ನಿನ್ನೆ-ಮೊನ್ನೆ ಅಪ್ಪನ ಕೈಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಹುಡುಗಿ ಇಂದು 'ಅಪ್ಪಾ, ಲೀವ್ ಮೀ ಅಲೋನ್' ಅನ್ನುತ್ತಿದ್ದಾಳೆ. ಇಡೀ ದಿನ ಪಕ್ಕದಲ್ಲಿ ತಾಯಿಯನ್ನು ತಬ್ಬಿಕೊಂಡು ಮಲಗುತ್ತಿದ್ದ ಅವಳು, ಈಗ 'ನಾನು ಬೇರೆಯಾಗಿ ಮಲಗುವೆ' ಅನ್ನುತ್ತಾಳೆ. ಅವಳು ಬಳಸುವ ಮೊಬೈಲ್ ಮುಟ್ಟಲು ಹೋದರೆ 'ಗೀವ್ ಮಾಡಿ ಸಮ್ ಸ್ಪೇಸ್' ಎನ್ನುತ್ತಾಳೆ. ಮಗಳಿಗೆ ಏನಾದರೂ ಕೇಳಬೇಕು ಎಂದುಕೊಂಡರೂ, 'ಮಗಳೆಲ್ಲಿ ನೊಂದುಕೊಳ್ಳುತ್ತಾಳೋ' ಎಂಬ ಸಂದಿಗ್ಧ ಪರಿಸ್ಥಿತಿಯಿಂದ ಸುಮ್ಮನಾಗುತ್ತಾರೆ. ಅತಿಯಾದ ಮುದ್ದಿನಿಂದಾಗಿ ಅವಳ ಬಳಿ ಏನನ್ನೂ ಕೇಳಲು ಆಗುತ್ತಿಲ್ಲ.

ಇನ್ನೊಂದೆಡೆ ಹೆಣ್ಣು ಮಗಳೆಂಬ ಕಾರಣಕ್ಕೇ ಕಟ್ಟುನಿಟ್ಟು, ಶಿಸ್ತು ಮಾಡುವ ಪೋಷಕರ ಸಂಖ್ಯೆಯೂ ದೊಡ್ಡದು. ಅವರ ಸ್ವಾತಂತ್ರ್ಯದ ಮೇಲೆ ಪೂರ್ಣ ನಿಯಂತ್ರಣ ಹೊಂದಲೇಬೇಕೆಂಬ ತೀರಾ ಎಚ್ಚರಿಕೆಯ ಪೋಷಕರು ಇದ್ದಾರೆ. ಹೆಣ್ಣುಮಗಳು ದೇವತೆ ಅಂತ ಮುದ್ದಿಸುವವರು ಒಂದೆಡೆ, ಇನ್ನೊಂದು ಕಡೆ ಹೆಣ್ಣುಹುಡುಗಿ ಸೆರಗಲ್ಲಿ ಕಟ್ಟಿದ ಕೆಂಡ ಎಂದುಕೊಳ್ಳುವವರು ಇನ್ನೊಂದು ಕಡೆ. ಹೀಗೆ ಎರಡೂ ಬಗೆಯ ಅತಿರೇಕಗಳಲ್ಲಿ ಪೋಷಕರು ಸಿಲುಕಿದ್ದಾರೆ.

ವಯಸಿಗೆ ಬಂದ ಮಗಳಿಗೆ ಶಿಸ್ತು ಹಾಗೂ ಎಷ್ಟು ಸ್ವಾತಂತ್ರ್ಯ ಒಳ್ಳೆಯದು

ಹದಿಹರೆಯದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಆಕರ್ಷಣೆ ಸಹಜ. ಎಲ್ಲರೂ ಈ ಹಂತವನ್ನು ದಾಟಿ ಬಂದಿರುತ್ತೇವೆ. ಆದರೆ ಆ ಆಕರ್ಷಣೆ ಮಗಳ ಬದುಕನ್ನೇ ಹಾಳುಗೆಡವಿದ್ದರೆ??? ಹಾಗಾಗಿ ಮಕ್ಕಳು ಹನ್ನೆರೆಡನೇ ವಯಸ್ಸಿಗೆ ಬರುವಾಗಲೇ ಈ ಪ್ರೀತಿ, ಪ್ರೇಮ ಆಕರ್ಷಣೆ, ಮದುವೆ, ಬದುಕಿನ ಗುರಿ ಇಂತಹವುಗಳನ್ನು ಅವರೊಂದಿಗೆ ಮಾತನಾಡುತ್ತಾ ಬರಬೇಕು. ಆಕರ್ಷಕವಾಗಿ ಕಂಡದ್ದೆಲ್ಲಾ ಒಳ್ಳೆಯದಲ್ಲ ಎಂದು ಹೇಳಿಕೊಡಬೇಕು. ಅವರ ಜವಾಬ್ದಾರಿ ಅವರಿಗೆ ಅರ್ಥ ಮಾಡಿಸಬೇಕು.

ಮಕ್ಕಳನ್ನು ವಿಶೇಷವಾಗಿ ಹದಿಹರೆಯದಲ್ಲಿ ಹಾಗೂ ನಂತರದ ಒಂದಿಷ್ಟು ವರ್ಷ ಅವರ ಮೇಲೆ ಹೆಚ್ಚು ಕಾಳಜಿ ವಹಿಸಲೇಬೇಕು. ಮಗಳ ಮೇಲೆ ಅನುಮಾನ ಬೇಡ ಆದರೆ ಎಚ್ಚರ ವಹಿಸಿ. ಅವರ ಕಾಲೇಜು, ಸ್ನೇಹಿತೆಯರು, ಸ್ನೇಹಿತರು ಎಲ್ಲರ ಬಗ್ಗೆಯೂ ತಿಳಿದುಕೊಳ್ಳಿ. ಮಕ್ಕಳು ಹಾದಿ ತಪ್ಪಬಹುದೆಂಬ ಮೊದಲ ಸೂಚನೆ, ಅವರು ನಿಮಗಿಂತ ಜಾಸ್ತಿ ಹೊರ ಪ್ರಪಂಚಕ್ಕೆ ಅಂಟಿಕೊಳ್ಳುವುದು. ಸದಾ ಕಾಲ ನಡುರಾತ್ರಿಯಲ್ಲಿಯೂ ಮೆಲುದನಿಯಲ್ಲಿ ಫೋನಿನಲ್ಲಿ ಮಾತಾಡುವುದು, ಸುಳ್ಳು ಹೇಳುವುದು, ಅದಕ್ಕೆ ಮತ್ತೇನೋ ಸಬೂಬು ಕೊಡುವುದು. ಸ್ಪೆಷಲ್ ಕ್ಲಾಸ್‌ಗಳು ಇದ್ದಕ್ಕಿದ್ದಂತೆ ಹೆಚ್ಚಾಗುವುದು. ಕಂಬೈನ್ಡ್ ಸ್ಟಡಿ ಅತಿ ಎಂಬಷ್ಟು ಶುರುವಾಗುವುದು. ರಾತ್ರಿ ಮನೆಗೆ ಬಂದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದೇ ಸೀದಾ ಅವರ ರೂಮ್ ಅಥವಾ ಬೇರೆ ಕೆಲಸದಲ್ಲಿ ತೊಡಗುವುದು ಇತ್ಯಾದಿ.

ಹೌದು ಈ ವಯಸಿನಲ್ಲಿ ಮಕ್ಕಳಿಗೆ ಸ್ಪೇಸ್ ಬೇಕು. ಅವರದೇ ವಯೋಮಾನದ ಜಗತ್ತಿನಲ್ಲಿ ಅವರಿಗೆ ವಿಹರಿಸಲು ಬಿಡಿ. ಹಾಗಂತ ಅವರ ಕಾಲೇಜಿನ ಹಾಗೂ ಶಾಲೆಯ ವಿಚಾರಗಳನ್ನು ಕೇಳದೇ ಇರುವಷ್ಟು ಸಂಕೋಚವಿರುವ ಅಪರಿಚಿತರಾಗಬೇಡಿ. ಅವರ ಕಾಲೇಜು, ಶಾಲಾ ಸಮಯ ಹಾಗೂ ವೇಳಾಪಟ್ಟಿಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಿ. ಮಕ್ಕಳು ಪ್ರೀತಿಯನ್ನೋ ಅಥವಾ ಇನ್ಯಾವುದೇ ದುರ್ಬಲ ಆಸರೆಯನ್ನೋ ಹೊರಗೆ ಹುಡುಕಿಕೊಂಡು ಹೋಗುವ ಅನಿವಾರ್ಯತೆ ಮನೆಯಲ್ಲಿ ಸೃಷ್ಟಿಯಾಗಿದೆಯೇ ನೋಡಿ. ಅವರಿಗೆ ಬೇಕಾದಾಗ ನೀವು ಲಭ್ಯವಿದ್ದೀರಾ ಆತ್ಮಾವಲೋಕನ ಮಾಡಿಕೊಳ್ಳಿ.

ಸ್ವಾತಂತ್ರ್ಯ ಕೊಡಿ, ಆದರೆ ಮಾನಿಟರಿಂಗ್ ಮಾಡಲು ಮರಿಬೇಡಿ

ಕೆಲವರು ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿ ಎನ್ನುತ್ತಾರೆ. ಸ್ವಾತಂತ್ರ್ಯ ಕೊಡಿ ಆದರೆ ಅದರ ಮಾನಿಟರಿಂಗ್ ನೀವು ಮಾಡಿ. ಮಕ್ಕಳಿಗೆ ಹೊರ ಪ್ರಪಂಚದ ಅರಿವು ಆಗಲಿ. ಆದರೆ ಆ ಅರಿವು ನಿಮ್ಮ ಮಾರ್ಗದರ್ಶನದಲ್ಲಿ ಆಗಲಿ. ಮಕ್ಕಳೊಡನೆ ಮುಕ್ತ ಮಾತುಕತೆ ಇರಲಿ. ಆದರೆ ನೀವು ಜೀವನದ ಅನುಭವಿಗಳು ಎಂಬುದು ಅವರಿಗೆ ತಿಳಿದಿರಲಿ.

ಆಕರ್ಷಣೆಯ ಬಲೆಯ ಬಗ್ಗೆ ಇರಲಿ ಎಚ್ಚರ

ಮತ್ತೊಂದು ಮುಖ್ಯ ವಿಚಾರ. ಆಕರ್ಷಣೆ ಅನ್ನುವುದು ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಕಾಡುವುದು ಅವರ ಮಾಸಿಕ ಚಕ್ರ ಮುಗಿದ ಹತ್ತು ಹದಿನೈದು ದಿನಗಳಲ್ಲಿ. ಈ ಸಮಯದಲ್ಲಿ ಸಣ್ಣ ಕಾಳಜಿ, ಧೈರ್ಯ, ಪ್ರೀತಿ ತೋರಿದವರ ಕಡೆಗೆ ಅವರು ಅತಿ ಬೇಗ ಆಕರ್ಷಣೆಗೆ ಬೀಳುತ್ತಾರೆ. ತಂದೆ ತಾಯಂದಿರು ಈ ಬಗ್ಗೆ ಗಮನ ಹರಿಸಬೇಕು. ಹೆಣ್ಣುಮಕ್ಕಳಿಗೆ ಇದನ್ನು ತಿಳಿಸಿಕೊಡಬೇಕು.

ಯುವ ಮನ ಅಂಕಣ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್
ಯುವ ಮನ ಅಂಕಣ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್

ಒಂಟಿ ಹೆಣ್ಣನ್ನು ಬೇಟೆಯಾಡುವ ಗಂಡಿನ ಹಮ್ಮು

ಅದೂ ರಾತ್ರಿ ವೇಳೆ ಒಬ್ಬರೇ ಓಡಾಡುವ ಸ್ವಭಾವ ಇರುವ ಹೆಣ್ಣುಮಕ್ಕಳಿಗೆ ಹೇಳಲೇಬೇಕಾದ ವಿಷಯ ಇದು. ಹೇಳಲು-ಕೇಳಲು ಕಹಿ ಎನಿಸಬಹುದು. ಆದರೂ ಇದು ಸತ್ಯ. ಪ್ರಪಂಚದಲ್ಲಿ ಹೆಣ್ಣು ಎಷ್ಟೇ ಮುಂದುವರೆದರೂ ಹಲವು ದೇಶ, ರಾಜ್ಯ, ಪ್ರದೇಶಗಳಲ್ಲಿನ ಜನರಿಗೆ ಹೆಣ್ಣು ಒಂಟಿಯಾಗಿ ಓಡಾಡಿದರೆ ಆಕೆ ಇರುವುದು ತಮ್ಮ ಭೋಗಕ್ಕೆ ಎಂದುಕೊಳ್ಳುವ ಗಂಡಸರ ಸಂಖ್ಯೆಯೇ ಹೆಚ್ಚು.

ಗಂಡಸರ ಈ ಮನೋಭಾವವನ್ನು ವಿಕಾಸವಾದದ ಹಿನ್ನೆಲೆಯಲ್ಲಿ ನೋಡೋಣ. ಶಿಲಾಯುಗದಲ್ಲಿ ಗಂಡು ಸ್ವಭಾವತಃ ಬೇಟೆಗಾರ. ಆಗ ಹೆಣ್ಣನ್ನು ಬೇಟೆ ಆಡುವುದೇ ಗಂಡಸ್ತನ ಎಂಬ ಹಮ್ಮು ಇತ್ತು. ಕಾಲ ಬದಲಾದಂತೆ ಬಹಳಷ್ಟು ಗಂಡಸರು ನೈತಿಕ ಭಯದಿಂದಲೋ, ಕಾನೂನಿನ ಭಯದಿಂದಲೋ ಅಥವಾ ತಿಳಿವಳಿಕೆಯಿಂದಲೋ ಈ ಮನೋಭಾವದಿಂದ ಹೊರಗೆ ಬಂದಿದ್ದಾರೆ. ಆದರೆ ಈ ಮನಃಸ್ಥಿತಿ ಸಂಪೂರ್ಣ ತೊಲಗಿಲ್ಲ. ಇಂಥ ಮನೋಭಾವದವರು ಇಂದಿಗೂ ಅಲ್ಲಲ್ಲಿ ಇದ್ದೇ ಇರುತ್ತಾರೆ. ಅವರು ಯಾರು? ಮತ್ತು ಎಲ್ಲಿರುತ್ತಾರೆ ಎನ್ನುವುದು ಗೊತ್ತಿಲ್ಲವಾದ್ದರಿಂದ ಅಪರಿಚಿತರನ್ನು ಒಮ್ಮೆಲೆ ನಂಬಬಾರದು.

ಒಂಟಿಯಾಗಿ ದಾರಿಯಲ್ಲಿ ನಡೆಯುವಾಗ, ಎಲ್ಲಾದರೂ ಗೊತ್ತಿರದ ಜಾಗಕ್ಕೆ ಹೋಗುವಾಗ, ಕ್ಯಾಬ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಎಚ್ಚರ ಇರಬೇಕು. ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಹುಡುಗಿಯರು ಗಮನಿಸಬೇಕಾದ, ತಿಳಿದುಕೊಳ್ಳಬೇಕಾದ ಅಂಶಗಳಿವು.

1) ಅದು ಕ್ಯಾಬ್ ಸರ್ವಿಸ್ ಕೊಡುವ ಕಂಪನಿಯದ್ದಾ?

2) ಕ್ಯಾಬ್ ಸರ್ವಿಸ್‌ನಲ್ಲಿರುವ ಡ್ರೈವರ್ ಫೋಟೊ ಹಾಗೂ ವಾಸ್ತವದಲ್ಲಿ ಎದುರಿಗೆ ಇರುವವರು ಒಬ್ಬರೇನಾ ಎಂದು ಚೆಕ್ ಮಾಡಬೇಕು.

3) ಕೆಲವು ಡ್ರೈವರ್‌ಗಳು ತಮಗೆ ನೇರವಾಗಿ ಹಣ ಸಿಗಲು ಆಪ್‌ನಲ್ಲಿ ಕ್ಯಾಬ್ ಕ್ಯಾನ್ಸಲ್ ಮಾಡಲು ಹೇಳುತ್ತಾರೆ. ಒಂಟಿಯಾಗಿ ಪಯಣಿಸುವಾಗ ಇದಕ್ಕೆ ಯಾವತ್ತೂ ಒಪ್ಪಬಾರದು.

4) ಕ್ಯಾಬ್ ವಿವರ ಹಾಗೂ ಲೈವ್ ಲೊಕೇಶನ್ ಅನ್ನು ಪರಿಚಿತರಿಗೆ ಕಳಿಸುವುದು ಉತ್ತಮ.

5) ಅಪರಿಚಿತರು ಕೊಡುವ ತಂಪು ಪಾನೀಯ ಮತ್ತು ಇತರೆ ತಿಂಡಿಗಳನ್ನು ಸ್ವೀಕರಿಸಬೇಡಿ.

ನಿನ್ನೊಂದಿಗೆ ನಾವಿದ್ದೇವೆ ಎಂಬ ಭರವಸೆ ಕೊಡಿ

ನಾನು ಅಪ್ಪ-ಅಮ್ಮಂದಿರಿಗೆ ಹೇಳಲು ಬಯಸುವುದು ಇಷ್ಟೇ. ಮಕ್ಕಳೊಂದಿಗೆ ಮುಕ್ತ ಮಾತುಕತೆಯೂ ಅವರ ಜೊತೆ ಪಾಸಿಟಿವ್ ಸಂಬಂಧ ಹೊಂದಲು ಸಹಾಯ ಮಾಡುತ್ತದೆ. ಎಂಥದ್ದೇ ಪರಿಸ್ಥಿತಿಯಲ್ಲಿಯೂ ನಿಮ್ಮೊಂದಿಗೆ ನಾವಿರುತ್ತೇವೆ ಎನ್ನುವ ಭಾವನೆಯನ್ನು ಅಪ್ಪ-ಅಮ್ಮ ಕೊಟ್ಟರೆ ಅವರು ಹೊರಗಿನ ಆಸರೆಗಳತ್ತ ಮನಸ್ಸು ಮಾಡುವ ಸಾಧ್ಯತೆ ಕಡಿಮೆ. ನಿಮ್ಮ ಮಗಳಿಗೆ ಪರಿಚಯ ಆಗುವ ಎಲ್ಲ ಹುಡುಗರು ಅಥವಾ ಗಂಡಸರು ಕೆಟ್ಟವರಲ್ಲ. ಆದರೆ ಒಬ್ಬರು ಕೆಟ್ಟವರು ಅಂಟಿಕೊಂಡರೂ ಬದುಕೇ ಇನ್ನಿಲ್ಲದಷ್ಟು ಹಾಳಾಗಿ ಬಿಡಬಹುದು. ಹಾಗಾಗಿ ಹರೆಯದ ಮಗಳ ಭವಿಷ್ಯದ ವಿಚಾರದಲ್ಲಿ ಪೋಷಕರ ಪಾತ್ರ ಬಹಳ ಪ್ರಮುಖವಾದದ್ದು.

ಹೆಣ್ಣುಮಗು ಎಂದರೆ ಅಂಗೈನಲ್ಲಿರುವ ಮಲ್ಲಿಗೆಯಂತೆ. ಅತಿಯಾಗಿ ಭದ್ರ ಮಾಡಲು ಹೋದರೆ ಅವರು ಉಸಿರು ಕಟ್ಟಿ ಬಾಡುತ್ತಾರೆ. ಹಾಗೆಂದು ನಿರ್ಲಕ್ಷ್ಯದಿಂದ ಬಿಟ್ಟರೆ ಕೆಳಗೆ ಬಿದ್ದು ಮಣ್ಣಾಗಿ ಹೋಗುತ್ತಾರೆ. ಇವೆರೆಡರ ನಡುವಿನ ಕಾಳಜಿ ಹಾಗೂ ಮಾರ್ಗದರ್ಶನ ಯಾವಾಗಲೂ ಮುಖ್ಯ. ಅವಳನ್ನು ಉಸಿರುಗಟ್ಟಿಸಬೇಡಿ, ಸ್ವಾತಂತ್ರ್ಯ ನಿರ್ವಹಣೆಯ ಜೊತೆಗೆ ಎಚ್ಚರಿಕೆಯ ಪಾಠವನ್ನೂ ಕಲಿಸಿಕೊಡಿ.

ಬರಹ: ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

(This copy first appeared in Hindustan Times Kannada website. To read more like this please logon to kannada.hindustantimes.com)

ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಸಂಬಂಧಿಸಿದ ಈ ಸ್ಟೋರಿಗಳನ್ನೂ ಓದಿ

International Women's Day: ಇಲ್ಲಿದೆ ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ: ಈ ವರ್ಷದ ಥೀಮ್​ ಹೀಗಿದೆ

 

Whats_app_banner