Women's Day Special: ಸ್ವಾವಲಂಬನೆಯು ಘನತೆಯ ಬದುಕಿಗೆ ದಾರಿಯಾಗುವುದು: ಮೇದಿನಿ ಕೆಸವಿನಮನೆ ಬರಹ-international womens day 2024 self reliance of women should lead to a dignified life says medini kesavinamane mgb ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Women's Day Special: ಸ್ವಾವಲಂಬನೆಯು ಘನತೆಯ ಬದುಕಿಗೆ ದಾರಿಯಾಗುವುದು: ಮೇದಿನಿ ಕೆಸವಿನಮನೆ ಬರಹ

Women's Day Special: ಸ್ವಾವಲಂಬನೆಯು ಘನತೆಯ ಬದುಕಿಗೆ ದಾರಿಯಾಗುವುದು: ಮೇದಿನಿ ಕೆಸವಿನಮನೆ ಬರಹ

International Women's Day 2024: ದೊಡ್ಡದೊಡ್ಡ ಕಚೇರಿಗಳಲ್ಲಿ ಲಕ್ಷಾಂತರ ಸಂಬಳ ಪಡೆದರೆ ಮಾತ್ರ ಉದ್ಯೋಗವಲ್ಲ. ಮನೆಕೆಲಸ ಮಾಡುವ, ಅಡುಗೆ ಮಾಡುವ, ಸಣ್ಣಪುಟ್ಟ ಹೋಟೆಲು, ಕ್ಯಾಂಟೀನ್ ನಡೆಸುವ, ಫುಟ್ಪಾತಿನಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡುವ ಮಹಿಳೆಯರದ್ದೂ ಸ್ವಾವಲಂಬಿ ಜೀವನವೇ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಲೇಖಕಿ ಮೇದಿನಿ ಕೆಸವಿನಮನೆ ಅವರ ಬರಹ ಇಲ್ಲಿದೆ.

ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ)
ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ)

ಮೊನ್ನೆ ಮೊನ್ನೆಯಷ್ಟೇ ಉಚಿತ ಬಸ್ಸನ್ನು ಹತ್ತಿದ ಮಹಿಳಾ ‌ಪ್ರಯಾಣಿಕರು "ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು" ಎಂದು ಖುಷಿಯಲ್ಲಿ ಹಾಡುತ್ತಿದ್ದರು, ವಿಷಯ ಏನೇ ಇರಲಿ. ಅವರ ಖುಷಿಯನ್ನು ನೋಡಿ ಸಂತೋಷವಾಯಿತು. ಮನೆಯ ನಾಲ್ಕು ಗೋಡೆಯನ್ನೇ ದಾಟದ ಮಹಿಳೆಯೊಬ್ಬಳು ಹೊರಪ್ರಪಂಚಕ್ಕೆ ಕಾಲಿಟ್ಟಿದ್ದಾಳಲ್ಲ ಎಂಬುದು ತೀರಾ ಸಾಮಾನ್ಯದ ಸಂಗತಿಯಲ್ಲ. ಹಾಗಂತ ಉಚಿತ ಬಸ್ಸಿನ ಪ್ರಯಾಣವೆಂಬುದು ಸ್ವಾಭಿಮಾನದ ದ್ಯೋತಕವೂ ಅಲ್ಲ. ಹಾಗೆ ನೋಡಿದರೆ ಉಚಿತವೆಂಬುದು ಯಾವತ್ತೂ ಆತ್ಮಗೌರವವನ್ನು ಬೆಳೆಸಲಾರದು. ಅಥವಾ ಉಚಿತವಿದೆ ಎಂಬ ಕಾರಣಕ್ಕಾಗಿಯೇ ಪ್ರಯಾಣಿಸಿದರೆ ಸರ್ಕಾರ ಕೊಟ್ಟ ಅವಕಾಶಕ್ಕೆ ಅವಮಾನ ಮಾಡಿದಂತಾಗುತ್ತದೆಯಷ್ಟೇ. ಸರಕಾರವು ಮಹಿಳೆಯ ಶಕ್ತಿಯನ್ನು ಹೆಚ್ಚಿಸಲು ಇಂತಹ ಅವಕಾಶವನ್ನು ಕೊಟ್ಟಿದೆಯೆಂದು ಭಾವಿಸಬೇಕೇ ಹೊರತೂ, ಈ ಅವಕಾಶ ಮೈಮರೆತು ತಿರುಗಾಡಲಲ್ಲ. ಅದು ಸ್ವಾಭಿಮಾನವನ್ನು ಇನ್ನಷ್ಟು ಜಾಗೃತಗೊಳಿಸಬೇಕು. ಈ ಸ್ವಾಭಿಮಾನವೆಂಬುದು ಸ್ವಾವಲಂಬನೆಗೆ ದಾರಿಯಾಗಬೇಕು. ಸ್ವಾವಲಂಬನೆಯು ಘನತೆಯ ಬದುಕಿಗೆ ದಾರಿಯಾಗಬೇಕು.

ಸ್ವಾವಲಂಬನೆಯೆಂಬುದು ಅತಿ ವ್ಯಾಪ್ತಿಯದ್ದೇ ಆದರೂ ಅದು ವೈಯಕ್ತಿಕ ವಿಚಾರ. ನಾವು ಹೇಗೆ ಬದುಕುತ್ತೇವೆ, ಆ ಬದುಕಿಗಾಗಿ ಎಷ್ಟನ್ನು ದುಡಿದುಕೊಳ್ಳುತ್ತೇವೆ, ಹೇಗೆ ದುಡಿಯುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹಾಗಂತ ಹಣ ಗಳಿಸುವ ಉದ್ಯೋಗ ಮಾಡದವರು ಸ್ವಾವಲಂಬಿಗಳಲ್ಲ ಎಂಬುದೂ ಅಲ್ಲ. ಮನೆಯನ್ನು ಸ್ವಸ್ಥವಾಗಿ ನಡೆಸುವ ಗೃಹಿಣಿ, ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ಕಾಳಜಿ ಮಾಡುವ ಅಮ್ಮಂದಿರು ಯಾವುದೇ ಸಂಬಳ ಪಡೆಯುವುದಿಲ್ಲ. ಈ ಕಾರಣಕ್ಕಾಗಿ ಅವರನ್ನು ಸ್ವಾಭಿಮಾನ ಇಲ್ಲದವರು ಎಂದು ಹೇಳಲಾಗದು. ಅವರ ದುಡಿಮೆ, ಅವರ ಶ್ರಮಕ್ಕೆ ಯಾವ ಹಣವೂ ಸರಿಸಾಟಿಯಾಗಲಾರದು. ಇನ್ನೂ ಹೇಳಬೇಕೆಂದರೆ, ಅವರಷ್ಟು ಸ್ವಾವಲಂಬಿಗಳೇ ಬೇರೆ ಯಾರಿಲ್ಲ. ಏಕೆಂದರೆ ಅವರು ದುಡಿದುದಕ್ಕೆ ಪ್ರತಿಫಲ ಪಡೆಯದೇ ಇನ್ನಷ್ಟು ಎತ್ತರಕ್ಕೆ ಏರಿರುತ್ತಾರೆ. ಆದರೆ ಅವರನ್ನು ಪರಾವಲಂಬಿಗಳು ಎನ್ನಲಾಗುತ್ತದೆಯಷ್ಟೇ. ಹಾಗೆ ಯೋಚಿಸುವಂತೆ ಮಾಡಿರುವುದು, ಆ ರೀತಿ ನಡೆದುಕೊಳ್ಳುವಂತೆ ಮಾಡಿರುವುದು ಈ ಪುರುಷ ಪ್ರಧಾನ ಸಮಾಜವಷ್ಟೇ. ಜನ್ಮಜನ್ಮಾಂತರದಿಂದ ಪದೇಪದೇ ಮನೆಯೊಳಗಿನ ಗೃಹಿಣಿಯನ್ನು ಹೀಯಾಳಿಸಿದ ಪರಿಣಾಮವಾಗಿ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡು, ತನ್ನ ಸ್ವಾಭಿಮಾನದ ಶಕ್ತಿಯನ್ನು ಮರೆತಿದ್ದಾಳಷ್ಟೇ.

ಆದರೆ ಇದೆಲ್ಲವನ್ನು ಮೀರಿ ಸ್ವಾಭಿಮಾನವು ತಮ್ಮ ಕುರಿತು ಧನಾತ್ಮಕ ಭಾವವನ್ನು ಹೊಂದಿರುವುದೇ ಆಗಿದೆ. ಅದು ದುಡಿಮೆಯಿಂದ, ದುಡಿಮೆಯು ಕೊಡುವ ಸಂಬಳದಿಂದ ಹೆಚ್ಚಾಗುತ್ತದೆ. ಮನೆಯೊಳಗೆ ದುಡಿದು, ಅದಕ್ಕೆ ಪ್ರತಿಫಲ ಪಡೆಯಲಾಗದ ಹೆಣ್ಣಿಗಿಂತ, ಹೊರಗಿನ ಪ್ರಪಂಚದಲ್ಲಿ ದುಡಿದು ಕಾಸು ಸಂಪಾದಿಸಿದಾಗ ಅವಳ ಕೊಳ್ಳುವ ಬಯಕೆಗೆ ಜೀವ ಬರುತ್ತದೆ, ಸೋತರಟ್ಟೆಗೆ ಶಕ್ತಿ ಬರುತ್ತದೆ. ಆ ಕಾರಣದಿಂದ ಅವಳಲ್ಲಿನ ಅಂತಃಶಕ್ತಿ ಜಾಗೃತವಾಗುತ್ತದೆ. ಇದು ಆತ್ಮಗೌರವವನ್ನು ಹೆಚ್ಚಿಸುತ್ತದೆ. ದುಡಿಮೆಗೆ ಪಡೆಯುವ ಹಣವೆಂಬುದು ಕೇವಲ ನಾಣ್ಯ ನೋಟುಗಳಾಗದೆ ಹೆಣ್ಣಿನ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲವಾಗುತ್ತದೆ. ಹಾಗಾಗಿ ದುಡಿಯುವುದು ಘನತೆಯನ್ನು ಹೆಚ್ಚಿಸುವ ಅಂಶವಾಗಿರುತ್ತದೆ. ಹಣವು ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಈ ಆತ್ಮವಿಶ್ವಾಸವೇ ಸಾಧನೆಗೆ ಕಾರಣವಾಗುತ್ತದೆ. ಹಾಗಾಗಿ ಹೆಣ್ಣು ಸ್ವಾವಲಂಬಿಯಾಗಿ ಘನತೆಯ ಬದುಕನ್ನು ಕಟ್ಟಿಕೊಳ್ಳಬಹುದು.

ಸ್ವಾವಲಂಬನೆ ಎಂದಾಕ್ಷಣ "ವೈಟ್ ಕಾಲರ್ ಜಾಬ್" ಮಾತ್ರವಲ್ಲ, ಗೌರವಯುತವಾಗಿ ಮಾಡುವ ಯಾವುದೇ ಕೆಲಸವೂ ಸ್ವಾವಲಂಬಿತನದ ಘನತೆಯನ್ನು ಕೊಡುತ್ತದೆ. ದೊಡ್ಡದೊಡ್ಡ ಕಚೇರಿಗಳಲ್ಲಿ, ಲಕ್ಷಾಂತರ ಸಂಬಳ ಪಡೆದರೆ ಮಾತ್ರ ಉದ್ಯೋಗವಲ್ಲ. ಮನೆಕೆಲಸ ಮಾಡುವ, ಅಡುಗೆ ಮಾಡುವ, ಸಣ್ಣಪುಟ್ಟ ಹೋಟೆಲು, ಕ್ಯಾಂಟೀನ್ ನಡೆಸುವ, ಫುಟ್ಪಾತಿನಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡುವ ವ್ಯಕ್ತಿಯದ್ದೂ ಸ್ವಾವಲಂಬಿ ಜೀವನವೇ. ಈಗಂತೂ ಹೋಟೆಲುಗಳಲ್ಲಿ ಆರ್ಡರ್ ತೆಗೆದುಕೊಂಡು ಪೂರೈಸುವ, ಸ್ವಿಗ್ಗಿ ಜೊಮ್ಯಾಟೋಗಳಲ್ಲಿ ಆಹಾರವನ್ನು ಮನೆಗೇ ತಂದುಕೊಡಲು ಕೂಡಾ ಹೆಣ್ಣುಮಕ್ಕಳಿದ್ದಾರೆ. ಅವರೆಂದೂ ತಮ್ಮ ಕೆಲಸಗಳ ಕುರಿತು ನಿರ್ಲಕ್ಷ್ಯ ತಾಳಿಲ್ಲ.‌ ತಪಸ್ಸಿನಂತೆ ಕರ್ತವ್ಯ ನಿರ್ವಹಿಸುತ್ತಾರೆ. ಇದು ಘನತೆಯಲ್ಲದೆ ಮತ್ತೇನು? ಅದರಿಂದ ಸಂಪಾದಿಸಿದ ಹಣ ಅವರ ಬದುಕನ್ನು ನೇರ್ಪುಗೊಳಿಸುತ್ತದೆ. ಮಾಡುವ ಕೆಲಸವನ್ನು ಗೌರವಿಸುವ ವ್ಯಕ್ತಿಯು ತಾನಾಗಿಯೇ ಘನತೆಯನ್ನು ಪಡೆಯುತ್ತಾನೆ.

ನಮ್ಮ ಮನೆಯ ಪಕ್ಕದಲ್ಲೊಬ್ಬ ಮಧ್ಯವಯಸ್ಕ ಮಹಿಳೆಯಿದ್ದರು. ಗಂಡ ತೀರಾ ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋಗಿದ್ದರು, ಮಗನೊಬ್ಬನಿದ್ದ. ಅಲ್ಪ ಸ್ವಲ್ಪ ದುಡಿಯುತ್ತಿದ್ದ. ಆದರೆ ಮೊದಲಿನಿಂದಲೂ ಅಂಕೆಯಿಲ್ಲದೇ ಬೆಳೆಸಿದ ಪರಿಣಾಮ, ಅತಿಮುದ್ದಿನಿಂದಾಗಿ ದುಡಿಮೆಗಿಂತ ಖರ್ಚು ಹೆಚ್ಚು, ಸಹವಾಸ ದೋಷದಿಂದಾಗಿ ಮನೆಗೆ ಒಂದು ರೂಪಾಯಿಯೂ ಬರುತ್ತಿರಲಿಲ್ಲ. ಮೊದಲಿಂದಲೂ ಅವರಿವರ ಮನೆಕೆಲಸ ಮಾಡಿಕೊಂಡು ಜೀವನ ಸಾಗಿಸಿದ ಈ ಮಹಿಳೆಗೆ ಮಗ ಹಣ ಕೊಡುವುದಿಲ್ಲವೆಂಬುದು ದೊಡ್ಡ ಸಂಗತಿಯಾಗಿರಲಿಲ್ಲ. ಹೇಗೂ ತಾನು ದುಡಿಯುತ್ತೇನೆ ಎಂಬ ಸಮಾಧಾನವಿತ್ತು. ಆದರೆ ಆಕೆ ಜವಾಬ್ದಾರಿಯನ್ನು ಮಾತ್ರಾ ಮರೆಯಲಿಲ್ಲ, ಒಂದಷ್ಟು ಸಾಲ ಮಾಡಿ ಮಗನಿಗೆ ಮದುವೆ ಮಾಡಿದಳು. ಆ ಸಮಯದಲ್ಲಿ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದಳು, ಒಂದು ದಿನ ಅತ್ತೆಯ ಬಳಿ ಅವಳು ಸಾಲ ಕೇಳಿದ್ದಳು. ಅತ್ತೆಯೂ ಒಂದಷ್ಟು ಹಣವನ್ನು ಖರ್ಚಿಗೆ, ಮತ್ತಷ್ಟು ಸಾಲ ಎಂದು ಕೊಟ್ಟಿದ್ದರು. ಮದುವೆಯ ಬಗ್ಗೆ ಹೀಗೆಯೇ ಮಾತನಾಡುವಾಗ ಕೇಳಿದೆ, "ಅಲ್ಲ ಮುತ್ತಮ್ಮ, ನೀವು ಮಗ ಹಣ ಕೊಡಲ್ಲ ಅಂತೀರಿ, ಮದುವೆಗೆ ಸಾಲ ಮಾಡಿದೀರಿ, ಸಂಘದಲ್ಲೂ ಸಾಲವಿದೆ. ಹೇಗೆ ತೀರಿಸ್ತೀರಿ?" ಎಂದೆ. ಐವತ್ತು ದಾಟಿದ ಹೆಂಗಸು ಒಂದು ಲಕ್ಷದಷ್ಟು ಸಾಲವನ್ನು ಹೇಗೆ ತೀರಿಸಬಹುದೆಂಬುದು ನನ್ನ ಚಿಂತೆಯಾಗಿತ್ತು. ಆದರವಳು ಯೋಚನೆ ಮಾಡದೆ ಉತ್ತರಿಸಿದಳು. "ಮಗ ಕೊಡಲ್ಲ, ನಾನು ಗಟ್ಟಿ ಇದೀನಲ್ಲ. ಮಗನಿಗೆ ಮದುವೆ ಆಗಲಿ, ನಂತರ ನಾನು ಶುಂಠಿ ಕೀಳೋಕೆ ಹೋಗ್ತೀನಿ. ದಿನಕ್ಕೆ ಮುನ್ನೂರು ರೂಪಾಯಿ ಕೊಡ್ತಾರೆ, ಸಾಲ ತೀರಿಸ್ತೀನಿ" ಆ ದಿನ ಅವಳ ಮುಖದಲ್ಲಿ ಕಂಡ ಆತ್ಮವಿಶ್ವಾಸವನ್ನು ನಾನೆಂದಿಗೂ ಮರೆಯಲಾರೆ. ದುಡಿಮೆಯ ಹೆಮ್ಮೆ ಎದ್ದು ಕಾಣುತ್ತಿತ್ತು. ಆಸ್ತಿ ಇಲ್ಲದ, ಚಿನ್ನ ಬೆಳ್ಳಿಯನ್ನು ಎಂದೂ ನೋಡದ, ಸ್ವಂತ ಮನೆಯೂ ಇಲ್ಲದ ಹೆಣ್ಣೊಬ್ಬಳು ತಾನು ದುಡಿದು ಗಳಿಸುವ ಹಣದಿಂದಾಗಿ ಅಂದು ಬಹಳ ಖುಷಿಯಾಗಿದ್ದಳು. ಸಂಪಾದಿಸುವ ಹಣ ಅವಳ ಘನತೆಯನ್ನು ಹೆಚ್ಚಿಸಿತ್ತು.

ದೂರದ ಸಂಬಂಧಿಯೊಬ್ಬರು ಗಂಡನ ಸಂಪಾದನೆ ತುಂಬು ಕುಟುಂಬಕ್ಕೆ ಸಾಕಾಗದು ಎಂದರಿತು ಹೊರಗೆ ಹೋಗಿ ದುಡಿಯುತ್ತೇನೆಂದಾಗ ಮನೆಯಲ್ಲಿ ಒಪ್ಪಲಿಲ್ಲ. ಆದರೆ ಇವರಿಗೆ ಬಡತನ ರೋಸಿ ಹೋಗುತ್ತಿದೆ. ಆ ಸಮಯದಲ್ಲಿ ಆಕೆಯೊಂದು ಉಪಾಯ ಮಾಡಿದರು. ತಿಂಡಿತಿನಿಸು ತಯಾರಿಸುವುದು ಹೇಗೂ ಗೊತ್ತಿತ್ತು. ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ತಯಾರಿಸಿ ಮಾರಲು ಆರಂಭಿಸಿದರು. ಪ್ರಾರಂಭದಲ್ಲಿ ಮನೆಯಲ್ಲಿಯೇ ಅಸಹಕಾರ ಚಳುವಳಿ. ಅಕ್ಕಪಕ್ಕದವರ ಕುಹಕ, ವ್ಯಂಗ್ಯ. ಹೆದರಿದ್ದರೆ ನಾನೀಗ ಸೋಲಿನ ಕತೆ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ಆಕೆ ಅಂದು ಆರಂಭಿಸಿದ ಚಿಪ್ಸ್, ಹಪ್ಪಳ, ಸಂಡಿಗೆ, ಕೋಡುಬಳೆಗಳು ಇಂದು ದೊಡ್ಡದಾಗಿದೆ. ಅವರದ್ದೇ ಅಂಗಡಿಯಿದೆ. ಗಂಡ ಕಡಿಮೆ ಸಂಬಳದ ಕೆಲಸ ಬಿಟ್ಟರು. ಅಂಗಡಿಗೆ ಕೈ ಹಾಕಿದರು. ಮೈದುನ, ಓರಗಿತ್ತಿ ಜೊತೆಯಾದರು. ತಿಂಡಿ ಮಾಡಲು ಹಚ್ಚಿದ ಬೆಂಕಿ ಇವರನ್ನು ಸುಡಲಿಲ್ಲ, ಬಾಳನ್ನು ಬೆಳಗುವ ದೀಪವಾಯಿತು. ಸಣ್ಣ ಮನೆ ದೊಡ್ಡ ಬಂಗಲೆಯಾಯಿತು. ಮಕ್ಕಳನ್ನು ಓದಿಸಿದರು, ಅವರು ಉದ್ಯೋಗ ಅರಸಿ ದೂರದೂರಿಗೆ ಹೋಗಲಿಲ್ಲ. ತಂದೆ ತಾಯಿಯ ಉದ್ಯೋಗವನ್ನೇ ಮುಂದುವರೆಸುತ್ತಿದ್ದಾರೆ. ಒಳ್ಳೆಯ ಹೆಸರು, ಸಂಪಾದನೆ ಎರಡೂ ಇದೆ. ಇದಕ್ಕೆ ಕಾರಣ ಆ ದಿನ ಗಟ್ಟಿಯಾಗಿ ನಿರ್ಧಾರ ತೆಗೆದುಕೊಂಡು ನೆಲೆನಿಲ್ಲಲು ಪ್ರಯತ್ನಿಸಿದ ಆ ಹೆಣ್ಣು ಮಗಳು. ತಾನು ದುಡಿಯುವುದಲ್ಲದೇ ನಾಲ್ಕಾರು ಜನರಿಗೆ ಉದ್ಯೋಗ ಕೊಡುವಷ್ಟಾಗಿದ್ದುದು ಘನತೆಯ ವಿಷಯವಲ್ಲವೆ?

ಇದಕ್ಕೆ ವ್ಯತಿರಿಕ್ತವಾಗಿ ಮನೆಯ ಕೆಲಸ ಮಾಡಿಕೊಂಡಿರುವ ಗೃಹಿಣಿಯರು ಒಂದೊಂದು ರೂಪಾಯಿ ಖರ್ಚು ಮಾಡಲು ಯೋಚಿಸುವುದನ್ನು, ಹಣವಿಲ್ಲದೇ ಪರದಾಡುವುದನ್ನು ನೋಡಿದ್ದೇನೆ. ಬೇಕಾದಷ್ಟು ಆಸ್ತಿ, ಒಡವೆ, ವಸ್ತ್ರ ಇರುತ್ತದೆ. ನೋಡಲು ಸುಖವಾಗಿಯೇ ಇದ್ದಂತೆ ಕಾಣುತ್ತಾರೆ. ಆದರೆ ಅವರ ಅಂತರಂಗದ ನೋವು ಯಾರಿಗೂ ಕಾಣುವುದಿಲ್ಲ. ಪ್ರತಿಯೊಂದು ಪೈಸೆಗೂ ತಂದೆಯನ್ನೋ, ಗಂಡ, ಮಕ್ಕಳನ್ನೋ ಅಥವಾ ಗಂಡನ ತಂದೆಯನ್ನೋ ಕೈಚಾಚಬೇಕಾದ ಸ್ಥಿತಿ. ಹಾಗಂತ ಅವರು ನಿರುದ್ಯೋಗಿಗಳಲ್ಲ. ಕೈತುಂಬಾ ಮೈತುಂಬಾ ಕೆಲಸವಿರುತ್ತದೆ; ಆದರೆ ಸಂಬಳವಿಲ್ಲ! ಈ ಶ್ರೀಮಂತಿಕೆಯು ಎಂದಿಗೂ ಆತ್ಮವಿಶ್ವಾಸವನ್ನು ಮೂಡಿಸುವುದಿಲ್ಲ, ಕಾರಣ ಮತ್ತದೇ. "ಹೌಸ್ ವೈಫು, ಏನು ಕೆಲಸ ಮಾಡ್ತಾಳೆ?"

ಈ ಪರಿಸ್ಥಿಯಲ್ಲಿಯೇ ನಾವು ಸ್ವಾವಲಂಬಿತನದ ವ್ಯಾಖ್ಯಾನವನ್ನು ಮಾಡಬೇಕಾಗುತ್ತದೆ. ಆಕೆ ಸ್ವಾವಲಂಬಿಯೇ, ನಿಜ. ಆದರೆ ಅವಳಿಗದು ಗೊತ್ತಿಲ್ಲ. ತನ್ನ ದುಡಿಮೆಯ ಬೆಲೆ ಅರ್ಥವಾಗಿಲ್ಲ. ‌ಒಂದು ರೂಪಾಯಿ ಪಡೆಯಲೂ ಕೂಡಾ ಹಿಡಿಯಷ್ಟಾಗಿ ನಿಲ್ಲುತ್ತಾಳೆ. ಇದಕ್ಕೆ ವಿರುದ್ಧವಾಗಿ ಈಗೀಗ ಮನೆಯ ಗಂಡಸರು ಹೆಣ್ಣುಮಕ್ಕಳ ಖರ್ಚಿಗೆ ಎಂಬಂತೆ ಒಂದಷ್ಟು ಹಣವನ್ನು ಕೊಡುತ್ತಾರೆ. ಆದರೆ ಅದು ಅವಳ ಸ್ವಂತ ದುಡಿಮೆಯ ಪ್ರತಿಫಲ ಎಂಬುದು ಎಲ್ಲೂ ವ್ಯಕ್ತವಾಗುವುದಿಲ್ಲವಷ್ಟೇ.

ಸ್ವಾವಲಂಬನೆ ಎನ್ನುವುದು ಸ್ವಾತಂತ್ರ್ಯದ ಜೊತೆಜೊತೆಗೇ ಬರುವ ಕಲ್ಪನೆ. ಒಬ್ಬ ವ್ಯಕ್ತಿಗೆ ಇರುವ ಸ್ವಾತಂತ್ರ್ಯವು ಆ ವ್ಯಕ್ತಿಯ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ದುಡಿಯುವ ಸ್ವಾತಂತ್ರ್ಯವು ಆರ್ಥಿಕ ಶಕ್ತಿಯನ್ನು, ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೆಣ್ಣು ಮನೆಗೆಲಸ, ಮನೆಗೆ ಸಂಬಂಧಿಸಿದ ಕೃಷಿ ಕೆಲಸವನ್ನು ಬಿಟ್ಟು ಹೊರಪ್ರಪಂಚದಲ್ಲಿ ದುಡಿಯಲು ಕಾಲಿಡುವ ಸ್ವಾತಂತ್ರ್ಯವನ್ನು ಮರಳಿ ಗಳಿಸಿಕೊಳ್ಳದೇ ಇದ್ದಿದ್ದರೆ, ಇಂದಿಗೂ ಆಕೆಗೆ ತಾನು ಸ್ವಾವಲಂಬಿ ಎಂಬುದು ಅರಿವಿಗೇ ಬರುತ್ತಿರಲಿಲ್ಲ. ‌ಈ ದುಡಿಮೆಗೆ ಮೂಲ ಮಂತ್ರ ಶಿಕ್ಷಣ ಎಂಬುದನ್ನು ಇಲ್ಲಿ ನೆನಪಿಸಲೇಬೇಕು. ಹೆಣ್ಣಿಗೆ ಶಿಕ್ಷಣವಿರಲಿಲ್ಲ ಎಂಬಂತಹ ಸ್ಥಿತಿಯನ್ನು ದಾಟಿಕೊಂಡು ಮುಂದೆ ಬಂದ ನಂತರದ ಈ ಕಾಲದಲ್ಲಿ ಮತ್ತೆ ಶಿಕ್ಷಣ, ಉದ್ಯೋಗ ರೂಢಿಯಾಗಲು ಶತಮಾನಗಳೇ ಸವೆಯಬೇಕಾಯಿತು. ಅಂತೂ ಇಪ್ಪತ್ತೊಂದನೇ ಶತಮಾನದ ಈ ಹೊಸ್ತಿಲಲ್ಲಿ ಹೆಣ್ಣು ಸ್ವಾವಲಂಬಿಯಾಗಿದ್ದಾಳೆ! ಅದು ಅವಳ ಬದುಕಿನ ಘನತೆಯನ್ನು ಹೆಚ್ಚಿಸಿದೆ.

ಇನ್ನೊಂದು ವಿಚಾರ, ದುಡಿದು ಗಳಿಸುವ ಮಹಿಳೆಯಲ್ಲಿ ಆತ್ಮವಿಶ್ವಾಸ ಇರುತ್ತದೆ, ಸಂಸಾರದ ನೊಗಕ್ಕೆ ತಾನೂ ಅರ್ಥಿಕ‌ವಾಗಿ ಹೆಗಲಾಗಿದ್ದೇನೆಂಬ ಸಾರ್ಥಕತೆಯೂ ಇರುತ್ತದೆ. ಆದರೆ ವೈಯಕ್ತಿಕವಾಗಿ ನಿರ್ಧರಿಸಿ ಖರ್ಚು ಮಾಡುವ ಅವಕಾಶ ಅವಳಿಗೆ ಎಷ್ಟಿದೆ ಎಂಬುದನ್ನು ನೋಡಬೇಕಾಗುತ್ತದೆ. ಏಕೆಂದರೆ ಹೆಂಡತಿಯ ಗಳಿಕೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಗಂಡನಿರುವಾಗ ಅವಳು ದುಡಿಯುವುದು ಯಾವ ಸಂಭ್ರಮಕ್ಕೆ? ಹಣವಿಲ್ಲದ ಖಾತೆಯ ಎಟಿಎಮ್ ಕಾರ್ಡ್ ಇಟ್ಟುಕೊಂಡು ಪದೇ ಪದೇ ನೋಡುವ ನನ್ನ ಗೆಳತಿಯೊಬ್ಬಳನ್ನು ನೋಡಿದಾಗ ಬೇಸರವಾಗುತ್ತದೆ. ಹೊರಗೆ ದುಡಿಯುತ್ತಾಳೆ ಎಂದ ಮಾತ್ರಕ್ಕೆ ಅವಳಿಗೆ ಮನೆಯೊಳಗಿನ ಕೆಲಸ ಕಾರ್ಯಕ್ಕೆ ವಿನಾಯಿತಿಯೇನೂ ಇಲ್ಲ. ಹೊರಗೆ ದುಡಿದ ಸಂಬಳ ಅವಳ ಕೈಗೆ ಸಿಗುವುದಿಲ್ಲ, ಎಂದಾಗ ಒಳಗೂ ಹೊರಗೂ ದುಡಿದು ಹೈರಾಣಾಗುತ್ತಾಳೆಯೇ ಹೊರತೂ ಇದರಿಂದಾಗಿ ಅವಳ ಸ್ವಾವಲಂಬನೆ ಖಂಡಿತಾ ಹೆಚ್ಚಾಗುವುದಿಲ್ಲ. ಬದಲಾಗಿ , ಅವಳ ದುಡಿಮೆಯ ಪ್ರತಿಫಲವನ್ನು ಅವಳು ಖರ್ಚು ಮಾಡುವ ಅವಕಾಶ ಅವಳಿಗಿರಬೇಕು. ಆಗ ಅವಳಲ್ಲಿ ಹೆಮ್ಮೆ ಮೂಡುತ್ತದೆ, ಆದರೆ ಎಲ್ಲರ ವಿಚಾರವೂ ಹೀಗಿರುವುದಿಲ್ಲ. ದುಡಿಯುವ ತೊತ್ತಾಗಿರುವ ಹೆಣ್ಣುಮಕ್ಕಳೂ ಸಾಕಷ್ಟಿರುತ್ತಾರೆ. ಇದಕ್ಕೆ ಕಾರಣ ಸಂಪೂರ್ಣ ಗಂಡಸರೇ ಎಂದಲ್ಲ. ತನಗಿಂತ ಗಂಡ ಚೆನ್ನಾಗಿ "ಮನಿ ಮ್ಯಾನೇಜ್ಮೆಂಟ್" ಮಾಡುತ್ತಾನೆಂಬ ಕಾರಣ ಕೊಟ್ಟು ಅವರನ್ನು "ಸಾಹೇಬರನ್ನಾಗಿ" ಮಾಡುವುದು ಇದೇ ಹೆಂಡತಿಯರು. ನಂತರ ಪೈಸೆಪೈಸೆಗಾಗಿ ಬಾಯಿ ಬಿಡುತ್ತಾರಷ್ಟೇ. ಹಾಗಾಗಿ ಸಂಸಾರದ ಖರ್ಚುವೆಚ್ಚವನ್ನು ಇಬ್ಬರೂ ಸೇರಿ ನಿರ್ಧರಿಸಿ, ಸ್ವಂತ ಖರ್ಚಿಗೂ ಇಟ್ಟುಕೊಳ್ಳುವುದು ಉತ್ತಮ. ಇದು ಆಕೆಯ ಅಭಿಮಾನವನ್ನು ಪೋಷಿಸುತ್ತದೆ. ಈ ಅಭಿಮಾನವೇ ಘನತೆಯ ಬದುಕನ್ನು ನಿರ್ಮಾಣ ಮಾಡುತ್ತದೆ.

"ಗಂಡಸು ಕೂತು ಕೆಟ್ಟ ಹೆಂಗಸು ತಿರುಗಿ ಕೆಟ್ಟಳು" ಎಂಬುದೊಂದು ಗಾದೆ ಯಾವ ಯುಗದ ಯಾವ ಕ್ಷಣದಲ್ಲಿ ಸೃಷ್ಟಿಯಾಯಿತೋ ಗೊತ್ತಿಲ್ಲ, ಆದರೆ ಹೊರಹೋಗಿ ದುಡಿದು ತಂದು ಮನೆ ನಡೆಸುವ ಅದೆಷ್ಟೋ ಮಹಿಳೆಯರು ಈ ಜಗದಲ್ಲಿ ಇದ್ದಾರೆ. ಅನಾರೋಗ್ಯದ ಗಂಡ, ವಯಸ್ಸಾದ ಅತ್ತೆ ಮಾವ, ಶಿಕ್ಷಣ ಪಡೆಯುತ್ತಿರುವ ಮಕ್ಕಳನ್ನು ಪೊರೆಯಬೇಕಾದ ಅನಿವಾರ್ಯತೆ ಹೆಣ್ಣಿಗಿದ್ದಾಗ ಅವಳು ಸುಮ್ಮನೆ ಕೂರಲಾರಳು. ದುಡಿದು ಗಳಿಸುತ್ತಾಳೆ. ಮನೆ ನಡೆಸುತ್ತಾಳೆ. ಆ ಮೂಲಕ ಘನತೆಯ ಬದುಕಿಗೆ ಕಾರಣಳಾಗುತ್ತಾಳೆ. ಒಂದು ಶ್ರೇಣಿಯ ಸಮಾಜವು ಆಸ್ತಿ ಅಂತಸ್ತನ್ನು ಘನತೆಯ ಮಾಪನವನ್ನಾಗಿಸಿಕೊಂಡಿರಬಹುದು.‌ ಆದರೆ ವ್ಯಕ್ತಿಯ ಘನತೆಯು ನಿಂತಿರುವುದು ವ್ಯಕ್ತಿತ್ವದ ಮೇಲೆಯೇ ಹೊರತೂ ಅಧಿಕಾರ ಹಾಗೂ ಸಂಪತ್ತಿನ ಮೇಲಲ್ಲ. ಬೇರೊಬ್ಬರ ಬಳಿ ಕೈಚಾಚದೆ, ಸ್ವಂತ ದುಡಿಮೆಯ ಮೇಲೆ ಬದುಕುತ್ತಿರುವ ವ್ಯಕ್ತಿಗೆ ಕೊಡುವ ಗೌರವ ಶ್ರೇಷ್ಠವಾಗಿರುತ್ತದೆ.

ಬರಹ: ಮೇದಿನಿ ಕೆಸವಿನಮನೆ, ಲೇಖಕರು- ಸಾಗರ

mysore-dasara_Entry_Point