International Women's Day: ಇಲ್ಲಿದೆ ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ: ಈ ವರ್ಷದ ಥೀಮ್​ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  International Women's Day: ಇಲ್ಲಿದೆ ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ: ಈ ವರ್ಷದ ಥೀಮ್​ ಹೀಗಿದೆ

International Women's Day: ಇಲ್ಲಿದೆ ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ: ಈ ವರ್ಷದ ಥೀಮ್​ ಹೀಗಿದೆ

International Women's Day 2024: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹೇಗೆ ಆರಂಭವಾಯಿತು? ಇದರ ಇತಿಹಾಸ ಮತ್ತು ಮಹತ್ವ ಏನು? ಈ ವರ್ಷದ ಥೀಮ್ ಏನು? ಎಲ್ಲದಕ್ಕೂ ಇಲ್ಲಿದೆ ಉತ್ತರ.

ಅಂತಾರಾಷ್ಟ್ರೀಯ ಮಹಿಳಾ ದಿನ (ಪ್ರಾತಿನಿಧಿಕ ಚಿತ್ರ)
ಅಂತಾರಾಷ್ಟ್ರೀಯ ಮಹಿಳಾ ದಿನ (ಪ್ರಾತಿನಿಧಿಕ ಚಿತ್ರ)

ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯದ ಸಾಧನೆ ಸ್ಮರಿಸಲು ಮತ್ತು ಸಮಾನತೆ-ಹಕ್ಕುಗಳನ್ನು ಪ್ರತಿಪಾದಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹೇಗೆ ಆರಂಭವಾಯಿತು? ಇದರ ಇತಿಹಾಸ ಮತ್ತು ಮಹತ್ವ ತಿಳಿಯೋಣ ಬನ್ನಿ..

ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) ಪ್ರಕಾರ, ಅಂತಾರಾಷ್ಟ್ರೀಯ ಮಹಿಳಾ ದಿನವು 20ನೇ ಶತಮಾನದಲ್ಲಿ ಉತ್ತರ ಅಮೆರಿಕಾ ಮತ್ತು ಯುರೋಪ್​​ನಲ್ಲಿ ಕಾರ್ಮಿಕ ಮಹಿಳೆಯರ ಚಳುವಳಿಗಳ ಚಟುವಟಿಕೆಗಳಿಂದ ಆರಂಭವಾಯಿತು. ಈ ಸಮಯದಲ್ಲಿ ಮಹಿಳೆಯರು ಕಠಿಣ ಕೆಲಸದ ಪರಿಸ್ಥಿತಿಗಳ ವಿರುದ್ಧ ಪ್ರತಿಭಟಿಸಿದ್ದರು. ನ್ಯೂಯಾರ್ಕ್​ನಲ್ಲಿ 1908 ರಲ್ಲಿ 12 ರಿಂದ 15 ಸಾವಿರ ಕಾರ್ಮಿಕ ಮಹಿಳೆಯರು ಬೃಹತ್​ ಪ್ರತಿಭಟನೆ ನಡೆಸಿದ್ದರು.

ಕೆಲಸದ ಅವಧಿಯನ್ನು ಕಡಿತಗೊಳಿಸುವುದರೊಂದಿಗೆ ಅವರ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಹಾಗೂ ಮತದಾನದ ಹಕ್ಕು ಕೂಡ ನೀಡಬೇಕು ಎಂದು ಮಹಿಳಾ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ಗಾರ್ಮೆಂಟ್ಸ್ ಕಾರ್ಮಿಕರ ಮುಷ್ಕರದ ಸ್ಮರಣಾರ್ಥವಾಗಿ ಯುನೈಟೆಡ್ ಸ್ಟೇಟ್ಸ್​​ನಲ್ಲಿ 1909ರ ಫೆಬ್ರವರಿ 28ರಂದು ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ನಂತರ 1911 ರಲ್ಲಿ ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಜರ್ಮನಿಯಲ್ಲಿ ಕೂಡ ಮಹಿಳಾ ದಿನವನ್ನು ಆಚರಿಸಲಾಯಿತು.

1945 ರಲ್ಲಿ ವಿಶ್ವಸಂಸ್ಥೆಯಲ್ಲಿ, ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯ ತತ್ವವನ್ನು ದೃಢೀಕರಿಸುವ ಮೊದಲ ಅಂತಾರಾಷ್ಟ್ರೀಯ ಒಪ್ಪಂದವನ್ನು ಅಂಗೀಕರಿಸಲಾಯಿತು. ನಂತರ 1975ರ ಮಾರ್ಚ್ 8ರಂದು ವಿಶ್ವಸಂಸ್ಥೆಯು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 8ರಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿಕೊಂಡು ಬರಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವ

ಮಹಿಳೆಯರಿಗೂ ಸಮಾನ ಸ್ಥಾನಮಾನ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ ಮಹಿಳಾ ದಿನದ ಉದ್ದೇಶವಾಗಿದೆ. ಮಹಿಳಾ ಸಬಲೀಕರಣದ ಮಹತ್ವ ಸಾರಲು, ಲಿಂಗ ಪಕ್ಷಪಾತ ಮುಕ್ತ ಸಮಾಜವನ್ನು ನಿರ್ಮಿಸಲು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆಯನ್ನು ತಡೆಯಲು ಜಾಗೃತಿ ಮೂಡಿಸಲು ಮತ್ತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಮಹಿಳೆಯರ ಹಕ್ಕುಗಳ ಬಗ್ಗೆ ಗಮನ ಸೆಳೆಯಲು ಮತ್ತು ಜನರಿಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಈ ವರ್ಷದ ಥೀಮ್​ ಏನು?

ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ವಿಶ್ವಸಂಸ್ಥೆ ಒಂದು ಥೀಮ್​ (ಘೋಷವಾಕ್ಯ) ನೀಡುತ್ತದೆ. ‘ಪ್ರಗತಿಯ ವೇಗವರ್ಧನೆಗೆ ಮಹಿಳೆಯ ಮೇಲೆ ಹೂಡಿಕೆ’ (Invest in women: Accelerate progress) ಎಂಬುದು ಈ ವರ್ಷದ ಥೀಮ್​ ಆಗಿದೆ. ಮಹಿಳೆಯರಿಗೆ ಪ್ರಯೋಜನವಾಗುವಂತಹ ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ಯೋಜನೆಗಳನ್ನು ಹೆಚ್ಚಿಸಿ, ಈ ಯೋಜನೆಗಳ ಮೇಲೆ ಹಣಕಾಸು ಹೂಡಿಕೆ ಮಾಡುವುದಾಗಿದೆ. ಹೀಗೆ ಮಾಡಿದಾಗ ಮಹಿಳೆಯರ ಬೆಳವಣಿಗೆ ಜೊತೆಗೆ ಆಯಾ ದೇಶದ ಪ್ರಗತಿ ಕೂಡ ಹೆಚ್ಚು ವೇಗ ಪಡೆದುಕೊಳ್ಳುತ್ತದೆ ಎಂಬುದು ಈ ಥೀಮ್​​ನ ಅರ್ಥವಾಗಿದೆ.

ಹಾಗೆಯೇ ‘Inspire Inclusion’ ಎಂಬುದು 2024ರ ಅಂತಾರಾಷ್ಟ್ರೀಯ ಮಹಿಳಾ ದಿನದ ಅಭಿಯಾನದ ಘೋಷವಾಕ್ಯವಾಗಿದೆ (campaign theme). ಪ್ರತಿಯೊಂದರಲ್ಲಿಯೂ ಮಹಿಳೆಯರ ಸೇರ್ಪಡೆಯನ್ನು, ಒಳಗೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ನಾವು ಇತರರನ್ನು ಪ್ರೇರೇಪಿಸಿದಾಗ ನಾವು ಉತ್ತಮ ಜಗತ್ತನ್ನು ರೂಪಿಸಬಹುದು ಎಂಬುದು ಇತರ ಅರ್ಥವಾಗಿದೆ.

Whats_app_banner