ಕನ್ನಡ ಸುದ್ದಿ  /  Lifestyle  /  International Womens Day 2024 Veda Bysani On Balancing Both Education And Motherhood Mgb

Women's Day Special: ಶಿಕ್ಷಣ ಮತ್ತು ತಾಯ್ತನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಲೇ ಸಾಧನೆಯೆಡೆ ಸಾಗಿದೆ - ಡಾ ವೇದಾ ಬೈಸಾನಿ ಬರಹ

ಮದುವೆಯ ಬಳಿಕ ಶಿಕ್ಷಣ ಮತ್ತು ತಾಯ್ತನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಸಾಧನೆಯೆಡೆ ಸಾಗಿರುವ ಬಗ್ಗೆ ಡಾ ವೇದಾ ಬೈಸಾನಿ ಹೆಮ್ಮೆಯಿಂದ ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅವರ ಬರಹವನ್ನು ‘ಎಚ್​​ಟಿ ಕನ್ನಡ’ದಲ್ಲಿ ಪ್ರಕಟಿಸಲಾಗಿದೆ.

ಡಾ ವೇದಾ ಬೈಸಾನಿ (ಎಡಚಿತ್ರ)
ಡಾ ವೇದಾ ಬೈಸಾನಿ (ಎಡಚಿತ್ರ)

ನಾನು ಯಾವತ್ತೂ ಊಹಿಸದ ರೀತಿಯಲ್ಲಿ ನನ್ನ ಅಧ್ಯಾಪನಾ ವೃತ್ತಿ ಆರಂಭವಾಯಿತು. ನಾನಾಗ ಎಂಟನೇ ತರಗತಿ ಇದ್ದೆ. ಆಗಲೇ ಶಿಕ್ಷಕ ಎಂಬ ಅನಿರೀಕ್ಷಿತ ಜವಾಬ್ದಾರಿಗೆ ಪಾತ್ರನಾದೆ. ಇದೆಲ್ಲವೂ ಶುರುವಾಗಿದ್ದು ನನ್ನ ಸ್ನೇಹಿತನೊಬ್ಬನ ತಂದೆ ನನ್ನನ್ನು ಸಂಪರ್ಕಿಸುವ ಮೂಲಕ. ಅವರು ಅವರ ಮಗಳ ಕುರಿತು ಚಿಂತಿತರಾಗಿದ್ದರು. ಆಕೆಗೆ ಇಂಗ್ಲಿಷ್ ಗ್ರಹಿಸುವುದು ಕಷ್ಟವಾಗುತ್ತಿತ್ತು. ಇಂಗ್ಲಿಷ್ ಕಲಿಯಲು ಆಕೆಗೆ ನೆರವು ಬೇಕಿತ್ತು. ಅದೊಂದು ತಾತ್ಕಾಲಿಕ ಜವಾಬ್ದಾರಿ ಎಂದರಿತ ನಾನು ಜಾಸ್ತಿ ಯೋಚಿಸದೆ ಆ ಹೊಣೆ ಒಪ್ಪಿಕೊಂಡೆ. ಆ ಒಂದು ನಿರ್ಧಾರವು ನನ್ನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಅಂದಾಜು ಆಗ ನನಗೆ ಇರಲಿಲ್ಲ.

ಶಾಲಾದಿನಗಳಲ್ಲಿ ನನ್ನ ಕಪ್ಪು ವರ್ಣದಿಂದಾಗಿ ನಾನು ತೀವ್ರ ಅವಮಾನಕ್ಕೆ ಗುರಿಯಾಗುತ್ತಿದ್ದೆ. ಆದರೂ ಅವೆಲ್ಲವನ್ನೂ ಮೆಟ್ಟಿ ದೃಢವಾಗಿ ನಿಂತುಕೊಂಡೆ. ಸರಕಾರಿ ಶಾಲೆಯಲ್ಲಿ ಸವಾಲಿನ ವಾತಾವರಣದ ನಡುವೆ ನಾನು ನಿರಂತರ ಕೀಳರಿಮೆಯನ್ನು ಎದುರಿಸಬೇಕಾಗಿ ಬರುತ್ತಿತ್ತು. ಅಲ್ಲದೇ ಅವಿಭಕ್ತ ಕುಟುಂಬದ ಸಂಕೀರ್ಣ ಪರಿಸ್ಥಿತಿಗಳ ಬಿಸಿಯನ್ನೂ ಅನುಭವಿಸುತ್ತಿದ್ದೆ. ಆದಾಗ್ಯೂ ಸ್ಥಿರವಾಗಿ ನಿಂತುಕೊಳ್ಳುವ ಮನಸ್ಸು ಮಾಡಿದೆ. ನಮ್ಮ ಸಂಸ್ಕೃತಿಯಲ್ಲಿ ಬೇಗ ಮದುವೆಯಾಗಬೇಕು ಎಂಬ ಸಂಪ್ರದಾಯವನ್ನು ಮುರಿದು ಮುಂದುವರಿದೆ. ಶಿಕ್ಷಣ ಕ್ಷೇತ್ರದಲ್ಲಿನ ನನ್ನ ಸಾಧನೆಗಳು ಸಂಪ್ರದಾಯ ಮೀರಿ ನನಗೆ ಹೊಸ ಹೊಸ ಬಾಗಿಲುಗಳನ್ನು ತೆರೆಯುತ್ತಾ ಹೋದವು. ಪಿಯುಸಿಯಲ್ಲಿ ಶೇ.90 ಅಂಕ ಗಳಿಸಿದೆ. ಅದರಿಂದ ಉನ್ನತ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಯಿತು. ನನ್ನ ಕುಟುಂಬದ ಬೆಂಬಲ ಸಿಕ್ಕಿತು. ನಂತರ ನನ್ನ ಪತಿ ಮತ್ತು ಮಗಳು ಬೆಂಬಲಕ್ಕೆ ನಿಂತರು. ನಾನು ದೃಢ ನಿರ್ಣಯ ಮತ್ತು ಹಠದಿಂದ ನನ್ನ ದಾರಿಯನ್ನು ಹಿಡಿದೆ. ಮದುವೆಯಾದ ಬಳಿಕವೂ ನನ್ನ ಪತಿಯ ಸಹಕಾರದಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದೆ.

ನನ್ನ ಪತಿ ನನ್ನ ಅತಿದೊಡ್ಡ ಶಕ್ತಿಯ ಮೂಲ

ಶಿಕ್ಷಣ ಮತ್ತು ತಾಯ್ತನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಲೇ ನನ್ನ ಮಹತ್ವಾಕಾಂಕ್ಷೆಗಳನ್ನು ಸಾಧಿಸುವ ನಿಟ್ಟಿನಲ್ಲಿ ದೃಢವಾಗಿ ಸಾಗಿದೆ. ನನ್ನ ವೃತ್ತಿ ಬದುಕಿನ ಪ್ರಯಾಣವು ಆರಂಭದಲ್ಲಿ ನನ್ನ ಕುಟುಂಬದ ನೆರವಿನಿಂದ ವಿಶೇಷವಾಗಿ ನನ್ನ ಪತಿ ಮತ್ತು ಮಗಳ ಸಹಾಯದಿಂದ ಸಾಧ್ಯವಾಯಿತು. ನನ್ನ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರೈಸಲು ನನ್ನ ಪತಿ ಕೊಟ್ಟ ಸಹಕಾರ ಅಷ್ಟಿಷ್ಟಲ್ಲ. ಅವರು ಪ್ರತೀ ತಿರುವಲ್ಲೂ ನೆರವಾದರು. ನನ್ನ ಗುರಿ ಸಾಧನೆಗೆ ಬೇಕಾದ ಎಲ್ಲಾ ಅವಕಾಶಗಳನ್ನು ಒದಗಿಸಿದರು. ಶಿಕ್ಷಣ ಕ್ಷೇತ್ರದ ಹೊರತಾಗಿ ವೈಯಕ್ತಿಕವಾಗಿ, ವೃತ್ತಿಪರವಾಗಿ ಬೆಳೆಯುವಂತೆ ನೋಡಿಕೊಂಡರು. ನನ್ನ ಸಾಮರ್ಥ್ಯವನ್ನು ಅಲ್ಲಗಳೆಯುವ ಬದಲಾಗಿ ನನ್ನ ಜೊತೆ ನಿಂತರು. ನಾನು ನನ್ನ ಗುರಿ ಸಾಧಿಸುವಂತೆ ಹೃದಯಪೂರ್ವಕವಾಗಿ ಶಕ್ತಿ ತುಂಬಿದರು.

ನನ್ನ ಮೇಲಿನ ಅವರ ನಂಬಿಕೆಯೇ ನನಗೆ ಶಕ್ತಿಯಾಗಿ ಬದಲಾದ ಕ್ಷಣಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ. ವಿಶೇಷವಾಗಿ ಅವರ ಕುಟುಂಬದ ಕಾರ್ಯಕ್ರಮದಲ್ಲಿ ನನ್ನ ಅಡುಗೆ ಪರೀಕ್ಷೆ ನಡೆದಿತ್ತು. ಆ ಸಂದರ್ಭದಲ್ಲಿ ಅವರು ಧೈರ್ಯ ತುಂಬಿ ನನ್ನ ಧೈರ್ಯ ಹುದುಗಿ ಹೋಗುವುದನ್ನು ತಡೆದಿದ್ದರು. ಅವರ ಪ್ರೋತ್ಸಾಹದಿಂದಾಗಿ ನಾನು ಆತ್ಮವಿಶ್ವಾಸದಿಂದ ಇರುವುದು ಸಾಧ್ಯವಾಯಿತು. ಇವತ್ತು ನಾನು ಅವರ ಅಗಾಧ ನೆರವಿಗಾಗಿ ಋಣಿಯಾಗಿದ್ದೇನೆ. ಅವರ ಸಹಾಯದಿಂದಲೇ ನಾನು ನನ್ನ ಗುರಿ ಸಾಧನೆಯ ಪ್ರಯಾಣವನ್ನು ಶ್ರದ್ಧೆಯಿಂದ ಕೈಗೊಳ್ಳಲು ಸಾಧ್ಯವಾಗಿದೆ.

ಎಂಟನೇ ತರಗತಿಯಿಂದ ಹಿಡಿದು ಇಲ್ಲಿಯವರೆಗೆ ನನ್ನ ಬದುಕನ್ನು ನನ್ನ ಪ್ಯಾಷನ್ ಆವರಿಸಿಕೊಂಡಿದೆ. ಮಕ್ಕಳ ಮೇಲಿನ ಪ್ರೀತಿ ಮತ್ತು ಬೋಧನೆಯ ಮೇಲಿನ ಆಸಕ್ತಿಯೇ ನನ್ನನ್ನು ಇಲ್ಲಿವರೆಗೂ ಮುನ್ನಡೆಸಿದೆ. ಸವಾಲುಗಳು, ಗೆಲುವುಗಳಿಂದ ಕೂಡಿದ ಈ ಪ್ರಯಾಣವು ವಿಶಿಷ್ಟ ಅನುಭವದಿಂದ ಕೂಡಿತ್ತು. ಈ ಹಲವು ವರ್ಷಗಳಲ್ಲಿ ನನ್ನ ಕುಟುಂಬವು ನನ್ನನ್ನು ನೋಡುತ್ತಿದ್ದ ರೀತಿಯಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿದೆ. ಆರಂಭದಲ್ಲಿ, ಅವರು ನನ್ನನ್ನು ಸಂದೇಹದಿಂದ ನೋಡುತ್ತಿದ್ದರು. ನನ್ನನ್ನು ಆಗಾಗ ಜಗ್ಗುತ್ತಿದ್ದರು ಮತ್ತು ನನ್ನ ಆಯ್ಕೆಗಳನ್ನು ಪ್ರಶ್ನಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಈಗ ನಾನು ನನ್ನ ಕೆಲಸಗಳಿಂದಾಗಿ, ಶ್ರದ್ಧೆಯಿಂದಾಗಿ ಅವರ ಗೌರವಕ್ಕೆ ಪಾತ್ರಳಾಗಿದ್ದೇನೆ. ನಂಬಿಕೆ ಗಳಿಸಿಕೊಂಡಿದ್ದೇನೆ.

ನನ್ನನ್ನು ಕೊಂಚ ದೂರವಿಡುತ್ತಿದ್ದ ಕಾಲ ಘಟ್ಟವು ಕಾಲಕ್ರಮೇಣ ಬದಲಾಗಿ ಹೋಗಿದೆ. ಈಗ ಕುಟುಂಬದವರು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ನನ್ನನ್ನು ಸಂಪರ್ಕಿಸುತ್ತಾರೆ. ಈ ಹೊಸ ಜವಾಬ್ದಾರಿಯು ನನ್ನ ಮತ್ತು ನನ್ನ ಕುಟುಂಬದ ಮಧ್ಯೆ ಬಲವಾದ ಬಾಂಧವ್ಯವನ್ನು ಉಂಟುಮಾಡಿದೆ. ಅವರೆಲ್ಲರೂ ನನ್ನ ಮೇಲೆ ನಂಬಿಕೆ ಮತ್ತು ಭದ್ರತೆಯ ಭಾವನೆಯನ್ನು ಹೊಂದಿದ್ದಾರೆ.

ನನ್ನ ಗರ್ಭಾವಸ್ಥೆಯಲ್ಲಿ ಹಲವು ತೊಡಕುಗಳು ಉಂಟಾಗಿತ್ತು. ನನ್ನ ತಾಯ್ತನದ ಪ್ರಯಾಣವು ಕೂಡ ಸುಗಮವಾಗಿರಲಿಲ್ಲ. ಎಷ್ಟೇ ಸವಾಲುಗಳು ಮತ್ತು ಪ್ರತಿಕೂಲತೆ ಎದುರಾದರೂ ನಾನು ನನ್ನ ಗುರಿಯ ಕಡೆಗೆ ಸಾಗುವುದನ್ನು ಮುಂದುವರಿಸಿದೆ. ಪ್ರತಿಷ್ಠಿತ ಫಾರ್ಮಾ ಕಂಪನಿಯ ಕೆಲಸ ಅವಧಿಯಲ್ಲಿ ಕೂಡ ಅನೇಕ ವೈದ್ಯಕೀಯ ಕಾರ್ಯವಿಧಾನಗಳು ಮತ್ತು ವೈಯಕ್ತಿಕ ಅಡೆತಡೆಗಳು ನನ್ನನ್ನು ಕಟ್ಟಿಹಾಕಲು ಯತ್ನಿಸಿದವು. ಆದರೆ ನಾನು ನನ್ನ ಕೆರಿಯರ್ ಕಡೆಗೆ ಗಮನ ಹರಿಸುವುದನ್ನು ಮುಂದುವರಿಸಿದ್ದೆ. ನನ್ನ ತಾಯ್ತನದ ಹಾದಿ ಕೂಡ ಅನೇಕ ತೊಂದರೆಗಳನ್ನು ಕೊಟ್ಟಿತು. ಪ್ರತೀ ತಿಂಗಳು ಹೊಸ ಹೊಸ ನೋವು ಎದುರಾಗುತ್ತಿತ್ತು. ಬದುಕು ನನ್ನನ್ನು ದುರ್ಬಲಗೊಳಿಸಲು ಯತ್ನಿಸುತ್ತಿತ್ತು. ಆದರೂ ಅವೆಲ್ಲವನ್ನೂ ಹಾದು ಬಂದೆ, ಕೆಲಸದ ಬೇಡಿಕೆ ಮತ್ತು ಕುಟುಂಬದ ಕೋರಿಕೆಯನ್ನು ಯಶಸ್ವಿಯಾಗಿ ಛಲದಿಂದ ನಿಭಾಯಿಸಿದೆ.

ನನ್ನ ಮಗಳ ಜನನವು ಹೊಸ ಸವಾಲುಗಳಿಂದ ತುಂಬಿದ ಹೊಸತೊಂದು ಅಧ್ಯಾಯವನ್ನು ಆರಂಭಿಸಿತು. ಒಂದು ವರ್ಷಗಳ ಕಾಲ ತಾಯ್ತನದ ಜವಾಬ್ದಾರಿಯು ಸೆಳೆಯಿತು, ಅವಳ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾ ನನ್ನ ವೃತ್ತಿ ಬದುಕನ್ನು ಪಕ್ಕಕ್ಕೆ ಇಟ್ಟೆ. ಅನಿಶ್ಚಿತತೆ ಎದುರಾಗಿದ್ದರೂ ನಾನು ನನ್ನ ಪ್ಯಾಷನ್ ಬಿಡಲಿಲ್ಲ. ಮಗಳು ಚಿಕ್ಕಳಾಗಿರುವಾಗಲೇ ನಾನು ಪಾರ್ಟ್ ಟೈಮ್ ಶಿಕ್ಷಕಿಯಾಗಿ ವೃತ್ತಿಯನ್ನು ಮಾಡತೊಡಗಿದೆ. ಈ ಪ್ರಯಾಣವು ಅನೇಕ ಹಿನ್ನಡೆ ಮತ್ತು ತ್ಯಾಗಗಳಿಂದ ಸುಸ್ತು ಮಾಡಿತ್ತು. ಹಾಗಿದ್ದರೂ ಪ್ರತೀ ವರ್ಷ ಕಳೆಯುತ್ತಿದ್ದಂತೆ ನಾನು ಹೊಸ ಎತ್ತರಕ್ಕೆ ತಲುಪುವಂತೆ ನೋಡಿಕೊಳ್ಳುತ್ತಿದ್ದೆ. ಈ ಯಶಸ್ಸು ಗಳಿಸಲು ನನಗೆ ನನ್ನ ಮಗಳು ಸ್ಫೂರ್ತಿಯಾದಳು.

ಮದುವೆಯ ಬಳಿಕ ಮತ್ತು ಮಗಳನ್ನು ಬೆಳೆಸುತ್ತಾ ನಾನು ಬದುಕಿನ ಹೊಸ ದಿಕ್ಕುಗಳಿಗೆ ಕೈ ಚಾಚಿದೆ. ಯೋಗ ಕಲಿತೆ. ಸಿಯಾಟೆಲ್ ವಿಶ್ವವಿದ್ಯಾನಿಲಯದಿಂದ ಡಿಪ್ಲೊಮಾ ಪದವಿ ಪಡೆದೆ. ಇವೆಲ್ಲವನ್ನೂ ನಾನು ಕೌಟುಂಬಿಕ ಸಮಸ್ಯೆಗಳಿರುವಾಗಲೇ ಸಾಧಿಸಿದೆ. ಮನೆಯ ಕೆಲಸ ಕಾರ್ಯಗಳ ಬಳಿಕ ತಡರಾತ್ರಿಯವರೆಗೆ ಅಧ್ಯಯನ, ಮಗಳನ್ನು ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ, ನನ್ನ ಮತ್ತು ಕುಟುಂಬದ ಆರೋಗ್ಯ ನೋಡಿಕೊಳ್ಳುವುದು ಎಲ್ಲವೂ ಈ ಪ್ರಯಾಣದಲ್ಲಿ ನಾನು ಎದುರಿಸಿಕೊಂಡು ಬಂದೆ.

ಬರಹ: ಡಾ ವೇದಾ ಬೈಸಾನಿ

ಉಪಾಧ್ಯಕ್ಷೆ- ಶೈಕ್ಷಣಿಕ ವಿಭಾಗ, ಆರ್ಕಿಡ್ಸ್ ಇಂಟರ್ನಾಷನಲ್ ಸ್ಕೂಲ್, ಬೆಂಗಳೂರು