ಕನ್ನಡ ಸುದ್ದಿ  /  Lifestyle  /  International Womens Day 2024 Why Woman Breaks Their Career Social Pressure On Working Women Mgb

Womens Day: ನಿರೀಕ್ಷೆಗಳ ಭಾರಕ್ಕೆ ಬಲಿಯಾಗುತ್ತಿದೆ ಕೆರಿಯರ್; ಮಹಿಳೆಗೆ ಬೇಕು ಆಯ್ಕೆಯ ಸ್ವಾತಂತ್ರ್ಯ -ಭವ್ಯಾ ವಿಶ್ವನಾಥ್ ಬರಹ

ಭವ್ಯಾ ವಿಶ್ವನಾಥ್: ವೃತ್ತಿಯ ಎಂಟ್ರಿ ಲೆವೆಲ್‌ನಲ್ಲಿ ಮಹಿಳೆಯರ ಸಂಖ್ಯೆ ತಕ್ಕಮಟ್ಟಿಗೆ ಇರುತ್ತದೆ. ಆದರೆ ಒಂದು ಹಂತಕ್ಕೆ ಬರುವ ಹೊತ್ತಿಗೆ, ಅಂದರೆ ಮಿಡ್‌ ಕೆರಿಯರ್ ಲೆವೆಲ್‌ನಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತದೆ. ಏಕೆ ಹೀಗೆ? ಮಹಿಳೆಯರು ಕೆಲಸ ಬಿಡಲು ಕಾರಣವಾಗುವ ಸಾಮಾಜಿಕ ಒತ್ತಡಗಳ ಬಗ್ಗೆ ಈ ಲೇಖನದಲ್ಲಿದೆ ವಿವರ.

ನಿರೀಕ್ಷೆಗಳ ಭಾರಕ್ಕೆ ಬಲಿಯಾಗುತ್ತಿದೆ ಕೆರಿಯರ್; ಮಹಿಳೆಗೆ ಬೇಕು ಆಯ್ಕೆಯ ಸ್ವಾತಂತ್ರ್ಯ
ನಿರೀಕ್ಷೆಗಳ ಭಾರಕ್ಕೆ ಬಲಿಯಾಗುತ್ತಿದೆ ಕೆರಿಯರ್; ಮಹಿಳೆಗೆ ಬೇಕು ಆಯ್ಕೆಯ ಸ್ವಾತಂತ್ರ್ಯ

ಪ್ರತಿ ವರ್ಷ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಕುರಿತು ಬಹಳ ಚರ್ಚೆಯಾಗುತ್ತದೆ. ಸಹಜವಾಗಿಯೇ ಪುರುಷರು ಮತ್ತು ಮಹಿಳೆಯರು ತಮ್ಮ ವೈಯಕ್ತಿಕ ವೈಯಕ್ತಿಕ ಅಭಿಪ್ರಾಯ, ಆಸೆಗಳನ್ನು ವ್ಯಕ್ತಪಡಿಸುತ್ತಾರೆ. ಸರ್ಕಾರದ ಮಹಿಳಾ ಪರ ಯೋಜನೆಗಳು, ಮಹಿಳಾ ಮೀಸಲಾತಿ, ಮಹಿಳಾ ಸಬಲೀಕರಣ ಹೀಗೆ ಹಲವು ವಿಚಾರಗಳ ಕುರಿತು ವಿಶ್ಲೇಷಣೆಯಾಗುತ್ತದೆ. ಮಹಿಳಾ ದಿನಾಚರಣೆಯ ಸಂದರ್ಭವನ್ನು ನೆಪವಾಗಿರಿಸಿಕೊಂಡು ಒಬ್ಬ ಮಹಿಳೆಯಾಗಿ, ತಾಯಿಯಾಗಿ ಮತ್ತು ಮಗಳಾಗಿ ನನ್ನ ಅನುಭವಕ್ಕೆ ಬಂದಿರುವ ಕೆಲ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇನೆ.

ನಮ್ಮ ಸಾಮಾಜಿಕ ಪರಿಸ್ಥಿತಿಗಳು ಬದಲಾಗುತ್ತಲೇ ಇವೆ. ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆಯ ಪಾತ್ರ (ವ್ಯಕ್ತಿಗತ ಜೀವನ ಮತ್ತು ಉದ್ಯೋಗ) ಕುರಿತಂತೆ ಇರುವ ಸಾಮಾಜಿಕ ದೃಷ್ಟಿಕೋನವೂ ಬದಲಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ನನ್ನ ಅಭಿಪ್ರಾಯ ರೂಪುಗೊಳ್ಳಲು ಕಾರಣವಾದ ಅಂಶಗಳು ಹೀಗಿವೆ.

ಉದ್ಯೋಗದ ವಿಚಾರದಲ್ಲಿ ಪಾಪಪ್ರಜ್ಞೆ ಏಕೆ?

ಒಂದು ಹೆಣ್ಣು ಭವಿಷ್ಯದ ಕನಸು ಹೊತ್ತು ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಗಳಿಸುತ್ತಾಳೆ. ಆದರೆ ವಿವಾಹವಾಗಿ, ಮಗುವಿನ ತಾಯಿಯಾದ ನಂತರ ಉದ್ಯೋಗ ಮುಂದುವರಿಸುವ ವಿಚಾರದಲ್ಲಿ ಬಹಳ ವಿರೋಧ, ಮಾನಸಿಕ ಒತ್ತಡ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಬ್ಬ ಮಹಿಳೆ ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ತನ್ನ ಆಯ್ಕೆಯನ್ನು ಉಳಿಸಿಕೊಳ್ಳುವುದಕ್ಕೆ ಹಲವು ಹಂತಗಳಲ್ಲಿ ಪ್ರತಿರೋಧಗಳನ್ನು ಎದುರಿಸಬೇಕಾಗುತ್ತದೆ.

ಮಗುವನ್ನು ಹೆತ್ತ ನಂತರ ಕುಟುಂಬದ ಬೆಂಬಲ ಇರುವ ಮಹಿಳೆಯರೂ ಸಹ ಉದ್ಯೋಗಕ್ಕೆ ಹೋಗುವ ವಿಚಾರದಲ್ಲಿ ಪಾಪಪ್ರಜ್ಞೆ (guilt) ಅನುಭವಿಸುವ ಸಾಧ್ಯತೆ ಇರುತ್ತದೆ. ಸಮಾಜದ ನಿರೀಕ್ಷೆ ಮತ್ತು ನಂಬಿಕೆಗಳಿಗೆ ಅನುಸಾರವಾಗಿ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ತಮ್ಮದು ಎಂದುಕೊಳ್ಳುತ್ತಾರೆ. ಒಬ್ಬ ತಾಯಿಯಾಗಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದು ತಪ್ಪು ಎಂದು ಅವರು ಭಾವಿಸುತ್ತಾರೆ. ಮಹಿಳೆಯಾದವಳು ತಾಯಿಯಾದ ತಕ್ಷಣ ಅವಳ ಆದ್ಯತೆ, ಕನಸು, ಕರ್ತವ್ಯಗಳೆಲ್ಲವೂ ಮಗುವಿನ ಕಡೆಯೇ ಇರಬೇಕು. ಹೀಗೆ ವರ್ತಿಸದಿದ್ದರೆ ಆಕೆಯು ಆದರ್ಶ ತಾಯಿ ಅಥವಾ ಆದರ್ಶ ಮಹಿಳೆಯಾಗುವುದಿಲ್ಲವೆಂಬ ನಂಬಿಕೆಯನ್ನು ನಮ್ಮ ಸಮಾಜವು ಹುಟ್ಟುಹಾಕಿದೆ.

ಸಮಾಜದಲ್ಲಿ ರೂಢಿಗತವಾಗಿ ಬೇರೂರಿರುವ ಈ ನಂಬಿಕೆಯನ್ನು ಮೀರಿ ಆಕೆಯು ಉದ್ಯೋಗ ತನ್ನ ಆದ್ಯತೆ ಎಂದುಕೊಂಡರೆ ಅಂಥವರಿಗೆ ಸ್ವಾರ್ಥಿಯ ಹಣೆಪಟ್ಟಿಯನ್ನು ಕೆಲವರು ಕೊಡುತ್ತಾರೆ. ಇಂಥ ಹಣೆಪಟ್ಟಿಗಳು, ತನ್ನನ್ನು ಎಲ್ಲಿ ಸ್ವಾರ್ಥಿ ಎಂದು ಸಮಾಜ ತೀರ್ಮಾನಿಸಿ ಬಿಡುತ್ತದೆಯೋ (judge) ಎನ್ನುವ ಭಯ, ಸಂಕೋಚ ಮಹಿಳೆಯರನ್ನು ಕಾಡುತ್ತಿರುತ್ತದೆ.

ನಿರ್ಧರಿಸುವ ಸ್ವಾತಂತ್ರ್ಯ ಮಹಿಳೆಯರಿಗೆ ಸಿಗಬೇಕು

ಮಹಿಳೆಯರ ಕರ್ತವ್ಯ ಹಾಗೂ ಅವರು ನಿರ್ವಹಿಸುವ ಪಾತ್ರಗಳ ವಿಚಾರದಲ್ಲಿ ಸಮಾಜದ ಆದ್ಯತೆ ಬದಲಾಗಬೇಕು. ತನ್ನ ಜೀವನದಲ್ಲಿ ಯಾವುದು ಮುಖ್ಯ? ಯಾವುದಕ್ಕೆ ಆದ್ಯತೆ ಕೊಡಬೇಕು? ತನ್ನ ಕರ್ತವ್ಯಗಳೇನು ಎನ್ನುವುದನ್ನು ವಿಶ್ಲೇಷಿಸಿ ಧೃಢ ನಿಧಾ೯ರ ತೆಗೆದುಕೊಳ್ಳುವ ಸ್ವಾತಂತ್ರ್ಯ ಮಹಿಳೆಯರಿಗೆ ಸಿಗಬೇಕು.

ತಾಯಿಯಾದ ನಂತರವೂ ಉದ್ಯೋಗ ಮುಂದುವರಿಸಿದರೆ ಮಕ್ಕಳಿಗೆ ಸಾಕಷ್ಟು ಸಮಯ ನೀಡುವುದಕ್ಕೆ ಸಾಧ್ಯವಾಗುವುದಿಲ್ಲವೆಂದು ಭಾವಿಸಿ, ಯಾವುದೇ ಒತ್ತಡಯಿಲ್ಲದೆ, ತಮ್ಮ ಸ್ವ ಇಚ್ಚೆಯಿಂದ ಕೆಲ ಮಹಿಳೆಯರು ವೃತ್ತಿಯಿಂದ ದೂರ ಉಳಿಯಲು ನಿರ್ಧರಿಸುತ್ತಾರೆ. ಇಂಥ ನಿರ್ಧಾರವನ್ನೂ ಸಹ ಕುಟುಂಬದ ಸದಸ್ಯರು, ಸಮಾಜ ಗೌರವಿಸಬೇಕು. ಅವಳ ಸ್ವಾತಂತ್ರ್ಯವನ್ನು ಸಹಜವಾಗಿ ಸ್ವೀಕರಿಸಬೇಕು. ಉದ್ಯೋಗದಲ್ಲಿ ಉಳಿಯುವ ಅಥವಾ ಬ್ರೇಕ್ ತೆಗೆದುಕೊಳ್ಳುವ ಸ್ವಾತಂತ್ರ್ಯ ಮಹಿಳೆಗೆ ಬೇಕು. ಅದು ಮಹಿಳೆಯ ಹಕ್ಕಾದರೆ ಇದು ನಿಜವಾದ ಸಬಲೀಕರಣ ಆಗುವುದಿಲ್ಲಲ್ಲವೇ?

ಬ್ರೇಕ್ ತೆಗೆದುಕೊಂಡವರು ಉದ್ಯೋಗಕ್ಕೆ ಮರಳುತ್ತಿಲ್ಲ

ಅಶೋಕ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ ಉದ್ಯೋಗಸ್ಥ ಮಹಿಳೆಯರು ಮಗುವಿಗೆ ಜನ್ಮ ನೀಡಿದ ನಂತರ ಕೆಲಸ ತೊರೆಯುವ ಪ್ರಮಾಣ ಶೇ 70. ಈ ಪೈಕಿ ಉದ್ಯೋಗಕ್ಕೆ ಮರಳುವವರ ಸಂಖ್ಯೆ ಕೇವಲ ಶೇ 27. ಅಂದರೆ ವೃತ್ತಿಯಲ್ಲಿ ಬ್ರೇಕ್ ತೆಗೆದುಕೊಂಡ ಶೇ 43 ರಷ್ಟು ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುವುದೇ ಇಲ್ಲ.

ಗರ್ಭಧಾರಣೆ, ಹೆರಿಗೆ, ಮಕ್ಕಳ ಆರೈಕೆ, ಹಿರಿಯರ ಆರೈಕೆ, ಕೌಟುಂಬಿಕ ಬೆಂಬಲದ ಕೊರತೆ ಮತ್ತು ಮಹಿಳಾ ಸ್ನೇಹಿ ವಾತಾವರಣ ಇರದ ಕೆಲಸದ ಸ್ಥಳಗಳು ಆಕೆಯು ಉದ್ಯೋಗದಿಂದ ದೂರ ಉಳಿಯಲು ಮುಖ್ಯ ಕಾರಣಗಳಾಗಿವೆ. ನಮ್ಮ ದೇಶದಲ್ಲಿ ಅರ್ಧದಷ್ಟು (ಶೇ 50) ಮಹಿಳೆಯರು ತಮ್ಮ 30 ನೇ ವಯಸ್ಸಿನಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಉದ್ಯೋಗವನ್ನು ತೊರೆಯುತ್ತಾರೆ. ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಬರುವ ಮಹಿಳೆಯರಲ್ಲಿ ಶೇ 48 ರಷ್ಟು ಮಂದಿ ನಾಲ್ಕು ತಿಂಗಳಲ್ಲಿ ಕೆಲಸ ಬಿಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳುತ್ತದೆ. ಮಿಡ್ ಕೆರಿಯರ್ ಹಂತದಲ್ಲಿ ಆಗುವ ಈ ಬದಲಾವಣೆಗಳು ಮಹಿಳೆಯರಿಗೆ ನಾಯಕತ್ವದ ಸ್ಥಾನಗಳನ್ನು ತಲುಪಲು ಸಹ ಅಡ್ಡಿಯಾಗುತ್ತದೆ ಎಂದು ವರದಿ ತಿಳಿಸುತ್ತದೆ.

ಭವ್ಯಾ ವಿಶ್ವನಾಥ್
ಭವ್ಯಾ ವಿಶ್ವನಾಥ್

ಆತ್ಮವಿಶ್ವಾಸದ ಕೊರತೆ

ಮಕ್ಕಳಿಗಾಗಿ ಉದ್ಯೋಗ ತೊರೆದ ಅಥವಾ ಉದ್ಯೋಗಕ್ಕೇ ಹೋಗದ ತಾಯಂದಿರನ್ನು ನೋಡಿದಾಗ ಉದ್ಯೋಗದಲ್ಲಿರುವ ತಾಯಂದಿರಲ್ಲಿ ಒಂದು ರೀತಿಯ ಪಾಪಪ್ರಜ್ಞೆ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಸಂಗತಿ ಎಂದರೆ, ಉದ್ಯೋಗಕ್ಕೆ ಹೋಗದ ತಾಯಂದಿರಿಗೆ ಉದ್ಯೋಗಕ್ಕೆ ಹೋಗುವ ತಾಯಂದಿರನ್ನು ನೋಡಿದಾಗ ಆತ್ಮಗೌರವ, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ನಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಿಲ್ಲ ಎಂಬ ಅಳಲು ಮೂಡುತ್ತದೆ. ಉದ್ಯೋಗಕ್ಕೆ ಹೋಗುತ್ತಾ ಮಕ್ಕಳನ್ನು ನೋಡಿಕೊಳ್ಳುವುದು ಅಥವಾ ಮಕ್ಕಳಿಗಾಗಿ ಉದ್ಯೋಗ ಬಿಡುವುದು ಮಹಿಳೆಯ ಸ್ವಂತ ಆಯ್ಕೆ ಎಂದು ಸಮಾಜ ಒಪ್ಪಿ, ಆಕೆಯ ನಿರ್ಧಾರವನ್ನು ಗೌರವಿಸುವ ಪರಿಸ್ಥಿತಿ ಮೂಡುವವರೆಗೆ ಎರಡೂ ರೀತಿಯ ಮಹಿಳೆಯರಿಗೆ ನೆಮ್ಮದಿ ಇರುವುದಿಲ್ಲ.

ಎರಡೂ ಮನಃಸ್ಥಿತಿಯ ಮಹಿಳೆಯರಿಗೆ ಸಮಾಜದ ವತಿಯಿಂದ ಬೆಂಬಲ, ಸಾಂತ್ವನ ದೊರಕಬೇಕು. ಯಾವುದೇ ಮೇಲು ಕೀಳು ಇರದ ರೀತಿಯಲ್ಲಿ ಅವರನ್ನು ಕಾಣಬೇಕು. ಸಮಾಜದ ದೃಷ್ಟಿಕೋನ ಹೀಗೆ ಬದಲಾದರೆ ಮಾತ್ರ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಂತೆ ಆಗುತ್ತದೆ. ಸಮಾಜವು ಹುಟ್ಟುಹಾಕಿರುವ ನಂಬಿಕೆಗಳಿಂದಾಗಿ ಮಹಿಳೆಯರು ತಮ್ಮದೇ ಆದ ಮಾನಸಿಕ ಗೊಂದಲಕ್ಕೆ ಸಿಲುಕಿಕೊಂಡಿರುತ್ತಾರೆ. ಸರಿ ಮತ್ತು ತಪ್ಪುಗಳ್ಳನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ಸ್ವಂತಿಕೆ ಕಳೆದುಕೊಳ್ಳುತ್ತಾರೆ. ಉದ್ಯೋಗ ಮತ್ತು ಸಂಸಾರದ ಜವಾಬ್ಧಾರಿಗಳನ್ನು ಪರಿಪೂರ್ಣವಾಗಿ (perfection) ನಿಭಾಯಿಸಬೇಕೆನ್ನುವ ಒತ್ತಡಕ್ಕೆ ಬಲಿಯಾಗುತ್ತಾರೆ. ಇಂಥ ಗೊಂದಲ ಮತ್ತು ಒತ್ತಡದಿಂದ ಮಹಿಳೆಯರನ್ನು ಹೊರತರುವುದು ಸಹ ಮಹಿಳಾ ಸಬಲೀಕರಣವಲ್ಲವೇ?

ಬನ್ನಿ, ಒಂದು ಪ್ರತಿಜ್ಞೆ ಮಾಡೋಣ

ಮಹಿಳೆಯರು ಎಂದರೆ ಹೀಗೆಯೇ ಇರಬೇಕು, ಎಲ್ಲವನ್ನು ಸಹಿಸುವ, ನಿಭಾಯಿಸುವ ಕಲೆಯನ್ನು ಹೊಂದಿರಬೇಕು ಎನ್ನುವುದೂ ಸೇರಿದಂತೆ ಹಲವು ಬಗೆಯ ಸಾಮಾಜಿಕ ನಿರೀಕ್ಷೆಗಳಿಂದಲೂ ಮಹಿಳೆಯರನ್ನು ಮುಕ್ತಗೊಳಿಸಬೇಕು. 'ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹಿಳೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನ ನಾನು ಜಡ್ಜ್‌ ಮಾಡುವುದಿಲ್ಲ' ಎಂದು ನಿರ್ಣಯವನ್ನು ನಾವೆಲ್ಲರೂ ಈ ಮಹಿಳಾ ದಿನದಂದು ವೈಯಕ್ತಿಕವಾಗಿಯಾದರೂ ತೆಗೆದುಕೊಳ್ಳೋಣವೇ?

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಮಹಿಳಾ ದಿನಕ್ಕೆ ಸಂಬಂಧಿಸಿದ ಈ ಸ್ಟೋರಿಗಳನ್ನೂ ಓದಿ

Womens day2024: ಮಗಳೆಂಬ ಮಹಾಲಕ್ಷ್ಮಿ,ಮನೆಗೆ ಬಂದ ಮೂರು ವರ್ಷದ ಹರುಷ

ವಿಭಾಗ