ಕನ್ನಡ ಸುದ್ದಿ  /  Lifestyle  /  International Womens Day 2024 Women Senior Citizens Business Ideas In This Technology World How To Celebrate Womens Day

Womens Day 2024: ಮಹಿಳೆಯರೇ, ತಂತ್ರಜ್ಞಾನ ಯುಗದಲ್ಲಿ ಇಳಿವಯಸ್ಸಿನಲ್ಲೂ ಸಾಧನೆ ಮಾಡಿ; ಬದುಕನ್ನ ಈ ರೀತಿ ಸಂಭ್ರಮಿಸಿ

ನಮ್ಮ ಭಾರತದಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಇಳಿ ವಯಸ್ಸಿನಲ್ಲೂ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುತ್ತಾರೆ. ಅಡುಗೆ, ಹಾಡು, ರಂಗೋಲಿ, ಕಸೂತಿ ಇವೆಲ್ಲವನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಆದರೆ ಇಂಥ ಪ್ರತಿಭಾವಂತ ಮಹಿಳೆಯರಿಗೆ ಬೇಕಿರುವುದು ಒಂದು ವೇದಿಕೆ.

ಮಹಿಳೆಯರೇ, ತಂತ್ರಜ್ಞಾನ ಯುಗದಲ್ಲಿ ಇಳಿವಯಸ್ಸಿನಲ್ಲೂ ಸಾಧನೆ ಮಾಡಿ; ಬದುಕನ್ನ ಈ ರೀತಿ ಸಂಭ್ರಮಿಸಿ
ಮಹಿಳೆಯರೇ, ತಂತ್ರಜ್ಞಾನ ಯುಗದಲ್ಲಿ ಇಳಿವಯಸ್ಸಿನಲ್ಲೂ ಸಾಧನೆ ಮಾಡಿ; ಬದುಕನ್ನ ಈ ರೀತಿ ಸಂಭ್ರಮಿಸಿ

ಹೆಣ್ಣುಮಕ್ಕಳ ಅಸ್ಮಿತೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಹಾಗೂ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಗೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾದಿನವನ್ನು ಆಚರಿಸಲಾಗುತ್ತದೆ. ಇಂದಿನ ಯುವತಿಯರ ಜೊತೆ ಇಳಿ ವಯಸ್ಸಿನವರೂ ಪೈಪೋಟಿ ನಡೆಸುತ್ತಿದ್ದಾರೆ.

ಯುವ ಪೀಳಿಗೆಯನ್ನು ನಾಚಿಸುವಂತಹ ಹೊಸ ಉತ್ಸಾಹದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ ಈಗಿನ ಹಿರಿಯ ನಾಗರಿಕರು. ನಮ್ಮಲ್ಲಿ 60–70 ವರ್ಷ ಮೇಲ್ಪಟ್ಟ ಅದೆಷ್ಟು ಅಮ್ಮಂದಿರು, ಅಜ್ಜಿಯಂದಿರು ವಾಟ್ಸ್‌ಅಪ್‌, ಇನ್ಸ್‌ಸ್ಟಾಗ್ರಾಂ, ಫೇಸ್‌ಬುಕ್‌ ಬಳಸುತ್ತಿಲ್ಲ ಹೇಳಿ. ತಂತ್ರಜ್ಞಾನಗಳೆಲ್ಲ ಯುವಜನತೆಗೆ ಮಾತ್ರ ಅನ್ನುವುದನ್ನು ಸುಳ್ಳು ಮಾಡಿದ್ದಾರೆ ಇವರು. ಇಂದಿನ ತಂತ್ರಜ್ಞಾನವನ್ನು ಕಲಿತು ಅದರಲ್ಲಿ ತಮ್ಮದೇ ಆದ ಹೊಸ ಛಾಪನ್ನು ಮೂಡಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಕಲಿಕೆ ಮುಂದುವರಿಸುತ್ತಾ, ವ್ಯಾಪಾರ ಪ್ರಾರಂಭಿಸುತ್ತಾ ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ತೋರಿಸುತ್ತಿದ್ದಾರೆ. ನಮ್ಮಲ್ಲಿನ ಬಹಳಷ್ಟು ಮಹಿಳೆಯರು ತಮ್ಮ ಇಳಿ ವಯಸ್ಸಿನಲ್ಲಿ ಬದುಕು ಸಂಭ್ರಮಿಸುತ್ತಿದ್ದಾರೆ.

ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಇಳಿ ವಯಸ್ಸಿನಲ್ಲೂ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಅಡುಗೆ, ಹಾಡು, ರಂಗೋಲಿ, ಕಸೂತಿ ಇವೆಲ್ಲವನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಆದರೆ ಇಂಥ ಪ್ರತಿಭಾವಂತ ಮಹಿಳೆಯರಿಗೆ ಬೇಕಿರುವುದು ಒಂದು ವೇದಿಕೆ. ಅವರಲ್ಲಿರುವ ಜ್ಞಾನವನ್ನು ಇತರರಿಗೂ ತಿಳಿಸಲು, ಮತ್ತು ಅದರಲ್ಲೇ ಸಾಧನೆ ಮಾಡಲು ಈಗ ವಿಫುಲ ಅವಕಾಶವಿದೆ. ಹೇಗೆಂದರೆ ಅವರೂ ಸಹ ತಮ್ಮದೇ ಆದ ಯೂಟ್ಯೂಬ್‌ ಚಾನಲ್‌ ಅನ್ನೋ ಅಥವಾ ಇನ್‌ಸ್ಟಾಗ್ರಾಂ ಅಕೌಂಟ್‌ ಅನ್ನು ತರೆದು ಅದರಲ್ಲಿ ಅವರಿಗೆ ತಿಳಿದ ವಿಷಯಗಳನ್ನು ಹಂಚಿಕೊಳ್ಳಬಹುದು. ಮಧ್ಯವಯಸ್ಸಿನಲ್ಲಿ ಮನೆಯ ಜವಾಬ್ದಾರಿಗಳನ್ನು ಹೋರುತ್ತಾ, ತಮ್ಮೆಲ್ಲಾ ಆಸೆ, ಕನಸುಗಳನ್ನು ಭದ್ರವಾಗಿ ಮುಚ್ಚಿಟ್ಟದ್ದ ಮಹಿಳೆಯರು ಅವರ ಇಳಿವಯಸ್ಸಿನಲ್ಲಿ ಅವೆಲ್ಲವುಗಳನ್ನು ಸಾಧಿಸಬಹುದು.

ಇಳಿವಯಸ್ಸಿನಲ್ಲೂ ಸಾಧನೆ ಮಾಡಿ ಬದುಕನ್ನ ಸಂಭ್ರಮಿಸಲು ಸಲಹೆ

* ಅಡುಗೆ ಮಾಡುವುದರಲ್ಲಿ ನಿಮಗೆ ವಿಶೇಷ ಪರಿಣಿತಿಯಿರುತ್ತದೆ. ನಿತ್ಯದ ಅಡುಗೆ, ಹಬ್ಬದ ಅಡುಗೆಗಳು ನಿಮಗೆ ಕರಗತವಾಗಿರುತ್ತದೆ. ಅಂತಹವರು ತಮ್ಮದೇ ಆದ ಒಂದು ಯೂಟ್ಯೂಬ್‌ ಚಾನೆಲ್‌ ತೆರೆದು ಅಲ್ಲಿ ಅಡುಗೆ ಮಾಡುವುದು ಹೇಗೆ ಎಂದು ಹೇಳಿ ಕೊಡಬಹುದು. ಅದರಲ್ಲೂ ವಿಶೇಷವಾಗಿ ಹಿಂದಿನ ಕಾಲದ ಅಡುಗೆಗಳನ್ನು.

* ಕೆಲವರಿಗೆ ಮನೆಮದ್ದು ಚೆನ್ನಾಗಿ ತಿಳಿದಿರುತ್ತದೆ. ಅವರೂ ಸಹ ತಮಗೆ ತಿಳಿದಿರುವ ಮನೆಮದ್ದುಗಳನ್ನು ಹಂಚಿಕೊಳ್ಳಬಹುದು. ಅದರ ಪ್ರಯೋಜನಗಳನ್ನೂ ಹೇಳಿಕೊಡಬಹುದು.

* ನಾವು ನೋಡಿರುತ್ತೇವೆ ಕೆಲವು ಅಜ್ಜಿಯಂದಿರು ಬಹಳ ಸುಶ್ರಾವ್ಯವಾಗಿ ದೇವರ ಭಜನೆ, ಸ್ತೋತ್ರಗಳನ್ನು ಹೇಳುತ್ತಾರೆ. ಅಂತವರು ಅವರ ಚಾನಲ್‌ ತೆರೆದು ಅದರಲ್ಲಿ ದೇವರ ಹಾಡು, ಕೀರ್ತನೆಗಳನ್ನು ಹಂಚಿಕೊಳ್ಳಬಹುದು.

* ನೀವು ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ನೋಡಿರಬಹುದು. ಕೆಲವು ಮಹಿಳೆಯರು ಬಹಳ ಸುಂದರವಾಗಿ ರಂಗೋಲಿ ಬಿಡಿಸುತ್ತಾರೆ. ತಾವು ಬಿಡಿಸುವ ರಂಗೋಲಿಗಳನ್ನೇ ಫೋಟೊ ತೆಗೆದು ಅಥವಾ ವಿಡಿಯೊ ಮಾಡಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಳ್ಳಬಹುದು. ದಿನಕ್ಕೊಂದು ರಂಗೋಲಿ ಎಂದು ರಂಗೋಲಿಗಳನ್ನು ಬಿಡಿಸುವುದನ್ನು ಹೇಳಿಕೊಡಬಹುದು.

* ತಮ್ಮ ಮಧ್ಯವಯಸ್ಸಿನಲ್ಲಿ ಬೇಜಾರು ಕಳೆಯಲೆಂದು ಕಲಿತ ಕಸೂತಿಗಳನ್ನು ಸಹ ಹೇಳಿಕೊಡಬಹುದು. ಇಂದು ಕಸೂತಿ ಕಲೆಗಳಿಗೆ ಬಹಳ ಬೇಡಿಕೆಯಿದೆ. ಹೊಸ ಹೊಸ ಐಡಿಯಾಗಳನ್ನು ಸಹ ಕೊಡಬಹುದು.

ನಮ್ಮಲ್ಲಿ ಕೆಲವು ಅಜ್ಜಿಯರಿಗೆ ಗಾರ್ಡನಿಂಗ್‌ ಎಂದರೆ ಬಲು ಪ್ರೀತಿ ಇರುತ್ತದೆ. ಅಂತಹವರು ಗಾರ್ಡನಿಂಗ್‌ ಬಗ್ಗೆ ಟಿಪ್ಸ್‌ ಕೊಡಬಹುದು. ಜೊತೆಗೆ ಚಿಕ್ಕ ಚಿಕ್ಕ ಸಸಿಗಳನ್ನು ತಯಾರಿಸಿ, ಆನ್‌ಲೈನ್‌ ಮೂಲಕ ಮಾರಾಟವನ್ನು ಮಾಡಬಹುದು.

ಈ ಎಲ್ಲವೂ ತಂತ್ರಜ್ಞಾನ ಬಳಸಿಕೊಂಡು ನಿಮ್ಮ ಪ್ರತಿಭಾ ಪ್ರದರ್ಶನಕ್ಕಿರುವ ದಾರಿಗಳು. ಇನ್ನೇಕೆ ತಡ ನಿಮ್ಮಲ್ಲೂ ಇಂತಹ ಅದ್ಭುತ ಪ್ರತಿಭೆಗಳಿದ್ದರೆ ನೀವೂ ನಿಮ್ಮದೇ ಯೂಟ್ಯೂಬ್‌, ಇನ್‌ಸ್ಟಾಗ್ರಾಂ ಖಾತೆ ತೆರೆದು ಪ್ರತಿಭಾ ಪ್ರದರ್ಶನ ಮಾಡಿ, ನಿಮಗೆ ತಿಳಿದಿದ್ದನ್ನು ಮುಂದಿನ ಪೀಳಿಗೆಯೂ ತಿಳಿಯುವಂತೆ ಮಾಡಿ.

ವಿಭಾಗ