Women’s Day 2025: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ Google Doodle ವಿಶೇಷ ಗೌರವ
ಗೂಗಲ್ ಪ್ರತಿ ವಿಶೇಷ ಸಂದರ್ಭಗಳಲ್ಲಿ ಆಕರ್ಷಕ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುವ ಪರಿಪಾಠ ಹೊಂದಿದೆ. ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಹೀಗಾಗಿ ಈ ಬಾರಿ ಸ್ಟೆಮ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರನ್ನು ಗೌರವಿಸುವ ಡೂಡಲ್ ರಚಿಸುವ ಮೂಲಕ ಗಮನ ಸೆಳೆದಿದೆ.

ಪ್ರತಿ ವಿಶೇಷ ಸಂದರ್ಭದಲ್ಲಿ ಡೂಡಲ್ ಮೂಲಕ ಗೌರವ ಸಲ್ಲಿಸುವ ಮೂಲಕ ಆ ದಿನವನ್ನು ಸ್ಮರಣೀಯವಾಗಿರುವ ಗೂಗಲ್, ಮಹಿಳಾ ದಿನಾಚರಣೆಗೆ ವಿಶೇಷ ಡೂಡಲ್ ರಚಿಸಿ, ಹೋಮ್‌ಪೇಜ್‌ನಲ್ಲಿ ಪ್ರದರ್ಶಿಸಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಸ್ಟೆಮ್ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಗಳು ಮತ್ತು ಲಿಂಗ ಸಮಾನತೆಯ ವಿಚಾರವನ್ನು ಗೂಗಲ್ ಪ್ರಸ್ತಾಪಿಸಿದೆ. ಪ್ರಸ್ತುತ ಜಾಗತಿಕ ಸ್ಟೆಮ್ ಕಾರ್ಯ ಕ್ಷೇತ್ರದಲ್ಲಿ ಮಹಿಳೆಯರು ಶೇ. 29 ರಷ್ಟಿದ್ದು, ಪ್ರತಿವರ್ಷ ಅವರ ಕೊಡುಗೆ ಮತ್ತು ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗುತ್ತಿರುವುದನ್ನು ಗೂಗಲ್ ಪ್ರಶಂಸಿಸಿದೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರ ಕೊಡುಗೆಗಳ ಮಹತ್ವವನ್ನು ಒತ್ತಿಹೇಳಲು ವಿಶ್ವಸಂಸ್ಥೆಯು 1975 ರಲ್ಲಿ ಪ್ರತಿ ವರ್ಷ ಮಾರ್ಚ್ 8ನ್ನು ಮಹಿಳಾ ದಿನಾಚರಣೆ ಎಂದು ಆಚರಿಸಲು ಕರೆಕೊಟ್ಟಿದೆ. ಅದರಂತೆ ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಅವರ ಕೊಡುಗೆಗಳನ್ನು ಪ್ರಶಂಸಿಸಲು, ಗೌರವಿಸಲು ಈ ಸಂದರ್ಭವನ್ನು ಬಳಸಿಕೊಳ್ಳಲಾಗುತ್ತದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಗೂಗಲ್ ಡೂಡಲ್ ತನ್ನ ಬ್ಲಾಗ್‌ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದೆ. ನಾವು ಸ್ಟೆಮ್ ಕ್ಷೇತ್ರಗಳಲ್ಲಿ ದೂರದೃಷ್ಟಿ ಹೊಂದಿರುವ ಮಹಿಳೆಯರನ್ನು ಗೌರವಿಸುತ್ತೇವೆ. ಗೂಗಲ್ ಡೂಡಲ್ ಕಲಾಕೃತಿಯು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ, ಪ್ರಾಚೀನ ಆವಿಷ್ಕಾರಗಳನ್ನು ಬಹಿರಂಗಪಡಿಸಿದ ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿ, ಅದ್ಭುತ ಕೊಡುಗೆ ನೀಡಿದ ಮಹಿಳೆಯರನ್ನು ಬೆಳಕಿಗೆ ತರುವ ಪ್ರಯತ್ನ ಎಂದು ಹೇಳಿದೆ. ಅಲ್ಲದೆ, ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಕೊಡುಗೆ ನೀಡಿದ್ದಾರೆ, ಇಲ್ಲಿ ಹೇಳಿರುವುದು ವಿಜ್ಞಾನಕ್ಕೆ ಮಹಿಳೆಯರ ಕೊಡುಗೆಗಳ ಒಂದು ಸಣ್ಣ ಭಾಗ ಮಾತ್ರ ಎಂದು ಗೂಗಲ್ ತಿಳಿಸಿದೆ.
ಮಹಿಳೆಯರ ಪ್ರಾತಿನಿಧ್ಯ ಮತ್ತು ಕೆಲಸವು ಲಿಂಗ ಸಮಾನತೆಯ ಕಡೆಗೆ ನಡೆಯುತ್ತಿರುವ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಗೂಗಲ್ ಗಮನಿಸಿದೆ, ಅದರಲ್ಲೂ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಗಮನಾರ್ಹ ಅಂತರಗಳು ಇನ್ನೂ ಉಳಿದಿರುವ ಕ್ಷೇತ್ರಗಳಲ್ಲಿ ಸ್ಟೆಮ್ ಕ್ಷೇತ್ರ ಕೂಡ ಒಂದು, ಪ್ರಸ್ತುತ ಜಾಗತಿಕ ಸ್ಟೆಮ್ ಕಾರ್ಯಪಡೆಯಲ್ಲಿ ಮಹಿಳೆಯರು ಶೇ. 29 ಮಾತ್ರ ಪ್ರತಿನಿಧಿಸುತ್ತಿದ್ದಾರೆ. ಆದರೆ ಈ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ ಎಂದು ಗೂಗಲ್ ಡೂಡಲ್ ಬ್ಲಾಗ್‌ನಲ್ಲಿ ಹೇಳಿದೆ.
ಇತಿಹಾಸದುದ್ದಕ್ಕೂ ಮಹಿಳೆಯರು ಮಾಡಿದ ಸಾಧನೆಗಳು ನಾವು ಇಂದು ವಾಸಿಸುವ ಜಗತ್ತನ್ನು ರೂಪಿಸಲು ಸಹಾಯ ಮಾಡಿದೆ, ಆಧುನಿಕ ಯುಗದ ಪ್ರಗತಿ ಮತ್ತು ನಾವೀನ್ಯತೆಗಳನ್ನು ಆನಂದಿಸಲು ನಮಗೆ ಅನುವು ಮಾಡಿಕೊಟ್ಟಿದೆ, ಹೀಗಾಗಿ ಈ ಸಂದರ್ಭವು ಅವರ ಕೊಡುಗೆಗಳ ಜ್ಞಾಪನೆಗೆ ಮೀಸಲು ಎಂದು ಗೂಗಲ್ ಹೇಳಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವ
ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ವಿಶ್ವಸಂಸ್ಥೆ ಒಂದು ಘೋಷವಾಕ್ಯವನ್ನು ಪ್ರಕಟಿಸುತ್ತದೆ. ಅದರಂತೆ ಈ ವರ್ಷದ ಥೀಮ್ ಎಲ್ಲರಿಗೂ ಸಮಾನ ಹಕ್ಕುಗಳು, ಅಧಿಕಾರ ಮತ್ತು ಅವಕಾಶಗಳನ್ನು ತೆರೆಯುವ ಕ್ರಮಕ್ಕೆ ಕರೆ ನೀಡುವುದು ಮತ್ತು ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಹಿಂದುಳಿಯದಂತೆ ಕಾರ್ಯರೂಪಿಸುವುದಾಗಿದೆ. ಜತೆಗೆ ಈ ದೃಷ್ಟಿಕೋನದ ಕೇಂದ್ರಬಿಂದುವೆಂದರೆ ಮುಂದಿನ ಪೀಳಿಗೆಯನ್ನು ಅಂದರೆ ಯುವಕರನ್ನು, ವಿಶೇಷವಾಗಿ ಯುವತಿಯರು ಮತ್ತು ಹದಿಹರೆಯದ ಹುಡುಗಿಯರನ್ನು ಸಮಾಜದಲ್ಲಿ ಎಲ್ಲ ರೀತಿಯಲ್ಲಿ ಸಬಲೀಕರಣಗೊಳಿಸುವುದು ಎಂದು ವಿಶ್ವಸಂಸ್ಥೆ ಹೇಳಿದೆ.
ಮಾರ್ಚ್ 8ರಂದು ಮಾತ್ರವೇ ಮಹಿಳೆಯರ ಕೊಡುಗೆಗಳನ್ನು ನೆನಪಿಸಿಕೊಳ್ಳುವುದಲ್ಲ, ಬದಲಾಗಿ ದಿನನಿತ್ಯ ಅವರು ಸಮಾಜಕ್ಕೆ, ಕುಟುಂಬಕ್ಕೆ ನೀಡುವ ಪ್ರಾಮುಖ್ಯತೆ ಮತ್ತು ಕೊಡುಗೆಯನ್ನು ಸ್ಮರಿಸಬೇಕು ಮತ್ತು ಅದನ್ನು ಗೌರವಿಸಬೇಕು ಎನ್ನುವ ಆಶಯ ಕೂಡ ಈ ಆಚರಣೆಯ ಹಿಂದಿದೆ. ಅದರಂತೆ ಗೂಗಲ್, ಡೂಡಲ್ ರಚಿಸುವ ಮೂಲಕ ಸೂಕ್ತ ರೀತಿಯಲ್ಲಿ ಸಾಂದರ್ಭಿಕವಾಗಿ ಗೌರವ ಸಲ್ಲಿಸಿದೆ. ಪ್ರತಿ ಆಚರಣೆ, ಹಬ್ಬದ ಸಂದರ್ಭದಲ್ಲೂ ಗೂಗಲ್ ಈ ರೀತಿ ಕ್ರೀಯಾತ್ಮಕ ಡೂಡಲ್ ರಚಿಸುವುದು ಗಮನಾರ್ಹ ಸಂಗತಿ.

