Yoga Day 2023: ಸೂರ್ಯ ನಮಸ್ಕಾರದಿಂದ ಭ್ರಮರಿ ಪ್ರಾಣಾಯಾಮದವರೆಗೆ ನಿದ್ದೆ ಸಮಸ್ಯೆಗಳ ನಿವಾರಣೆಗೆ ನೆರವಾಗುವ ಯೋಗಾಸನಗಳು ಇಲ್ಲಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Yoga Day 2023: ಸೂರ್ಯ ನಮಸ್ಕಾರದಿಂದ ಭ್ರಮರಿ ಪ್ರಾಣಾಯಾಮದವರೆಗೆ ನಿದ್ದೆ ಸಮಸ್ಯೆಗಳ ನಿವಾರಣೆಗೆ ನೆರವಾಗುವ ಯೋಗಾಸನಗಳು ಇಲ್ಲಿವೆ

Yoga Day 2023: ಸೂರ್ಯ ನಮಸ್ಕಾರದಿಂದ ಭ್ರಮರಿ ಪ್ರಾಣಾಯಾಮದವರೆಗೆ ನಿದ್ದೆ ಸಮಸ್ಯೆಗಳ ನಿವಾರಣೆಗೆ ನೆರವಾಗುವ ಯೋಗಾಸನಗಳು ಇಲ್ಲಿವೆ

Sleeping Problem and Yoga Asanas: ಯೋಗವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಉತ್ತಮ ನಿದ್ದೆಗಾಗಿ ಪ್ರಯತ್ನಿಸಲು ನೆರವಾಗುವ ಯೋಗದ ಭಂಗಿಗಳು ಇಲ್ಲಿವೆ.

ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ

ಪ್ರಪಂಚದಾದ್ಯಂತ ಇಂದು ನಿದ್ರಾಹೀನತೆ ಹಾಗೂ ನಿದ್ದಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಜನರನ್ನು ಕಾಡುತ್ತಿವೆ. 2019ರಲ್ಲಿ ಅಮೆರಿಕ ಮೂಲದ ಫಿಟ್‌ಬಿಟ್‌ ಸಂಸ್ಥೆಯು 18 ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿಯು ಸರಾಸರಿ 7 ಗಂಟೆ 1 ನಿಮಿಷದಷ್ಟು ಹೊತ್ತು ನಿದ್ರಿಸುವ ಮೂಲಕ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ನಿದ್ರಾಹೀನ ಸಮಸ್ಯೆ ಹೊಂದಿರುವ ರಾಷ್ಟ್ರವಾಗಿದೆ. 50 ರಿಂದ 70 ಮಿಲಿಯನ್‌ ಅಮೆರಿಕನ್ನರು ದೀರ್ಘಕಾಲದ ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೈನಂದಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತದೆ.

ಒತ್ತಡ ಮತ್ತು ವೇಗದ ಜೀವನವು ನಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು. ಯೋಗವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸಗಳು ಪ್ರತಿದಿನ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತವೆ.

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಭಾರತೀಯ ಯೋಗ ಸಂಘದ ಅಧ್ಯಕ್ಷ ಡಾ. ಹಂಸಜಿ ಯೋಗೇಂದ್ರ ನಿದ್ರಾಹೀನತೆಯನ್ನು ನಿರ್ವಹಿಸಲು ಅಥವಾ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಯೋಗ ಆಸನಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ʼಆಧುನಿಕ ಕಾಲಘಟ್ಟದಲ್ಲಿ ವೃತ್ತಿಯ ಸವಾಲು, ಕೆಲಸದ ಒತ್ತಡ, ಇತರ ಆರೋಗ್ಯ ಹಾಗೂ ಜೀವನಶೈಲಿಯ ಕಾರಣಗಳಿಂದಾಗಿ ನಿದ್ರಾಭಂಗವು ಸಾಮಾನ್ಯವಾಗಿದೆ. ನಿದ್ರಾಹೀನತೆಯ ನಿವಾರಣೆಗೆ ಹಾಗೂ ಆಳವಾಗಿ ನಿದ್ರಿಸಲು ಯೋಗವು ನೆರವಾಗುತ್ತದೆ. ಇದು ದಣಿದ ದೇಹ ಹಾಗೂ ಮನಸ್ಸನ್ನು ಸೂಕ್ಷ್ಮವಾಗಿ ಶಮನಗೊಳಿಸುವ ಶಕ್ತಿಯನ್ನು ಹೊಂದಿದೆ. ಯೋಗದಿಂದ ದೇಹ, ಮನಸ್ಸು ಪ್ರಶಾಂತವಾಗಿ ನೆಮ್ಮದಿಯ ನಿದ್ದೆ ಸಾಧ್ಯʼ ಎನ್ನುತ್ತಾರೆ ಹಂಸಜಿ.

ಸೂರ್ಯ ನಮಸ್ಕಾರ

ಸಂಜೆ ವೇಳೆ ಸೂರ್ಯ ನಮಸ್ಕಾರ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ದೇಹ ಹಾಗೂ ಮನಸ್ಸಿಗೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಸೂರ್ಯದೇವನಿಗೆ ನಮನ ಸಲ್ಲಿಸದಂತಾಗುವುದು ಮಾತ್ರವಲ್ಲ, ನಿದ್ದೆಗೂ ಸಹಕಾರಿ. ಇದು ಕೈಕಾಲುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲ, ಸುಪ್ತ ಒತ್ತಡದ ಬಿಡುಗಡೆಯನ್ನೂ ಪ್ರಚೋದಿಸುತ್ತದೆ.

ಯಸ್ತಿಕಾಸನ

ಕೈಗಳನ್ನು ತಲೆಯಿಂದ ಮುಂದಕ್ಕೆ ನೇರವಾಗಿ ಚಾಚಿಕೊಂಡು ಉದ್ದಕ್ಕೆ ಮಲಗುವ ಈ ಆಸನವು ದೃಢವಾದ ನಿಶ್ಚಲತೆ ಮತ್ತು ಮೃದುವಾದ ಹಿಗ್ಗುವಿಕೆಯಲ್ಲಿ ದೇಹ ಮತ್ತು ಮನಸ್ಸಿಗೆ ಶಾಂತ ಭಾವವನ್ನು ನೀಡುತ್ತದೆ. ಇದು ದೇಹ ಹಾಗೂ ಮನಸ್ಸಿನ ಚಡಪಡಿಕೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೆ ಉತ್ತಮ ನಿದ್ದೆಗೂ ಇದು ಸಹಕಾರಿ.

ಭದ್ರಾಸನ

ಕಾಲುಗಳನ್ನು ಹರಡಿ ಕುಳಿತುಕೊಂಡು ಪಾದಗಳನ್ನು ಹಿಡಿದುಕೊಂಡಿರುವ ಈ ಆಸನವು ದೇಹದ ಬಿಗಿತವನ್ನು ಸಡಿಲಗೊಳಿಸುತ್ತದೆ. ದಣಿದ ಸ್ನಾಯುಗಳಿಗೆ ವಿರಾಮ ನೀಡುತ್ತದೆ. ದೇಹದ ಒತ್ತಡವನ್ನು ನಿವಾರಿಸುವ ಜೊತೆಗೆ ಉತ್ತಮ ನಿದ್ದೆಗೂ ಸಹಕಾರಿ.

ಭ್ರಮರಿ ಪ್ರಾಣಾಯಾಮ

ಚಕ್ಕಳಮಕ್ಕಳ ಹಾಕಿ ಕುಳಿತು ಕಿವಿ, ಕಣ್ಣು, ಮೂಗು ಮುಚ್ಚಿಕೊಂಡಂತಿರುವ ಭಂಗಿಯ ಆ ವ್ಯಾಯಾಮವು ಮಾನಸಿಕ ಹಾಗೂ ದೈಹಿಕ ದಣಿವನ್ನು ದೂರಾಗಿಸುತ್ತದೆ. ಗಮನಶಕ್ತಿಯ ಕೇಂದ್ರೀಕರಣಕ್ಕೂ ಈ ವ್ಯಾಯಾಮ ಸಹಕಾರಿ. ಮಾನಸಿಕ ಒತ್ತಡವನ್ನು ನಿವಾರಿಸುವ ಜೊತೆಗೆ ನಿದ್ದೆಯನ್ನೂ ಸುಧಾರಿಸುತ್ತದೆ.

ಕಿಬ್ಬೊಟ್ಟೆಯ ಉಸಿರಾಟ

ಕಿಬ್ಬೊಟ್ಟೆಯ ಮೂಲಕ ಉಸಿರಾಡುವುದು ಅಂದರೆ ಉಚ್ಛಾಸ, ನಿಚ್ಛಾಸಗಳು ಉಸಿರಾಟವನ್ನು ಸರಾಗಗೊಳಿಸುತ್ತದೆ. ಇದು ಮನಸ್ಸಿಗೆ ಆಳವಾಗಿ ವಿಶ್ರಾಂತಿ ನೀಡುತ್ತದೆ. ಇದರಿಂದ ನಿದ್ದೆಯ ಸರಾಗವಾಗುತ್ತದೆ. ಇದು ನಿದ್ದೆಯ ಸಮಸ್ಯೆಗಳ ನಿವಾರಣೆಗೂ ಸಹಾಯ ಮಾಡುತ್ತದೆ.

Whats_app_banner