Jio Cinema App: ಜಿಯೋ ಸಿನಿಮಾ ಪರಿಚಯಿಸುತ್ತಿದೆ ಸೀನ್ ಸೆಲೆಕ್ಷನ್ ಫೀಚರ್; ಇದರಿಂದ ಪ್ರಯೋಜನವೇನು ನೋಡಿ
ರಿಲಯನ್ಸ್ ಸಮೂಹದ ಜಿಯೋ ಸಿನಿಮಾ ಆಪ್‌ನಲ್ಲಿ ಹಲವು ಹೊಸ ಫೀಚರ್ಸ್ ಪರಿಚಯಿಸಲಾಗುತ್ತಿದೆ. ಈ ಬಾರಿ ಸೀನ್ ಸೆಲೆಕ್ಟರ್ ಎಂಬ ಆಯ್ಕೆ ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ಅದರ ವಿಶೇಷತೆಗಳೇನು, ಬಳಕೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಹೊಸ ಹೊಸ ಸಿನಿಮಾ, ವೆಬ್ ಸಿರೀಸ್ ಮತ್ತು ಹಲವು ಕಾರ್ಯಕ್ರಮಗಳನ್ನು ನೋಡಲು ನೀವು ಜಿಯೋ ಸಿನಿಮಾ ಒಟಿಟಿ ಬಳಸಿರುತ್ತೀರಿ. ಒಟಿಟಿ ಅಪ್ಲಿಕೇಶನ್‌ನಲ್ಲಿ ನಿಮ್ಮ ಇಷ್ಟದ ಕಾರ್ಯಕ್ರಮಗಳನ್ನು ಹುಡುಕಲು ವಿವಿಧ ಫಿಲ್ಟರ್‌ಗಳು ಇವೆ. ಅದರಲ್ಲೂ ನಮ್ಮ ನೆಚ್ಚಿನ ಭಾಷೆ, ವಿವಿಧ ಜಾನರ್‌ನ ಚಿತ್ರಗಳು, ವೆಬ್‌ಸಿರೀಸ್‌ಗಳು, ಮಕ್ಕಳ ಕಂಟೆಂಟ್, ಕ್ರೈಂ ಥ್ರಿಲ್ಲರ್, ಹಾರರ್ ಎಂದೆಲ್ಲ ಹಲವು ವಿಧಗಳಿವೆ. ನಮಗೆ ಬೇಕಾದ ರೀತಿಯ ಸಿನಿಮಾ, ವೆಬ್ ಸಿರೀಸ್ ಅನ್ನು ಫಿಲ್ಟರ್ ಮಾಡಿ ನೋಡಲು ಇದರಿಂದ ಅನುಕೂಲವಾಗುತ್ತದೆ. ಜತೆಗೆ ವಿವಿಧ ಕೆಟಗರಿಯ ಸಿನಿಮಾಗಳು ಕೂಡ ಇರುವುದರಿಂದ ಅಷ್ಟು ರಾಶಿಯ ಮಧ್ಯೆ ಹುಡುಕಲು ಅನುಕೂಲವಾಗುತ್ತದೆ. ಹೀಗೆ ಇದರ ಜತೆಗೆ ಜಿಯೋ ಸಿನಿಮಾ ಹೊಸತೊಂದು ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ಮುಂದಾಗಿದೆ.
ಜಿಯೋ ಸಿನಿಮಾ ಸೀನ್ ಸೆಲೆಕ್ಟರ್
ರಿಲಯನ್ಸ್ ಸಮೂಹದ ವಿಡಿಯೊ ಸ್ಟ್ರೀಮಿಂಗ್ ಸೇವೆ ನೀಡುವ ಜಿಯೋ ಸಿನಿಮಾ ಒಟಿಟಿ ಅಪ್ಲಿಕೇಶನ್‌ನಲ್ಲಿ ಸೀನ್ ಸೆಲೆಕ್ಟರ್ ಎಂಬ ಹೊಸ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ. ಇದರ ಪ್ರಕಾರ, ಬಳಕೆದಾರರು ಸಿನಿಮಾ ಅಥವಾ ವೆಬ್‌ಸಿರೀಸ್ ನೋಡುತ್ತಿರುವಾಗ ಅದರಲ್ಲಿನ ಕೆಲವೊಂದು ದೃಶ್ಯಗಳು ನಮಗೆ ಬೇಡ ಎನ್ನಿಸಿದರೆ ಅದನ್ನು ಬಿಟ್ಟು, ನೇರವಾಗಿ ಮುಂದಿನ ಹಂತಕ್ಕೆ ಹೋಗಿ ವೀಕ್ಷಿಸಬಹುದು. ಅಂದರೆ, ಈ ಮೊದಲು ನಾವು ಸಿನಿಮಾ ನೋಡುವಾಗ, ಮಧ್ಯೆ ಹಾಡಿನ ದೃಶ್ಯ ಬಂದರೆ ಅದನ್ನು ಮುಂದಕ್ಕೆ ಓಡಿಸಿ, ನಂತರದ ಭಾಗವನ್ನು ನೋಡುತ್ತಿದ್ದೆವು. ಅದೇ ಮಾದರಿಯಲ್ಲಿ, ಈ ಆಯ್ಕೆ ಕೆಲಸ ಮಾಡಲಿದೆ. ಸಿನಿಮಾ ಟೈಮ್‌ಲೈನ್‌ನಲ್ಲಿ ಮುಂದಕ್ಕೆ ಓಡಿಸುತ್ತಾ, ನಮ್ಮಿಷ್ಟದ ಸೀನ್ ಆಯ್ಕೆ ಮಾಡುವ ಬದಲು, ನೇರವಾಗಿ ಅದೇ ನಮಗೆ ಮುಂಬರುವ ಸೀನ್‌ಗಳ ವಿವರ ನೀಡುತ್ತದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?
ಏನಿದು ಸೀನ್ ಸೆಲೆಕ್ಟರ್
ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಿನಿಮಾ, ಧಾರಾವಾಹಿ ಅಥವಾ ವೆಬ್ ಸಿರೀಸ್ ನೋಡುವಾಗ, ಅದರಲ್ಲಿ ಬೋರಿಂಗ್ ಅನ್ನಿಸುವ ದೃಶ್ಯಗಳಿದ್ದರೆ, ಆ ಭಾಗವನ್ನಷ್ಟೇ ಬಿಟ್ಟು, ಮುಂದಿನ ಭಾಗಕ್ಕೆ ತೆರಳುವ ಆಯ್ಕೆ ಇದೆ. ಕೆಲವರಿಗೆ ಸಿನಿಮಾದಲ್ಲಿ ಹಾಡಿನ ದೃಶ್ಯಗಳು ಇಷ್ಟವಾದರೆ, ಇನ್ನು ಕೆಲವರಿಗೆ ಫೈಟ್ ಸೀನ್ ಇಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ಅವುಗಳನ್ನಷ್ಟೇ ಆರಿಸಿ ನೋಡುವ ಅವಕಾಶವಿದೆ.
ಇದನ್ನೂ ಓದಿ: ಒಟಿಟಿಯಲ್ಲಿ ನೋಡಬಹುದಾದ ಟಾಪ್ 7 ಮಲಯಾಳಂ ಥ್ರಿಲ್ಲರ್ ಸಿನಿಮಾ
ಬಳಸುವುದು ಹೇಗೆ?
ಜಿಯೋ ಸಿನಿಮಾ ಸೀನ್ ಸೆಲೆಕ್ಟರ್ ಆಯ್ಕೆಯನ್ನು ಬಳಸಬೇಕಾದರೆ ನಿಮ್ಮಲ್ಲಿ ಅಪ್ಲಿಕೇಶನ್‌ನ ಅಪ್‌ಡೇಟೆಡ್ ಆವೃತ್ತಿ ಇರಬೇಕು. ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಅಪ್‌ಡೇಟ್ ಆದ ಬಳಿಕ, ನಿಮ್ಮಿಷ್ಟದ ಮೂವಿ ಅಥವಾ ವೆಬ್ ಸಿರೀಸ್ ನೋಡಿ. ಸ್ಕ್ರೀನ್ ಮೇಲೆ ಸೀನ್ ಸೆಲೆಕ್ಟರ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಥಂಬ್‌ನೈಲ್ ಸಹಿತ ವಿವಿಧ ಸೀನ್‌ಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು ವೀಕ್ಷಿಸಬಹುದು. ಹೀಗೆ ಮಾಡುವುದರಿಂದ, ಈ ಹಿಂದೆ ಮಾಡುತ್ತಿದ್ದಂತೆ ಬೋರಿಂಗ್ ಸೀನ್ ಅನ್ನು ಮುಂದಕ್ಕೆ ಫಾರ್ವರ್ಡ್ ಮಾಡುವ ಅಥವಾ ನಮಗೆ ಬೇಕಾಗಿರುವ ಸೀನ್ ಅನ್ನು ಹುಡುಕುತ್ತಾ ಕೂರುವ ಅಗತ್ಯವಿಲ್ಲ. ಇದರಿಂದ ಸಮಯವೂ ಉಳಿತಾಯ ಮತ್ತು ಅವಶ್ಯಕ ಸೀನ್ ಕೂಡ ತಕ್ಷಣವೇ ಲಭಿಸುವುದರಿಂದ, ಬೇಕಾದ ದೃಶ್ಯಗಳನ್ನು ಮಾತ್ರ ವೀಕ್ಷಿಸಬಹುದು. ಹೇಗೆ ಪುರುಷರು ಸಿನಿಮಾದಲ್ಲಿ ಹಾಡಿನ ದೃಶ್ಯಗಳನ್ನು ಬಿಟ್ಟು, ಫಾರ್ವರ್ಡ್ ಮಾಡಿ ಸಿನಿಮಾ ನೋಡುತ್ತಾರೆಯೋ, ಹಾಗೆಯೇ ಮಹಿಳೆಯರು ಕೂಡ ಫೈಟ್ ಸೀನ್‌ಗಳನ್ನು ಬಿಟ್ಟು ಸಿನಿಮಾ ನೋಡಲು ಇಷ್ಟಪಡುತ್ತಾರೆ. ಅಂತಹವರಿಗೆ ಈ ಆಯ್ಕೆ ಪ್ರಯೋಜನಕಾರಿಯಾಗಿದೆ.
