2ನೇ ಮುದ್ರಣದಲ್ಲಿ 'ಅಮರ ಸುಳ್ಯದ ರೈತ ಹೋರಾಟ': 3 ವರ್ಷಗಳ ಕಾಲ ನಡೆದ ಹೋರಾಟದ ಯಶೋಗಾಥೆ
ಡಾ. ಪುರುಷೋತ್ತಮ ಬಿಳಿಮಲೆ ಅವರು ಬರೆದ 'ಅಮರ ಸುಳ್ಯದ ರೈತ ಹೋರಾಟ' ಪುಸ್ತಕವು 2ನೇ ಮುದ್ರಣ ಕಾಣುತ್ತಿದ್ದು, 1834-1837ರವರೆಗೆ ನಡೆದ ರೈತ ಹೋರಾಟದ ಯಶೋಗಾಥೆ ಈ ಪುಸ್ತಕದಲ್ಲಿದೆ. ಈ ಬಗ್ಗೆ ಲೇಖಕಪುರುಷೋತ್ತಮ ಬಿಳಿಮಲೆ ಅವರ ಫೇಸ್ಬುಕ್ ಪೋಸ್ಟ್ ಅನ್ನು 'ಎಚ್ಟಿ ಕನ್ನಡ'ದಲ್ಲಿ ಮರುಪ್ರಕಟಿಸಲಾಗಿದೆ.

ಅಮರ ಸುಳ್ಯದ ರೈತ ಹೋರಾಟ (1834-37)- ಇದೀಗ ಎರಡನೇ ಮುದ್ರಣದಲ್ಲಿ..
ಭಾರತೀಯ ರೈತರಿಗೆ ಭೂಮಿ ಎಂಬುದು ಒಂದು ಭಾವನಾತ್ಮಕ ವಿಷಯ. ಅವರದನ್ನು ಹುಟ್ಟು, ಮದುವೆ, ಸಾವು ಮಾತ್ರವಲ್ಲದೆ, ತಾವು ನಂಬಿದ ದೈವಗಳೊಂದಿಗೂ ಗಾಢವಾಗಿ ಬೆಸೆದುಕೊಂಡಿದ್ದಾರೆ. ಇದನ್ನು ತಿಳಿಯದ ಪ್ರಭುತ್ವವು ತನ್ನ ಲಾಭಕ್ಕೆ ನೆಲವನ್ನು ವ್ಯಾಪಾರದ ಸರಕನ್ನಾಗಿ ಪರಿವರ್ತನೆಗೊಳಿಸಿದಾಗಲೆಲ್ಲಾ ರೈತರು ಅಂಥ ಪ್ರಕ್ರಿಯೆಗಳನ್ನು ಪ್ರಾಂತೀಯವಾಗಿ ಪ್ರತಿಭಟಿಸಿದ್ದಾರೆ. ವಸಾಹತು ಆಡಳಿತ ಕಾಲದಲ್ಲಿ ಹೀಗೆ ನಡೆದ ಪ್ರಾಂತೀಯ ಬಂಡಾಯಗಳ ಸಂಖ್ಯೆ ನೂರಕ್ಕೂ ಹೆಚ್ಚು. ಈ ಹೋರಾಟಗಳಲ್ಲಿ ಭೂಸಂಬಂಧವುಳ್ಳ ಎಲ್ಲ ವರ್ಗದ ರೈತರು, ಭೂಮಿ ಕಳೆದುಕೊಂಡ ಪಾಳೆಯಗಾರರು, ಜಮೀನ್ದಾರರು, ಅಧಿಕಾರ ಕಳೆದುಕೊಂಡು ಮೂಲೆಗುಂಪಾದ ರಾಜ ವಂಶಜರು, ಆಡಳಿತಗಾರರು, ದಿವಾಳಿ ಎದ್ದ ರೈತರು, ಸಾಂಪ್ರದಾಯಕ ಕೈ ಕಸಬುಗಳನ್ನು ಕಳೆದುಕೊಂಡವರು, ಬಿಟ್ಟಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ಧರ್ಮ ಗುರುಗಳು ಹಾಗೂ ಆದಿವಾಸಿ ಮುಖಂಡರು ಭಾಗವಹಿಸಿದ್ದಾರೆ. ಬ್ರಿಟಿಷ್ ಆಡಳಿತ ಕಾಲದ ಹೊಸ ರೀತಿಯ ಭೂ ವಿಂಗಡಣೆ, ಹಂಚಿಕೆ, ವರ್ಗಾವಣೆ ಮತ್ತು ಕಂದಾಯ ನಿಗದಿ ಕ್ರಮಗಳ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ಜನರು ಸಂಘಟಿತರಾಗಿ ಹೋರಾಡಿದ್ದು ಈಗ ಇತಿಹಾಸ.
ಈ ನಡುವೆ ಭಾರತದ ವ್ಯವಸಾಯಿಕ ಉತ್ಪನ್ನಗಳು ಇಂಗ್ಲೆಂಡಿನ ಕೈಗಾರಿಕೀಕರಣವನ್ನು ಅಭಿವೃದ್ಧಿಗೊಳಿಸಿದುವು. ಬ್ರಿಟಿಷ್ ಸರ್ಕಾರದ ಖಜಾನೆ ತುಂಬಿಸಲು, ತಮ್ಮ ಯುದ್ಧ ವೆಚ್ಚಗಳನ್ನು ಭರಿಸಿಕೊಳ್ಳಲು ಹಾಗೂ ಸಂಪದ್ಭರಿತ ಜೀವನ ಸಾಗಿಸಲು ಬ್ರಿಟಿಷರು ಭಾರತದ ರೈತರ ಮೇಲೆ ಹೆಚ್ಚು ಹೆಚ್ಚು ಕಂದಾಯ ವಿಧಿಸಿದರು. ಕಾರಣ ಪ್ರತಿಭಟನೆ ಅನಿವಾರ್ಯವಾಯಿತು. ಇಂಥದ್ದೊಂದು ಹೋರಾಟವು ಸುಳ್ಯ ಪರಿಸರದಲ್ಲಿಯೂ 1830ರ ದಶಕದಲ್ಲಿ ನಡೆಯಿತು. ಸುಮಾರು ಮೂರು ವರ್ಷಗಳ ಕಾಲ ನಡೆದ ಈ ದಿಟ್ಟ ಹೋರಾಟಕ್ಕೆ ಕಂಪೆನಿ ಸರಕಾರದ ಪ್ರಬಲ ಸೈನಿಕ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆಲ್ಲುವ ಸಾಧ್ಯತೆಗಳಿರಲಿಲ್ಲ. ಆದರೆ, ಸಾಮಾನ್ಯ ಜನರು ಸಂಘಟಿತಗೊಂಡ ರೀತಿ, ವೈರಿಯನ್ನು ಮಣಿಸಲು ಅನುಸರಿಸಿದ ಗೆರಿಲ್ಲಾ ಮಾದರಿಯ ತಂತ್ರಗಳು, ಅನನ್ಯವಾದ ದೈವೀಕರಣ ಮತ್ತು ನಕಲೀಕರಣ ಪ್ರಕ್ರಿಯೆಗಳು ಪ್ರಾಂತೀಯ ರೈತ ಹೋರಾಟಗಳ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಸಂಗತಿಗಳಾಗಿವೆ. ಇದೇ ವಿಷಯದ ಮೇಲೆ, ದೇವಿಪ್ರಸಾದ್ ಸಂಪಾಜೆ, ಅನಂತರಾಜ ಗೌಡ, ಪ್ರಭಾಕರ ಶಿಶಿಲ, ವಿಜಯ ತಂಬಂಡ, ಅರವಿಂದ ಚೊಕ್ಕಾಡಿ, ವಿದ್ಯಾಧರ ಕುಡೆಕಲ್ಲು, ಸಹನಾ ಕಾಂತ ಮಂಗಲ ಮತ್ತು ಪೂವಪ್ಪ ಕಣಿಯೂರು ಅವರುಗಳು ಬೇರೆ ಬೇರೆ ದೃಷ್ಟಿಕೋನದಿಂದ ಬರೆದಿದ್ದಾರೆ. ಆಸಕ್ತರು ಅವುಗಳನ್ನೂ ಓದಬಹುದು.
ನನ್ನ ಪುಸ್ತಕ ಇದೀಗ ಇಂಗ್ಲಿಷಲ್ಲಿ ಪ್ರಕಟವಾಗುತ್ತಿದೆ. ಕನ್ನಡದಲ್ಲಿ ಅದರ ಎರಡನೇ ಮುದ್ರಣವೂ ಬಂದಿದೆ. ಕೊಂಡು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞತೆಗಳು. ಈ ಥರದ ಪುಸ್ತಕಗಳೂ ಎರಡನೆ ಮುದ್ರಣ ಕಾಣ್ತಾವೆಂದು ಗೊತ್ತಿರಲಿಲ್ಲ!
-ಡಾ. ಪುರುಷೋತ್ತಮ ಬಿಳಿಮಲೆ
( ಪುಸ್ತಕದ ಪ್ರತಿಗಳಿಗೆ ಸಂಪರ್ಕಿಸಿರಿ : ಅಹರ್ನಿಶಿ ಪ್ರಕಾಶನ, ಫೋನ್ 9449174662/ 9448628511)

ವಿಭಾಗ