ಶ್ರೀಚಕ್ರ ಉಪಾಸನೆಯ ಒಳಹೊರಗು ಬಿಂಬಿಸುವ ಅಪರೂಪದ ಕೃತಿ: ಯೋಗದಾ ಕಾದಂಬರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಶ್ರೀಚಕ್ರ ಉಪಾಸನೆಯ ಒಳಹೊರಗು ಬಿಂಬಿಸುವ ಅಪರೂಪದ ಕೃತಿ: ಯೋಗದಾ ಕಾದಂಬರಿ

ಶ್ರೀಚಕ್ರ ಉಪಾಸನೆಯ ಒಳಹೊರಗು ಬಿಂಬಿಸುವ ಅಪರೂಪದ ಕೃತಿ: ಯೋಗದಾ ಕಾದಂಬರಿ

ಶ್ರೀ ಚಕ್ರ ಅಥವಾ ಶ್ರೀ ವಿದ್ಯಾ ಭಗವತಿಯ ಉಪಾಸನೆಯ "ಯೋಗದಾ" ಕಾದಂಬರಿಯ ತಳಹದಿ. ಈ ಕೃತಿಯ ಇನ್ನೊಂದು ಆಯಾಮ ಸಾಂಸಾರಿಕವಾಗಿ ತಳುಕುಹಾಕಿಕೊಂಡಿದೆ. ಅದನ್ನು ಅಧ್ಯಾತ್ಮವೆನ್ನಿ, ಸಂಪ್ರದಾಯವೆನ್ನಿ, ಆಚರಣೆಯೆನ್ನಿ, ಉಪಾಸನೆಯೆನ್ನಿ. ಅದೇ ಜೀವಾಳ. (ಪುಸ್ತಕ ಪರಿಚಯ: ಮೇದಿನಿ ಕೆ.ಎಸ್.)

ಲೇಖಕಿ ವಿದ್ಯಾ ಕೆ.ಎನ್. (ಬಲಚಿತ್ರ)
ಲೇಖಕಿ ವಿದ್ಯಾ ಕೆ.ಎನ್. (ಬಲಚಿತ್ರ)

ಭಾರತೀಯರಾದ ನಾವು ಸಕಲ ಸೃಷ್ಟಿಯಲ್ಲೂ ದೇವರನ್ನು ಕಾಣುತ್ತೇವೆ. ನೀರು, ಮರ, ಮಣ್ಣು, ಬೆಟ್ಟ ಗುಡ್ಡ , ಕಲ್ಲು ಎಲ್ಲವೂ ನಮಗೆ ದೇವರೇ. ಇದನ್ನು ವೈದಿಕ ಎನ್ನಿ, ದ್ರಾವಿಡ ಎನ್ನಿ. ಅಥವಾ ಮತ್ತೇನಾದರೂ ಹೆಸರಿಡಿ. ಆದರೆ ಎಲ್ಲದರ ಮೂಲ ಭಾರತೀಯತೆಯೇ ಆಗಿದೆ. ಎಲ್ಲವನ್ನೂ ಪೂಜಿಸಿ, ಆರಾಧಿಸುವ ಮನೋಧರ್ಮದವರು ನಾವು. ಸಾತ್ವಿಕ ಪೂಜೆ, ಹೋಮ, ಹವನ, ಮಾಟ, ತಂತ್ರ , ವಾಮಾಚಾರ ಎಲ್ಲವೂ ಆಯಾಯ ಕಾಲಕ್ಕೆ ವ್ಯಕ್ತವಾಗುತ್ತಾ, ಔನ್ನತ್ಯಕ್ಕೇರುತ್ತಾ, ಮತ್ತೆ ಸ್ವಲ್ಪ ದಿನ‌ ಕಣ್ಮರೆಯಾಗುತ್ತಾ ಹೋಗುತ್ತದೆ, ಆಯಾಯ ಕಾಲಘಟ್ಟದಲ್ಲಿ ಅವತಾರವಾಗುವ ವ್ಯಕ್ತಿಗಳೂ, ಅವರ ಚಿಂತನೆಗಳೂ ಇದಕ್ಕೆ ಕಾರಣವಿರಬಹುದು.

ಆದರೆ ಕೆಲವು ವೇದ ಪ್ರಮಾಣವಾದ ಆಚರಣೆಗಳು, ಸಂಪ್ರದಾಯಗಳು ಪರಂಪರಾಗತ ನಂಬಿಕೆಗಳು ಮಾತ್ರ ಮರೆಯಾಗುವುದೇ ಇಲ್ಲ. ಉಪಾಸನೆ ಅಂತ್ಯವಿಲ್ಲದೇ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಲೇ ಇರುತ್ತದೆ. ಯಾರ ಧಾಳಿಯಾದರೂ, ಯಾವ ಹೊಸ ಆಚರಣೆ ಬಂದರೂ ಮರೆಯಾಗದು. ಉಪಾಸಕರ ಸಂಖ್ಯೆ ಕಡಿಮೆಯಾಗಬಹುದಷ್ಟೇ.

ಮಲೆನಾಡಿನ ನನ್ನ ಅಜ್ಜನ ಮನೆಯಲ್ಲಿ ಪ್ರತಿವರ್ಷವೂ ನವರಾತ್ರಿಯನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಜ್ಜನ ಮನೆಯಲ್ಲಿ ಏಳೆಂಟು ಅಡಿ ಎತ್ತರದ ದೇವರ ಮಂಟಪವಿದೆ. ಮಂಟಪದ ತುಂಬಾ ವಿವಿಧ ದೇವರುಗಳಿವೆ. ಆ ದೇವರಿಗೆ ಪ್ರತಿದಿನ ಮೂರೂ ಹೊತ್ತು ಪೂಜೆ, ಮಂಗಳಾರತಿ ನೈವೇದ್ಯವಾಗಬೇಕು. ನವರಾತ್ರಿಯಲ್ಲಿ ಇದರ ವಿಶೇಷ ಇನ್ನೂ ಜೋರು. ತಲೆ ತಲಾಂತರದಿಂದ ನಡೆದುಕೊಂಡು ಬಂದ ದೇವಿಯ ಉಪಾಸನೆ ಇದೆ. ನನ್ನ ದೊಡ್ಡ ಸೋದರ ಮಾವ ಮೂರ್ನಾಲ್ಕು ತಾಸು ಎತ್ತರದ ಮಣೆಯ ಮೇಲೆ ಕೂತು ದೇವರನ್ನು ಸಿಂಗರಿಸಿ, ಅರ್ಚಿಸಿ ಪೂಜಿಸುವುದನ್ನು ನೋಡುವುದೇ ಚಂದ.

ಬೆಳಗಿನ ಜಾವ ನಾಲ್ಕೂವರೆಗೇ ಅವನ ಪೂಜೆ ಆರಂಭವಾಗುತ್ತಿತ್ತು. ನವರಾತ್ರಿಯ ಸಮಯದಲ್ಲಿ ಸುತ್ತಮುತ್ತಲು ನೂರಾರು ಜನರು ರಾತ್ರಿಯ ಪೂಜೆಗೆ ಬರುತ್ತಿದ್ದರು. ಅಮ್ಮನವರಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತಿದ್ದರು. ಮಾವ ಯಾವ ದೇವರ ಪೂಜೆ ಮಾಡುತ್ತಾನೆ? ದೇವಿಯ ಹಬ್ಬವಾದ್ದರಿಂದ ಮಹಾತಾಯಿಗೇ ಪೂಜೆ , ಎಂದು ನಾವು ಯೋಚಿಸುತ್ತಿದ್ದೆವು. ಕೊನೆಗೂ ನಾನು ಮಾವನ ಬಳಿ ಕೇಳಲಿಲ್ಲ. ಈ ಮಂಟಪದ ದೇವರಲ್ಲದೇ ಅವನ ಬಳಿ ಪ್ರತ್ಯೇಕವಾಗಿ ಸಾಲಿಗ್ರಾಮಗಳೂ ಇದ್ದವು. ಅದನ್ನು ಪೂಜಿಸಿ, ಜಪ ಮಾಡಿ ಅವರ ಮನೆಯ ನಾಗಂದಿಗೆಯ ಒಂದು ಮೂಲೆಯಲ್ಲಿ ಇಟ್ಟು ತನ್ನ ಕೆಲಸಕ್ಕೆ ಹೋಗುತ್ತಿದ್ದ. ಆ ದೇವರನ್ನು ಇಡಲು ಒಂದು ತಾಮ್ರದ ಪಾತ್ರೆಯೂ ಇತ್ತು. ನಮಗೆ ಅದರಲ್ಲೇನಿರಬಹುದೆಂಬುದೇ ದೊಡ್ಡ ಕುತೂಹಲ. ಮತ್ತೊಬ್ಬರು ದೂರದ ಸಂಬಂಧಿ, ಶ್ರೀ ಚಕ್ರ ಪೂಜೆ ಮಾಡುತ್ತಾರೆ, ಹಾಗಾಗಿ ಅವರು ಸುಳ್ಳು ಹೇಳುವುದಿಲ್ಲ ಎಂಬುದು ಜನರ ನಂಬಿಕೆ. ಆದರೆ ಅವರ ಬಳಿ ಹೋಗಲು ಜನರು ಹೆದರುತ್ತಿದ್ದರು. ಕಾರಣ ಗೊತ್ತಿಲ್ಲ.

ಈ ಪೀಠಿಕೆಯನ್ನಿಡಲು ಕಾರಣ ನಾನು ಇತ್ತೀಚಿಗೆ ಓದಿದ ಕಾದಂಬರಿ, "ಯೋಗದಾ". ಶ್ರೀ ಚಕ್ರ ಅಥವಾ ಶ್ರೀ ವಿದ್ಯಾ ಭಗವತಿಯ ಉಪಾಸನೆಯ ಕತೆ. ಕತೆಯೆಂದರೆ ಅದರ ಹರವು ಚಿಕ್ಕದೆನಿಸಬಹುದು. ಶೀರ್ಷಿಕೆಯಲ್ಲಿ ಇರುವಂತೆ "ಉಪದೇಶ, ಉಪಾಸನೆ, ಉತ್ತರದಾಯಿತ್ವಗಳ ಅನಂತ ಕತೆ - ಯೋಗದಾ". ಇದನ್ನೊಂದು ಕಾದಂಬರಿಯೆಂದು ಕರೆದರೆ ಸಂಕುಚಿತವೆನಿಸಿಬಿಡುತ್ತದೆ. ಮಹಾಕಾವ್ಯವಾಗಬಹುದಾದಷ್ಟು ವಿಷಯ ವ್ಯಾಪ್ತಿಯ ಅನಂತ ಕತೆ. ನಿಜವಾಗಿಯೂ, ಮುಕ್ತಾಯವೆಂಬುದು ಓದಿದಷ್ಟು ಸರಳವಿಲ್ಲ. ಮಲೆನಾಡಿನ‌ ಮೂಲೆಯಿಂದ ಬೆಂಗಳೂರಿಗೆ ಬಂದು ಉನ್ನತ ಹುದ್ದೆಯಲ್ಲಿದ್ದರೂ ಶ್ರೀ ಚಕ್ರದ ಉಪಾಸನೆಯನ್ನು ಬಿಡದ ಶಂಕರ ದೀಕ್ಷಿತರು, ಅವರ ಹೆಂಡತಿ ಸುವರ್ಣ, ಮಕ್ಕಳಾದ ಅನಘಾ, ಅಭಿಜ್ಞಾ, ಅವರ ಬಂಧು ಬಳಗ ಒಂದು ಕಡೆಯದಾದರೆ, ಅವರಿಗೆ ಉಪದೇಶ ಕೊಟ್ಟ ಸದಾನಂದ ಭಟ್ಟರು ಮತ್ತವರ ಮುಂದಿನ‌ ತಲೆಮಾರು ಮತ್ತೊಂದು ಕಡೆ. ಜೊತೆಗೆ ಬೆಸೆದುಕೊಂಡು ಬರುವ ಅಗ್ನಿಹೋತ್ರಿ ಕೃಷ್ಣರಾಜ ದೀಕ್ಷಿತರ್ ಮತ್ತವರ ಕುಟುಂಬ.

ಲೇಖಕಿ ಮೇದಿನಿ ಕೆಸವಿನಮನೆ (ಬಲಚಿತ್ರ)
ಲೇಖಕಿ ಮೇದಿನಿ ಕೆಸವಿನಮನೆ (ಬಲಚಿತ್ರ)

ಇವರದ್ದೇ ಕತೆ ಎಂದು ಭಾವಿಸಿಬಿಟ್ಟರೆ ಇದೊಂದು ಸಾಂಸಾರಿಕ ಕಾದಂಬರಿ ಎನಿಸಿಬಿಡುತ್ತದೆ. ಮಲೆನಾಡಿನ ಜೀವನ ಶೈಲಿ, ಅವರ ಬದುಕಿನ‌ಕತೆ , ವ್ಯಥೆ, ಖುಷಿ, ಆಚರಣೆ ಇವೆಲ್ಲವೂ ಸೇರಿ ಅಚ್ಚುಕಟ್ಟೆನಿಸುವ ಕತೆ, ಮುಂದೇನಾಯ್ತು? ಎಂಬಲ್ಲಿಗೆ ಮುಗಿದುಬಿಡುತ್ತದೆ. ಆದರೆ ಕಾದಂಬರಿ ಅಷ್ಟೇ ಆಗಿ ಮುಗಿಯುವುದಿಲ್ಲ. ಕಾದಂಬರಿಯ ಇನ್ನೊಂದು ಆಯಾಮ, ಸಾಂಸಾರಿಕವಾಗಿ ತಳುಕುಹಾಕಿಕೊಂಡೇ ಸಾಗುತ್ತದೆ. ಅದನ್ನು ಅಧ್ಯಾತ್ಮವೆನ್ನಿ, ಸಂಪ್ರದಾಯವೆನ್ನಿ, ಆಚರಣೆಯೆನ್ನಿ, ಉಪಾಸನೆಯೆನ್ನಿ. ಆದರೆ ಅದೇ ಕಾದಂಬರಿಯ ಮುಖ್ಯ ವಸ್ತು. ಅದೇ ಜೀವಾಳ.

ನಮ್ಮಲ್ಲಿ ಶ್ರೀ ಚಕ್ರದ ಮಂಡಲವನ್ನು ಇಟ್ಟು ಪೂಜೆ ಮಾಡುವವರ ಬಗ್ಗೆ ಒಂದು ರೀತಿಯ ಭಯವಿದೆ. ಅವರೇನೋ ಮಾಟ, ಮಂತ್ರ ವಶೀಕರಣ ಮಾಡುತ್ತಾರೆ ಎಂದು. ಅದಕ್ಕೆ ಪೂರಕವಾಗಿ ಈಗೀಗ ಹೆಚ್ಚಾಗಿರುವ ಜಾಹೀರಾತುಗಳಲ್ಲಿ ಕೂಡಾ ಅದೇ ಮಂಡಲ ಎದ್ದು ಕಾಣುತ್ತದೆ ಕೂಡಾ. ಜನರನ್ನು ದಾರಿ ತಪ್ಪಿಸಲು ಇಷ್ಟು ಸಾಕು. ಆದರೆ ಆ ಭಯಕ್ಕೆ ಕಾರಣವೇ ಇಲ್ಲ. ಇದು ಜನರ ಮನದಲ್ಲಿ ಇರುವ ಅಜ್ಞಾನವಷ್ಟೇ. ತಿಳಿವಳಿಕೆಯ ಕೊರತೆಯಿಂದ ಭಗವತಿ ಉಪಾಸನೆ ಎಂದರೆ ಭಯ ಪಡುತ್ತಾರಷ್ಟೇ.

ಆದರೆ ನಿಜವಾದ ಶ್ರೀ ಚಕ್ರದ ಉಪಾಸನೆ ಎಂಬುದು ಏನು? ಮಾತೆ ಅಥವಾ ಮೂಲ ಸ್ವರೂಪಿಣಿ ತಾಯಿಯ ಉಪಾಸನೆ ಎಂಥದ್ದು, ಅದರ ಮಹತ್ವವೇನು, ಆ ಉಪಾಸನೆಯು ಸುಲಭವಾಗಿ ದಕ್ಕುವುದೇ? ದಕ್ಕಿದರೂ ಉಪಾಸಕನ ನಂತರ ಆ ಪರಂಪರೆಯನ್ನು ಯಾರು ಮುಂದುವರೆಸಬೇಕು? ತಲೆಮಾರಿಗೆ ದಾಟಿಸುವಂತಥದ್ದೆ? ಹೆಣ್ಣು ಮಕ್ಕಳಿಗೆ ಉಪದೇಶ ಕೊಡಬಹುದೇ? ಉಪದೇಶವೆಂದರೆ ಇಲ್ಲಿ ಬೇರೆಯದೇ ಆದ ಶ್ರೇಷ್ಠ ಅರ್ಥವಿದೆ. ಸಾಮಾನ್ಯರ ಪರಿಭಾಷೆಯಲ್ಲಿ ಬರುವ ಬುದ್ಧಿಮಾತು ಅಥವಾ ವ್ಯಂಗ್ಯಾರ್ಥದ ಹೊಟ್ಟು ಮಾತಲ್ಲ.

ಒಂದು ಮಂತ್ರವನ್ನು ಹೊಸದಾಗಿ ಕಲಿಯಬೇಕೆಂದರೆ, ಗುರುವಿನ ಮುಖೇನ ಉಪದೇಶವಾಗಬೇಕು. ಉದಾಹರಣೆಗೆ ಲಲಿತಾ ಸಹಸ್ರನಾಮವನ್ನು ಪಠಣ ಅಥವಾ ‌ ಅರ್ಚನೆ ಮಾಡುವವರು ಶುದ್ಧ ಸಂಕಲ್ಪದಿಂದ ಗುರುಮುಖೇನ ಉಪದೇಶ ಪಡೆಯಬೇಕು. ‌ಓದಲು ಬರುತ್ತದೆ ಎಂದು ಪುಸ್ತಕ ಹಿಡಿದು ಓದುತ್ತಾ ಹೋಗುವುದಲ್ಲ. ಹೀಗೆಯೇ ಶ್ರೀ ವಿದ್ಯಾಭಗವತಿಯ ಉಪಾಸನೆಯೂ ಕಥಾ ನಾಯಕರಾದ ಶಂಕರ ದೀಕ್ಷಿತರಿಗೆ ಬಂದುದು ಯೋಗಾಯೋಗವೇ ಸರಿ. ಗುರು ಸದಾನಂದ ಭಟ್ಟರು ತನ್ನ ವಂಶದವರಿಗೆ ಉಪದೇಶ ಮಾಡಿ, ಶ್ರೀ ಚಕ್ರವನ್ನು ತನ್ನ ಮನೆಯಲ್ಲಿಯೇ ಇರಿಸಿಕೊಳ್ಳುವ ಕುರಿತು ಯೋಚಿಸದೇ, ಶಂಕರರಿಗೆ ಧಾರೆ ಎರೆದು ಉಪದೇಶ ಕೊಡುತ್ತಾರೆ. ಭಗವತಿಯು ತನಗೆ ಬೇಕೆನಿಸಿದವರ ಮನೆಗೆ ಆಯಾಚಿತವಾಗಿ ನಡೆದುಬಿಡುತ್ತಾಳೆ. ಉಪದೇಶಕ್ಕೆ ಇರುವ ಮಹತ್ವವೇ ಅದು.

ಕತೆಯ ಮತ್ತೊಂದು ಬದಿಯಲ್ಲಿ ಶಂಕರ ದೀಕ್ಷಿತರ ಸ್ನೇಹಿತರಾದ ಕೃಷ್ಣರಾಜ ದೀಕ್ಷಿತರ್ ಎಂಬ ಅಗ್ನಿಹೋತ್ರದ ಉಪಾಸಕರ ಬದುಕು ವ್ಯಕ್ತವಾಗುತ್ತದೆ. ಕತೆಯನ್ನೋದುವ ನಮಗೆ ಈ ಇಬ್ಬರು ಉಪಾಸಕರ ನಂತರ ಈ ಆರಾಧನೆಯ ಉತ್ತರಾಧಿಕಾರಿಗಳು ಯಾರು? ದೀಕ್ಷಿತರಿಗೆ ಇಬ್ಬರೂ ಹೆಣ್ಣುಮಕ್ಕಳು. ದೀಕ್ಷಿತರ್ ಎರಡು ಗಂಡುಮಕ್ಕಳ ತಂದೆಯಾದರೂ ಆ ಮಕ್ಕಳಿಗೆ ಇದರಲ್ಲಿ ಆಸಕ್ತಿ ಇಲ್ಲ. ಹಾಗಾದರೆ ಮುಂದೆ ಈ ಅಗ್ನಿ ಹೋತ್ರ ಹಾಗೂ ಶ್ರೀ ಚಕ್ರದ ಉಪಾಸನೆಯ ಮುಂದುವರಿಕೆ ಹೇಗೆ? ಎಂಬ ಯೋಚನೆ ಕಾಡುತ್ತದೆ. ಆದರೆ ಪ್ರಶ್ನೆಗೆ ಉತ್ತರವೂ ಅವ್ಯಕ್ತವಾಗಿ ಕಾದಂಬರಿಯಲ್ಲಿದೆ. ಅವ್ಯಕ್ತ ಏಕೆಂದರೆ, ನೇರವಾದ ಮುಕ್ತಾಯ ಇದಲ್ಲ.

ಇದರ ಜೊತೆಗೆ ಗುರು ಸದಾನಂದ ಭಟ್ಟರ ಮೊಮ್ಮಗಳು ಶ್ರೀಕಲಾ ವಿದೇಶದಲ್ಲಿದ್ದರೂ ಅಲ್ಲೊಂದು ಗುರುವನ್ನು ಕಂಡುಕೊಂಡು ಶ್ರೀ ಚಕ್ರದ ಉಪಾಸಕಿಯಾಗಿ ಭಾರತಕ್ಕೆ ಭೇಟಿ ನೀಡುವುದು ವಿಶೇಷವೆನಿಸುತ್ತದೆ. ಅದರೊಂದಿಗೆ ಉಪಾಸನೆಗೆ ಗಂಡು ಹೆಣ್ಣು ಎಂಬ ಭೇದವಿಲ್ಲ ಎಂಬ ಅರಿವೂ ಮೂಡುತ್ತದೆ. ಮಧ್ಯದ ಒಂದು ಕೊಂಡಿ ಕಳಚಿದರೂ ಸದಾನಂದ ಭಟ್ಟರ ಪುಣ್ಯ ಮತ್ತೆ ಅವರ ಕುಟುಂಬವನ್ನು ಹೇಗೆ ಕಾಪಾಡಿತು ಎಂಬುದಕ್ಕೆ ಕಾದಂಬರಿ ಸಾಕ್ಷಿಯಾಗುತ್ತದೆ.

ಮಲೆನಾಡಿನ ಪರಿಸರದ ಚಿತ್ರಣ, ಹಾಸ್ಟೇಲು ವಾತಾವರಣದಿಂದ ದಾರಿ ತಪ್ಪಿದ ಮಗಳು ಮತ್ತೆ ದೇವಿಯ ಒಲುಮೆಯಿಂದ ಸರಿದಾರಿಗೆ ಬರುವುದು, ತಮ್ಮನ‌ ಮಕ್ಕಳನ್ನೇ ಸೊಸೆ ಮಾಡಿಕೊಳ್ಳಬೇಕೆಂಬ ಸೋದರತ್ತೆಯ ಯಾವತ್ತಿನ ಬಯಕೆ, ಮಲೆನಾಡಿನ ಕಾಫಿ ಬೆಂಗಳೂರಿನಲ್ಲಿ ಹಬೆಯಾಡುವ ಬಗೆ, ಮನೆಯಂಗಳದಲ್ಲಿ ಬೆಳೆದ ದಾಸವಾಳ, ಗೊರಟೆ, ನಂಜಬಟ್ಟಲು ಹೂಗಳ ತೇರು ಇವೆಲ್ಲವೂ ಕಾದಂಬರಿಯನ್ನು ಆಪ್ತವಾಗಿಸುತ್ತವೆ. ಜೊತೆಗೆ ಕಾದಂಬರಿಯ ಅಗಾಧ ವಿಷಯವನ್ನು ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಜೊತೆಗೆ ನವರಾತ್ರಿಯ ಆಚರಣೆಯೊಂದಿಗೆ ಕತೆಯನ್ನು ಬೆಸೆದು ಕಾದಂಬರಿಯನ್ನು ನಿರೂಪಿಸಿದ ರೀತಿಯೂ ವಿಶೇಷವೆನಿಸಿತು. ನವರಾತ್ರಿಯೆಂಬುದೇ ದೇವಿಯ ಆರಾಧನೆ, ಅದರಲ್ಲಿ ಈ ಕತೆಯನ್ನು ಹೆಣೆದುದು ಕಾದಂಬರಿಗಾರ್ತಿಯ ನೈಲುಣ್ಯತೆಗೆ ಸಾಕ್ಷಿ. ನವರಾತ್ರಿಯ ಹತ್ತು ದಿನಗಳಲ್ಲಿ ಘಟಿಸುವ ಹತ್ತು ಅಧ್ಯಾಯದ ಕಾದಂಬರಿ ಭೂತ, ವರ್ತಮಾನವನ್ನು ಒಳಗೊಂಡು ರಚನೆಯಾಗಿದೆ.

ಲೇಖಕಿಗೆ ಇದು ಎರಡನೇ ಕಾದಂಬರಿ. ಮೊದಲನೆಯದ್ದು ಸಾಮಾಜಿಕ ಎನಿಸಬಹುದಾದ ವಿಶೇಷ ವಸ್ತುವಿನ ಕತೆ. ಎರಡನೆಯ ಕಾದಂಬರಿಯಾದ "ಯೋಗದಾ" ಮಾತ್ರ ಸುಲಭವಾಗಿ ಯಾರೂ ಆಯ್ಕೆ ಮಾಡಿಕೊಳ್ಳದ ಕಥಾವಸ್ತುವಿನದ್ದು. ಹೆಸರು ಕೇಳಿದ ಕೂಡಲೇ ಗಾಬರಿಯಾಗುವ, ದೂರ ಸರಿಯುವ ವಿಷಯವನ್ನು ಇಷ್ಟು ಆಪ್ತವಾಗಿ, ಗೌರವಿಸುವ ಹಾಗೆ ಬರೆದಿರುವುದು ಲೇಖಕಿಯ ಅಂತಃ ಸತ್ವಕ್ಕೆ ಸಾಕ್ಷಿ.

ಬರಹ: ಮೇದಿನಿ ಕೆಸವಿನಮನೆ, (facebook.com/medini.ks)

ಕಾದಂಬರಿ: ಯೋಗದಾ (ಉಪದೇಶ, ಉಪಾಸನೆ, ಉತ್ತರದಾಯಿತ್ವಗಳ ಅನಂತ ಕತೆ...)

ಲೇಖಕರು - ವಿದ್ಯಾ ಕೆ.ಎನ್. (facebook.com/vidyadattatri.hosakoppa)

ಪ್ರಕಾಶಕರು- ಅಯೋಧ್ಯಾ ಪ್ರಕಾಶನ

ಸಂಪರ್ಕ ಸಂಖ್ಯೆ - 9620916996

Whats_app_banner