ಕನ್ನಡ ಓದುಗರ ಹಲವು ಸಮಸ್ಯೆಗಳಿಗೆ ಇ–ಬುಕ್ ಪರಿಹಾರ, ಇ–ಬುಕ್‌ಗೆ ಶಿಫ್ಟಾದ್ರೆ ಇಷ್ಟೆಲ್ಲಾ ಪ್ರಯೋಜನವಿದೆ ನೋಡಿ; ಮಧು ವೈಎನ್ ಬರಹ
ಮಧು ವೈಎನ್ ಬರಹ: ಪ್ರತಿವರ್ಷ ಇಷ್ಟೊಂದು ಪುಸ್ತಕಗಳು ಬರ್ತಿರುವಾಗ ನಿಮ್ಮ ಪುಸ್ತಕ ಶೆಲ್ಪಿನಲ್ಲಿ ಉಳಿಬೇಕಂದರೆ ನೀವು ಇನ್ನೊಬ್ಬ ಕುವೆಂಪು, ಕಾರಂತ, ತೇಜಸ್ವಿ, ಭೈರಪ್ಪನಾಗಿರಬೇಕು. ಯಾಕೆಂದರೆ ಕಡೆಗೂ ಅವರದಕ್ಕೇ ಜಾಗ ಸಾಕಾಗಲ್ಲ! ಆದ್ದರಿಂದ ಇದು ಹೈಟೈಮ್ ಅನ್ಸುತ್ತೆ. ಪ್ರಕಾಶಕರು ಬರಹಗಾರರು ಓದುಗರು ಎಲ್ಲರೂ ಇ–ಬುಕ್‌ಗೆ ಶಿಫ್ಟಾಗುವುದು.
ಕನ್ನಡ ಪುಸ್ತಕಗಳನ್ನು ಓದುವವರಿಲ್ಲ ಎನ್ನುವುದು ಕೆಲವರ ಕೂಗಾದರೆ, ಖರೀದಿಸಿದ ಪುಸ್ತಕಗಳನ್ನು ಇಡಲು ಮನೆಯಲ್ಲಿ ಜಾಗವಿಲ್ಲ ಎನ್ನುವುದು ಇನ್ನೂ ಕೆಲವರ ಅಳಲು. ಹಾಗಂತ ಓದದೇ ಇರಲು ಸಾಧ್ಯವಿಲ್ಲ. ಓದು ಮನುಷ್ಯ ಜೀವನದ ಭಾಗವಾಗಬೇಕು. ಕನ್ನಡ ಜೊತೆ ಕನ್ನಡ ಲೇಖಕರು, ಬರಹಗಾರರು, ಪ್ರಕಾಶಕರು ಉಳಿಯಬೇಕು. ಹಾಗಾದರೆ ಇದಕ್ಕೆ ಪರಿಹಾರವೇನು ಎಂದು ಕೇಳಿದರೆ ಉತ್ತರ ಇಬುಕ್ ಅಂತಾರೆ ಲೇಖಕ ಮಧುವೈಎನ್. ಇಬುಕ್‌ನ ಪ್ರಾಮುಖ್ಯವೇನು, ಇಬುಕ್ ಇಂದಿನ ಪರಿಸ್ಥಿತಿಗೆ ಎಷ್ಟು ಮುಖ್ಯ, ಇದಕ್ಕೆ ಶಿಫ್ಟ್ ಆಗುವುದರಿಂದ ಏನೆಲ್ಲಾ ಪಯೋಜನಗಳಿವೆ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು ವೈಎನ್. ಅವರ ಬರಹವನ್ನು ನೀವೂ ಓದಿ.
ಮಧು ವೈಎನ್ ಬರಹ
ಕನ್ನಡ ಓದುಗರ ಹಲವು ಸಮಸ್ಯೆಗಳಿಗೆ ಇಬುಕ್ ಪರಿಹಾರವೆಂದು ಅನಿಸುತ್ತಿದೆ. ನಾನು ಕಳೆದೆರಡು ವರುಷ ಸತತವಾಗಿ ಸುಮಾರು ನಲವತ್ತರಿಂದ ಐವತ್ತು ಸಾವಿರ ರುಪಾಯಿ ಮೊತ್ತದ ಪುಸ್ತಕಗಳನ್ನು ಬೇರೆಯವರಿಗೆ ಕೊಟ್ಟಿದ್ದೇನೆ, ಇಟ್ಟುಕೊಳ್ಳಲು ಜಾಗವಿಲ್ಲದೇ. ಅಷ್ಟೊಳ್ಳೆ ಪುಸ್ತಕಗಳನ್ನು ಕೊಡಲು ಮನಸೇ ಇರಲಿಲ್ಲ. ಕೆಲವು ವರ್ಷಗಳ ಕಾಲ ಮಂಚದ ಹೊಟ್ಟೆಭಾಗದ ಬಾಕ್ಸಿನಲ್ಲಿಟ್ಟು ಕಾದೆ. ಅದು ತಾನೆ ಎಷ್ಟೂಂತ ಹಿಡಿಸುತ್ತದೆ!
ನಾನೀಗ ಎಲ್ಲಾ ಇಂಗ್ಲೀಷ್ ಪುಸ್ತಕಗಳನ್ನು ಕಿಂಡಲ್‌ನಲ್ಲಿ ಖರೀದಿಸುತ್ತೇನೆ. ಕನಿಷ್ಠ ಅವುಗಳ ಜಾಗ ಉಳಿದಂತಾಯ್ತು ಮತ್ತು ಇವು ಎಂದಿಗೂ ನನ್ನೊಂದಿಗೇ ಇರುತ್ತವೆ. ಹೋದ ಕಡೆಗೆಲ್ಲಾ ನನ್ನೊಂದಿಗೆ ಬರುತ್ತವೆ. ದೂರದ ಊರಿಗೆ ಹೋದಾಗ ಒಂದು ಗಂಟೆ ಸುಮ್ಮನೆ ಕೂರುವ ಬದಲು ಇಷ್ಟವಾದ ಪುಸ್ತಕ ತೆಗೆದು ಓದಬಹುದು ಮತ್ತು ಇವು ಬಹುತೇಕ ಶೇ 40 ಕಡಿಮೆ ದರದಲ್ಲಿ ಸಿಗುತ್ತವೆ. ಆದ್ದರಿಂದ ಒಂದು ಪುಸ್ತಕದ ಹಣದಲ್ಲಿ ಎರಡನ್ನು ಕೊಳ್ಳಬಹುದು. ಅನೇಕ ಸಲ ಏನಾಗುತ್ತೆ ಅಂದ್ರೆ ಯಾರೊ ಎಲ್ಲೊ ಹೇಳಿದ ಪುಸ್ತಕ ಓದ್ಬೇಕು ಅನಿಸುತ್ತೆ. ಆ ಕ್ಷಣ ಅದು ಸಿಗದಿದ್ದಲ್ಲಿ ಮತ್ತೆ ನೆನಪೇ ಆಗುವುದಿಲ್ಲ. ಕಿಂಡಲ್‌ನಿಂದಾಗಿ ಅದೂ ಈಗ ಅನುಕೂಲ. ಯಾವುದಾದರೂ ಸಮಾರಂಭದಲ್ಲಿದ್ದರೆ ತಕ್ಷಣ ಅಲ್ಲೇ ಮೊಬೈಲ್ ತೆಗೆದು ಖರೀದಿಸಿಬಿಡುತ್ತೇನೆ.
ಕನ್ನಡ ಬರಹಗಾರರು ಪ್ರಕಾಶಕರು ಹಿಂದೇಟು ಹಾಕುತ್ತಿರುವುದು ಬಹುಶಃ ಇಬುಕ್ ತೀರಾ ಖಾಸಗಿ ಖರೀದಿ ಮತ್ತು ಖಾಸಗಿ ಲೈಬ್ರರಿಯಾದ್ದರಿಂದ ಪುಸ್ತಕದ ಬಗ್ಗೆ ಬಾಯಿಂದ ಬಾಯಿಗೆ ಹಬ್ಬುವ ಅವಕಾಶ ತಪ್ಪುತ್ತದೆ ಎಂದು. ಮತ್ತು ಪ್ರತಿ ಮನೆಯಲ್ಲಿನ ಸೆಲ್ಫಿನಲ್ಲಿ ನಮ್ಮ ಪುಸ್ತಕ ಕಾಣದಾಗುತ್ತದೆ ಎಂದು.
ಮೊದಲಿಗೆ ಯಾರಾದರೂ ಓದಿದ್ರೇ ತಾನೆ ಓದಿ ಬರೆದ್ರೇ ತಾನೆ ಈ ಬಾಯಿಂದ ಬಾಯಿಗೆ ಹಬ್ಬುವುದಕ್ಕೆ ಹೆಚ್ಚು ತೂಕ. ಬರೀ ಖರೀದಿ ಮತ್ತು ಕೈಲಿ ಕಾಣಿಸಿಕೊಳ್ಳುವುದರಿಂದ ಏನು ಪ್ರಚಾರ ಸಿಕ್ಕರೆ ಏನು ಬಂತು?
ಎರಡು- ನೀವೇ ಗಮನಿಸಿದಂತೆ ವರ್ಷಾ ವರ್ಷಾ ಇಷ್ಟೊಂದು ಪುಸ್ತಕಗಳು ಬರ್ತಿರುವಾಗ ನಿಮ್ಮ ಪುಸ್ತಕ ಶೆಲ್ಪಿನಲ್ಲಿ ಉಳಿಬೇಕಂದರೆ ನೀವು ಇನ್ನೊಬ್ಬ ಕುವೆಂಪು, ಕಾರಂತ, ತೇಜಸ್ವಿ, ಭೈರಪ್ಪನಾಗಿರಬೇಕು. ಯಾಕೆಂದರೆ ಕಡೆಗೂ ಅವರದಕ್ಕೇ ಜಾಗ ಸಾಕಾಗಲ್ಲ!
ಆದ್ದರಿಂದ ಇದು ಹೈಟೈಮ್ ಅನ್ಸುತ್ತೆ. ಪ್ರಕಾಶಕರು ಬರಹಗಾರರು ಓದುಗರು ಎಲ್ಲರೂ ಇಬುಕ್‌ಗೆ ಶಿಫ್ಟಾಗುವುದು.
1. ಮನೇಲಿ ಜಾಗ ಉಳಿಯುತ್ತೆ.
2. ಪರ್ಸಲ್ಲಿ ಹಣ ಉಳಿಯುತ್ತೆ.
3. ಹೆಚ್ಚು ಖರೀದಿ ಆಗುತ್ತೆ.
4. ಓದುಗರು ಹೆಚ್ಚಾಗ್ತಾರೆ .
5. ಪುಸ್ತಕ ಎಂದಾದರೂ ಓದಿಸಿಕೊಳ್ಳುತ್ತೆ. ಮೂಲೆ ಸೇರಲ್ಲ ಧೂಳು ಹಿಡಿಯಲ್ಲ. ಯಾರಿಗೊ ಹಸ್ತಾಂತರವಾಗಲ್ಲ.
6. ಪ್ರಕಾಶಕರಿಗೆ ಲಾಭಾಂಶ ಜಾಸ್ತಿ ಇರುತ್ತೆ.
7. ಪ್ರಿಂಟ್ ಹಾಕಿಸುವ ಡಿಸ್ಟ್ರಿಬ್ಯೂಟ್ ಮಾಡುವ ಕುಂತು ನಿಂತು ಅಲೆದಾಡಿ ಮಾರುವ- ತಾಪತ್ರಯವಿರಲ್ಲ.
8. ಪರಿಸರ ಹಾನಿ (ಆ ತರ ಕಾಳಜಿ ಇದ್ದಲ್ಲಿ) ಕಮ್ಮಿ ಆಗತ್ತೆ.
9. ಕನ್ನಡ ಪುಸ್ತಕಗಳ ಸಪ್ಲೈ ಚೈನ್ ವೃದ್ಧಿಸುತ್ತೆ.
ಇಂದು (ನವೆಂಬರ್ 30) ಬೆಳಿಗ್ಗೆ ಮಧು ಈ ಪೋಸ್ಟ್ ಹಾಕಿದ್ದರು. ಈಗಾಗಲೇ ಹಲವರು ಈ ಪೋಸ್ಟ್ ನೋಡಿದ್ದು, 100ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 120ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಕೆಲವರು ಮಧು ಅವರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ರೆ, ಇನ್ನೂ ಕೆಲವರು ಇಬುಕ್‌ನಿಂದ ಓದಿನ ತೃಪ್ತಿ ಸಿಗುವುದಿಲ್ಲ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲಿ ಆಯ್ದು ಕಾಮೆಂಟ್‌ಗಳು ಇಲ್ಲಿವೆ.
ಮಧು ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು
‘ಕಿಂಡಲ್ ತಗೊಂಡು 3 ವರ್ಷದಿಂದ ಕಾಯ್ತಿದೀನಿ ಕನ್ನಡ ಪುಸ್ತಕಗಳು ಅದರಲ್ಲಿ ಬರುತ್ತೆ ಬರುತ್ತೆ ಅಂತ‘ ಎಂದು ಸುನೀಜ್ ಜೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಮರಳಿ ಪುಸ್ತಕ ಬಳಸಲು ಶುರು ಮಾಡಿದೆ: ಇಲ್ಲಿ ನೀವು ಹೇಳಿರುವ ಅಂಶಗಳು ಪ್ರಾಯೋಗಿಕವಾದದ್ದೇ ಸರ್. ಆದರೆ ಒಂದಷ್ಟು ಬಲವಾದ ಪ್ರತಿರೋಧಕ ಕಾರಣಗಳಿಂದಾಗಿ ನಾನೂ ಸಹ ಕಿಂಡಲ್ ಬಳಕೆಯಿಂದ ಪುನಃ ಭೌತಿಕ ಪುಸ್ತಕದ ಓದಿಗೆ ಮರಳಬೇಕಾಯಿತು. ಮೊದಲನೆಯದಾಗಿ ಕಿಂಡಲ್ ಒಂದು ಎಲೆಕ್ಟ್ರಾನಿಕ್ ಉಪಕರಣ. ಎಷ್ಟೇ ಕಡಿಮೆಯೆಂದರೂ ಇದರಲ್ಲಿ ಬೆಳಕಿನ ಉತ್ಪತ್ತಿ ಆಗುವುದರಿಂದ ಅಲ್ಲಿ ಓದುವ ಪ್ರಕ್ರಿಯೆಗೆ ಕಣ್ಣುಗಳ ಮೇಲಿನ ಒತ್ತಡ ಬರಿಯ ಪುಸ್ತಕ ಓದುವುದಕ್ಕಿಂತ ಎರಡರಷ್ಟಾಗುತ್ತದೆ.
ಎರಡನೆಯದು ಸಹಜವಾಗಿ ಓದುವಿಕೆ ಅಂದೊಡನೆ ಮನುಷ್ಯನ ಮನಸ್ಸಿಗೆ ಕಲ್ಪನಾ ಸಾಮರ್ಥ್ಯದ ಶಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದೇ ಪ್ರಕ್ರಿಯೆ ಮುಂದುವರೆದು ಹೆಚ್ಚು ಓದಲು ಪ್ರೇರೇಪಿಸುತ್ತದೆ. ಆದರೆ ಕಿಂಡಲ್ ನಲ್ಲಿ ಈ ಅನುಭವ ದಕ್ಕುವುದಿಲ್ಲ (ನನ್ನ ಅನುಭವ ಅಷ್ಟೇ) ಕೊನೆಯದಾಗಿ .. ಮನುಷ್ಯನ ಮೆದುಳಿಗೆ ಒಂದಷ್ಟು ವಿಚಿತ್ರ ನೆನಪಿನ ಶಕ್ತಿಗಳಿವೆ .. ಉದಾಹರಣೆಗೆ ಹೊಸ ಪುಸ್ತಕ ಕೊಂಡಾಗ ಅದರ ಹಾಳೆಗಳ ನಡುವಿನಿಂದ ಹೊಮ್ಮುವ ಪರಿಮಳ ಅಥವಾ ಅದರ ಭೌತಿಕ ಅಸ್ತಿತ್ವವನ್ನು ಜೀವನದಲ್ಲಿ ಮೊಟ್ಟ ಮೊದಲ ಬಾರಿ ಆಸ್ವಾದಿಸಿದ ಅನುಭವ.. (ಶಾಲೆಯ ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬರಿಗೂ ಈ ಅನುಭವ ಇರುತ್ತದೆ ) ಹೀಗೆ ಎಲ್ಲ ಅಂಶಗಳನ್ನು ಒಗ್ಗೂಡಿಸಿ ಅದನ್ನು ಪುಸ್ತಕ ಎಂಬುದಾಗಿ ಮನಸ್ಸು ಅರ್ಥೈಸಿಕೊಳ್ಳುತ್ತದೆ. ಇದ್ಯಾವುದೂ ಕಿಂಡಲ್ ನಲ್ಲಿ ನನಗೆ ಸಿಗಲೇ ಇಲ್ಲ .ಹಾಗಾಗಿ ಮರಳಿ ಪುಸ್ತಕವನ್ನೇ ಬಳಸತೊಡಗಿದೆ‘ ಎಂದು ಸುಬ್ಬು ಬಾದಲ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಶಿಫ್ಟ್ ಆಗೋದು ಬಹಳ ಕಷ್ಟ: ಎರಡು ವಿಷಯಗಳು ಬಹಳ ಕಷ್ಟವಿದೆ, from point of view of paradigm shift. ಒಂದು, ಕಾಗದದ ಪುಸ್ತಕದಿಂದ ಇ ಪುಸ್ತಕಕ್ಕೆ ಹೊಂದಿಕೊಳ್ಳುವುದು. ಎರಡು, ಪೆಟ್ರೋಲ್ ಕಾರ್‌ಗಳಿಂದ EV ಕಾರ್ಗಳಿಗೆ shift ಆಗೋದು. ಐದು ಅಥವಾ ಹತ್ತು ಪರ್ಸೆಂಟ್ ಗಿಂತ ಮೇಲೆ ಹೋಗೋದು ಬಹಳ ಕಷ್ಟವಿದೆ‘ ಎಂದು ವಿಠ್ಠಲರಾಯ್ ಶೆಣೈ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಮನಸ್ಥಿತಿ ಬದಲಾಗಬೇಕಿದೆ: ‘ನನ್ನ ಆದ್ಯತೆ ಇ-ಪುಸ್ತಕಕ್ಕೆ. ಕುವೆಂಪು ಸಾಹಿತ್ಯ ಪೂರ್ಣವಾಗಿ ನನ್ನ ಸಂಗ್ರಹದಲ್ಲಿ ಇದೆ. ನನ್ನ ಸ್ನೇಹಿತರ ಬಳಿಯೂ ಇದನ್ನೇ ಹೇಳುತ್ತಿರುತ್ತೇನೆ. ಇ- ಪುಸ್ತಕ ಎಂದರೆ ಗ್ಲೋಬಲ್ ಮಾರುಕಟ್ಟೆಗೆ ಪ್ರವೇಶಿಸಿದಂತೆ. ವಿಶ್ವದ ಯಾವುದೇ ಭಾಗದ ಕನ್ನಡಿಗ ಖರೀದಿಸಬಹುದು. ಪ್ಲೇ ಬುಕ್‌ನಲ್ಲಿ ಎ.ಆರ್ .ಕೃಷ್ಣಶಾಸ್ತ್ರಿಗಳ ವಚನ ಭಾರತ ಸೇರಿದಂತೆ ಅವರ ಬಹುತೇಕ ಕೃತಿಗಳನ್ನು ಉಚಿತ ಡೌನ್‌ಲೋಡ್ ಗೆ ಬಿಟ್ಟಿದ್ದಾರೆ. ಕುಮಾರವ್ಯಾಸ ಭಾರತವೂ ಲಭ್ಯವಿದೆ. ಹಿಂದೊಮ್ಮೆ ಪೆನ್ ಹಿಡಿಯದಿದ್ದರೆ ಬರಹ ಮುಂದೆ ಸಾಗುವುದಿಲ್ಲ ಎನ್ನುತ್ತಿದ್ದರು.ಈಗ ಮೊಬೈಲ್‌ನಲ್ಲಿ ಟೈಪಿಸಿ ಪುಸ್ತಕ ಪ್ರಕಟಿಸಿದವರೂ ಇದ್ದಾರೆ. ಮನಸ್ಥಿತಿ ಬದಲಾಗಬೇಕು ಅಷ್ಟೆ‘ ಎಂದು ಅಬ್ಬೂರ್ ಪ್ರಕಾಶ್ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಇನ್ನೊಮ್ಮೆ, ಪುಸ್ತಕಗಳನ್ನು ಕೊಡಬೇಕೆನಿಸಿದಾಗ ನನ್ನ ನೆನಪಾಗಲಿ ಎಂಬ ಶಾಪ ಕೊಡುವೆ. ನಾನೂ ಕೂಡಾ ನನ್ನ ನೂರಾರು ಪುಸ್ತಕಗಳನ್ನು ನಾನು ಓದಿದ ಶಾಲೆಗೆ ಕೊಟ್ಟಿದ್ದೇನೆ. ನೀವು ಹಾಗೆ ಕೊಡಬಹುದು (ಕೊಟ್ಟಿರಬಹುದು) ಎಂಬುದು ಉಚಿತ ಸಲಹೆ‘ ಕರಿಸ್ವಾಮಿ ಕೆಂಚಣ್ಣ ಅವರು ಈ ರೀತಿ ಕಾಮೆಂಟ್ ಮಾಡಿದ್ದಾರೆ.