Trekking Tips: ಮಳೆಗಾಲದ ಖುಷಿ ಅನುಭವಿಸಲು ಅನುಮತಿ ಇಲ್ಲದೇ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್‌ ಹೋಗಿ ಶಿಕ್ಷೆ ಎದುರಿಸೀರಿ ಜೋಕೆ
ಕನ್ನಡ ಸುದ್ದಿ  /  ಜೀವನಶೈಲಿ  /  Trekking Tips: ಮಳೆಗಾಲದ ಖುಷಿ ಅನುಭವಿಸಲು ಅನುಮತಿ ಇಲ್ಲದೇ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್‌ ಹೋಗಿ ಶಿಕ್ಷೆ ಎದುರಿಸೀರಿ ಜೋಕೆ

Trekking Tips: ಮಳೆಗಾಲದ ಖುಷಿ ಅನುಭವಿಸಲು ಅನುಮತಿ ಇಲ್ಲದೇ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್‌ ಹೋಗಿ ಶಿಕ್ಷೆ ಎದುರಿಸೀರಿ ಜೋಕೆ

Forest Trekking ಮಳೆಗಾಲ ಬಂತೆಂದರೆ ಮಳೆಯ ಖುಷಿ ಅನುಭವಿಸಲು ಟ್ರಕ್ಕಿಂಗ್‌ ಗೆ ಹೋಗುವವರು ಹೆಚ್ಚು. ಒಂದೆರಡು ದಿನ ಪರಿಸರದಲ್ಲಿ ಕಳೆದು ಬರುವ ಬಯಕೆ ಸಹಜ. ಆದರೆ ಹಾಗೆ ಹೋಗುವ ಅವಸರದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ, ಉಳಿಯುವ ತಾಣಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳುವುದನ್ನು ಮರೆಯದಿರಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗುತ್ತದೆ. ನಿಮ್ಮ ತಯಾರಿ ಹೀಗರಲಿ.

ಅರಣ್ಯ ಇಲಾಖೆ ಕರ್ನಾಟಕದಲ್ಲಿ ಟ್ರಕ್ಕಿಂಗ್‌ಗೆ ಅನುಮತಿ ನೀಡುತ್ತಿದ್ದು,. ನಿಯಮಾವಳಿ ಪಾಲಿಸಲು ಸೂಚಿಸಿದೆ.
ಅರಣ್ಯ ಇಲಾಖೆ ಕರ್ನಾಟಕದಲ್ಲಿ ಟ್ರಕ್ಕಿಂಗ್‌ಗೆ ಅನುಮತಿ ನೀಡುತ್ತಿದ್ದು,. ನಿಯಮಾವಳಿ ಪಾಲಿಸಲು ಸೂಚಿಸಿದೆ.

ಬೆಂಗಳೂರು: ಇದು ಮಳೆಗಾಲದ ಸಮಯ. ಹೇಳಿಕೇಳಿ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ವಾತಾವರಣ. ಕರ್ನಾಟಕದ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಮೈಮನಗಳನ್ನು ಪುಳಕಗೊಳಿಸುವ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ತಾಣಗಳಿವೆ. ಹಾಗೆಂದು ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೇ ಟ್ರಕ್ಕಿಂಗ್‌ ಹೋಗಿ ಕಷ್ಟಕ್ಕೆ ಸಿಲುಕೀರಿ ಜೋಕೆ. ಟ್ರಕ್ಕಿಂಗ್‌ಗೆ ಹೋಗುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೂ ಹೌದು.

ಎರಡು ದಿನದ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ ಮೂರಕಣ್ಣುಗುಡ್ಡ ಮೀಸಲು ಅರಣ್ಯದಲ್ಲಿ ಟ್ರಕ್ಕಿಂಗ್‌ಗೆ ಹೋದ ಹದಿನೈದು ಮಂದಿ ವಿರುದ್ದ ಪ್ರಕರಣ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದೊಂದೇ ಪ್ರಕರಣವಲ್ಲಿ ಅರಣ್ಯ ಪ್ರದೇಶ ಅಧಿಕವಾಗಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಹೀಗೆ ಸೂಕ್ತ ಅನುಮತಿ ಇಲ್ಲದೇ ಅಥವಾ ನಿಗದಿತ ಪ್ರದೇಶ ಬಿಟ್ಟು ಅರಣ್ಯದೊಳಗೆ ಪ್ರವೇಶಿಸಿ ಅಥವಾ ಸ್ವಂತ ವಾಹನಗಳನ್ನು ತೆಗೆದುಕೊಂಡು ಹೋಗಿ ತೊಂದರೆಗೆ ಸಿಲುಕಿರುವ ಪ್ರಕರಣಗಳು ಸಾಕಷ್ಟಿವೆ. ಅರಣ್ಯ ಇಲಾಖೆಯು ಪ್ರವಾಸ ಬರುವವರಿಗೆ ಮಾಹಿತಿ ನೀಡುತ್ತಲೇ ಇರುತ್ತದೆ. ಆದರೂ ಕೆಲವೊಮ್ಮೆ ಅತಿಯಾದ ಆಸಕ್ತಿ ತೋರಲು ಹೋಗಿ ತೊಂದರೆಗೆ ಒಳಗಾಗುತ್ತಿರುವುದೂ ನಡೆಯುತ್ತಿದೆ.

ಬೆಂಗಳೂರಿನಿಂದ ಸ್ವಂತ ವಾಹನದಲ್ಲಿ ಬಂದಿದ್ದ ಹದಿನೈದು ಜನರ ತಂಡ ಸಕಲೇಶಪುರದ ಮೂರಕಣ್ಣುಗುಡ್ಡದಲ್ಲಿ ಕಾಣಿಸಿಕೊಂಡಿದ್ದರು. ಕೂಡಲೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಾಹನ ಜಪ್ತಿ ಮಾಡಿತ್ತು. ಹದಿನೈದು ಮಂದಿ ವಿರುದ್ದವೂ ಕರ್ನಾಟಕ ಅರಣ್ಯ ಕಾಯಿದೆ 1963 ಹಾಗೂ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಸ್ವಂತ ವಾಹನ ತೆಗೆದುಕೊಂಡು ಹೋಗಲು ಅವಕಾಶವಿಲ್ಲ.ಇದರಿಂದ ಅರಣ್ಯ ಸಂಪತ್ತು ನಾಶವಾಗಲಿದೆ. ಪ್ರಾಣಿಗಳ ಜೀವ ಹಾನಿಗೂ ದಾರಿಯಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎನ್ನುತ್ತಾರೆ ಸಕಲೇಶಪುರ ವಲಯ ಅರಣ್ಯಾಧಿಕಾರಿ( ಆರ್‌ಎಫ್‌ಒ) ಎಸ್‌.ಎಲ್‌.ಶಿಲ್ಪ.

ರೆಸಾರ್ಟ್‌ಗಳ ಹಾವಳಿ

ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಾಮರಾಜನಗರ, ರಾಮನಗರ, ಮೈಸೂರು, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಸಿರು ಪ್ರದೇಶ ಯಥೇಚ್ಛವಾಗಿದೆ. ಅರಣ್ಯ ಪ್ರದೇಶವೂ ಚೆನ್ನಾಗಿರುವುದರಿಂದ ಇವು ಟ್ರಕ್ಕಿಂಗ್‌ಗೆ ಉತ್ತಮ ತಾಣಗಳೂ ಹೌದು. ಈ ಕಾರಣದಿಂದ ಇಲ್ಲಿ ಟ್ರಕ್ಕಿಂಗ್‌ಗೆ ಜನ ಹೋಗುವುದುಂಟು. ಇಂತಹ ಸ್ಥಳಗಳಲ್ಲಿ ಸಾಕಷ್ಟು ರೆಸಾರ್ಟ್‌ಗಳೂ ರೂಪುಗೊಂಡಿವೆ. ಪ್ರವಾಸಿಗರನ್ನು ಆಹ್ವಾನಿಸಿ ಟ್ರಕ್ಕಿಂಗ್‌ ಸಹಿತ ಇತರೆ ಪರಿಸರ ಸ್ನೇಹಿ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತವೆ. ಇಲ್ಲಿ ಅಕ್ರಮ ರೆಸಾರ್ಟ್‌ಗಳ ಸಂಖ್ಯೆಯೂ ಅಧಿಕವಾಗಿದ್ದು, ಕೆಲವೊಮ್ಮೆಅನುಮತಿ ಇಲ್ಲದೇ ಟ್ರಕ್ಕಿಂಗ್‌ ಚಟುವಟಿಕೆ ನಡೆಸಿ ಪ್ರವಾಸಿಗರು ತೊಂದರೆಗೆ ಸಿಲುಕಿದ ಉದಾಹರಣೆಗಳೂ ಇವೆ. ಈ ವೇಳೆ ಪ್ರವಾಸಕ್ಕೆ ಬರುವ ಮುನ್ನ ರೆಸಾರ್ಟ್‌ನ ಕುರಿತಾಗಿ ಹಾಗೂ ಅವರು ಆಯೋಜಿಸುವ ಚಟುವಟಿಕೆಗಳಿಗೆ ಪೂರ್ವಾನುಮತಿ ಇದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಂಡು ಪ್ರವಾಸಿಗರು ಬರುವುದು ಸೂಕ್ತ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆ.

ಈಗಾಗಲೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಕಡೆ ಅಕ್ರಮವಾಗಿ ರೆಸಾರ್ಟ್‌ ಆರಂಭಿಸಿರುವವರ ವಿರುದ್ದ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇವೆ. ಕೆಲವೊಂದು ಕ್ರಮ ಆಗಿದ್ದರೂ ನಿಯಂತ್ರಣ ಹೇರಲು ಆಗಿಲ್ಲ. ಸರ್ಕಾರದ ಇಲಾಖೆಗಳೇ ಅನುಮತಿ ನೀಡುವಾಗ ಇದನ್ನು ತಡೆಯುವುದು ಕಷ್ಟವೇ ಎಂಬುದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಬೇಸರದ ನುಡಿ.

ಟ್ರಕ್ಕಿಂಗ್‌ಗೆ ಇಲಾಖೆ ಅನುಮತಿ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯೇ ಟ್ರಕ್ಕಿಂಗ್‌ಗೆ ಹಲವಾರು ಮಾರ್ಗಗಳನ್ನು ರೂಪಿಸಿದೆ. ಇದಕ್ಕಾಗಿ ಆಯಾ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಇಂತಿಷ್ಟು ಮಾರ್ಗ ಶುಲ್ಕವನ್ನೂ ಪಾವತಿಸಬೇಕು. ನಿಗದಿತ ಮಾರ್ಗಗಳನ್ನು ರೂಪಿಸಲಾಗಿದ್ದು, ಅದರಂತೆಯೇ ಟ್ರಕ್ಕಿಂಗ್‌ಗೆ ಹೋಗಬೇಕು. ಮುಂಚಿತವಾಗಿಯೇ ಈ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ನಂತರ ಟ್ರಕ್ಕಿಂಗ್‌ ಸಹಿತ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಆಗಮಿಸಬೇಕು ಎನ್ನುವ ಸ್ಪಷ್ಟ ಸೂಚನೆಗಳನ್ನು ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲೂ ನೀಡಲಾಗಿದೆ. ಆಯಾ ಜಿಲ್ಲೆಗಳ ಅರಣ್ಯ ಇಲಾಖೆ ಕಚೇರಿಗಳಲ್ಲೂ ಈ ಮಾಹಿತಿ ಒದಗಿಸಲಾಗಿದೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಟ್ರಕ್ಕಿಂಗ್‌ ಮಾರ್ಗಗಳನ್ನು ಗುರುತಿಸಿ ಅನುಮತಿ ನೀಡಲಾಗುತ್ತಿದೆ. ಬಹಳಷ್ಟು ಮಂದಿ ಸರಿಯಾದ ಮಾರ್ಗಗಳನ್ನೇ ಅನುಸರಿಸಿ ಟ್ರಕ್ಕಿಂಗ್‌ ಮುಗಿಸಿಕೊಂಡು ಹೋಗುತ್ತಾರೆ. ಕೆಲವರು ಸೂಕ್ತ ಮಾಹಿತಿ ಕೊರತೆ, ಗೊತ್ತಿದ್ದರೂ ಏನಾಗುತ್ತದೋ ನೋಡೋಣ ಎಂದು ಹುಚ್ಚು ಸಾಹಸಕ್ಕೆ ಇಳಿದು ತೊಂದರೆಗೆ ಸಿಲುಕುತ್ತಾರೆ. ಈ ರೀತಿ ದಂಡ ಪ್ರಯೋಗಕ್ಕೆ ಒಳಗಾದ, ಶಿಕ್ಷೆಗೆ ಗುರಿಯಾದ ಹಲವಾರು ಪ್ರಕರಣಗಳು ಕರ್ನಾಟಕದಲ್ಲಿ ನಡೆದಿವೆ.

ಶಿಕ್ಷೆ ಏನಾಗಬಹುದು

ಅರಣ್ಯ ಇಲಾಖೆ ಅನುಮತಿ ಪಡೆಯದೇ ಅರಣ್ಯ ಪ್ರದೇಶಗಳ ಒಳ ಪ್ರವೇಶಕ್ಕೆ ಅವಕಾಶವೇ ಇಲ್ಲ. ಅದರಲ್ಲೂ ಮೀಸಲು ಅಥವಾ ವನ್ಯಜೀವಿ ವಿಭಾಗಗಳಲ್ಲಿ ಒಳಪ್ರವೇಶಿಸಲು ಅವಕಾಶವೇ ಇಲ್ಲ. ಪೂರ್ವಾನುಮತಿ ಇದ್ದರೆ ಮಾತ್ರ ನಿಗದಿತ ಪ್ರದೇಶಗಳಲ್ಲಿ ಹೋಗಲು ಅವಕಾಶವಿದೆ. ಅದರಲ್ಲೂ ಟ್ರಕ್ಕಿಂಗ್‌ ಅಥವಾ ಸಫಾರಿ ಮಾರ್ಗಗಳನ್ನು ರೂಪಿಸಿದ್ದು ಅಲ್ಲಿಯೇ ಹೋಗಬೇಕು. ಅದನ್ನು ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ. ಇನ್ನು ಸಫಾರಿಗೂ ಅರಣ್ಯ ಇಲಾಖೆ ವಾಹನ ಬಿಟ್ಟರೆ ಬೇರೆ ವಾಹನ ಪ್ರವೇಶಕ್ಕೆ ಅವಕಾಶವೂ ಇಲ್ಲ.

ಮೀಸಲು ಅರಣ್ಯದಲ್ಲಾದರೆ ದಂಡ ವಿಧಿಸಿ ಎಚ್ಚರಿಕೆ ನೀಡಬಹುದು. ಅದೇ ರಾಷ್ಟ್ರೀಯ ಉದ್ಯಾನವನ ಅಥವಾ ಹುಲಿ ಯೋಜನೆ ಪ್ರದೇಶದಲ್ಲಿ ಹಾಗೆ ಹೋದರೆ ಶಿಕ್ಷೆ ಅನುಭವಿಸುವ ಸನ್ನಿವೇಶವೂ ಎದುರಾಗಬಹುದು.

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಒಳ ಹೋಗಿದ್ದರೆ ಅರಣ್ಯ ಕಾಯಿದ ಹಾಗೂ ಅರಣ್ಯ ಸಂರಕ್ಷಣಾ ಕಾಯಿದೆ ಅಡಿ ಕನಿಷ್ಠ ಒಂದು ಸಾವಿರ ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ. ಅರಣ್ಯ ಪ್ರವೇಶಿಸುವವರ ಉದ್ದೇಶ, ನಡವಳಿಕೆ, ತಪ್ಪೊಪ್ಪಿಗೆ ಪತ್ರ ನೀಡಿದರೆ ದಂಡದಲ್ಲಿಯೇ ಮುಗಿಯಲಿದೆ. ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಮುಂದೆ ಹೀಗೆ ಮಾಡದಂತೆ ಸೂಚನೆ ನೀಡಲಾಗುತ್ತದೆ. ಹಿಂದೆ ಎಚ್ಚರಿಕೆ ನೀಡಿದ ನಂತರವೂ ಪದೇ ಪದೇ ತಪ್ಪು ಮಾಡಿದರೆ ಮೂರರಿಂದ ಆರು ತಿಂಗಳವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಎ.ವಿ.ಸತೀಶ್‌.

ಅದೇ ವನ್ಯಜೀವಿ ವಿಭಾಗಗಳಲ್ಲಿ ಒಳ ಪ್ರವೇಶಿಸಿದರೆ ತಕ್ಷಣವೇ ಬಂಧಿಸಲಾಗುತ್ತದೆ. ಅವರಿಗೆ ಜಾಮೀನು ಸಿಗುವ ಸಾಧ್ಯತೆಯೂ ಕಡಿಮೆ. ಅವರಿಗೆ ಶಿಕ್ಷೆ ಪ್ರಮಾಣವೂ ಅಧಿಕ. ಬೇಟೆಯಾಡಲು ಬಂದ ಅಥವಾ ವನ್ಯಜೀವಿಗಳಿಗೆ ತೊಂದರೆ ನೀಡುವ ಸನ್ನಿವೇಶ ಇದ್ದರಂತೂ ಶಿಕ್ಷೆ ಪ್ರಮಾಣ ಮೂರು ವರ್ಷಕ್ಕೂ ಅಧಿಕವಾಗಲಿದೆ . ದಂಡದ ಪ್ರಮಾಣವೂ ಹೆಚ್ಚಲಿದೆ ಎನ್ನುವುದು ಅವರ ವಿವರಣೆ.‍

Whats_app_banner