School Trip: ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ 5 ಅಂಶಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  School Trip: ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ 5 ಅಂಶಗಳಿವು

School Trip: ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ 5 ಅಂಶಗಳಿವು

School Trip: ಶಾಲಾ ಪ್ರವಾಸ ಸಮಯ ಇದು. ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಹಾಗಾದರೆ ಶಾಲಾ ಮಕ್ಕಳನ್ನು ಬೀಚ್‌ಗೆ ಕರೆದೊಯ್ಯುವ ಶಿಕ್ಷಕರು ಮತ್ತು ಪ್ರವಾಸಕ್ಕೆ ಹೋಗುವ ಮಕ್ಕಳು ಹಾಗೂ ಅವರು ಪಾಲಕರು ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ.

ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ ಅಂಶಗಳ ವಿವರ ಇಲ್ಲಿದೆ. (ಮೆಟಾ ಎಐ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ ಅಂಶಗಳ ವಿವರ ಇಲ್ಲಿದೆ. (ಮೆಟಾ ಎಐ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ)

School Trip: ಕರ್ನಾಟಕದಲ್ಲಿ ಸದ್ಯ ಶಾಲಾ ಪ್ರವಾಸದ ಸಮಯ. ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ದು, ಪಠ್ಯಕ್ಕೆ ಸಂಬಂಧಿಸಿದ ಸ್ಥಳಗಳನ್ನು, ಐತಿಹಾಸಿಕ ಘಟನೆಗಳನ್ನು ನೆನಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಕ್ಕಳಿಗೆ ಸ್ವಲ್ಪ ಮನರಂಜನೆ, ಖುಷಿ ಸಿಗಲಿ ಎಂದು ಕೆಲವು ಶಾಲೆಗಳವರು ಬೀಚ್‌ಗೂ ಕರೆದೊಯ್ಯುತ್ತಾರೆ. ಇದೇ ರೀತಿ ಕೋಲಾರ ಜಿಲ್ಲೆ ಮುಳಬಾಗಿಲು ಶಾಲೆಯ ಮಕ್ಕಳನ್ನು ಮುರುಡೇಶ್ವರ ಬೀಚ್‌ ಕರೆದೊಯ್ದ ವೇಳೆ, ನಾಲ್ಕು ಬಾಲಕಿಯರು ಸಮುದ್ರ ಪಾಲಾದ ಕಳವಳಕಾರಿ ಘಟನೆ ಗಮನಸೆಳೆದಿದೆ. 7 ಬಾಲಕಿಯರು ಸಮುದ್ರಕ್ಕೆ ಇಳಿದಿದ್ದು, ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಈ ಪೈಕಿ ಮೂವರನ್ನು ರಕ್ಷಿಸಲಾಗಿದೆ. ಇನ್ನು ನಾಲ್ವರು ಸಿಕ್ಕಿರಲಿಲ್ಲ. ಈ ಪೈಕಿ ಒಬ್ಬ ಬಾಲಕಿಯ ಮೃತದೇಹ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ನಡೆದಿದೆ ಎಂದು ವರದಿಯಾಗಿತ್ತು.

ಮುರುಡೇಶ್ವರದಲ್ಲಿ ಏನು ನಡೆಯಿತು

ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು, 6 ಶಿಕ್ಷಕರು ಕೋಲಾರದ ಮುಳಬಾಗಿಲಿನಿಂದ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಅದು ಈಗ ದುರಂತದಲ್ಲಿ ಮುಕ್ತಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಮುರುಡೇಶ್ವರ ಕಡಲ ತೀರದಲ್ಲಿ ಮಂಗಳವಾರ (ಡಿಸೆಂಬರ್ 10) ಸಂಜೆ ಆಟವಾಡುತ್ತಿದ್ದ ನಾಲ್ವರು ಶಾಲಾ ಬಾಲಕಿಯರು ನೀರುಪಾಲಾಗಿದ್ದಾರೆ. ಒಬ್ಬಳ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರಿದಿದೆ. ಏಳು ಬಾಲಕಿಯರು ಸಮುದ್ರ ನೀರಿಗೆ ಇಳಿದಿದ್ದರು. ದೊಡ್ಡ ಗಾತ್ರದ ಅಲೆ ಅಪ್ಪಳಿಸಿದಾಗ ಈ ಏಳು ಬಾಲಕಿಯರು ಬಿದ್ದುಬಿಟ್ಟಿದ್ದಾರೆ. ಅಲೆಗಳು ಹಿಮ್ಮೆಟ್ಟುವಾಗ ಅದರ ಸೆಳೆತಕ್ಕೆ ಸಿಲುಕಿ ಅವರೂ ಕೊಚ್ಚಿಕೊಂಡು ಹೋಗಿದ್ದರು. ಈ ಪೈಕಿ ಮೂರು ಜನ ವಿದ್ಯಾರ್ಥಿನಿಯರಾದ ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲಾ ಪ್ರವಾಸದ ವೇಳೆ ಕಡಲ ತೀರಕ್ಕೆ ಹೋದಾಗ ಅನುಸರಿಸಲೇ ಬೇಕಾದ ಅಂಶಗಳು

ಶಾಲಾ ಪ್ರವಾಸ ಹೋಗುವಾಗ ಶಿಕ್ಷಕರು ಮತ್ತು ಮಕ್ಕಳು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಹಲವು. ಮಕ್ಕಳಿಗೆ ಅವೆಲ್ಲವನ್ನೂ ಮನದಟ್ಟು ಮಾಡಿಕೊಡುವ ಮಹತ್ವದ ಹೊಣೆಗಾರಿಕೆ ಶಿಕ್ಷಕ ಮೇಲಿದೆ. ಮಕ್ಕಳೂ ಅಷ್ಟೆ ಶಿಕ್ಷಕರು ರೂಪಿಸಿದ ಪ್ರವಾಸ ನಿಯಮಗಳ ಚೌಕಟ್ಟಿನೊಳಗೇ ಇರಬೇಕು. ಈ ಅಚ್ಚುಕಟ್ಟುತನ ಅಥವಾ ಅನುಸರಣೆಗಳು ಶಾಲಾ ಪ್ರವಾಸವನ್ನು ಸುಗಮಗೊಳಿಸುವುದಲ್ಲದೇ, ಒಳ್ಳೆಯ ನೆನಪುಗಳನ್ನು ಉಳಿಸಿಕೊಡುತ್ತವೆ. ಮುರುಡೇಶ್ವರ ಬೀಚ್‌ ದುರಂತದ ಬಳಿಕ, ಬೀಚ್‌ಗೆ ಪ್ರವಾಸ ಹೋಗುವ ಶಾಲಾ ಶಿಕ್ಷಕರು ಮತ್ತು ಮಕ್ಕಳ ತಂಡಗಳಿಗೆ ನೆನಪಿಸಲೇ ಬೇಕಾದ ಕೆಲವು ಅಂಶಗಳಿವೆ.

ಶಿಕ್ಷಕರು ಗಮನಿಸಬೇಕಾದ 5 ಅಂಶಗಳು

1) ಗುರುತು ಪರಿಚಯ ಇಲ್ಲದ ಊರಿಗೆ ಹೋಗುತ್ತಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಕಸ್ಮಾತ್ ಕರಾವಳಿ ಭಾಗದಲ್ಲಿ ವಿಶೇಷವಾಗಿ ನೀವು ಮಕ್ಕಳನ್ನು ಕರೆದೊಯ್ಯಬೇಕು ಎಂದು ಗುರುತಿಸಿಕೊಂಡಿರುವ ಬೀಚ್ ಸಮೀಪ ಗೆಳೆಯರಿದ್ದರೆ ಅಥವಾ ಅವರ ಪರಿಚಿತರಿದ್ದರೆ ಅವರನ್ನು ಮೊದಲೇ ಸಂಪರ್ಕಿಸಿಕೊಳ್ಳಿ.

2) ಬೀಚ್‌ನ ಯಾವ ಪ್ರದೇಶದಲ್ಲಿ ಅಲೆಗಳ ಸೆಳೆತ ಕಡಿಮೆ, ಅಪಾಯ ಇಲ್ಲ ಎಂಬುದನ್ನು ಮೊದಲೇ ತಿಳಿದುಕೊಂಡು ಖಚಿತಪಡಿಸಿಕೊಳ್ಳಿ. ಸಾಧ್ಯವಾದರೆ ಪ್ರವಾಸಕ್ಕೆ ಒಂದು ವಾರ ಮೊದಲೇ ಮಕ್ಕಳನ್ನು ಕರೆದೊಯ್ಯಬಯಸುವ ಪ್ರದೇಶಕ್ಕೆ ಒಮ್ಮೆ ಭೇಟಿ ಕೊಡಿ. ಸರಿಯಾದ ಪ್ರವಾಸ ಯೋಜನೆ ರೂಪಿಸಿಕೊಳ್ಳಿ

3) ಸ್ಥಳೀಯ ಪರಿಚಿತರ ನೆರವು ಪಡೆದುಕೊಂಡು ಬೀಚ್‌ ಪ್ರವಾಸ ಸುಗಮಗೊಳಿಸಿ. ಬೀಚ್‌ಗೆ ಮಕ್ಕಳನ್ನು ಕರೆದೊಯ್ಯುವ ಮೊದಲು ವಿದ್ಯಾರ್ಥಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು. ಮುನ್ನೆಚ್ಚರಿಕೆಗಳನ್ನು ಕೊಡಬೇಕು.

4) ಮಕ್ಕಳ ಸಂಖ್ಯೆ ಮತ್ತು ಶಿಕ್ಷಕರ ಸಂಖ್ಯೆ ಗಮನಿಸಿಕೊಂಡು, ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಬೇಕು. ಒಂದೊಂದು ಗುಂಪನ್ನು ಒಬ್ಬೊಬ್ಬ ಶಿಕ್ಷಕರು ಗಮನಿಸುವುದು ಸಾಧ್ಯವಾದರೆ ತುಂಬಾ ಒಳಿತು. ಸ್ಥಳೀಯ ಗೆಳೆಯರು, ಪರಿಚಿತರು ಇದ್ದರೆ ಅವರ ನೆರವು, ಬೆಂಗಲ ಸದಾ ಇರುತ್ತದೆ. ಹೀಗಾಗಿ ಈ ಬಗ್ಗೆ ಗಮನಹರಿಸಬೇಕು.

5) ಸಮುದ್ರಕ್ಕೆ ಇಳಿಯಬಾರದ ಜಾಗಕ್ಕೆ ಮಕ್ಕಳನ್ನು ಕರೆದೊಯ್ಯುವ ರಿಸ್ಕ್ ತೆಗೆದುಕೊಳ್ಳಲೇ ಬೇಡಿ. ಬೀಚ್‌ನಲ್ಲಿ ಬೋಟಿಂಗ್‌, ಪ್ಯಾರಾ ಸೈಲಿಂಗ್‌ ಮುಂತಾದ ಸಾಹಸ ಕ್ರೀಡೆಗಳಿದ್ದರೆ ಮಕ್ಕಳನ್ನು ಅದಕ್ಕೆ ಬಿಡುವ ಮೊದಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಕಡೆಗೆ ಗಮನಕೊಡಿ. ಗೊತ್ತಾಗದೇ ಇದ್ದರೆ ಪರಿಣತರ ನೆರವು ಪಡೆದುಕೊಳ್ಳಿ. ಬೀಚ್‌ಗೆ ಬಿಡುವಾಗ ಮತ್ತು ವಾಪಸ್ ಹೋಗಬೇಕಾದರೆ ಮಕ್ಕಳ ಸಂಖ್ಯೆ ಗಮನಿಸಿಕೊಳ್ಳಿ.

ಮಕ್ಕಳು ಗಮನಿಸಬೇಕಾದ ಅಂಶಗಳು/ ಪಾಲಕರು ಮಕ್ಕಳಿಗೆ ತಿಳಿಸಬೇಕಾದ ಅಂಶಗಳು

1) ಶಾಲಾ ಪ್ರವಾಸ ಹೋಗುವ ಮಕ್ಕಳು ಜತೆಗಿರುವ ಶಿಕ್ಷಕರ ಮಾತನ್ನು ಆಲಿಸಬೇಕು. ಅವರ ಕಣ್ತಪ್ಪಿಸಿ ಯಾವುದೇ ಸಾಹಸಕ್ಕೆ ಮುಂದಾಗಬಾರದು. ವಿಶೇಷವಾಗಿ ಸಮುದ್ರ, ಬೀಚ್‌ ಬದಿಗೆ ಹೋದಾಗ ನೀರಿಗಿಳಿಯುವ ದುಸ್ಸಾಹಸ ಮಾಡಬಾರದು.

2) ಸಮುದ್ರ, ಬೀಚ್‌ನ ಅಲೆಗಳನ್ನು ನೋಡುವಾಗ ಮನಸ್ಸು ಹುಚ್ಚೇಳುವುದು, ಆ ನೀರಲ್ಲಿ ಆಡಬೇಕು ಎಂದು ಬಯಸುವುದು ಸಹಜ. ಆದರೆ ಆ ಅಲೆಗಳ ಸೆಳೆತದ ಶಕ್ತಿ ಏನು ಎಂಬುದರ ಅರಿವು ಮಕ್ಕಳಿಗೆ ಇರುವುದಿಲ್ಲ. ಜತೆಗೆ ಹೋದ ಶಿಕ್ಷಕರಿಗೂ ಇರುವುದಿಲ್ಲ. ಪರಿಚಿತವಲ್ಲದ ಸ್ಥಳದಲ್ಲಿ ಶಿಸ್ತು ಪಾಲನೆ ಮುಖ್ಯ ಎಂಬುದು ಮಕ್ಕಳಿಗೂ ತಿಳಿದಿರಬೇಕು. ಇದನ್ನು ಪಾಲಕರು ಮನವರಿಕೆ ಮಾಡಿಕೊಡಬೇಕು.

3) ಶಿಸ್ತುಪಾಲನೆ ಮಾಡುವಂತೆ ನೀರಿಗೆ ಇಳಿಯದಂತೆ ಅಥವಾ ಸಮುದ್ರ ನೀರಿಗೆ ಇಳಿಯಲು ಅನುಮತಿ ಇದ್ದರೂ ತುಂಬ ಆಳಕ್ಕೆ ಹೋಗದಂತೆ ಎಚ್ಚರ ವಹಿಸಬೇಕಾದ್ದು ಅಗತ್ಯ. ಪಾಲಕರು ಈ ವಿಚಾರದಲ್ಲಿ ಮಕ್ಕಳಿಗೆ ಮೊದಲೇ ತಿಳಿವಳಿಕೆ ನೀಡಿರಬೇಕು. ಶಿಕ್ಷಕರ ಮಾತು ಆಲಿಸುವಂತೆ ತಾಕೀತು ಮಾಡಿಯೇ ಪ್ರವಾಸಕ್ಕೆ ಕಳುಹಿಸಬೇಕು.

4) ನದಿ, ತೊರೆಗಳಲ್ಲಿ ಈಜಿ ಅಭ್ಯಾಸವಿದೆ. ಹಾಗಾಗಿ ಸಮುದ್ರದ ಅಲೆಗಳ ನಡುವೆ ಈಜಾಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ ತೋರಿಸಲು ದುಸ್ಸಾಹಸ ಮಾಡಬೇಡಿ. ಸಮುದ್ರದಲ್ಲಿ ಈಜಾಡುವುದು ನದಿ, ತೊರೆ, ಪುಷ್ಕರಣಿಗಳಲ್ಲಿ ಈಜಾಡಿದಂತೆ ಅಲ್ಲ ಎಂಬುದನ್ನು ನೆನಪಿನಲ್ಲಿಡಿ.

5) ಪ್ರವಾಸದ ವೇಳೆ ಮಕ್ಕಳ ಗುಂಪು ಇದ್ದಾಗ ಗುಂಪು ಬಿಟ್ಟು ನೀರಿಗೆ ಇಳಿಯಬೇಡಿ. ಶಿಕ್ಷಕರನ್ನು ಎಚ್ಚರಿಸಲು ಜತೆಗೆ ಇತರೆ ಮಕ್ಕಳು ಇರುತ್ತಾರೆ. ಒಂಟಿಯಾಗಿ ಇಳಿದರೆ ನಿಮ್ಮ ಇರುವಿಕೆ ಉಳಿದವರಿಗೆ ಮರೆತುಹೋಗಬಹುದು ಎಂಬುದನ್ನು ಮರೆಯಬೇಡಿ. ಈ ವಿಚಾರದಲ್ಲಿ ಮಕ್ಕಳನ್ನು ಜಾಗೃತರನ್ನಾಗಿಸುವ ಕೆಲಸ ಪಾಲಕರು ಮೊದಲೇ ಮಾಡಬೇಕು.

Whats_app_banner