ಮಕ್ಕಳನ್ನ ಶಾಲೆಗೆ ಕರೆತರಲು ಹೊಟ್ಟೆ ತುಂಬಿಸಿ, ಬಟ್ಟೆ ನೀಡಿದರೆ ಸಾಲದು; ರಾಜಕೀಯ ಪ್ರತಿಷ್ಠೆಗೆ ಬಡವಾಗದಿರಲಿ ಶಿಕ್ಷಣ; ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಬರಹ: ಸರ್ಕಾರ ಯಾವುದೇ ಪಕ್ಷದ್ದಾಗಿರಲಿ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಲು ರಾಜಕಾರಣಿಗಳು ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡದಿರಲಿ, ಹಾಗಾಗಲು ಶಿಕ್ಷಕರು ಶಿಕ್ಷಕರಾಗಿಯೇ ಸಾಗಲಿ. ಮಕ್ಕಳನ್ನು ಶಾಲೆಗೆ ಕರೆತರಲು ಕೇವಲ ಹೊಟ್ಟೆಗೆ ತುಂಬಿಸಿ, ಬಟ್ಟೆ ನೀಡಿದರೆ ಸಾಲದು... ಅವರ ತಲೆ ತುಂಬುವ ಮಾಹಿತಿಯೂ ಬಲವಾಗಿರಬೇಕು.
Nandini Teacher Column: ಸಮಯ ಅದೆಷ್ಟು ವೇಗವಾಗಿ ಸಾಗುತ್ತದೆ! 2024ರ ಆಗಮನವನ್ನು ಇತ್ತೀಚೆಗಷ್ಟೇ ಆಚರಿಸಿದ್ದ ನೆನಪು. ಅದಾಗಲೇ 2025ಕ್ಕೆ ಕಾಲಿಟ್ಟಿದ್ದೇವೆ. 2024ರಲ್ಲಿ ದೇಶ –ವಿದೇಶಗಳ ವಿದ್ಯಮಾನಗಳು ಮತ್ತು ಮಹತ್ತರ ಬದಲಾವಣೆಗಳ ನೆನಪು ಮಾಡಿಕೊಳ್ಳುವ ಹೊತ್ತಿನಲ್ಲಿಯೇ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಅದು ನಿoತ ನೀರಾಗಿದೆ ಎಂದೆನ್ನಿಸುತ್ತದೆ. ಹಾಗೆನ್ನಿಸಲು ಕಾರಣಗಳೂ ಇವೆ.
2023ರ ಮೇ ತಿಂಗಳಲ್ಲಿ ಆಡಳಿತಕ್ಕೆ ಬಂದು, ಇಂದು ರಾಜ್ಯವನ್ನಾಳುತ್ತಿರುವ ಸರ್ಕಾರ, ತನ್ನ ಹಿಂದಿನ ಸರ್ಕಾರ ಅಳವಡಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದು ಮಾಡುವ ನಿರ್ಣಯ ತೆಗೆದುಕೊಂಡಿತಷ್ಟೇ. ಮಿಕ್ಕೆಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರದಲ್ಲೂ ನಡೆಸಿದ ರಾಜಕೀಯದ ಜಿದ್ದಾಜಿದ್ದಿಯ ಕಾರಣ NEP 2020ಕ್ಕೆ ಪರ್ಯಾಯವಾಗಿ SEP ಅಳವಡಿಸಲು ಮುಂದಾಗಿದ್ದು, ಈ ಕುರಿತು ಸಮಿತಿಯೊಂದನ್ನು ರಚಿಸಿದ್ದು, ಆ ನಂತರದ ಪರ ವಿರೋಧದ ಪ್ರಯತ್ನಗಳು ಎಲ್ಲವೂ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ತಿಳಿದಿದೆ. ರಾಜ್ಯ ಸರ್ಕಾರ ರಚಿಸಿ, ಯೋಜಿಸಿದ SEP ಸಮಿತಿಯಲ್ಲಿ ತುಂಬು ಕ್ರಿಯಾಶೀಲರಾದ ಶಿಕ್ಷಣ ತಜ್ಞರು 2024ರಲ್ಲಿ ತಮ್ಮ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ ಈವರೆಗೂ ಈ ಸಮಿತಿಯು ವರದಿಯನ್ನು ಕುರಿತು ಎಲ್ಲಿಯೂ ಬಹಿರಂಗ ಪಡಿಸಿಲ್ಲ, ಸರ್ಕಾರವೂ ಮಾತನಾಡಿಲ್ಲ, ಅದಕ್ಕೆ ತಕ್ಕಂತಿರುವ ಶಿಕ್ಷಕರೂ ಈ ಬಗ್ಗೆ ಕೇಳಲು ಮರತೇ ಬಿಟ್ಟಿದ್ದಾರೆ.
ಹಿಮ್ಮುಖವಾಗಿ ಸಾಗುತ್ತಿದೆ ಶಿಕ್ಷಣ ಕ್ಷೇತ್ರ
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರದಲ್ಲಿ ಮಂತ್ರಿಗಳಾಗಿರುವ ರಾಜಕಾರಣಿಗಳು ನಡೆಸುವ ಸಂಸ್ಥೆಗಳೂ ಸೇರಿದಂತೆ) ಬಹು ಮಟ್ಟಿಗೆ ಕೇಂದ್ರ ಸರ್ಕಾರದ ಪಠ್ಯಕ್ರಮವನ್ನು ಅನುಸರಿಸುವದರಿಂದ ಅವರಿಗೆ SEP ಅಳವಡಿಕೆ ಕುರಿತು ಯಾವ ಕಾಳಜಿಯೂ ಇಲ್ಲ. ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಖಾಸಗಿ ಶಾಲೆಯ ಶಿಕ್ಷಕರು, ಪಾಲಕರು ಮತ್ತು ಮಕ್ಕಳು NEP ವಿರುದ್ಧದ ಸರ್ಕಾರದ ನಿಲುವಿನ ಬಗ್ಗೆ ತಮ್ಮ ದಿಟ್ಟ ಹೋರಾಟ ಮಾಡಿ, ಸಹಿ ಸoಗ್ರಹ ಮಾಡಿದರು. ಸರ್ಕಾರಿ ಶಿಕ್ಷಕರು ತಮಗೇನೂ ಸoಬಂಧಪಟ್ಟಿಲ್ಲವೆಂಬಂತೆ ಸುಮ್ಮನಾದರು. ಸರ್ಕಾರ ಹಾಗೂ ಶಿಕ್ಷಣದತ್ತ ನಮ್ಮ ದಿವ್ಯ ನಿರ್ಲಿಪ್ತತೆಯ ಕಾರಣ ಶಾಲೆಗಳಲ್ಲೀಗ ಅದಾಗಲೇ ಅಳವಡಿಸಿಕೊಂಡ NEP ಮಾದರಿಯನ್ನು ಮುಂದುವರೆಸಲಾಗದೆ, SEP ಮಾದರಿಯೂ ಲಭ್ಯವಾಗದೇ ಅತ೦ತ್ರ ಪರಿಸ್ಥಿತಿಯಲ್ಲಿ ಶಿಕ್ಷಣ ಪದ್ಧತಿ ಹಿಮ್ಮುಖವಾಗಿ ಸಾಗಿದೆ. ಈ ಹಿಮ್ಮುಖ ಚಲನೆ ಶಿಕ್ಷಣ ಕ್ಷೇತ್ರಕ್ಕೆ ಕೊರತೆಯೆಂದು ನಮಗೆ ಅನ್ನಿಸುತ್ತಿಲ್ಲವಾದರೆ ಅದಕ್ಕಿಂತ ದೊಡ್ಡ ಹೊರೆ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದಿಲ್ಲ.
ರಾಜಕೀಯ ಪ್ರೇರಿತ ವಿಚಾರಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತರುವುದೇಕೆ?
ಗಮನಿಸಿ: NEP -2020ಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ, ಇಂದಿನ ನೌಕರಿಯ ಅಗತ್ಯಗಳಿಗೆ ಸೂಕ್ತವಾಗುವಂತೆ ಶಿಕ್ಷಣದ ಪರಿಕಲ್ಪನೆಯಾಗಲಿ ಎಂಬ ನೀಲಿನಕ್ಷೆ ನೀಡಲಾಗಿದೆಯೇ ಹೊರತು ಈ ಪಠ್ಯಗಳನ್ನೇ ಅಳವಡಿಸಿ ಎoದೇನೂ ಹೇಳಿಲ್ಲ. NEP – 2020 ಸಲಹೆಯಂತೆ NCERTಯ ನೇತೃತ್ವದಡಿ ಸಿದ್ಧವಾದ NCF- 23ರ ಸಲಹೆಯನ್ನು ಇದೀಗ ದೇಶದ ವಿವಿಧೆಡೆಯ ಶಾಲೆಗಳು ಮತ್ತು CBSC ಬೋರ್ಡ್‌ಗಳು ಅಳವಡಿಸಿಕೊಳ್ಳುತ್ತಿವೆ. 1 ರಿಂದ 4ನೇ ತರಗತಿ ಹಾಗೂ 6 ರಿoದ 7 ತರಗತಿಗೆ ಸಂಬಂಧಪಟ್ಟ ಪಠ್ಯಗಳು ಈಗಾಗಲೇ ಸಿದ್ಧವಿದ್ದು ಅವು ಶಾಲೆಗಳಲ್ಲಿ ಈಗಾಗಲೇ ಅಳವಡಿಕೆಯಾಗಿದೆ. ಕರ್ನಾಟಕದಲ್ಲಿ CBSC ಶಾಲೆಗಳಲ್ಲಿ ಹಾಗೂ ಸರ್ಕಾರವೇ ಸ್ಥಾಪಿಸಿರುವ ಆದರ್ಶ ಶಾಲೆಗಳಲ್ಲಿ NCERT ಸೂಚಿಸಿರುವ ಪಠ್ಯಗಳ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಇನ್ನು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು NCF-2023 ಆಧಾರಿತ ಪಠ್ಯವಿದ್ದು, ಮಿಕ್ಕೆಲ್ಲ ವಿಷಯಗಳಲ್ಲಿ NCF 2005 ಆಧಾರವಾಗಿಯೇ ಪಠ್ಯಗಳನ್ನು ಅಳವಡಿಸಲಾಗಿದೆ. ಈಗ ಹೇಳಿ ನಮಗಿಲ್ಲಿ ಸರ್ಕಾರ ತನ್ನ ಅಧೀನದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳೊoದಿಗೆ ರಾಜಕೀಯದ ಆಟ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೇ? ಶಿಕ್ಷಣವನ್ನು ನಮ್ಮ ಸಂವಿಧಾನದಲ್ಲಿ ರಾಜ್ಯಗಳ ಅಧೀನಕ್ಕೇ ನೀಡಲಾಗಿದೆ. ಹೀಗಾಗಿ ನಿರ್ಣಯ ರಾಜ್ಯ ಸರ್ಕಾರದ್ದೇ. ಆದರೆ ಉಳಿದೆಲ್ಲ ವಿಷಯಗಳಿಗೆ 2005ರ NCF ಮಾದರಿಯನ್ನು ಆಧಾರವಾಗಿಟ್ಟುಕೊಂಡಿರುವುದು ಏಕೆ? ಸಮಾಜ ವಿಜ್ಞಾನ ಮತ್ತು ಭಾಷಾ ಪಠ್ಯಗಳಲ್ಲಿ ಮಕ್ಕಳನ್ನು ವಿಭಜಿಸುವ, ರಾಜಕೀಯ ಪ್ರೇರಿತ ವಿಚಾರಗಳನ್ನು ಆರಂಭದ ಹಂತದಿಂದಲೇ ಬಿತ್ತುವ ಭಾವನೆಯ ಪಠ್ಯಗಳನ್ನು ಸೇರಿಸುವ ಪ್ರಯತ್ನವೇಕೆ ನಮಗೆ ಸ್ಪಷ್ಟತೆ ಬೇಕಿದೆ.
ಕಲಿಕೆಗೆ ಬೇಕಾದ ಸಮಕಾಲಿಕ ಪ್ರಯತ್ನದ ಕೊರತೆಯ ಜೊತೆಗೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕವಾಗುವತ್ತ ವಿಳಂಬವೂ ಪ್ರಸ್ತುತ ವರ್ಷದಲ್ಲಿ ಮುಂದುವರೆದಿದೆ. ಹಾಲಿ ಶಿಕ್ಷಕರಿಗೆ ಆಡಳಿತಾತ್ಮಕ ಜವಾಬ್ದಾರಿಯೂ ಇರುವುದರಿಂದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ ಎಂದು ಮಹಾಲೇಖಾಪಾಲರ (CAG) 2024ನೇ ಸಾಲಿನ ವರದಿ ಹೇಳುತ್ತದೆ. ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವಲ್ಲಿ ಅದರಲ್ಲೂ ಪ್ರಾಥಮಿಕ ಶಾಲೆಗಳು ವಿಫಲವಾಗುತ್ತಿವೆ ಎಂದು ವರದಿ ಹೇಳುತ್ತದೆ. ಗ್ರಾಮೀಣ ವಿಭಾಗದಲ್ಲಿ ಏಕ ಶಿಕ್ಷಕ ಶಾಲೆಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿರುವ ಕಾರಣ ಇನ್ನಿತರ ಸಾಮಾಜಿಕ ಕಾರಣಗಳ ಜೊತೆಗೆ ಮಕ್ಕಳು ಶಾಲೆಯಿಂದ ವಿಮುಖರಾಗಲು ಕಾರಣವಾಗಬಹುದು ಎಂದೂ ಹೇಳಲಾಗುತ್ತಿದೆ.
‘ವೆಬ್ ಕಾಸ್ಟಿಂಗ್‘
ಶಿಕ್ಷಣ ಕ್ಷೇತ್ರದಲ್ಲಿ ನಡೆದ ಇನ್ನಷ್ಟು ಘಟನೆಗಳಲ್ಲಿ ಈ ವರ್ಷ ನಮಗೆ ಕಸಿವಿಸಿ -ಕಳವಳ ತಂದ ಮತ್ತೊಂದು ವಿಷಯವೆಂದರೆ ಹತ್ತನೇ ತರಗತಿಯ ಮಕ್ಕಳಿಗೆ ನೀಡಿದ ಶೇ 31ರ ಕೃಪಾಂಕ. ‘ವೆಬ್ ಕಾಸ್ಟಿಂಗ್‘ನ ಸುಪರ್ದಿಯಲ್ಲಿ ನಡೆದ ಹತ್ತನೇ ತರಗತಿಯ ಮಕ್ಕಳು ನಿರೀಕ್ಷಿತ ಫಲಿತಾಂಶ ನೀಡದ ಕಾರಣ ನೀಡಿದ ಕೃಪಾಂಕದ ಮಕ್ಕಳಲ್ಲಿ ನಾವು ಓದಿ ಕಷ್ಟ ಪಡಬೇಕೇಕೆ ಎ೦ಬ ಭಾವನೆಗೆ ನಾಂದಿ ಹಾಕಿದ್ದರೆ ಅಚ್ಚರಿಯೇನಿಲ್ಲ. ಸಾರ್ವಜನಿಕ ಪರೀಕ್ಷೆಗಳ ಗಂಭೀರತೆಯೇ ಮಾಯವಾಗಿ ಹೋಯ್ತಲ್ಲ! ಇನ್ನು ಉನ್ನತ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತ ಕುಳಿತರೆ ಈ ಲೇಖನ ಪುಸ್ತಕದ ಆಕಾರಕ್ಕೆ ಬಂದೀತೆಂಬ ಭಯ.
ಅರೆ, ನೀವು ಕೇವಲ ಕೊರತೆಗಳನ್ನೇ ಹೇಳುವುದೇಕೆ? ನಾವು ಶಾಲೆಯ ಪಠ್ಯಗಳನ್ನು ಬದಲಿಸಿದ್ದೇವೆ, ಪದವಿಯನ್ನು ಮತ್ತೆ ಮೂರು ವರ್ಷಗಳಿಗೆ ಮರಳಿ ತರುವುದಾಗಿ ಹೇಳಿದ್ದೇವೆ. ಈ ರೀತಿಯ ಕಾರ್ಯಗಳನ್ನೇ ನಾವು ಸಾಧನೆಯೆಂದು ಒಪ್ಪಬೇಕಾದರೆ, ರಾಜಕೀಯವನ್ನು ಶಿಕ್ಷಣ ಕ್ಷೇತ್ರಕ್ಕೆ ಬರಲು ದಾರಿ ಮಾಡಿಕೊಟ್ಟ ನಾವೆಲ್ಲರೂ ತಲೆ ತಗ್ಗಿಸಲೇಬೇಕು. ಕಾರಣ ರಾಜಕೀಯ ಪ್ರತಿಷ್ಠೆಯ ಜಂಜಾಟದಲ್ಲಿ ಬಡವಾಗಿದ್ದು ಶಿಕ್ಷಣ ಕ್ಷೇತ್ರ. ಅದರಲ್ಲೂ ಶಿಕ್ಷಣದಲ್ಲಿ ಅಳವಡಿಸಲಾಗಿದ್ದ ಸಂಶೋಧನೆಯೆಂಬ ವಿಭಾಗ.
ಸರ್ಕಾರ ಯಾವುದೇ ಪಕ್ಷದ್ದಾಗಿರಲಿ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಲು ರಾಜಕಾರಣಿಗಳು ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡದಿರಲಿ, ಹಾಗಾಗಲು ಶಿಕ್ಷಕರು ಶಿಕ್ಷಕರಾಗಿಯೇ ಸಾಗಲಿ. ಮಕ್ಕಳನ್ನು ಶಾಲೆಗೆ ಕರೆತರಲು ಕೇವಲ ಹೊಟ್ಟೆಗೆ ತುಂಬಿಸಿ, ಬಟ್ಟೆ ನೀಡಿದರೆ ಸಾಲದು... ಅವರ ತಲೆ ತುಂಬುವ ಮಾಹಿತಿಯೂ ಬಲವಾಗಿರಬೇಕು. ರಾಷ್ಟ್ರದ ಸದೃಢ ಪ್ರಜೆಗಳಾಗಿ ಅವರು ಬೆಳೆಯಲು ಶಿಕ್ಷಣ ಪೂರಕವಾಗಬೇಕು. ‘ನಾಮತೋ ಮಯೂರಶರ್ಮೇತಿ ಶ್ರುತ ಶೀಲ ಶೌಚಲಂಕೃತಃ‘ (ಮಯೂರಶರ್ಮನು ಶ್ರುತ ಶೀಲ ಶೌಚಗಳಿಂದ ಅಲಂಕೃತನಾಗಿದ್ದನು) ಎಂದು ಶಾಸನವೊಂದು ಮಾಹಿತಿ ನೀಡುತ್ತದೆ. ಶಿಕ್ಷಣ, ರಾಜ್ಯದಲ್ಲಿ ಅನೇಕ ಮಯೂರ ವರ್ಮರನ್ನು ಕಟ್ಟುವಂತಾಗಲಿ. ಶಾಲೆಯ ಕೊನೆಯ ಗಂಟೆಯ ಕೇಳಿದಾಗ ಮೂಡುವ ಸಂಭ್ರಮ, ಪ್ರತಿ ತರಗತಿ ಆರಂಭಕ್ಕೆ ಮುನ್ನದ ಗಂಟೆಯಲ್ಲೂ ಮೂಡಿ ಬರುವ ಪ್ರಯತ್ನವಾಗಲಿ. ಕಲಿಕೆಯ 'ಜಾದೂ ಕಿ ಪಿಟಾರಿ' 2025ರಲ್ಲಾದರೂ ತೆರದುಕೊಳ್ಳಲಿ ಎಂದು ಆಶಾಭಾವದಿಂದ ಕಾಯೋಣ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope