ನೀವಿನ್ನೂ ಹಂಪಿ ನೋಡಿಲ್ವಾ, ಕೆಎಸ್‌ಟಿಡಿಸಿ ಪರಿಚಯಿಸಿದೆ 2 ದಿನಗಳ ಟೂರ್ ಪ್ಯಾಕೇಜ್; ಯಾವೆಲ್ಲಾ ಜಾಗ ನೋಡಿಬರಬಹುದು? ಇಲ್ಲಿದೆ ವಿವರ
ಭಾರತದ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿ ಹಂಪಿ ಕೂಡ ಒಂದು. ಇದು ಯುನೆಸ್ಕೋ ಪಾರಂಪರಿಕ ತಾಣದಲ್ಲೂ ಸ್ಥಾನ ಗಳಿಸಿದೆ ವಿಜಯನಗರ ಸಾಮ್ರಾಜ್ಯದ ಈ ಅದ್ಭುತ ತಾಣ. ಕರ್ನಾಟಕದಲ್ಲೇ ಇರುವ ಹಂಪಿಯನ್ನು ನೋಡಬೇಕು ಎನ್ನುವ ಆಸೆ ನಿಮಗಿದ್ದರೆ ಬೆಂಗಳೂರಿನಿಂದ ಕೆಎಸ್‌ಟಿಡಿಸಿ 2 ದಿನಗಳ ಟೂರ್ ಪ್ಯಾಕೇಜ್ ಪರಿಚಯಿಸಿದೆ, ಇದರ ವಿವರ ಇಲ್ಲಿದೆ.
ಟಿವಿಯಲ್ಲಿ, ಮೊಬೈಲ್‌ನಲ್ಲಿ ಐತಿಹಾಸಿಕ ತಾಣ ಹಂಪಿಯ ಸೊಬಗನ್ನ ಕಂಡಿರುವ ನಿಮಗೆ ಹಂಪಿಯನ್ನ ಒಮ್ಮೆ ನೇರವಾಗಿ ನೋಡಬೇಕು ಎನ್ನುವ ಆಸೆ ಆಗಿರಬಹುದು. ಹಾಗಂತ ಹೋಗಲು ಸೂಕ್ತ ದಾರಿ ಯಾವುದು ಕಾಣದೇ ಇರಬಹುದು. ಅದರಲ್ಲೂ ಡಿಸೆಂಬರ್ ತಿಂಗಳು ಎಂದರೆ ಮಕ್ಕಳಿಗೆ ಕ್ರಿಸ್ಮಸ್ ರಜೆ ಇರುತ್ತದೆ, ನೀವು ಕಚೇರಿ ಕೆಲಸ ಮಾಡುವವರಾದರೆ ನಿಮಗೂ ತಿಂಗಳಾಂತ್ಯದ ಒಳಗೆ ರಜೆ ಮುಗಿಸಬೇಕು ಅಂತಿರುತ್ತದೆ.
ಈ ಬಾರಿ ಡಿಸೆಂಬರ್ ಅಥವಾ ಕ್ರಿಸ್ಮಸ್ ರಜೆಗೆ ನೀವು ಹಂಪಿ ಟ್ರಿಪ್ ಪ್ಲಾನ್ ಮಾಡಬಹುದು. ಕೆಎಸ್‌ಡಿಟಿಸಿ ನಿಮಗಾಗಿ 2 ದಿನಗಳ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್ ಇರುವುದು ಬೆಂಗಳೂರಿನಿಂದ. ಎಂದರೆ ಬೆಂಗಳೂರಿನಿಂದ ಹೊರಟು ಹಂಪಿ ತಲುಪಿ ಪುನಃ ಬೆಂಗಳೂರಿಗೆ ರೀಚ್ ಆಗುವುದು.
ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ನೋಡಲು ಸಾಕಷ್ಟು ತಾಣಗಳಿವೆ. ಈ ಸಮಯದಲ್ಲಿ ಬಿಸಿಲು ಕೂಡ ಕಡಿಮೆ ಇರುವ ಕಾರಣ ಹಂಪಿ ಟ್ರಿಪ್ ಹೋಗಲು ಇದು ಹೇಳಿ ಮಾಡಿಸಿದ ವಾತಾವರಣವಾಗಿರುತ್ತದೆ. ಹಾಗಾದರೆ 2 ದಿನಗಳ ಕೆಎಸ್‌ಡಿಟಿ ಟೂರ್ ಪ್ಯಾಕೇಜ್‌ನಲ್ಲಿ ಯಾವ ಜಾಗಗಳನ್ನು ನೋಡಿಬರಬಹುದು, ದರ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.
ಹಂಪಿ ಟೂರ್ ಪ್ಯಾಕೇಜ್ ವಿವರ
ದಿನ 1: ಮೊದಲ ದಿನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಡುವುದು. ಮಧ್ಯಾಹ್ನದ ಸಮಯಕ್ಕೆ ಹಂಪಿ ತಲುಪಿ ಅಲ್ಲಿ ಊಟ ಮುಗಿಸುವುದು. ನಂತರ ವಿಜಯ ವಿಠ್ಠಲ ದೇವಾಲಯ, ಕಲ್ಲಿನ ರಥ ನೋಡಿಕೊಂಡು ಪುರಂದರದಾಸ ಮಂಟಪ, ಕೊರಾಕಲ್ ಸವಾರಿ, ತುಂಗಭದ್ರಾ ಅಣೆಕಟ್ಟು ಸಂಗೀತ ಮತ್ತು ಬೆಳಕಿನ ಕಾರ್ಯಕ್ರಮ ರಾತ್ರಿ ಕಮಲಾಪುರದಲ್ಲಿ ಉಳಿಯುವುದು
ದಿನ 2: ಎರಡನೇ ದಿನ ಬೆಳಗಿನ ಉಪಾಹಾರ ಮುಗಿಸಿ ವಿರೂಪಾಕ್ಷ ದೇವಸ್ಥಾನ, ಸಾಸಿವೆಕಾಳು ಗಣೇಶ ದೇವಸ್ಥಾನ, ಕೃಷ್ಣ ದೇವಾಲಯ, ಉಗ್ರ ನರಸಿಂಹ ಪ್ರತಿಮೆ, ಬಡವಿಶಿವಲಿಂಗ, ಸಿಸ್ಟರ್ಸ್ ಕಲ್ಲು, ಭೂಗತ ದೇವಾಲಯ, ಲೋಟಸ್ ಮಹಲ್, ಎಲಿಫೆಂಟ್ ಸ್ಟೇಬಲ್, ಹಜಾರಾಮ ದೇವಸ್ಥಾನ, ಮಹಾನವಮಿ ದಿಬ್ಬ (ಪುಷ್ಕರ್ಣಿ), ಮಹಾರಾಣಿ ಸ್ನಾನದ ಕೊಳ ನೋಡಿಕೊಂಡು ಬೆಂಗಳೂರಿಗೆ ಹೊರಡುವುದು. ಕೆಲವ ಎರಡರಿಂದ 3 ದಿನಗಳ ರಜೆ ಇದ್ದರೆ ನೀವು ಬೆಂಗಳೂರಿಂದ ಹಂಪಿಗೆ ಹೊರಡಬಹುದು. ಮಾತ್ರವಲ್ಲ ಹಂಪಿಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಜಾಗಗಳನ್ನು ನೋಡಿ ಬರಬಹುದು.
ದರ, ಸಂಪರ್ಕ ಸಂಖ್ಯೆ
ಈ ಪ್ಯಾಕೆಟ್‌ನಲ್ಲಿ ಊಟ, ವಸತಿ, ಬಸ್ ಎಲ್ಲವೂ ಸೇರಿರುತ್ತದೆ. ಒಬ್ಬರಿಗೆ 5,830 ರೂ ನೀಡಬೇಕಾಗುತ್ತದೆ. ಈ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ 080-43344334/ 8970650070.