ಹೆಣ್ಣಿನ ಅಸ್ಮಿತೆ ಎತ್ತಿ ಹಿಡಿದ ಲಗ್ನಪತ್ರಿಕೆ, ನಮ್ಮ ವೃತ್ತಿಯನ್ನು ನಾವೇ ಗೌರವಿಸದಿದ್ದರೆ ಇನ್ಯಾರು ಗುರುತಿಸ್ತಾರೆ; ಅಕ್ಷತಾ ಹುಂಚದಕಟ್ಟೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣಿನ ಅಸ್ಮಿತೆ ಎತ್ತಿ ಹಿಡಿದ ಲಗ್ನಪತ್ರಿಕೆ, ನಮ್ಮ ವೃತ್ತಿಯನ್ನು ನಾವೇ ಗೌರವಿಸದಿದ್ದರೆ ಇನ್ಯಾರು ಗುರುತಿಸ್ತಾರೆ; ಅಕ್ಷತಾ ಹುಂಚದಕಟ್ಟೆ ಬರಹ

ಹೆಣ್ಣಿನ ಅಸ್ಮಿತೆ ಎತ್ತಿ ಹಿಡಿದ ಲಗ್ನಪತ್ರಿಕೆ, ನಮ್ಮ ವೃತ್ತಿಯನ್ನು ನಾವೇ ಗೌರವಿಸದಿದ್ದರೆ ಇನ್ಯಾರು ಗುರುತಿಸ್ತಾರೆ; ಅಕ್ಷತಾ ಹುಂಚದಕಟ್ಟೆ ಬರಹ

ಅಕ್ಷತಾ ಹುಂಚದಕಟ್ಟೆ ಬರಹ: ಪತ್ರಕರ್ತ ನಾಗರಾಜ್ ಹುಲಿಮನೆಯ ಮನದನ್ನೇ ಚಂದನ ತಮ್ಮ ಲಗ್ನಪತ್ರಿಕೆಯಲ್ಲಿ ತಾನೊಬ್ಬಳು ಮೆಹಂದಿ ಆರ್ಟಿಸ್ಟ್ ಎಂದು ಹಾಕಿಕೊಂಡಿದ್ದಾಳೆ. ಆ ಮೂಲಕ ತನ್ನ ವೃತ್ತಿಪರತೆಯನ್ನು ತೋರಿಸಿದ್ದಾಳೆ. ಜೊತೆಗೆ ತಾನು ಮಾಡುವ ವೃತ್ತಿಯ ಬಗೆಗೆ ತನ್ನ ಹೆಮ್ಮೆ, ಗೌರವ, ಪ್ರೀತಿ ವ್ಯಕ್ತ ಪಡಿಸಿದ್ದಾಳೆ.

ಹೆಣ್ಣಿನ ಅಸ್ಮಿತೆ ಎತ್ತಿ ಹಿಡಿದ ಲಗ್ನಪತ್ರಿಕೆ; ; ಅಕ್ಷತಾ ಹುಂಚದಕಟ್ಟೆ ಬರಹ
ಹೆಣ್ಣಿನ ಅಸ್ಮಿತೆ ಎತ್ತಿ ಹಿಡಿದ ಲಗ್ನಪತ್ರಿಕೆ; ; ಅಕ್ಷತಾ ಹುಂಚದಕಟ್ಟೆ ಬರಹ

ಸಾಮಾನ್ಯವಾಗಿ ಗಂಡು–ಹೆಣ್ಣು ಡಾಕ್ಟರ್, ಎಂಜಿನಿಯರ್‌ ಇಂತಹ ದೊಡ್ಡ ಹುದ್ದೆಗಳಲ್ಲಿ ಇದ್ದಾಗ ಮಾತ್ರ ಅವರ ವೃತ್ತಿಯನ್ನು ಲಗ್ನಪತ್ರಿಕೆಗಳಲ್ಲಿ ಹೆಸರಿನ ಕೆಳಗೆ ಪ್ರಕಟ ಮಾಡಲಾಗುತ್ತದೆ. ಎಷ್ಟೋ ಮಂದಿ ತಮ್ಮ ವೃತ್ತಿ ಏನು ಎಂಬುದನ್ನು ಇನ್ನೊಬ್ಬರ ಮುಂದೆ ತಿಳಿಸಲು ಹಿಂಜರಿಯುತ್ತಾರೆ.

ನಮ್ಮ ವೃತ್ತಿ ಸಣ್ಣದೋ ದೊಡ್ಡದೋ ಅದನ್ನು ನಾವೇ ಪ್ರೀತಿಸದಿದ್ದರೆ ಗೌರವಿಸದಿದ್ದರೆ ಇನ್ಯಾರು ಗುರುತಿಸುತ್ತಾರೆ ಅಲ್ಲವೇ, ಲಗ್ನಪತ್ರಿಕೆಯೊಂದರಲ್ಲಿ ವಧು ಮೆಹಂದಿ ಆರ್ಟಿಸ್ಟ್ ಎನ್ನುವುದನ್ನು ಪ್ರಕಟಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖಕಿ ಅಕ್ಷತಾ ಹುಂಚದಕಟ್ಟೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹವನ್ನು ನೀವೂ ಓದಿ.

ಅಕ್ಷತಾ ಹುಂಚದಕಟ್ಟೆ ಬರಹ

ಈ ಹೊತ್ತಿನ ಎಷ್ಟೋ ಲಗ್ನ ಪತ್ರಿಕೆಗಳನ್ನು ನೋಡಿದ್ರೆ, ಅದರ ಐಭೋಗ ನೋಡಿ ಅಯ್ಯೋ ಇಷ್ಟೆಲ್ಲ ಲಗ್ನ ಪತ್ರಿಕೆಗೆ ಖರ್ಚು ಮಾಡೋ ಅಗತ್ಯ ಇದೆಯ ಎಂಬ ಪ್ರಶ್ನೆ ಮೂಡುತ್ತೆ. ಶಿವಮೊಗ್ಗದ ಪ್ರಜಾವಾಣಿ ಅರೆಕಾಲಿಕ ವರದಿಗಾರ ನಾಗರಾಜ ಹುಲಿಮನೆ ಹಾಗೂ ನಮ್ಮೂರಿನ ಹತ್ತಿರದ ಹುಡುಗಿ ಚಂದನ ಪರಸ್ಪರ ಪ್ರೀತಿಸಿ ಮದುವೆಯಾದರು. ಅವರ ಮದುವೆಯ ಪತ್ರಿಕೆ ಬಹಳ ಸರಳವಾಗಿತ್ತು. ಆದರೆ ವಿಶಿಷ್ಟ ಅಂಶದಿಂದ ನಮ್ಮಂತೋರ ಗಮನ ಸೆಳೆಯಿತು. ಇವತ್ತಿಗೂ ನಮ್ಮ ಮಿಡ್ಲ್ ಕ್ಲಾಸ್‌ನಲ್ಲಿ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಕಳಿಸೋದು ಅವರಿಗೆ ಸರ್ಕಾರಿ ಕೆಲಸ ಸಿಕ್ಕರೆ ಮಾತ್ರ ಎಂಬ ಮನಸ್ಥಿತಿ ಇದೆ ಅಥವಾ ಖಾಸಗಿಯಲ್ಲೇ ಆದರೂ ಟೀಚರ್, ನರ್ಸ್ ಇತ್ಯಾದಿ ಇತ್ಯಾದಿ ಕೆಲಸಗಳು ಎಷ್ಟು ಜನ ಮಹಿಳೆಯರಿಗೆ ಸಿಕ್ಕುತ್ತದೆ? ಅದಕ್ಕೆ ತಕ್ಕಂಗೆ ರೂಪಿಸಲ್ಪಟ್ಟ ನಾವುಗಳು ಕೂಡಾ.

ನಾವು ಮಾಡ್ತಾ ಇರೋ ಕೆಲಸ ಎಷ್ಟೇ ಕೌಶಲಪೂರ್ಣವಾಗಿರಲಿ, ಶ್ರಮದಾಯಕವಾಗಿರಲಿ, ಅದರಿಂದ ಆದಾಯ ಬರುತ್ತಿರಲಿ ಆ ಕೆಲಸವನ್ನು ಹೇಳಿಕೊಳ್ಳಲು ಮುಜುಗರ ಪಡುತ್ತೇವೆ. ಜೊತೆಗೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಇರತ್ತೆ (ಅದಿಲ್ಲದಿದ್ದರೂ ನಮ್ಮ ಕಾಲು ಮೇಲೆ ನಾವೇ ನಿಲ್ಲಬೇಕು. ಗಂಡನೇ ಆಗಿದ್ದರೂ ಅವನ ಹತ್ತಿರ ಕೈಚಾಚಬಾರದು. ನಮ್ಮ ಅವಶ್ಯಕತೆಗೆ ಅನ್ನೋ ಆತ್ಮಾಭಿಮಾನ ಪ್ರತಿಯೊಬ್ಬ ಹೆಣ್ಣಿನಲ್ಲಿ ಇರತ್ತೆ) ಅದಕ್ಕೆ ನೆರವಾಗಬೇಕು ಎಂದು ತುಡಿತ ಇರ್ತಾರೆ. ಆದರೆ ಯಾವ ಕೆಲಸ ಮಾಡೋದು ಅನ್ನೋದೇ ಸಮಸ್ಯೆ ಮಾಡ್ಕೋತಾರೆ.

ಚೆನ್ನಾಗಿ ಬ್ಯಾಗ್, ಬಟ್ಟೆ ಹೊಲಿತಿರ್ತಾರೆ, ಹೂವಿನ ಗಿಡ ಬೆಳೆದಿರ್ತಾರೆ, ಮನೆಯಲ್ಲಿ ಅದ್ಭುತ ಲೇಹ್ಯಗಳು ಉಂಡೆಗಳು, ಬಿರಿಯಾನಿ ರೊಟ್ಟಿ ಎಲ್ಲ ಮಾಡ್ತಾ ಇರ್ತಾರೆ. ಪುಸ್ತಕಕ್ಕೆ ಚೆಂದ ಬೈಂಡ್ ಹಾಕೋದು, ಪ್ರೂಫ್ ನೋಡೋದು, ಟೈಪಿಂಗ್, ಪುಸ್ತಕದ ಲೇಔಟ್ ಮಾಡ್ತಾರೆ ಚಿತ್ರ ಬಿಡಿಸ್ತಾರೆ. ಅದ್ಭುತವಾಗಿ ಹಾಡ್ತಾ ಇರ್ತಾರೆ, ಪೆಟ್ ಸಾಕ್ತಾರೆ, ಎಷ್ಟೋ ದೈಹಿಕ ಸಮಸ್ಯೆಗಳಿಗೆ ಸರಳವಾದ ಮನೆಮದ್ದು ಗೊತ್ತಿರತ್ತೆ, ಹೂವು ಬೆಳೆಸೋಕೆ ಕಟ್ಟೋಕೆ, ವೇಸ್ ಮಾಡೋಕೆ ಬರ್ತಾ ಇರತ್ತೆ, ಇದರ ಜೊತೆ ಇನ್ನೂ ನೂರಾರು ಕೌಶಲ ಇರತ್ತೆ. ಅವು ಯಾವುದನ್ನೂ ವೃತ್ತಿ ಮಾಡಿಕೊಳ್ಳೋಕೆ ಅಂಜುತ್ತಾ ಇರ್ತಾರೆ, ಇಂಥ ವೃತ್ತಿ ಮಾಡ್ತಾ ಇದ್ದರೂ ಸಮಾಜ ಸಹ ಇವು ಯಾವುದನ್ನು ವೃತ್ತಿ ಅಂತ ಪರಿಗಣಿಸೋದೆ ಇಲ್ಲವಾದರಿಂದ ಏನು ಮಾಡ್ತಿದೀರಿ ಅಂದ್ರೆ ಮನೆಯಲ್ಲೇ ಇದ್ದೀನಿ ಅಂತ ಒಂದು ಸಾಲಿನ ಆನ್ಸರ್ ಕೊಡ್ತಾ ಇರ್ತೀವಿ.

ಆದರೆ ನಾಗರಾಜ್ ಹುಲಿಮನೆಯ ಮನದನ್ನೇ ಚಂದನ ತಮ್ಮ ಲಗ್ನಪತ್ರಿಕೆಯಲ್ಲಿ ತಾನೊಬ್ಬಳು ಮೆಹಂದಿ ಆರ್ಟಿಸ್ಟ್ ಎಂದು ಹಾಕಿಕೊಂಡಿದ್ದಾಳೆ. ಆ ಮೂಲಕ ತನ್ನ ವೃತ್ತಿಪರತೆಯನ್ನು ತೋರಿಸಿದ್ದಾಳೆ. ಜೊತೆಗೆ ತಾನು ಮಾಡುವ ವೃತ್ತಿಯ ಬಗೆಗೆ ತನ್ನ ಹೆಮ್ಮೆ, ಗೌರವ, ಪ್ರೀತಿ ವ್ಯಕ್ತ ಪಡಿಸಿದ್ದಾಳೆ.

ನನಗೆ ಈ ನಡೆ ತುಂಬಾ ಇಷ್ಟ ಆಯಿತು. ನಮ್ಮ ವೃತ್ತಿಯನ್ನು ಅದು ಸಣ್ಣದೋ ದೊಡ್ಡದೋ ನಾವೇ ಪ್ರೀತಿಸದಿದ್ದರೆ ಗೌರವಿಸದಿದ್ದರೆ ಇನ್ಯಾರು ಗುರುತಿಸುವರು? ಈ ನಿಟ್ಟಿನಲ್ಲಿ ಚಂದನ ಮತ್ತು ನಾಗರಾಜ್ ನಡೆ ಇತರರಿಗೆ ಮಾದರಿ ಆದದ್ದು.

ಹೊಸ ಜೋಡಿಗೆ ಶುಭಾಶಯಗಳು. ನಿಮ್ಮಗಳ ವೃತ್ತಿ ನಿಮಗೆ ಆದಾಯ ತಂದುಕೊಡಲಿ ಜೊತೆಗೆ ಜನ ಪ್ರೀತಿ, ವಿಶ್ವಾಸ, ಗೌರವ ವನ್ನೂ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.