ಪುಸ್ತಕ ಪರಿಚಯ: ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ, ಪ್ರಭಾಕರ ಕಾರಂತ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ಪರಿಚಯ: ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ, ಪ್ರಭಾಕರ ಕಾರಂತ ಬರಹ

ಪುಸ್ತಕ ಪರಿಚಯ: ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ, ಪ್ರಭಾಕರ ಕಾರಂತ ಬರಹ

Book Review: ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ ಕೃತಿಯ ಹಲವು ಮಾಹಿತಿಗಳ ಕಣಜ. ಡಾ. ಟಿಆರ್ ಅನಂತರಾಮು ಅವರ ಶ್ರಮ ಇಲ್ಲಿ ಪ್ರಶಂಸಾರ್ಹ ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ ಕೃತಿ ಪರಿಚಯಿಸುತ್ತಾ, ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕೃತಿ ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟದ್ದಾರೆ.
ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ ಕೃತಿ ಪರಿಚಯಿಸುತ್ತಾ, ಬ್ರಾಹ್ಮಣ ಪಂಗಡ, ವಲಸೆಗಳ ಒಳನೋಟ ಒದಗಿಸುವ ಕೃತಿ ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟದ್ದಾರೆ.

Book Review: ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿ ಓದಿದ ಬಳಿಕ ಅದರ ಬಗ್ಗೆ ಟಿಪ್ಪಣಿ ಬರೆದಾಗ, ಕೆಲವು ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ಕೃತಿ ಓದುವಂತೆ ಸಲಹೆ ನೀಡಿದರು. ಅದರಂತೆ ಅದನ್ನು ಓದಿದಾಗ, ಬ್ರಾಹ್ಮಣರ ವಲಸೆ ಕುರಿತಾದ ಇನ್ನಷ್ಟು ಮಾಹಿತಿಗಳು ದೊರಕಿದವು ಎಂದು ಲೇಖಕ ಪ್ರಭಾಕರ ಕಾರಂತ ಅವರು “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ” ಕೃತಿಯ ಸ್ಪಷ್ಟ ಪರಿಚಯವನ್ನು ನೀಡಿದ್ದಾರೆ. ಅದು ಹೀಗಿದೆ

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ- ಹಿನ್ನೆಲೆ; ಕೃತಿ ಪರಿಚಯ

ಸ್ಮಾರ್ಥ ಬ್ರಾಹ್ಮಣರ ವಿವಿಧ ಪಂಗಡಗಳ ಕುರಿತು ಒಂದೇ ಕಡೆ ಮಾಹಿತಿ ಲಭ್ಯವಿದೆ. ನನಗೆ ತಿಳಿದಂತೆ ಬ್ರಾಹ್ಮಣರ ಕುರಿತು ಶಿವರಾಮ ಕಾರಂತರ ಸಹೋದರ ವಾಸುದೇವ ಕಾರಂತರು ಮೊದಲು ಬರೆದಿರಬೇಕು. ಆ ನಂತರ ಬ್ರಾಹ್ಮಣರ ವಿವಿಧ ಪಂಗಡಗಳು ತಮ್ಮ ತಮ್ಮ ಪಂಗಡಗಳ ಕುರಿತು ಗ್ರಂಥ ಪ್ರಕಟಿಸಿದವು. ಆಯಾ ಪಂಗಡಗಳು ಕೊಟ್ಟ ಮಾಹಿತಿಯನ್ನು ಇಲ್ಲಿ ಯಥಾ ನೀಡಲಾಗಿದೆ. ಇದರಲ್ಲಿ ವಾಸ್ತವ ಇರುವಂತೆ ಉತ್ಪ್ರೇಕ್ಷೆಯೂ ಇದೆ.

ಸ್ಮಾರ್ತ ಬ್ರಾಹ್ಮಣರ ಕುರಿತ ಪುಸ್ತಕ ಆಗಿದ್ದರೂ ಒಟ್ಟಾರೆ ಬ್ರಾಹ್ಮಣರು ಕರ್ನಾಟಕ, ಆಂದ್ರ,ತಮಿಳುನಾಡು,ಕೇರಳ ಇತ್ಯಾದಿ ಪ್ರಾಂಥಗಳಲ್ಲಿ ನೆಲೆಸಿದ ದಾಖಲೆ ಇಲ್ಲಿ ಲಭ್ಯವಾಗಿದೆ. ನಾನು ಬ್ರಾಹ್ಮಣರ ವಲಸೆ ಕುರಿತು ಮಾಹಿತಿ ಸಿಕ್ಕೀತು ಎಂಬ ಕುತೂಹಲದಿಂದ ಈ ಕೃತಿ ಓದಿದ್ದು. ಕಡೆಗೆ ಗೊತ್ತಾಗಿದ್ದೆಂದರೆ ಇದಮಿತ್ಥಂ ಅಂತ ಏನೂ ಹೇಳಲಾಗದು ಎಂದು!. ಇದಕ್ಕೆ ಕಾರಣ ಸಮಾಜ ಶಾಸ್ತ್ರೀಯ ಅಧ್ಯಯನ ಇತ್ತೀಚಿನ ವರೆಗೂ ನಡೆಯದೇ ಇದ್ದುದು. ಏನು ದೊರಕಿತೋ ಅದರ ಆದಾರದ ಮೇಲೆ ಸಂಶೋಧಕು ಕಗ್ಗಂಟು ಬಿಡಿಸಲು ನೋಡಿದ್ದಾರೆ.

ದಕ್ಷಿಣ ಭಾರತಕ್ಕೆ ಬ್ರಾಹ್ಮಣರು ವಲಸೆ ಬಂದವರಾ ಅಥವಾ ಲಾಗಾಯ್ತಿನಿಂದ ಇದ್ದವರಾ

ನನ್ನ ಆಸಕ್ತಿಯ ಬ್ರಾಹ್ಮಣರ ವಲಸೆ ಕುರಿತು ಒಂದಷ್ಟುಅರಿವು ಈ ಕೃತಿ ಮೂಡಿಸಿತು. ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು ಗಳಲ್ಲಿ ಬ್ರಾಹ್ಮಣರು ಲಾಗಾಯ್ತಿನಿಂದ ಇದ್ದವರಾ?. ಹೊರಗಿನಿಂದ ವಲಸೆ ಬಂದವರಾ?.ವಲಸೆ ಬಂದಿದ್ದರೆ ಯಾವಾಗ ಎಲ್ಲಿಂದ ಯಾವಕಾರಣಕ್ಕೆ ಬಂದರು.ಈ ಕುರಿತು ಈ ಪುಸ್ತಕದಲ್ಲಿ ಸಂಪೂರ್ಣ ಉತ್ತರ ದೊರಕುವುದಿಲ್ಲ. ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲೇ ಬ್ರಾಹ್ಮಣರು ಈ ಭಾಗದಲ್ಲಿ ಇದ್ದ ದಾಖಲೆ ಸಿಗುತ್ತದೆ. ಮತ್ತು ಬೇರೆ ಬೇರೆ ಕಾಲಘಟ್ಟದಲ್ಲಿ ಬ್ರಾಹ್ಮಣರ ವಲಸೆ ನಡೆದಿದ್ದಕ್ಕೂ ಆಧಾರ ಇದೆ.ಗಂಗರು, ಚೋಳರ, ರಾಷ್ಟ್ರಕೂಟರು ಮುಂತಾದ ರಾಜರ ಕಾಲದ ಶಾಸನಗಳು ನೂರಾರು ದೊರಕಿದ್ದು ಇವುಗಳಲ್ಲಿ ಬ್ರಾಹ್ಮಣರಿಗೆ ಅಗ್ರಹಾರ ನಿರ್ಮಿಸಿಕೊಡುವುದು, ಬ್ರಹ್ಮದೇಯಕ್ಕೆ ಭೂಮಿ ನೀಡುವುದೂ ಕಂಡುಬರುತ್ತದೆ. ಊಹೆ ಮಾಡಬಹುದಾದರೆ ಉತ್ತರ ದೇಶದ ಪುಣ್ಯ ಕ್ಷೇತ್ರ ಯಾತ್ರೆಗೆ ಹೋದ ರಾಜ ಅಥವಾ ಆತನ ಪರಿವಾರದವರ ಸಂಪರ್ಕಕ್ಕೆ ಬ್ರಾಹ್ಮಣರು ಬಂದೇ ಇರುತ್ತಾರೆ.

ಈ ನಂಟು ಧಕ್ಷಿಣದತ್ತ ಬ್ರಾಹ್ಮಣರ ಸಣ್ಣ ವಲಸೆ ಆಗೀಗ ನಡೆಯಲು ಕಾರಣವಾಗಿರಬಹುದು. ಆರ್ಥಿಕ ಸಾಮಾಜಿಕ ಭದ್ರತೆಗಾಗಿ ಬ್ರಾಹ್ಮಣರು ಅದು ದೊರಕುವೆಡೆ ಪ್ರಯಾಣಿಸಿರಬಹುದು.ಆದರೆ ದೊಡ್ಡ ಮಟ್ಟದ ವಲಸೆ ಉತ್ತರದಲ್ಲಿ ಇಸ್ಲಾಂನ ಪ್ರವೇಶದಿಂದ ನಡೆದಿರಬೇಕು. ಆಗ ನಡೆದ ಅನಾಚಾರ ಕೇಳಿ ಈ ಭಾಗವೇ ನಮಗೆ ಸುರಕ್ಷಿತವಲ್ಲ ಎಂದು ಭಾವಿಸಿ ಮನೆ ತೊರೆದು ಬಾರೀ ಸಂಖ್ಯೆಯ ಜನ ಆಂದ್ರ ದತ್ತ ಬಂದಿರಬೇಕು. ಇದರ ಜೊತೆ ಪ್ರಾಕೃತಿಕ ವಿಕೋಪವೂ ವಲಸೆಗೆ ಕಾರಣವಾಗಿರಬಹುದು. ಇಲ್ಲಾ ಪದೇ ಪದೇ ಉಂಟಾದ ಪ್ರವಾಹಗಳು, ಭೂಕಂಪನ,ಅಥವಾ ಸತತ ಬರ ವಲಸೆಗೆ ಕಾರಣವಾಗಿರಬೇಕು. ಸರಸ್ವತಿ ನದಿಯ ಬತ್ತುವಿಕೆಯೂ ಬ್ರಾಹ್ಮಣರ ವಲಸೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಏಳು ಎಂಟನೇ ಶತಮಾನದಲ್ಲಿ ಮುಸಲ್ಮಾನರ ದಾಳಿ ಮತ್ತು ಅತ್ಯಾಚಾರ ಆಂಧ್ರದಿಂದಲೂ ಬ್ರಾಹ್ಮಣರು ಕರ್ನಾಟಕ, ಕೇರಳ, ತಮಿಳುನಾಡಿನತ್ತ ವಲಸೆ ಬರಲು ಕಾರಣವಾಗಿಬೇಕು. ಬಹುತೇಕ ಬ್ರಾಹ್ಮಣರ ಪಂಗಡಗಳು ತಮ್ಮನ್ನು ಅಹಿಚ್ಛತ್ರದಿಂದ ಮಯೂರ ವರ್ಮನ ಮಗ ಕರೆತಂದು ನೆಲೆ ಕಲ್ಪಿಸಿದ ಎಂದು ಹೇಳಿಕೊಳ್ಳುತ್ತವೆ.ಮಯೂರ ವರ್ಮನ ಅಥವಾ ಮಕ್ಕಳ ಕಾಲಕ್ಕೂ ವಲಸೆಯ ಕಾಲಕ್ಕೂ ಹಲವು ಶತಮಾನದ ಅಂತರ ಇದ್ದು ಇದೊಂದು ಕಟ್ಟುಕಥೆ ಎನ್ನಲು ಅಡ್ಡಿ ಇಲ್ಲ.

ಅಹಿಚ್ಛತ್ರ ಇರುವುದೆಲ್ಲಿ, ಖಚಿತ ಮಾಹಿತಿಯ ಹುಡುಕಾಟ

ಅಹಿಚ್ಛತ್ರದ ಕುರಿತೂ ಖಚಿತ ಮಾಹಿತಿ ದೊರಕದು. ವಲಸೆ ಬಂದ ಪ್ರದೇಶವನ್ನೂ ಬಿಟ್ಟುಬಂದ ಪ್ರದೇಶದ ಹೆಸರಲ್ಲೇ ಕರೆದಿರುವ ಸಾಧ್ಯತೆಯೂ ಇದೆ. ಮಯೂರವರ್ಮನ ಉಲ್ಲೇಖ ಮುಸಲ್ಮಾನರ ದೌರ್ಜನ್ಯಕ್ಕೆ ಹೆದರಿ ಓಡಿಬಂದವರು ಎಂದರೆ ಘನತೆಗೆ ಕುಂದು ಎಂದು ಭಾವಿಸಿ ಕಟ್ಟಿದಂತಿದೆ. ಹೀಗೆ ವಲಸೆ ಬಂದವರು ಇಲ್ಲಿನ ಪಾಳೆಗಾರರನ್ನೋ, ರಾಜರನ್ನೋ ಕಂಡು ಆಶ್ರಯ ಬೇಡಿ ಅವರು ಹೇಳಿದಲ್ಲಿ ನೆಲೆಸಿರುವ ಸಾಧ್ಯತೆ ಇದೆ.ಇದಿಷ್ಟೂ ಕೇವಲ ಊಹೆ.ಯಾವುದಕ್ಕೂ ಸಾಕ್ಷಿ ಇಲ್ಲ. ತರ್ಕ ಮತ್ತು ಐತಿಹಾಸಿಕ ಘಟನೆ ಆಧರಿಸಿ ಈ ತೀರ್ಮಾನಕ್ಕೆ ಬರಬಹುದು. ಈ ಕೃತಿ ಅಂತಹ ಒಂದು ತೀರ್ಮಾನಕ್ಕೆ ಬರಲು ನನಗಂತೂ ಮಾರ್ಗದರ್ಶನ ಮಾಡಿದೆ.

ಇರುವ ಅತ್ಯಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರಲ್ಲೇ ಅದೆಷ್ಟು ಪಂಗಡಗಳಿವೆ. ಅವರುಗಳ ಹಿನ್ನೆಲೆ ಏನು.ಈಗಿನ ಸ್ಥಿತಿಗತಿ ಏನು ಇತ್ಯಾದಿ ವಿವರ ಈ ಕೃತಿ ಒಂದೇ ಕಡೆ ಒದಗಿಸಿದೆ. ನಾವು ಈ ಪಂಗಡದವರ ಮನೆಯಲ್ಲಿ ಉಣ್ಣುತ್ತಿರಲಿಲ್ಲ, ಈ ಪಂಗಡಗಳಿಗೆ ಸಹಪಂಕ್ತಿ ಭೋಜನ ಇರಲಿಲ್ಲ ಎಂದು ಮೇಲರಿಮೆಯ ಪಂಗಡಗಳು ಕೆಲವು ಪಂಗಡಗಳ ಕುರಿತು ಹೇಳುವುದುಂಟು. ಇಂತಹ ತಾರತಮ್ಯ ಈಗ ಕರಗುತ್ತಿದೆ ಆದರೂ ಇಂತಹ ಮಾತುಗಳು ಪೂರ್ಣ ಇಲ್ಲವಾಗಿಲ್ಲ. ಶ್ರೇಷ್ಠತೆಯ ಈ ವ್ಯಸನಕ್ಕೆ ಆಧಾರ ಇಲ್ಲ.

ಸ್ಥಾನಿಕ ಬ್ರಾಹ್ಮಣರು ಕೀಳರಿಮೆ ಇಟ್ಟುಕೊಳ್ಳಲು ಯಾವ ಕಾರಣವೂ ಇಲ್ಲ

ನನ್ನ ಮುಳುಗಡೆ ಒಡಲಾಳ ಕೃತಿ ಓದಿದ ಗೆಳೆಯರೊಬ್ಬರು ನೀವು ಸ್ಥಾನಿಕ ಬ್ರಾಹ್ಮಣರೂ ಇದ್ದರು ಎಂದು ಬರೆದು ನೋವು ಉಂಟು ಮಾಡಿದಿರಿ. ಬಾಲ್ಯದಿಂದ ಅನುಭವಿಸಿದ ತರತಮ ಮತ್ತೆ ಮೇಲೆ ಬಂದಂತಾಯಿತು ಎಂದು ಸಂದೇಶ ಕಳಿಸಿದ್ದರು. ನಾನು ಸ್ಥಾನಿಕ ಬ್ರಾಹ್ಮಣರ ಕುರಿತು ಅವರ ಸಂಘಟನೆಯ ಒಂದು ಕೃತಿ ಓದಿದ್ದೆ. ಆ ನಂತರ ನನ್ನ ಆಪ್ತವಲಯದಲ್ಲಿರುವ ಕೆಲವರು ಸ್ಥಾನಿಕ ಬ್ರಾಹ್ಮಣರು ಎಂದು ಗೊತ್ತಾಯಿತು. ಜೊತೆಗೆ ನಮ್ಮ ಮುಳುಗಡೆಯ ಊರಲ್ಲೂ ಅವರಿದ್ದರು ಎಂಬ ಮಾಹಿತಿ ಸೇರಿತು. ಅಚಾನಕ್ ನನ್ನ ಬರವಣಿಗೆಯಲ್ಲಿ ಈ ಉಲ್ಲೇಖ ನುಸುಳಿ ಬಿಟ್ಟಿತು. ನೋವುಂಟು ಮಾಡುವ ಯಾವ ಉದ್ದೇಶವೂ ನನಗಿರಲಿಲ್ಲ. ಈ ಸ್ಮಾರ್ತ ಬ್ರಾಹ್ಮಣರು ಕೃತಿ ಓದಿದ ಮೇಲೆ ಸ್ಥಾನಿಕ ಬ್ರಾಹ್ಮಣರು ಕೀಳರಿಮೆ ಇಟ್ಟುಕೊಳ್ಳಲು ಯಾವ ಕಾರಣವೂ ಇಲ್ಲ ಎಂದು ಮತ್ತಷ್ಟು ಗಟ್ಟಿಯಾಗಿ ಹೇಳುವಂತಾಯಿತು. ಡಾ.ಗುರುರಾಜ ಭಟ್ಟರ ಲೇಖನ ಈ ಪುಸ್ತಕದ ಗೌರವ ಹೆಚ್ಚಿಸಿದೆ.

ಕೆ.ಜಿ.ವಸಂತಮಾಧವ, ಆಕಾಶ್ ಬಾಲಕೃಷ್ಣ ಮುಂತಾದವರ ಲೇಖನ ಸಹ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ಡಾ.ಆರ್.ಗಣೇಶ್ ರವರ ಮೌಲಿಕ ಲೇಖನವೂ ಉಲ್ಲೇಖಾರ್ಹ. ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಲೇಖನವೂ ನನ್ನ ಗಮನ ಸೆಳೆಯಿತು. ಶೃಂಗೇರಿಯ ಜಗದ್ಗುರುಗಳಿಂದ ಇವರಿಗೆ ಮಠ ಮತ್ತು ಮಠಾದಿಪತಿ ದೊರಕಿದೆ. ಅದನ್ನಿಟ್ಟುಕೊಂಡು ಜಗದ್ಗುರುಗಳಿಂದ ಧರ್ಮ ನಾಶವಾಯಿತು ಎಂದೊಬ್ಬರು ಟೀಕಿಸಿದ್ದರು. ಈ ಡಾ.ಪ್ರದೀಪ ಚಂದ್ರ ಆರ್ ತ್ರಾಸಿ ಮತ್ತು ಉಮಾ ಪಿ ತ್ರಾಸಿ ಲೇಖನದಿಂದ ನನಗಂತೂ ನಿರಾಳವೆನಿಸಿತು.

ಮಾನಂಜೆಯ ರಾಘವೇಂದ್ರ ರಾವ್ ಮತ್ತು ಜಿ.ಆರ್.ವೈಶಾಲಿ ಬರೆದಿರುವ ಪಂಚಗ್ರಾಮ ಬ್ರಾಹ್ಮಣರು ಲೇಖನವೂ ಸಮಗ್ರವಾಗಿದೆ ಮತ್ತು ಹೆಚ್ಚು ವಸ್ತುನಿಷ್ಠವಾಗಿದೆ. ನೆರಿಯಾ ಹೆಬ್ಬಾರರು ಪಂಚಗ್ರಾಮದಲ್ಲೂ ಅತ್ತ ಶೃಂಗೇರಿಯ ಶಿಷ್ಯ ಮಲೆನಾಡು ಹೆಬ್ಬಾರರು ಕೃತಿಯಲ್ಲೂ ಪ್ರಸ್ತಾಪವಾಗಿದೆ. ಹೆಬ್ಬಾರರೆಂದರೆ ಅದು ವಿವಿಧ ಬ್ರಾಹ್ಮಣರ ಪಂಗಡದಲ್ಲೂ ಇರುವ ಹೆಗ್ಗಳಿಕೆಯ ಪದವಿ. ಶೃಂಗೇರಿಯ ಶಿವಳ್ಳಿಯೆಂಬ ಪಂಗಡದ ಕುರಿತು ಈ ಗ್ರಂಥ ಮಾಹಿತಿ ನೀಡಿಲ್ಲ. ಹಾಗೇ ಕುರುಶಿವಳ್ಳಿ ಕುರಿತೂ ಮಾಹಿತಿ ಇಲ್ಲ. ಮಾಲೇರು ಜನಾಂಗ, ವಿಶ್ವಕರ್ಮರು ಸೇರಿ ಇನ್ನೂ ಕೆಲವು ಮಾಹಿತಿ ಮುಂದೆ ಸೇರ್ಪಡೆಯಾದರೆ ಚೆನ್ನ. ಉಡುಪಿಯಿಂದ ಶೃಂಗೇರಿಗೆ ವಲಸೆ ಬಂದವರು ಶೃಂಗೇರಿ ಶಿವಳ್ಳಿಯವರು ಎಂಬ ನನ್ನ ಲೇಖನ ಒಂದಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಉಡುಪಿಯ ಶಿವಳ್ಳಿ ತುಳು ಮಾತನಾಡುತ್ತಾರಲ್ಲಾ ಎಂದು ಪ್ರಶ್ನಿಸಿದ್ದರು. ಉಡುಪಿಯಲ್ಲಿ ತುಳು ಮಾತನಾಡದ ಶಿವಳ್ಳಿಯವರೂ ಇದ್ದರು ಎಂದು ಈ ಗ್ರಂಥ ಹೇಳುತ್ತಿದೆ.

ಟಿ.ಆರ್.ಅನಂತರಾಮು ಶ್ರಮ ಪ್ರಶಂಸಾರ್ಹ

ಟಿ.ಆರ್.ಅನಂತರಾಮು ಅವರು ಒಂದೆಡೆಯೇ ಇಷ್ಟೆಲ್ಲ ಮಾಹಿತಿ ದೊರಕುವಂತೆ ಮಾಡುವಲ್ಲಿ ದೊಡ್ಡ ಶ್ರಮ ಹಾಕಿದ್ದಾರೆ. ಪೂರ್ವದಲ್ಲಿ ಬ್ರಾಹ್ಮಣರಲ್ಲಿ ಪಂಗಡಗಳಿರಲಿಲ್ಲ, ಕಾಲಕ್ರಮೇಣ ವಾಸ ಸ್ಥಳ, ವೃತ್ತಿ ಇತ್ಯಾದಿ ಕಾರಣದಿಂದ ಪ್ರತ್ಯೇಕತೆ ಸೃಷ್ಟಿ ಆಗಿದೆ. ಮಾದ್ವ ಮತದ ಜನ್ಮದೊಂದಿಗೆ ಬ್ರಾಹ್ಮಣರು ದೊಡ್ಡ ಒಡಕು ಕಂಡರು. ಮಠ ಮಾನ್ಯಗಳು ಒಗ್ಗಟ್ಟಿನ ಮಂತ್ರದ ಬದಲು ವಿಘಟನೆಯ ಜಪ ಮಾಡಿದವು. ತಮ್ಮನ್ನು ತಾವು ಶ್ರೇಷ್ಠರು ಎಂದು ಭಾವಿಸುವ ಬ್ರಾಹ್ಮಣರು ತಮ್ಮ ಭೇದ ಬದಿಗಿಟ್ಟು ಒಗ್ಗಟ್ಟು ತೋರಿಸುವ ಕಾಲ ಬಂದೀತೇ ಎಂಬ ಪ್ರಶ್ನೆಯಂತೂ ಕಾಡುತ್ತದೆ.

ಕರ್ನಾಟಕ, ತಮಿಳುನಾಡು,ಆಂಧ್ರ, ಮಹಾರಾಷ್ಟ್ರ ಮೂಲದ ಬ್ರಾಹ್ಮಣರ ವಿವರವೂ ಈ ಗ್ರಂಥದಲ್ಲಿ ಸಿಗುತ್ತಿದೆ. ಕರ್ನಾಟಕದಲ್ಲೂ ಕರಾವಳಿ, ಬಯಲು ನಾಡು, ಮಲೆನಾಡು ಬ್ರಾಹ್ಮಣರ ವಿವರ ಇದೆ. ಬಡಗನಾಡು, ಮುಲಕನಾಡು, ಸೇರಿದಂತೆ ಬಹುತೇಕ ಪಂಗಡಗಳ ಕುರಿತು ಒಂದು ಅರಿವು ನೀಡುವಲ್ಲಿ ಈ ಗ್ರಂಥ ಯಶಸ್ವಿ ಆಗಿದೆ. ಖಂಡಿತ ಇದೊಂದು ಆಕರ ಗ್ರಂಥ ಆಗಿದೆ.

ಬರಹ: ಪ್ರಭಾಕರ ಕಾರಂತ, ಲೇಖಕರು

ಕೃತಿ ಹೆಸರು: ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ ಹಿನ್ನೆಲೆ

ಕೃತಿ ಸಂಪಾದಕರು: ಡಾ ಟಿ ಆರ್ ಅನಂತರಾಮು

ಆವೃತ್ತಿ ಮತ್ತು ಪುಟಗಳ ಸಂಖ್ಯೆ: 3ನೇ ಪರಿಷ್ಕೃತ ಆವೃತ್ತಿ 650 ಪುಟ

ಬೆಲೆ: 840 ರೂಪಾಯಿ.

ಪ್ರಕಾಶಕರು - ಹರಿವು ಬುಕ್ಸ್

ಆನ್‌ಲೈನ್‌: harivubooks.com

ಪ್ರಕಾಶಕರ ಸಂರ್ಪಕ ಸಂಖ್ಯೆ 8088822171.

ಪ್ರಭಾಕರ ಕಾರಂತ, ಲೇಖಕರು
ಪ್ರಭಾಕರ ಕಾರಂತ, ಲೇಖಕರು
Whats_app_banner