ನಿಮ್ಮ ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರಾ ? ಹಾಗಿದ್ರೆ ಈ ಟಿಪ್ಸ್ ನಿಮಗಾಗಿ
Children Facing Asthma: ಹವಾಮಾನ ಬದಲಾದಂತೆಲ್ಲಾ ಆರೋಗ್ಯ ಸಮಸ್ಯೆಗಳು ನಮ್ಮನ್ನು ಬೆಂಬಿಡದೆ ಕಾಡುತ್ತವೆ. ಸದ್ಯ ಚಳಿಗಾಲವು ಕೊನೆಗೊಳ್ಳುತ್ತಿದ್ದಂತೆ, ಅಸ್ತಮಾದಿಂದ ದೂರವಿರಿಸಲು ಇಲ್ಲಿವೆ ಅಗತ್ಯ ಸಲಹೆಗಳು.
ಚಳಿಗಾಲವೆಂದರೆ ಸಾಕು ಅದು ಹವಾಮಾನದ ಹೊಸ ಅದ್ಭುತಗಳಿಗೆ ಕಾರಣವಾಗುತ್ತಲೇ ಇರುತ್ತವೆ. ಚಳಿಗಾಲದ ಕೊನೆಯ ದಿನಗಳಲ್ಲಿ ಸ್ರವಿಸುವ ಮೂಗು, ಕೆಮ್ಮಿನ ಕಾಟ, ಅಲರ್ಜಿ ಮತ್ತು ಉಸಿರಾಟದ ತೊಂದರೆಗಳಿಂದಾಗಿ ಮಕ್ಕಳು ಸಂಕಟ ಅನುಭವಿಸುತ್ತಾರೆ. ಪದೇ ಪದೇ ಶಾಲೆಗೆ ರಜೆ ಹಾಕಬೇಕಾಗುತ್ತದೆ.
ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಪುಣೆಯ ಅಂಕುರಾ ಆಸ್ಪತ್ರೆಯ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಕನ್ಸಲ್ಟೆಂಟ್ (ಮಕ್ಕಳಿಗೆ ಐಸಿಯು ತಜ್ಞರು), ಡಾ ವಿಶ್ರುತ್ ಜೋಶಿ ಅವರು ಹೇಳಿರುವಂತೆ, “ಚಳಿಗಾಲದ ಗಾಳಿಯು ಶೀತ ಮತ್ತು ಶುಷ್ಕವಾಗಿರುತ್ತದೆ. ಅಸ್ತಮಾ ಹೊಂದಿರುವ ಮಕ್ಕಳ ಉಸಿರಾಟದ ದಾರಿಯು ಕಿರಿದಾಗಿದ್ದು, ಇದು ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ” ಎಂದಿದ್ದಾರೆ.
ಅಸ್ತಮಾ ನಿಯಂತ್ರಣಕ್ಕೆ ಹೀಗೆ ಮಾಡಿ:
ಡಾ ವಿಶ್ರುತ್ ಜೋಶಿ ಅವರು ಹೇಳಿರುವಂತೆ, “ಚಳಿಗಾಲದ ಕೊನೆಯ ಅವಧಿಯನ್ನು ಸುಸೂತ್ರವಾಗಿಸಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.. ಚಳಿಗಾಲದಲ್ಲಿ ಬೆಚ್ಚಗಿರಲು ಪೋಷಕರು ಮಕ್ಕಳನ್ನು ಮನೆಯೊಳಗೇ ಇರಿಸಿಕೊಂಡು ಹೀಟರ್ ನಂತಹ ವಸ್ತುಗಳ ಮೊರೆ ಹೋಗುತ್ತಾರೆ. ಇದು ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ. ಅದಕ್ಕೆ ಬದಲಾಗಿ ಬೆಚ್ಚನೆಯ ಬಟ್ಟೆಗಳನ್ನು ತೊಡಿಸುವ ಮೂಲಕ ಮಕ್ಕಳನ್ನು ಮನೆಯ ಹೊರಗೆ ಕರೆತಂದು ಬಿಸಿಲಿಗೆ ಮೈಯೊಡ್ಡುವಂತೆ ಮಾಡುವುದು ಉತ್ತಮ” ಎಂದಿದ್ದಾರೆ.
ಅಲ್ಲದೆ, "ಹೀಟರ್ ನಂತಹ ವಸ್ತುಗಳನ್ನು ಬಳಸಿ ಬೆಚ್ಚಗೆ ಇರಲು ಬಯಸುವ ಮುನ್ನ ಅವುಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವುದು ಮತ್ತು ಫಿಲ್ಟರ್ ಬದಲಾವಣೆ ಅತ್ಯಗತ್ಯ. ಇನ್ನು ಧೂಳು ನಿಯಂತ್ರಣಕ್ಕೆ ತರಲು ಆರ್ದ್ರಕಗಳನ್ನು ಬಳಸಬಹುದು " ಎನ್ನುತ್ತಾರೆ.
ಉಸಿರಾಟದ ಮಾರ್ಗಗಳು ಸಹ ಸೋಂಕಿಗೆ ಗುರಿಯಾಗುತ್ತವೆ, ಆದ್ದರಿಂದ ವಯಸ್ಸಿಗೆ ಸೂಕ್ತವಾದ ಲಸಿಕೆಗಳನ್ನು ತೆಗೆದುಕೊಳ್ಳಲೇ ಬೇಕು. ಕೈಗಳ ನೈರ್ಮಲ್ಯ ಮತ್ತು ಮಾಸ್ಕ್ ಗಳ ಬಳಕೆಯು ಅತ್ಯಂತ ಮಹತ್ವದ್ದಾಗಿದೆ. ಸೋಂಕು ಇರುವವರೊಂದಿಗೆ ಸಂಪರ್ಕವನ್ನು ತಪ್ಪಿಸುವುದು ಅವಶ್ಯಕ.
“ಅಸ್ತಮಾ ರೋಗಲಕ್ಷಣಗಳ ತಡೆಗಟ್ಟಲು ಆರೋಗ್ಯಕರ ಆಹಾರಗಳ ಸೇವನೆ ಮತ್ತು ಸಾಕಷ್ಟು ನೀರಿನಂಶವು ಅತ್ಯಗತ್ಯ. ಅಲ್ಲದೆ ಮಕ್ಕಳ ವೈದ್ಯರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದು, ಆರೋಗ್ಯದ ಏರುಪೇರುಗಳ ಮಾಹಿತಿಯನ್ನು ಹಂಚಿಕೊಳ್ಳಿ” ಎಂದಿದ್ದಾರೆ ಡಾ ವಿಶ್ರುತ್ ಜೋಶಿ.