Kids Weight: ನಿಮ್ಮ ಮಕ್ಕಳು ಸಣ್ಣಗಿದ್ದಾರ? ಈ ಆಹಾರ ತಿನ್ನಿಸಿದರೆ ಮಕ್ಕಳ ತೂಕವೂ ಹೆಚ್ಚುತ್ತದೆ, ಆರೋಗ್ಯಕ್ಕೂ ಉತ್ತಮ
Kids Weight: ಕೆಲವು ಮಕ್ಕಳು ಗುಂಡುಗುಂಡಾಗಿ ಮುದ್ದಾಗಿ ಬೆಳೆಯುತ್ತಾರೆ. ಇನ್ನು ಕೆಲವು ಮಕ್ಕಳು ಎಷ್ಟು ತಿಂದರೂ ಸಣಕಲರಾಗಿರುತ್ತಾರೆ. ಮಕ್ಕಳ ತೂಕ ಹೆಚ್ಚಿಸಲು ಬಯಸುವವರು ಕೆಲವು ಆಹಾರಗಳನ್ನು ಅವರ ಮೆನುವಿನಲ್ಲಿ ಸೇರಿಸಬೇಕಾಗುತ್ತದೆ. ಮಗುವಿನ ತೂಕ ಹೆಚ್ಚಿಸಲು ನೆರವಾಗುವ ಐದು ಮುಖ್ಯ ಆಹಾರಗಳ ವಿವರ ಇಲ್ಲಿ ನೀಡಲಾಗಿದೆ.

Kids Weight: ಮಕ್ಕಳು ಎಷ್ಟೇ ತಿಂದರೂ ದಪ್ಪಗೆ ಆಗುತ್ತಿಲ್ಲ ಎನ್ನುವುದು ಹೆತ್ತವರ, ಪೋಷಕರ ದೂರು ಇರುತ್ತದೆ. ಕೆಲವು ಮಕ್ಕಳು ಏನೇ ತಿಂದರೂ ಗುಂಡುಗುಂಡಾಗಿ ಇರುತ್ತಾರೆ. ಕೆಲವು ಮಕ್ಕಳು ಎಷ್ಟೇ ತಿಂದರೂ ದಪ್ಪಗಾಗದೆ ಇರಲು ಅವರು "ಏನು ತಿನ್ನುತ್ತಿದ್ದಾರೆ" "ಪೋಷಕಾಂಶವಿರುವ ಆಹಾರ ಎಷ್ಟು ತಿನ್ನುತ್ತಿದ್ದಾರೆ" ಇತ್ಯಾದಿಗಳು ಮುಖ್ಯವಾಗಿರುತ್ತವೆ. ಮಕ್ಕಳ ಆರೋಗ್ಯಕರ ಬೆಳವಣಿಗೆ, ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೋಷಕರು ಗಮನ ನೀಡಬೇಕು. ಮಕ್ಕಳು ತಿನ್ನುವ ಆಹಾರದಲ್ಲಿ ಏನೆಲ್ಲ ಅಂಶಗಳಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವು ಮಕ್ಕಳು ಆರೋಗ್ಯಕರವಾಗಿ ಕಾಣುತ್ತಾರೆ. ಆದರೆ ತೆಳ್ಳಗಿರುತ್ತಾರೆ. ಈ ರೀತಿ ಸಣಕಲು ಇರುವ ಮಕ್ಕಳನ್ನು ನೋಡಿದಾಗ "ಮನೆಯಲ್ಲಿ ಹೊಟ್ಟೆಗೆ ಏನೂ ಕೊಡೋದಿಲ್ವ" ಎಂದು ಸಾಕಷ್ಟು ಜನರು ಪ್ರಶ್ನಿಸಬಹುದು. ಅಯ್ಯೋ ಮನೆಯಲ್ಲಿ ಬಕಾಸುರನಂತೆ ಒಂದ ಬಟ್ಟಲು ತುಂಬಾ ತಿನ್ನುತ್ತಾನೆ ಎಂದು ಮನೆಯಲ್ಲಿ ಉತ್ತರಿಸುತ್ತಾರೆ. ಆದರೆ, ಮಕ್ಕಳಿಗೆ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದೇ ಸಮಯದಲ್ಲಿ ತೂಕವೂ ಹೆಚ್ಚುತ್ತದೆ. ಇದರ ಜತೆಗೆ, ಮಕ್ಕಳು ಸರಿಯಾದ ಸಮಯಕ್ಕೆ ಆಹಾರ ಸೇವಿಸುತ್ತ ಇರುವಂತೆಯೂ ನೋಡಬೇಕು.
ಕೋಳಿ ಮೊಟ್ಟೆಗಳು
ಕೋಳಿ ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಒಮೆಗಾ 3 ಕೊಬ್ಬಿನಾಮ್ಲಗಳು, ಫೋಲಿಕ್ ಆಮ್ಲ ಮತ್ತು ಇತರ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ ಪ್ರತಿನಿತ್ಯ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನುವುದು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ಮೊಟ್ಟೆಗಳು ಮಕ್ಕಳನ್ನು ಆರೋಗ್ಯವಾಗಿ ಮತ್ತು ಸದೃಢವಾಗಿಡುವುದಲ್ಲದೆ, ಅವುಗಳಲ್ಲಿರುವ ಫೋಲಿಕ್ ಆಮ್ಲವು ಮಕ್ಕಳನ್ನು ಮಾನಸಿಕವಾಗಿ ಸದೃಢರನ್ನಾಗಿಸಲು ಸಹಾಯ ಮಾಡುತ್ತದೆ.
ಹಾಲು
ಮಕ್ಕಳ ಆಹಾರದಲ್ಲಿ ಹಾಲನ್ನು ಸೇರಿಸುವುದು ಅವರ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತವೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಮಕ್ಕಳು ಹೆಚ್ಚಾಗಿ ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಆದರೆ, ಮಕ್ಕಳನ್ನು ಓಲೈಸಿ ಹಾಲು ಕುಡಿಯುವಂತೆ ಮಾಡಬೇಕು. ಜೇನುತುಪ್ಪ ಬೆರೆಸಿದ ಹಾಲು ಕುಡಿಯಲು ಪ್ರಯತ್ನಿಸಿ.
ಒಣ ಹಣ್ಣುಗಳು
ಡ್ರೈಫ್ರುಟ್ಸ್ ಮಕ್ಕಳು ಇಷ್ಟಪಡುತ್ತಾರೆ. ವಿವಿಧ ರೀತಿಯ ಒಣಹಣ್ಣುಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಉಪಯುಕ್ತವಾಗಿವೆ. ಹಾಗಾಗಿ ಮಕ್ಕಳಿಗೆ ಒಣ ಹಣ್ಣುಗಳನ್ನು ತಿನ್ನಿಸುವುದು ತುಂಬಾ ಪ್ರಯೋಜನಕಾರಿ. ಮಕ್ಕಳ ಆಹಾರದಲ್ಲಿ ಬಾದಾಮಿ, ವಾಲ್ನಟ್ಸ್, ಒಣದ್ರಾಕ್ಷಿ, ಗೋಡಂಬಿ, ಮಖಾನಾ ಮುಂತಾದ ಒಣ ಹಣ್ಣುಗಳನ್ನು ಸೇರಿಸಲು ಮರೆಯಬೇಡಿ.
ಬಾಳೆಹಣ್ಣು
ಬೆಳೆಯುತ್ತಿರುವ ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣು ನೀಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಮಗುವಿಗೆ ತ್ವರಿತವಾಗಿ ಶಕ್ತಿ ದೊರೆಯುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ಮಗುವಿನ ದೇಹವು ಆರೋಗ್ಯಕರವಾಗಿರುತ್ತದೆ. ಪ್ರತಿ ದಿನ ಬಾಳೆಹಣ್ಣು ತಿನ್ನುವ ಮಕ್ಕಳ ಮಾನಸಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
ತುಪ್ಪ
ಮಕ್ಕಳು ದೈಹಿಕವಾಗಿ ಆರೋಗ್ಯವಂತರಾಗಿ ಮತ್ತು ಸದೃಢವಾಗಿರಲು ಮಕ್ಕಳ ಆಹಾರದಲ್ಲಿ ದೇಸಿ ತುಪ್ಪವನ್ನು ಸೇರಿಸಬೇಕು. ತುಪ್ಪದ ಮೂಲಕ ಮಕ್ಕಳಿಗೆ ಒಳ್ಳೆಯ ಕೊಬ್ಬು ಸಿಗುತ್ತದೆ. ನಿತ್ಯವೂ ತುಪ್ಪವನ್ನು ತಿಂದರೆ ನಿಮ್ಮ ಮಗುವಿನ ಮೆದುಳು ಕೂಡ ಕ್ರಿಯಾಶೀಲವಾಗಿರುತ್ತದೆ. ಇವುಗಳ ಜೊತೆಗೆ ತುಪ್ಪದಲ್ಲಿರುವ ಆ್ಯಂಟಿ ಫಂಗಲ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಕೂಡ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿವೆ.