ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಮನೆ ಚಿಕ್ಕದೆಂಬ ಚಿಂತೆ ಬಿಡಿ, ನಾವು ಹೇಳಿದಂತೆ ಜೋಡಿಸಿ; ಆಗ ನೋಡಿ ಅಡುಗೆಮನೆಯಲ್ಲಿ ಜಾಗವೋ ಜಾಗ

ಅಡುಗೆಮನೆ ಚಿಕ್ಕದೆಂಬ ಚಿಂತೆ ಬಿಡಿ, ನಾವು ಹೇಳಿದಂತೆ ಜೋಡಿಸಿ; ಆಗ ನೋಡಿ ಅಡುಗೆಮನೆಯಲ್ಲಿ ಜಾಗವೋ ಜಾಗ

ಚಿಕ್ಕ ಅಡುಗೆಮನೆಯಲ್ಲಿ ಕೈಕಾಲುಗಳೇ ಆಡುವುದಿಲ್ಲ ಅಂತ ಅನಿಸುತ್ತಿದೆಯಾ? ಅಡುಗೆಮನೆಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಮತ್ತು ಕ್ರಮದಲ್ಲಿ ಜೋಡಿಸಿದರೆ ನಿಮ್ಮ ಚಿಕ್ಕ ಅಡುಗೆಮನೆಯು ದೊಡ್ಡದಾಗಿ ಕಾಣಿಸುತ್ತದೆ. ಇಲ್ಲಿ ಅಡುಗೆಮನೆ ಜೋಡಿಸಲು ಕೆಲವು ಸಲಹೆ ನೀಡಲಾಗಿದೆ. ನೀವೂ ಇದನ್ನೊಮ್ಮೆ ಟ್ರೈ ಮಾಡಿ. ಅಡುಗೆಮನೆಯಲ್ಲಿ ಜಾಗವೋ ಜಾಗ. (ಬರಹ: ಅರ್ಚನಾ ವಿ. ಭಟ್‌)

ಅಡುಗೆಮನೆ ಚಿಕ್ಕದೆಂಬ ಚಿಂತೆ ಬಿಡಿ, ನಾವು ಹೇಳಿದಂತೆ ಜೋಡಿಸಿ; ಆಗ ನೋಡಿ ಅಡುಗೆಮನೆಯಲ್ಲಿ ಜಾಗವೋ ಜಾಗ
ಅಡುಗೆಮನೆ ಚಿಕ್ಕದೆಂಬ ಚಿಂತೆ ಬಿಡಿ, ನಾವು ಹೇಳಿದಂತೆ ಜೋಡಿಸಿ; ಆಗ ನೋಡಿ ಅಡುಗೆಮನೆಯಲ್ಲಿ ಜಾಗವೋ ಜಾಗ

ನಗರಗಳಲ್ಲಿ ವಾಸಿಸುವವರ ಅತಿ ದೊಡ್ಡ ಸಮಸ್ಯೆ ಇದು. ನಮ್ಮ ಅಡುಗೆ ಮನೆ ತುಂಬಾ ಚಿಕ್ಕದು ಕಣ್ರಿ ಅನ್ನುವ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಚಿಕ್ಕ ಅಡುಗೆಮನೆ ಜೋಡಿಸುವುದು ಒಂದು ದೊಡ್ಡ ಸವಾಲಿನ ಕೆಲಸ. ಅಡುಗೆಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಮಕ್ಕಳ ಶಾಲಾಕೆಲಸ, ಅಗತ್ಯ ವಿಷಯಗಳ ಚರ್ಚೆ, ನೀರಿನ ಬಿಲ್‌, ಕರೆಂಟ್‌ ಬಿಲ್‌ಗಳನ್ನಿಡುವ ಮನೆಯ ಪ್ರಮುಖ ಜಾಗವದು. ನೀವು ಅತ್ಯಂತ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಅಡುಗೆಮನೆಯನ್ನು ಜಾಣ್ಮೆಯಿಂದ ಜೋಡಿಸಿಕೊಳ್ಳಬೇಕಾಗುತ್ತದೆ. ಕಡಿಮೆ ಜಾಗದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಕೆಲವು ಮಾರ್ಪಾಟುಗಳನ್ನು ಮಾಡುಕೊಳ್ಳುವುದು ಅಷ್ಟೇ ಅಗತ್ಯ. ಹಾಗಾಗಿ ಗೋಡೆ, ಶೆಲ್ಫ್‌, ಸ್ಟಾಂಡ್‌ಗಳನ್ನು ಉಪಯೋಗಿಸಿಕೊಂಡು ಅಡುಗೆ ಮನೆ ಜೋಡಿಸಿ. ಅಗತ್ಯದ ವಸ್ತುಗಳನ್ನು ಮಾತ್ರ ಇರಿಸಿಕೊಳ್ಳಿ. ಅಡುಗೆಮನೆಯನ್ನು ಜೋಡಿಸಲು ಇಲ್ಲಿ ಕೆಲವು ಸಲಹೆಗಳಿವೆ.

ಟ್ರೆಂಡಿಂಗ್​ ಸುದ್ದಿ

  • ಗೋಡೆಯ ಲಾಭ ಪಡೆದುಕೊಳ್ಳಿ

ನಿಮ್ಮಲ್ಲಿರುವ ವಸ್ತುಗಳಿಗೆ ಅನುಗುಣವಾಗಿ ರಾಡ್‌, ಹುಕ್‌ಗಳನ್ನು ಅಳವಡಿಸಿಕೊಳ್ಳಿ. ಸ್ಥಳಾವಕಾಶಕ್ಕಾಗಿ ಪ್ರತಿ ಗೋಡೆ, ಕಟ್ಟೆ ಮತ್ತು ಕಟ್ಟೆಯ ಕೆಳಗಿನ ಜಾಗವನ್ನು ಪರಿಗಣಿಸಿ. ಡ್ರಾಯರ್‌ಗಳಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕಿ, ಅಗತ್ಯ ವಸ್ತುಗಳನ್ನು ಅಲ್ಲಿ ಜೋಡಿಸಿ. ಅಡುಗೆ ಮಾಡಲು ಬೇಕಾದ ಮತ್ತು ಹ್ಯಾಂಡಲ್‌ಗಳಿರುವ ವಸ್ತುಗಳನ್ನು ನೇತುಹಾಕಿ. ಮಣ್ಣಿನ ಮಡಿಕೆಗಳಿಗೆ ಮತ್ತು ಪಿಂಗಾಣಿ ಪ್ಲೇಟ್‌ಗಳನ್ನಿಡಲು ಗೋಡೆಗೆ ಕಪಾಟು ಅಳವಡಿಸಿಕೊಳ್ಳಿ.

  • ಅಪರೂಪಕ್ಕೆ ಬಳಸುವ ವಸ್ತುಗಳಿಗೆ ಬೇರೆ ಜಾಗ ಕಲ್ಪಿಸಿ

ಪ್ರತಿದಿನ ಬಳಕೆಯಾಗದ ಮತ್ತು ಅಪರೂಪಕ್ಕೊಮ್ಮೆ ಬಳಸುವ ವಸ್ತುಗಳನ್ನು ಬೇರೆ ಜಾಗದಲ್ಲಿರಿಸಿ. ದಿನನಿತ್ಯ ವಸ್ತುಗಳ ಜೊತೆ ಅವುಗಳನ್ನು ಸೇರಿಸಿಬೇಡಿ. ಪ್ರತಿದಿನ ಉಪಯೋಗಿಸುವ ವಸ್ತುಗಳು ನಿಮಗೆ ಕೈಗೆಟುಕುವಂತಿರಲಿ. ಕೆಲವು ವಸ್ತುಗಳ ಮೇಲೆ ಧೂಳು ಇದ್ದರೆ ಅದರರ್ಥ ನೀವು ಅವುಗಳನ್ನು ಪ್ರತಿದಿನ ಬಳಸುತ್ತಿಲ್ಲ ಎಂದು. ಕಟ್ಟೆಯ ಕೆಳಗಿನ ಭಾಗಕ್ಕೆ ಸ್ಟ್ಯಾಂಡ್‌ಗಳನ್ನು ಹಾಕಿಸಿ. ಅಲ್ಲಿ ಅಂತಹ ವಸ್ತುಗಳನ್ನು ಇಡಿ. ನಿಮಗೆ ಅಗತ್ಯವಿರುವಾಗ ಮಾತ್ರ ತೆಗೆಯಿರಿ ಇಲ್ಲವಾದರೆ ಅವುಗಳು ಅಲ್ಲೇ ಇರಲಿ.

  • ಓಪನ್‌ ಶೆಲ್ಫ್‌ಗಳು

ಕಿರಿದಾದ ಜಾಗಗಳಲ್ಲಿ ಲೋಹದ ಅಥವಾ ಮರದ ಓಪನ್‌ ಶೆಲ್ಫಗಳನ್ನು ಅಳವಡಿಸಿ. ಅವುಗಳನ್ನು ಮಸಾಲೆ ಪದಾರ್ಥಗಳನ್ನಿಡಲು ಬಳಸಿ. ಹಗುರವಾದ ತಟ್ಟೆಗಳನ್ನು ಮತ್ತು ಲೋಟಗಳನ್ನು ಅದರಲ್ಲಿಡಬಹುದು.

  • ಬಾಗಿಲು ಗಮನಿಸಿ

ನಿಮ್ಮ ಚಿಕ್ಕ ಅಡುಗೆಮನೆಯಲ್ಲಿರುವ ಬಾಗಿಲು ಬರೀ ಬಾಗಿಲಲ್ಲ. ಅದನ್ನೂ ಸಹ ಸಂಗ್ರಹಣೆಗಾಗಿ ಬಳಸಿಕೊಳ್ಳಬಹುದು. ಬಾಗಿಲಿಗೆ ವಸ್ತುಗಳನ್ನು ನೇತುಹಾಕಲು ಹುಕ್‌ ಅಥವಾ ಶಲ್ಫ್‌ ಅಳಡಿಸಿ. ಅಲ್ಲಿ ಅಡುಗೆಮನೆಗೆ ಅವಶ್ಯವಿರು ಟವಲ್‌, ಸ್ಪೋಂಜ್‌, ಪೇಪರ್‌ ರೋಲ್‌, ಟಿಶ್ಯು ಪೇಪರ್‌ಗಳನ್ನಿರಿಸಿ.

  • ಎತ್ತರದ ಗ್ಲಾಸ್‌ ಕಪಾಟೊಂದಿರಲಿ

ಅಡುಗೆಮನೆಯಲ್ಲಿ ಒಂದು ಎತ್ತರದ ಗ್ಲಾಸ್‌ ಕಪಾಟನ್ನು ಅಳವಡಿಸಿ. ಅದು ಅಡುಗೆಮನೆ ಸುಂದರವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಗ್ಲಾಸ್‌ ಪ್ಲೇಟ್‌, ಬೌಲ್‌, ಪಿಂಗಾಣಿಯ ಚಹಾ ಕಪ್‌, ಸಾಸರ್‌, ಪ್ಲೇಟ್‌ಗಳನ್ನು ಅದರಲ್ಲಿಡಿ. ಜೊತೆಗೆ ಅದರ ಒಂದು ಭಾಗದಲ್ಲಿ ಅಡುಗೆ ಎಣ್ಣೆ, ವಿನೇಗಾರ್‌, ಮಸಾಲೆ ಪದಾರ್ಥಗಳನ್ನಿಡಿ. ಅರ್ಧದಷ್ಟು ವಸ್ತುಗಳನ್ನು ಅದರಲ್ಲಿಯೇ ಇಡಬಹುದು.

  • ಮ್ಯಾಗ್ನೆಟಿಕ್‌ ಪಟ್ಟಿ

ಚಾಕುಗಳನ್ನು ಮ್ಯಾಗ್ನೆಟಿಕ್‌ ಪಟ್ಟಿಗೆ ಸಿಕ್ಕಿಸಿ. ಇದು ನೋಡಲು ಆಕರ್ಷಕವಾಗಿ ಕಾಣಿಸುವುದರ ಜೊತೆಗೆ ಸುಲಭವಾಗಿ ಇಡಬಹುದು. ಇದು ಜಾಗ ಉಳಿತಾಯ ಮಾಡುತ್ತದೆ.

  • ಸಿಂಕ್‌ ಮೇಲಿನ ಕಿಟಕಿಯ ಜಾಗ ಮರೆಯಬೇಡಿ

ಪಾತ್ರೆಗಳನ್ನು ಜೋಡಿಸಲು ಕಿಟಕಿಗೆ ಶೆಲ್ಫ್‌ ಹಾಕಿಸಿ. ತೊಳೆದ ಒದ್ದೆ ಪಾತ್ರೆಗಳನ್ನು ಸಹ ಅದರಲ್ಲಿಡಬಹುದು.

  • ಹಣ್ಣು, ತರಕಾರಿಗಳನ್ನು ತೂಗು ಹಾಕಿ

ಜಾಗದ ಕೊರತೆಯಿದ್ದಾಗ ಬುಟ್ಟಿಗಳಲ್ಲಿ ಹಣ್ಣು, ತರಕಾರಿಗಳನ್ನಿಡುವುದರ ಬದಲಿಗೆ ಅವುಗಳನ್ನು ಒಂದು ಮೂಲೆಯಲ್ಲೋ ಅಥವಾ ಗೋಡೆಗೋ ತೂಗು ಹಾಕಬಹುದು. ಅದಕ್ಕಾಗಿ ಲೇಯರ್‌ಗಳಿರುವ ಹ್ಯಾಂಗಿಂಗ್‌ ಚೀಲಗಳನ್ನು ಅಳವಡಿಸಿಕೊಳ್ಳಿ. ಫ್ರಿಡ್ಜ್‌ ನಲ್ಲಿ ಇಡಲು ಸಾಧ್ಯವಿಲ್ಲದ ತರಕಾರಿ, ಹಣ್ಣುಗಳನ್ನು ಅಲ್ಲಿ ವರ್ಗಾಯಿಸಿ. ಈರುಳ್ಳಿ, ಆಲೂಗಡ್ಡೆ, ಬಾಳೆಹಣ್ಣು ಮುಂತಾದವುಗಳಿಗೆ ಇದು ಹೆಚ್ಚು ಸೂಕ್ತ. ಅದರಂತೆಯೇ ಕಿಚನ್‌ ಟವಲ್‌ಗಳು ಮತ್ತು ಕರವಸ್ತ್ರಗಳನ್ನಿಡಲು ಸಹ ಅದನ್ನು ಬಳಸಬಹುದು.

  • ಫ್ರಿಡ್ಜ್‌ ಮೇಲಿನ ಜಾಗ ಮರೆತರೆ ಹೇಗೆ

ಅಡುಗೆಮನೆಯಲ್ಲಿರುವ ಫ್ರಿಡ್ಜ್‌ನ ಮೇಲಿನ ಜಾಗವನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳುವುದು ಜಾಣತನ. ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಪ್ಲಾಸ್ಟಿಕ್‌ ಅಥವಾ ಬಿದಿರನಿಂದ ನೇಯ್ದ ಬುಟ್ಟಿಗಳನ್ನಿಟ್ಟು ಅದರಲ್ಲಿ ತಿಂಡಿಗಳನ್ನು ಅಥವಾ ಹಗುರುವಾದ ಅಡುಗೆ ಮನೆಯ ಸಾಮಾನುಗಳನ್ನು ಇಡಬಹುದು.

(ಬರಹ: ಅರ್ಚನಾ ವಿ. ಭಟ್‌)

ವಿಭಾಗ