ಹಳೆಯ ಕುಕ್ಕರ್ ಕಪ್ಪಾಗಿ ಕಲೆಗಳು ತುಂಬಿ ಹೋಗಿದೆಯೇ: ಈ ಟ್ರಿಕ್ಸ್ ಫಾಲೊ ಮಾಡಿ, ಕುಕ್ಕರ್‌ ಪಳಪಳ ಹೊಳೆಯುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹಳೆಯ ಕುಕ್ಕರ್ ಕಪ್ಪಾಗಿ ಕಲೆಗಳು ತುಂಬಿ ಹೋಗಿದೆಯೇ: ಈ ಟ್ರಿಕ್ಸ್ ಫಾಲೊ ಮಾಡಿ, ಕುಕ್ಕರ್‌ ಪಳಪಳ ಹೊಳೆಯುತ್ತದೆ

ಹಳೆಯ ಕುಕ್ಕರ್ ಕಪ್ಪಾಗಿ ಕಲೆಗಳು ತುಂಬಿ ಹೋಗಿದೆಯೇ: ಈ ಟ್ರಿಕ್ಸ್ ಫಾಲೊ ಮಾಡಿ, ಕುಕ್ಕರ್‌ ಪಳಪಳ ಹೊಳೆಯುತ್ತದೆ

ಹದಿನೇಳನೆ ಶತಮಾನದಲ್ಲಿ ಆವಿಷ್ಕಾರಗೊಂಡು, ಹತ್ತೊಂಬತ್ತನೆ ಶತಮಾನದಲ್ಲಿ ಅಡುಗೆಮನೆಗೆ ಕಾಲಿಟ್ಟ ಪ್ರೆಶರ್‌ ಕುಕ್ಕರ್‌ ಇಂದಿನ ಮಹಿಳೆಯರ ಪಾಲಿನ ನೆಚ್ಚಿನ ಪಾತ್ರೆ. ಆದರೆ ಪ್ರತಿದಿನ ಬಳಸುವ ಕುಕ್ಕರ್‌ ಮೊಂಡು ಕಲೆಗಳಿಂದ ತುಂಬಿ ಹೋಗಿದ್ದರೆ ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಅದಕ್ಕಾಗಿ ಈ ಟ್ರಿಕ್ಸ್‌ ಪಾಲಿಸಿ, ನಿಮ್ಮ ಮನೆಯ ಕುಕ್ಕರ್‌ ಅನ್ನು ಪಳಪಳ ಹೊಳೆಯುವಂತೆ ಮಾಡಿ.

ಹಳೆಯ ಕುಕ್ಕರ್ ಕಪ್ಪಾಗಿ ಮೊಂಡು ಕಲೆಗಳು ತುಂಬಿ ಹೋಗಿದೆಯೇ? ಈ ಟ್ರಿಕ್ಸ್ ಫಾಲೊ ಮಾಡಿ
ಹಳೆಯ ಕುಕ್ಕರ್ ಕಪ್ಪಾಗಿ ಮೊಂಡು ಕಲೆಗಳು ತುಂಬಿ ಹೋಗಿದೆಯೇ? ಈ ಟ್ರಿಕ್ಸ್ ಫಾಲೊ ಮಾಡಿ (PC: HT File Photo)

ಅಡುಗೆ ಮನೆಯಲ್ಲಿ ಮಹಿಳೆಯರ ನೆಚ್ಚಿನ ಪಾತ್ರೆ ಯಾವುದು ಎಂದು ಕೇಳಿದರೆ ಥಟ್ಟನೆ ಬರುವ ಉತ್ತರ ಪ್ರೆಶರ್‌ ಕುಕ್ಕರ್‌. ಸಮಯದ ಅಭಾವವಿರುವ, ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ಇದು ವರದಾನವಾಗಿದೆ. ಕಡಿಮೆ ಸಮಯದಲ್ಲಿ ಅನ್ನ, ಬೇಳೆ, ಪುಲಾವ್‌, ಸಾಂಬಾರ್‌ ಹೀಗೆ ಎಲ್ಲವನ್ನೂ ಇದರಲ್ಲಿ ಮಾಡಬಹುದಾಗಿದೆ. ಕೆಲವೊಮ್ಮೆ ಧಿಡೀರ್‌ ಅಂತ ಮನೆಗೆ ಬರುವ ಅತಿಥಿಗಳಿಗೆ ಅಡುಗೆ ಮಾಡಲು ಮಹಿಳೆಯರಿಗೆ ಇದು ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರು ಬಹಳಷ್ಟು ಇಷ್ಟಪಡುವ ಪಾತ್ರೆ ಇದಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಎರಡು, ಮೂರು ಕುಕ್ಕರ್‌ ಕಾಣಬಹುದು. ಅವುಗಳಲ್ಲೂ ಬೇರೆ ಬೇರೆ ಸೈಜಿನ ಕುಕ್ಕರ್‌ ಇರುತ್ತವೆ. ಇಬ್ಬರೇ ಇದ್ದಾಗ ಬಳಸುವ ಕುಕ್ಕರ್‌, ಮನೆಗೆ ಅತಿಥಿಗಳು ಬಂದಾಗ ಬಳಸುವ ಕುಕ್ಕರ್‌ ಹೀಗೆಲ್ಲಾ ಇರುತ್ತದೆ. ಅಂತೂ ಆಧುನಿಕ ಜಗತ್ತಿನಲ್ಲಿ ಕುಕ್ಕರ್‌ ಮಹತ್ವದ ಪಾತ್ರವಹಿಸಿದೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಸುಲಭ. ಅಳತೆಗೆ ತಕ್ಕಷ್ಟು ನೀರು ಹಾಕಿ, ಮುಚ್ಚಳ ಮುಚ್ಚಿ 3, 4 ವಿಸಲ್ ಹಾಕಿಸಿದರೆ ಮುಗಿಯಿತು, ಅಡುಗೆ ಸಿದ್ಧ. ಆದರೆ ಕುಕ್ಕರ್‌ನ ಅಡಿಭಾಗಕ್ಕೆ ಹಾಕುವ ನೀರು ಬಹಳ ಮುಖ್ಯವಾದದ್ದು. ಕಡಿಮೆ ನೀರು ಹಾಕಿದರೆ ಕುಕ್ಕರ್‌ ಸುಟ್ಟು ಹೋಗಿ ಕಪ್ಪಾಗುತ್ತದೆ. ಸಮಸ್ಯೆ ಬರುವುದೇ ಆವಾಗ. ಆ ಕಪ್ಪಾದ ಕಲೆಯನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಅದರಲ್ಲೂ ಕುಕ್ಕರ್‌ನ ಒಳಗೆ ಹಾಗೂ ಹೊರಗೆ ಎರಡೂ ಕಡೆ ಉಂಟಾದ ಕಪ್ಪು ಕಲೆಗಳನ್ನು ತೆಗೆಯುವುದು ತಾಳ್ಮೆ ಪರೀಕ್ಷಿಸಿದಂತೆ. ಏಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಹೊಸ ಕುಕ್ಕರ್‌ನ ಹಾಗೆ ಹೊಳೆಯುವಂತೆ ಮಾಡಲು ಹರಸಾಹಸ ಪಡಬೇಕಾಗುತ್ತದೆ. ನಿಮ್ಮ ಈ ಸಮಸ್ಯೆಗೆ ಉತ್ತರವಾಗಿ ಇಲ್ಲಿ ಕೆಲವು ಟ್ರಿಕ್ಸ್‌ ನೀಡಲಾಗಿದೆ. ಇವುಗಳನ್ನು ಪಾಲಿಸುವುದರ ಮೂಲಕ ಮೊಂಡು ಕಲೆಗಳಿಂದ ತುಂಬಿ ಹೋಗಿರುವ ಪ್ರೆಶರ್‌ ಕುಕ್ಕರ್‌ ಅನ್ನು ಪಳಪಳ ಹೊಳೆಯುವಂತೆ ಮಾಡಿ.

ಕುಕ್ಕರ್‌ನ ಕಪ್ಪು ಕಲೆಗಳನ್ನು ತೆಗೆಯಲು ಸಿಂಪಲ್‌ ಟ್ರಿಕ್‌ಗಳು

ಕಲ್ಲುಪ್ಪು: ಸುಟ್ಟು ಕರಕಲಾದ ಪ್ರೆಶರ್‌ ಕುಕ್ಕರ್‌ ಅನ್ನು ಸ್ವಚ್ಛಗೊಳಿಸಲು ನೀವು ಕಲ್ಲುಪ್ಪು ಅಥವಾ ಸೈಂದವ ಲವಣ ಬಳಸಬಹುದು. ಮೊದಲಿಗೆ ಕುಕ್ಕರ್‌ನಲ್ಲಿ ನಾಲ್ಕು ಲೋಟ ನೀರು ಹಾಕಿ. ಅದಕ್ಕೆ 2 ರಿಂದ 3 ಚಮಚ ಕಲ್ಲುಪ್ಪು ಸೇರಿಸಿ. ಸ್ವಲ್ಪ ಸಮಯದವರೆಗೆ ಕುದಿಸಿ. ನಂತರ ಆ ನೀರನ್ನು ಚೆಲ್ಲಿ. ಈಗ ಸ್ಕ್ರಬ್‌ನ ಸಹಾಯದಿಂದ ಕುಕ್ಕರ್‌ ಅನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಆಶ್ಚರ್ಯಕರ ರೀತಿಯಲ್ಲಿ ಕಪ್ಪು ಕಲೆಗಳು ದೂರವಾಗುತ್ತವೆ.

ಈರುಳ್ಳಿಯ ರಸ: ಪ್ರೆಶರ್‌ ಕುಕ್ಕರ್‌ನ ಅಸಾಧ್ಯ ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯ ರಸ ಮತ್ತು ವಿನೆಗರ್‌ ಅನ್ನು ಬಳಸಬಹುದು. ನಾಲ್ಕರಿಂದ ಐದು ಚಮಚ ಈರುಳ್ಳಿಯ ರಸ ಹಾಗೂ ಅಷ್ಟೇ ಪ್ರಮಾಣದ ವಿನೆಗರ್‌ ಅನ್ನು ಪ್ರೆಶರ್‌ ಕುಕ್ಕರ್‌ಗೆ ಹಾಕಿ. ಈಗ ಸ್ಕ್ರಬ್‌ ತೆಗೆದುಕೊಂಡು ಉಜ್ಜಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಅಸಾಧ್ಯ ಕಲೆಗಳು ನಿಮಿಷದಲ್ಲೇ ಮಾಯವಾಗುತ್ತವೆ.

ಬಿಸಿ ನೀರು: ಬಿಸಿ ನೀರು ಅಡುಗೆಮನೆಯ ಅನೇಕ ಕೆಲಸಗಳನ್ನು ಸುಲಭಗೊಳಿಸಿದೆ. ಬಿಸಿ ನೀರಿನಿಂದ ಪ್ರೆಶರ್‌ ಕುಕ್ಕರ್‌ನ ಕಪ್ಪಾದ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಕುಕ್ಕರ್‌ಗೆ ಬಿಸಿ ನೀರು ಹಾಕಿ. ಎಲ್ಲಿಯವರೆಗೆ ಕಪ್ಪಾಗಿದೆಯೋ ಅಲ್ಲಿಯವರೆಗೂ ನೀರಿರಲಿ. ಅದನ್ನು ಈಗ ಸುಮಾರು 10 ನಿಮಿಷಗಳ ಕಾಲ ಮಂದ ಉರಿಯಲ್ಲಿ ಇನ್ನೊಮ್ಮೆ ಬಿಸಿ ಮಾಡಿ. ನೀರು ಸ್ವಲ್ಪ ಬಿಸಿ ಆರಿದ ಮೇಲೆ, ಪಾತ್ರೆ ತೊಳೆಯುವ ಸೋಪು ಅಥವಾ ಲಿಕ್ವಿಡ್‌ಅನ್ನು ಸ್ಕ್ರಬ್‌ಗೆ ಹಾಕಿ. ಕುಕ್ಕರ್‌ ಅನ್ನು ಉಜ್ಜಿ. ಕಠಿಣ ಕಲೆಗಳು ದೂರವಾಗಿ ಕುಕ್ಕರ್‌ ಹೊಳೆಯುತ್ತದೆ.

ಬೇಕಿಂಗ್‌ ಸೋಡಾ: ಕುಕ್ಕರ್‌ ಮೇಲ್ಮೈ ಕಪ್ಪಾಗಿದ್ದರೆ ಈ ಟ್ರಿಕ್ಸ್‌ ಬಳಸಿ ಸ್ವಚ್ಛಗೊಳಿಸಿ. ಕುಕ್ಕರ್‌ನ ಮೇಲೆ 2–3 ಚಮಚ ಅಡುಗೆ ಸೋಡಾ (ಬೇಕಿಂಗ್‌ ಸೋಡಾ) ಹಾಕಿ. ಅದಕ್ಕೆ ಒಂದೆರಡು ಹನಿ ನೀರು ಸೇರಿಸಿಕೊಂಡು ಸ್ಕ್ರಬ್‌ನ ಸಹಾಯದಿಂದ ಉಜ್ಜಿ. ನಂತರ ಪಾತ್ರೆ ತೊಳೆಯುವ ಲಿಕ್ವಿಡ್‌ನಿಂದ ಇನ್ನೊಮ್ಮೆ ತೊಳೆಯಿರಿ. ಕಪ್ಪಾಗಿ ಕಾಣಿಸುತ್ತಿದ್ದ ಕುಕ್ಕರ್‌ ಈಗ ಪಳ ಪಳ ಹೊಳೆಯುತ್ತದೆ.

ನೋಡಿದ್ರಲ್ಲ, ಕಪ್ಪಾದ ಮೊಂಡು ಕಲೆಗಳಿರುವ ಕಕ್ಕರ್‌ ಅನ್ನು ಹೊಸತರಂತೆ ಮಾಡುವ ಟ್ರಿಕ್‌ಗಳನ್ನ. ಯಾವಾಗಲೂ ಕುಕ್ಕರ್ ಒಳಭಾಗ ಹೊಳೆಯುವಂತಿರಬೇಕೆಂದರೆ ಅನ್ನ ಅಥವಾ ಬೇಳೆ ಬೇಯಿಸುವಾಗ ಕುಕ್ಕರ್‌ನ ತಳಕ್ಕೆ ಹಾಕುವ ನೀರಿಗೆ ಒಂದೆರಡು ಹನಿ ಲಿಂಬು ರಸ ಅಥವಾ ಚೂರು ಹುಣಸೆ ಹಣ್ಣು ಹಾಕಿ. ಇದರಿಂದ ಕುಕ್ಕರ್‌ನ ಒಳಭಾಗ ಮಬ್ಬಾಗಿ ಹಳೆಯದರಂತೆ ಕಾಣುವುದು ತಪ್ಪುತ್ತದೆ.

Whats_app_banner