Kitchen Hacks: ನಿಮಗೆ ತಿಳಿದಿರಲೇಬೇಕಾದ ಅಡುಗೆಮನೆ ಟಿಪ್ಸ್ ಇವು; ಈ ಜಾದೂ ಮಾಡಿ, ವ್ಯರ್ಥವಾಗುವ ನಿಮ್ಮ ಸಮಯ ಉಳಿಸಿಕೊಳ್ಳಿ
ಅಡುಗೆಮನೆಯಲ್ಲಿ ಎಷ್ಟೋ ಸಣ್ಣ ಕೆಲಸಗಳಿಗೆ ಹೆಚ್ಚು ಸಮಯ ತಗಲುತ್ತದೆ. ಹಾಲು ಕಾಯಿಸುವುದು, ತರಕಾರಿ ಕತ್ತರಿಸುವುದು, ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯುವುದು ಹೀಗೆ. ಈ ರೀತಿಯ ಚಿಕ್ಕ ಕೆಲಸಗಳಿಗೆ ಏನಾದರೊಂದು ಪರಿಹಾರ ಇದ್ದರೆ? ಈ ಯೋಚನೆ ನಿಮಗಿದ್ದರೆ ಈ ಲೇಖನ ಓದಿ ಸುಲಭದ ಪರಿಹಾರಕಂಡುಕೊಳ್ಳಿ. (ಬರಹ: ಅರ್ಚನಾ ವಿ. ಭಟ್)
ಅಡುಗೆ ಎನ್ನುವುದು ಬರೀ ಬಾಯಲ್ಲಿ ನೀರೂರಿಸುವಂತೆ ತಯಾರಿಸುವ ವಿವಿಧ ತಿನಿಸುಗಳು ಮಾತ್ರವಲ್ಲ. ಅವುಗಳನ್ನು ತಯಾರಿಸಲು ಎಷ್ಟು ಸಮಯ ಕಳೆದುಹೋಗುತ್ತದೆ ಎನ್ನುವುದನ್ನು ತಿಳಿದಿರಬೇಕು. ತರಕಾರಿಗಳನ್ನು ಕತ್ತರಿಸುವುದು, ಈರುಳ್ಳಿಯನ್ನು ಬೇಗನೆ ಕಂದು ಬಣ್ಣಬರುವಂತೆ ಹುರಿಯುವುದು, ಹಾಲು ಉಕ್ಕಿ ಚೆಲ್ಲದಂತೆ ಕಾಯಿಸುವುದು, ಇವೆಲ್ಲವು ಅಡುಗೆಯ ಭಾಗವಾಗಿದೆ. ಮಾಸ್ಟರ್‌ಶೆಫ್ ಪಂಕಜ್ ಭದೌರಿಯಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿರುವ ಕೆಲವು ಸಲಹೆಗಳು ನಿಮ್ಮನ್ನು ಅಡುಗೆ ಮನೆಯಲ್ಲಿ ಪರಿಣಿತರಾಗುವಂತೆ ಮಾಡುತ್ತದೆ. ಇವುಗಳು ಅಡುಗೆಮನೆಯಲ್ಲಿ ವ್ಯರ್ಥವಾಗುವ ನಿಮ್ಮ ಸಮಯವನ್ನು ಸಹ ಉಳಿಸಬಲ್ಲದು. ಹಾಗಾದರೆ ಅವರು ಹಂಚಿಕೊಂಡ ಕಿಚನ್ ಟಿಪ್‌ಗಳು ಯಾವುದು ನೋಡೋಣ.
ಈರುಳ್ಳಿಯನ್ನು ಹೀಗೆ ಹುರಿಯಿರಿ
ಈರುಳ್ಳಿ ಹುರಿಯುವಾಗ ಅದು ಕಂದು (ಗೋಲ್ಡ್‌ನ ಬ್ರೌನ್) ಬಣ್ಣ ಬರುವಂತಾಗಲು ಸಮಯ ತೆಗೆದುಕೊಳ್ಳುತ್ತದೆ. ಈ ಸಲಹೆ ಪಾಲಿಸಿದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಅದಿಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ಚಿಟಿಕೆ ಉಪ್ಪ ಅಥವಾ ಸಕ್ಕರೆಯನ್ನು ಸೇರಿಸಿ ಈರುಳ್ಳಿ ಹುರಿಯಿರಿ ಎಂಬ ಸಲಹೆ ನೀಡಿದ್ದಾರೆ ಮಾಸ್ಟರ್‌ಶೆಫ್ ಪಂಕಜಾರವರು. ಹಾಗೆ ಮಾಡುವುದರಿಂದ ಮೃದುವಾದ ಕಂದು ಬಣ್ಣದ ಈರುಳ್ಳಿಯನ್ನು ಬೇಗನೆ ಪಡೆಯಬಹುದಾಗಿದೆ.
ಸುಲಭವಾಗಿ ಬೀನ್ಸ್ ಕತ್ತರಿಸುವುದು ಹೇಗೆ?
ಬೀನ್ಸ್ ಕತ್ತರಿಸುವುದು ಕಷ್ಟ ಅನಿಸುತ್ತಿದೆಯಾ? ಎರಡು ರಬ್ಬರ್ ಬ್ಯಾಂಡ್ ಬಳಸಿ ನಿಮ್ಮ ಕೆಲಸ ಸುಲಭವಾಗಿಸಿಕೊಳ್ಳಿ. ಹೇಗೆಂದರೆ ಎರಡು ರಬ್ಬರ್ ಬ್ಯಾಂಡ್ ತೆಗೆದುಕೊಂಡು ಅವುಗಳನ್ನು ಬೀನ್ಸ್‌ಗಳ ಎರಡೂ ಬದಿಗೆ ಹಾಕಿ. ಆಗ ನೀವು ಬೀನ್ಸ್ ಅನ್ನು ಸುಲಭವಾಗಿ ಮತ್ತು ಬೇಗನೆ ಕತ್ತರಿಸಬಹುದು ಎಂದು ಅವರು ಹೇಳುತ್ತಾರೆ.
ಹಾಲು ಉಕ್ಕಿ ಚೆಲ್ಲದಂತೆ ಕಾಯಿಸಲು ಈ ಟ್ರಿಕ್ ಬಳಸಿ
ಒಂದು ಮರದ ಚಮಚ ತೆಗೆದುಕೊಳ್ಳಿ. ಅದನ್ನು ನೀವು ಹಾಲು ಕಾಯಿಸುವು ಪಾತ್ರೆಯ ಮೇಲಿಡಿ. ಅದು ಹಾಲು ಕುದಿದರು ಸಹ ಉಕ್ಕಿ ಚೆಲ್ಲದಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮ್ಮ ಸಮಯ ಮತ್ತು ಕೆಲಸ ಎರಡು ಉಳಿಯುತ್ತದೆ.
ರೆಸ್ಟೋರೆಂಟ್ ಶೈಲಿಯ ಚೋಲೆ ಮನೆಯಲ್ಲಿಯೇ ತಯಾರಿಸುವುದು ಹೇಗೆ?
ಚೋಲೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲೂ ರೆಸ್ಟೋರೆಂಟ್ ರೀತಿಯ ಬಣ್ಣ, ರುಚಿಗೆ ಮನಸೋಲದವರೇ ಇಲ್ಲ. ರೆಸ್ಟೋರೆಂಟ್ ರೀತಿಯ ಬಣ್ಣ, ರುಚಿ ಪಡೆಯಲು ಟೀ ಬ್ಯಾಗ್ ಅಥವಾ ಸ್ವಲ್ಪ ಚಹಾ ಎಲೆಗಳನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಅದನ್ನು ಚೋಲೆ ಬೇಯಿಸುವಾಗ ಅದರಲ್ಲಿ ಹಾಕಿ. ಆಗ ನೋಡಿ ಸರಿಯಾದ ಬಣ್ಣ ಮತ್ತು ರುಚಿಯ ಚೋಲೆ ಮನೆಯಲ್ಲಿಯೇ ತಯಾರಿಸಬಹುದು.
ಡ್ರೈ ಫ್ರೂಟ್‌ಗಳನ್ನು ತಿಂಗಳುಗಟ್ಟಲೆ ಶೇಖರಿಸುವುದು ಹೇಗೆ
ನೀವು ಡ್ರೈ ಫ್ರೂಟ್ ಅನ್ನು ತಿಂಗಳುಗಟ್ಟಲೆ ಶೇಖರಿಸಿಡಬೇಕೆಂದರೆ ಅವುಗಳನ್ನು ಜಿಪ್ ಲಾಕ್ ಇರುವ ಬ್ಯಾಗ್ ಅಥವಾ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರೀಜ್‌ರ್‌ನಲ್ಲಿಡಿ. ಆಗ ನೋಡಿ ತಿಂಗಳುಗಳವರೆಗೆ ಡ್ರೈ ಫ್ರೂಟ್ ಕೆಡದಂತೆ ಇರುತ್ತದೆ.
ಇಲ್ಲಿ ಹೇಳಿರುವ ಟಿಪ್ಸ್ ಪಾಲಿಸಿ, ಅಡುಗೆಮನೆಯಲ್ಲಿ ನಿಮ್ಮ ಸಮಯ ಉಳಿಸಿಕೊಳ್ಳಿ.
ವಿಭಾಗ