ಗ್ಯಾಸ್ ಸ್ಟವ್ ಪಕ್ಕ ಅಡುಗೆ ಎಣ್ಣೆಯ ಡಬ್ಬಿ ಇಟ್ಟರೆ ಅಪಾಯ; ತೈಲ ಶೇಖರಿಸಿಡಲು ಇಲ್ಲಿವೆ ಸಲಹೆಗಳು
ಅಡುಗೆ ಎಣ್ಣೆಯನ್ನು ಸಂಗ್ರಹಿಸಿಡುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಇದು ತುಂಬಾ ಮುಖ್ಯ. ಹಾಗಿದ್ದರೆ, ಅಡುಗೆ ಮನೆಯಲ್ಲಿ ಎಣ್ಣೆಯನ್ನು ಎಲ್ಲಿ ಮತ್ತು ಹೇಗೆ ಇಡಬೇಕೆಂಬ ಮಾಹಿತಿ ಇಲ್ಲಿದೆ.
ಅನೇಕ ಮನೆಗಳಲ್ಲಿ ಅಡುಗೆ ಕೋಣೆಯು ಚಿಕ್ಕದಾಗಿರುತ್ತದೆ. ಹೀಗಾಗಿ ಹೆಚ್ಚಿನ ಅಡುಗೆ ಸಾಮಾನುಗಳನ್ನು ಗ್ಯಾಸ್ ಸ್ಟೌವ್ ಪಕ್ಕದಲ್ಲೇ ಇಟ್ಟಿರುತ್ತಾರೆ. ಅದರಲ್ಲೂ ಗ್ಯಾಸ್ ಸ್ಟೌವ್ ಪಕ್ಕದಲ್ಲೇ ಎಣ್ಣೆ ಡಬ್ಬವನ್ನು ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇನ್ನೂ ಕೆಲವರು ಸೂರ್ಯನ ಬಿಸಿಲು ತಾಗುವಂತೆ ಕಿಟಕಿಯ ಪಕ್ಕದಲ್ಲಿ ಎಣ್ಣೆ ಡಬ್ಬಿ ಇಟ್ಟಿರುತ್ತಾರೆ. ಹಾಗೆ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅಡುಗೆ ಎಣ್ಣೆಗಳಲ್ಲಿ ಕೊಬ್ಬಿನಂಶ ಅಧಿಕವಾಗಿರುತ್ತದೆ. ಗ್ಯಾಸ್ ಒಲೆಯ ಪಕ್ಕದಲ್ಲಿ ಅಥವಾ ಶಾಖಕ್ಕೆ ಒಡ್ಡಿಕೊಳ್ಳುವ ರೀತಿ ಎಣ್ಣೆಯನ್ನು ಸಂಗ್ರಹಿಸುವುದರಿಂದ ಬಿಸಿ ತಾಗಿ ಎಣ್ಣೆಯಲ್ಲಿನ ಆಕ್ಸಿಡೇಷನ್ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ನಂತರ ಎಣ್ಣೆಯು ರಾನ್ಸಿಡಿಫಿಕೇಶನ್‌ಗೆ ಒಳಗಾಗಿ ರಾನ್ಸಿಡ್ ಎಂಬ ಹಾನಿಕಾರಕ ಪದಾರ್ಥವಾಗುತ್ತದೆ. ರಾನ್ಸಿಡಿಫಿಕೇಶನ್ ಎಂದರೆ ಯಾವುದೇ ತೈಲ/ಎಣ್ಣೆಯು ಗಾಳಿ, ಬೆಳಕು, ಬೆಂಕಿ ಅಥವಾ ತೇವಾಂಶಕ್ಕೆ ಒಡ್ಡಿಕೊಂಡಾಗ ರಾಸಾಯನಿಕಗಳನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಗೆ ಒಳಗಾದ ಎಣ್ಣೆಯನ್ನು ನಾವು ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ.
ಬಿಸಿ ವಾತಾವರಣಕ್ಕೆ ಒಡ್ಡಿದ ಎಣ್ಣೆ ಬಳಕೆಯಿಂದ ಉಂಟಾಗುವ ಸಮಸ್ಯೆಗಳು
ಇಂತಹ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಸ್ಥೂಲಕಾಯತೆಯಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ. ಈ ಎಣ್ಣೆಯನ್ನು ಪ್ರತಿದಿನ ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೃದಯದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇಂತಹ ಎಣ್ಣೆಗಳಿಂದ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಲ್ಲದೆ ದೇಹದಲ್ಲಿ ಉತ್ಕರ್ಷಣ ನಿರೋಧಕ ಹಾಗೂ ರೋಗ ನಿರೋಧಕ ಶಕ್ತಿಯ ಮಟ್ಟವೂ ಕಡಿಮೆಯಾಗುತ್ತದೆ.
ಅಡುಗೆ ಎಣ್ಣೆ ಸಂಗ್ರಹಿಸಿಡಲು ಸಲಹೆಗಳು
ಅಡುಗೆ ಎಣ್ಣೆಗಳಲ್ಲಿ ಹಲವು ವಿಧಗಳಿವೆ. ಇದನ್ನು ಸಂರಕ್ಷಿಸುವ ವಿಧಾನಗಳು ನೀವು ಯಾವ ತೈಲವನ್ನು ಬಳಸುತ್ತಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಸಸ್ಯಜನ್ಯ ಎಣ್ಣೆ
ಸಸ್ಯಜನ್ಯ ಎಣ್ಣೆಗಳ ಗುಣಮಟ್ಟವನ್ನು ಕಾಪಾಡಲು ತಂಪಾದ ಸ್ಥಳಗಳಲ್ಲಿ ಇರಿಸಬೇಕಾಗುತ್ತದೆ. ಹಾಗಂತ ಫ್ರಿಡ್ಜ್‌ನಲ್ಲೇ ಇಡಬೇಕೆಂದೇನಿಲ್ಲ. ಅಡುಗೆ ಮನೆಯಲ್ಲಿ ಯಾವುದೇ ಭಾಗದಲ್ಲಿ ತಣ್ಣಗಿರುವಂತೆ ಅದನ್ನು ಇರಿಸಿ. ಕತ್ತಲೆಯ ಸ್ಥಳದಲ್ಲಿ ಇಡುವುದು ಇನ್ನೂ ಉತ್ತಮ. ಆದರೆ ಕಟ್ಟಿಗೆ ಒಲೆ, ಗ್ಯಾಸ್ ಒಲೆ ಪಕ್ಕದಲ್ಲಿ ಹಾಗೂ ಗಾಳಿ ಮತ್ತು ಬೆಳಕಿಗೆ ಈ ಎಣ್ಣೆಯನ್ನು ಒಡ್ಡಬಾರದು. ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ತಾಳೆ ಎಣ್ಣೆ ಇಂತವುಗಳು ಸಸ್ಯಜನ್ಯ ಎಣ್ಣೆಯ ಪಟ್ಟಿಯಲ್ಲಿ ಬರುತ್ತವೆ.
ಬೀಜದ ಎಣ್ಣೆ
ಬೀಜದ ಎಣ್ಣೆ ಎಂದರೆ ಬೀಜಗಳಿಂದ ಹೊರತೆಗೆಯಲಾದ ಎಣ್ಣೆ. ಬಾದಾಮಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಎಳ್ಳೆಣ್ಣೆ - ಇವುಗಳು ಬೀಜದ ಎಣ್ಣೆ ಪಟ್ಟಿಯಲ್ಲಿ ಬರುತ್ತವೆ. ಈ ತೈಲಗಳನ್ನು ಕೂಡ ಗಾಳಿಯಾಡದ ಪಾತ್ರೆಗಳಲ್ಲಿ ಇಡಬೇಕು. ಹೆಚ್ಚು ಬೆಳಕು ಇರುವಲ್ಲಿ ಇಡಬಾರದು. ಅಲ್ಲದೆ ಅತಿಯಾದ ಶಾಖ ತಾಗುವ ಸ್ಥಳದಲ್ಲಿ ಇಡಬಾರದು. ಹಾಗೆಯೇ ಬೀಜದ ಎಣ್ಣೆಯ ಡಬ್ಬಿಯನ್ನು ರೆಫ್ರಿಜರ್‌ನಲ್ಲಿ ಇಡುವುದು ತುಂಬಾ ಒಳ್ಳೆಯದು.
ಯಾವುದೇ ಎಣ್ಣೆ ಆಗಿರಲಿ. ಅದರ ಪ್ಯಾಕ್ ಓಪನ್ ಮಾಡಿದ ನಂತರ ಅಥವಾ ಡಬ್ಬಿ ಮುಚ್ಚುಳ ತೆಗೆದ ನಂತರ 3-4 ತಿಂಗಳ ಒಳಗಾಗಿ ಎಣ್ಣೆಯನ್ನು ಬಳಸುವುದು ಉತ್ತಮ. ಒಂದು ಬಾರಿ ಕರಿದು ಇಟ್ಟ ಎಣ್ಣೆಯನ್ನು ಆದಷ್ಟು ಬೇಗ ಬಳಸಿ. 2ಕ್ಕಿಂತ ಹೆಚ್ಚು ಬಾರಿ ಅದನ್ನು ಬಳಸಬೇಡಿ. ಒಮ್ಮೆ ಬಳಸಿದ ಎಣ್ಣೆಯನ್ನು ತಾಜಾ ಎಣ್ಣೆ ಜೊತೆ ಸೇರಿಸಬೇಡಿ.
(ಮೇಘನಾ ಬಿ)
ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ನೆನೆಸಿದ ಒಣದ್ರಾಕ್ಷಿ vs ಒಣಗಿದ ದ್ರಾಕ್ಷಿ; ಆರೋಗ್ಯಕ್ಕೆ ಯಾವುದು ಉತ್ತಮ?