ಬಿಸಿ ನೀರು ಬರೀ ಅಡುಗೆಗಷ್ಟೇ ಅಲ್ಲ, ಅಡುಗೆ ಮನೆ ಕ್ಲೀನಿಂಗ್‍ಗೂ ಸಹಕಾರಿ; ಈ ಟ್ರಿಕ್ಸ್ ನೆನಪಿಟ್ಟುಕೊಳ್ಳಿ
ಬಿಸಿ ನೀರು ಕುಡಿಯುವುದರಿಂದ ದೇಹದ ಕಲ್ಮಶಗಳು ದೂರವಾಗುತ್ತವೆ. ಬಿಸಿನೀರಿನಿಂದ ಹಲವು ಪ್ರಯೋಜನಗಳು ಇವೆ. ಅದು ಬರೀ ಕುಡಿಯಲು, ಅಡುಗೆಗಷ್ಟೇ ಅಲ್ಲ ಅದರಿಂದ ಅಡುಗೆಮನೆಯ ಅದೆಷ್ಟೋ ಕೆಲಸಗಳು ಸುಲಭವಾಗುತ್ತವೆ. ಯಾವ ಕೆಲಸಗಳು ಇಲ್ಲಿದೆ ಓದಿ.
ಪ್ರತಿ ಮನೆಯಲ್ಲಿಯೂ ಅತಿ ಹೆಚ್ಚು ಸಮಯ ಕೆಲಸ ಮಾಡುವ ಜಾಗವೆಂದರೆ ಅದು ಅಡುಗೆಮನೆ. ಇಲ್ಲಿ ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ಅಡುಗೆಗಳು ತಯಾರಾಗುತ್ತವೆ. ಅಷ್ಟೇ ಅಲ್ಲದೇ ಅನಾರೋಗ್ಯ ಕಾಡಿದಾಗ ಕಾಳಜಿ ಮಾಡಲು ಕೂಡಾ ಇದೇ ಅಡುಗೆಮನೆ ಮುಖ್ಯವಾಗಿದೆ. ಇಲ್ಲಿ ರುಚಿಯಾದ ಆಹಾರ ತಯಾರಿಸಲಾಗುತ್ತದೆ. ಬ್ಯಾಕ್ಟೀರಿಯಾ, ಸೋಂಕುಗಳು ಆಹಾರಕ್ಕೆ ಸೇರದಂತೆ ಕಾಳಜಿವಹಿಸುವುದು ಅಗತ್ಯವಾಗಿದೆ. ಹಾಗಾಗಿ ಇಲ್ಲಿ ನಿಯಮಿತವಾಗಿ ಸ್ಚಚ್ಛತೆ ಕಾಪಾಡಿಕೊಳ್ಳುವುದು ಪ್ರಥಮ ಕೆಲಸವಾಗಿದೆ. ಅಡುಗೆಮನೆಯ ಕೆಲವು ಕೆಲಸಗಳಿಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಕೆಲವರ ಅನಿಸಿಕೆ. ಇಲ್ಲಿನ ಕೆಲಸಗಳಿಗೆ ಸುಲಭದ ಉಪಾಯವಿದೆಯೇ ಎಂದು ಯೋಚಿಸುವವರೂ ಇದ್ದಾರೆ. ಅದಕ್ಕೆ ಬೆಸ್ಟ್ ಉತ್ತರ ಬಿಸಿನೀರು. ಹೌದು, ಬಿಸಿನೀರಿನಿಂದ ಅನೇಕ ಪ್ರಯೋಜನಗಳಿವೆ. ಬಿಸಿನೀರಿನ್ನು ಕುಡಿಯುವುದರಿಂದ ದೇಹದ ಕಲ್ಮಶಗಳು ದೂರವಾಗುತ್ತವೆ. ಚಳಿಗಾಲದಲ್ಲಿ ದೇಹಕ್ಕೆ ಚೈತನ್ಯ ತುಂಬುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಅದೇ ರೀತಿ ಅಡುಗೆಮನೆಯ ಅದೆಷ್ಟೋ ಕೆಲಸಗಳು ಬಿಸಿನೀರಿನ ಬಳಕೆಯಿಂದ ಸುಲಭವಾಗುತ್ತದೆ ಹಾಗೂ ಕಠಿಣವೆನಿಸುವ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸಲು ಸಹಾಯಮಾಡುತ್ತದೆ. ಹಾಗಾದರೆ ನಿಮ್ಮ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುವ ತಂತ್ರಗಳು ಯಾವವು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.
ಇದನ್ನೂ ಓದಿ: ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್ ಫೀಚರ್ವುಳ್ಳ ಟಾಪ್-5 ಡಬಲ್ ಡೋರ್ ರೆಫ್ರಿಜರೇಟರ್ಸ್ ಇವೇ ನೋಡಿ
ಅಡುಗೆಮನೆಯ ಈ ಕೆಲಸಗಳಿಗೆ ಬಿಸಿನೀರನ್ನು ಬಳಸಿ
1) ಸ್ಟೀಲ್ ಬೌಲ್, ಚಮಚ, ಪ್ಲೇಟ್ ಇತ್ಯಾದಿ ಹೊಸ ಪಾತ್ರೆಗಳ ಮೇಲೆ ಕಾಗದದ ಟ್ಯಾಗ್ ಅನ್ನು ಅಂಟಿಸಿಡುತ್ತಾರೆ. ಅವುಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಅದೆಷ್ಟೇ ಬಾರಿ ಉಜ್ಜಿದರೂ ಅದನ್ನು ತೆಗೆದುಹಾಕಲು ಆಗುವುದಿಲ್ಲ. ಈ ರೀತಿಯ ಸಂದರ್ಭದಲ್ಲಿ ಬಿಸಿನೀರು ನಿಮ್ಮ ಸಹಾಯಕ್ಕೆ ಬರುತ್ತದೆ. ಪಾತ್ರೆಗಳ ಮೇಲೆ ಇರುವ ಸ್ಟಿಕ್ಕರ್ ಅನ್ನು ತೆಗೆಯಲು ಬಿಸಿನೀರಿನಲ್ಲಿ ಆ ಪಾತ್ರೆಯನ್ನು ಮುಳುಗಿಸಿ. ಸ್ವಲ್ಪ ಸಮಯದ ನಂತರ ಸ್ಟಿಕ್ಕರ್ ಅನ್ನು ಸುಲಭವಾಗಿ ತೆಗೆಯಬಹುದು.
2) ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಣ್ಣೆಯನ್ನು ಫ್ರಿಜ್‌ನಲ್ಲಿಟ್ಟಿರುತ್ತಾರೆ. ಬೆಣ್ಣೆ ಗಟ್ಟಿಯಾಗಿರುವುದರಿಂದ ತಕ್ಷಣಕ್ಕೆ ಬೇಕಾದಾಗ ಅದನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಬಿಸಿನೀರು ನಿಮ್ಮ ಕೆಲಸಕ್ಕೆ ಬರುತ್ತದೆ. ಹೇಗೆಂದರೆ ಬೆಣ್ಣೆ ತೆಗೆಯುವ ಚಾಕುವನ್ನು ಬಿಸಿನೀರಿನಲ್ಲಿ ಅದ್ದಿ. ಹೀಗೆ ಮಾಡುವುದರಿಂದ ಚಾಕು ನೀರಿನಲ್ಲಿ ಬಿಸಿಯಾಗಿ ಬಣ್ಣೆಯನ್ನು ಸುಲಭವಾಗಿ ಕತ್ತರಿಸಬಹುದಾಗಿದೆ.
ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ: ಇರಲಿ ಸ್ವಚ್ಛತೆ ಕಡೆಗೆ ಗಮನ
3) ನಿಮ್ಮ ಅಡುಗೆಮನೆಯ ಕಟ್ಟೆ, ಕಿಟಕಿ, ಗ್ಯಾಸ್, ಗಾಜು ಇತ್ಯಾದಿಗಳ ಮೇಲೆ ಎಣ್ಣೆಯ ಜಿಡ್ಡು ಕೂತಿದ್ದರೆ, ಬಿಸಿ ನೀರಿನಲ್ಲಿ 1 ಚಮಚ ಅಮೋನಿಯಾವನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲುಕಿ. ಅದರಿಂದ ಅಡುಗೆಮನೆ ಸ್ವಚ್ಛಗೊಳಿಸಿ. ನಿಮ್ಮ ಕಿಚನ್ ಪಳಪಳ ಹೊಳೆಯುತ್ತದೆ ಮತ್ತು ಅಡುಗೆಮನೆಯ ಕೌಂಟರ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಕೊಳಕು ಮತ್ತು ವಾಸನೆಯನ್ನು ಸಹ ತೆಗೆದುಹಾಕುತ್ತದೆ.
4) ಅಡುಗೆಮನೆಯ ಸಿಂಕ್ ಕಟ್ಟಿಹೋಗಿದ್ದರೆ, ಅದನ್ನು ಬಿಸಿ ನೀರಿನಿಂದ ಸರಿಪಡಿಸಲು ಸಾಧ್ಯ. ಸ್ವಲ್ಪ ವಿನೆಗರ್ ಅನ್ನು ಬಿಸಿಯಾದ ನೀರಿನೊಂದಿಗೆ ಬೆರೆಸಿ ಸಿಂಕ್‌ಗೆ ಸುರಿಯಿರಿ. ಕಟ್ಟಿಕೊಂಡಿರುವ ಪೈಪ್ ಸುಲಭವಾಗಿ ಓಪನ್ ಆಗುತ್ತದೆ. ನೀರು ಸರಾಗವಾಗಿ ಜಾರುತ್ತದೆ.
5) ಆಹಾರದ ಕಲೆಗಳನ್ನು ತೆಗೆದುಹಾಕಲು ನೀವು ಬಿಸಿನೀರನ್ನು ಸಹ ಬಳಸಬಹುದು. ಒಂದು ಚಮಚ ಅಮೋನಿಯಾವನ್ನು ಬಿಸಿ ನೀರಿನಲ್ಲಿ ಬೆರೆಸಿ. ಅದನ್ನು ಕಲೆಗಳ ಮೇಲೆ ಸಿಂಪಡಿಸಿ. ನಿಧಾನವಾಗಿ ಉಜ್ಜಿ, ನಂತರ ತೊಳೆಯಿರಿ. ಆಹಾರದಿಂದ ಉಂಟಾದ ಕಲೆಗಳು ಬಟ್ಟೆಯ ಮೇಲೆ ಆಗಿದ್ದರೆ, ಅಮೋನಿಯದ ಬದಲಿಗೆ ನಿಂಬೆ ರಸವನ್ನು ಸೇರಿಸಿ. ಏಕೆಂದರೆ ಅಮೋನಿಯಾ ಬಟ್ಟೆಯ ಬಣ್ಣವನ್ನು ಸಹ ತೆಗೆಯುತ್ತದೆ.
ವಿಭಾಗ