Kitchen Hacks: ಮೂಲಂಗಿ ಎಂದು ಮೂಗುಮುರಿಯಬೇಡಿ; ಈ ಟ್ರಿಕ್ಸ್ ಬಳಸಿ, ಮೂಲಂಗಿ ನಿಮ್ಮಿಷ್ಟದ ತರಕಾರಿಗಳಲ್ಲೊಂದಾಗುವುದು ಖಂಡಿತ
Kitchen Tips: ಅಗಾಧ ಪೋಷಕಾಂಶಗಳನ್ನು ಹೊಂದಿರುವ ಮೂಲಂಗಿ ಚಳಿಗಾಲದ ತರಕಾರಿ. ಆದರೆ, ಅದರ ತೀಕ್ಷ್ಣ ಪರಿಮಳ ಮತ್ತು ಕಟು ರುಚಿಯಿಂದಾಗಿ ಅದರಿಂದ ದೂರವಿರುವವರೇ ಹೆಚ್ಚು. ದೇಹಕ್ಕೆ ಉತ್ತಮವಾದ ಮೂಲಂಗಿಯನ್ನು ಈ ರೀತಿ ಸಂಸ್ಕರಿಸಿ ತಿನ್ನಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ನಾವೀಗ ಚಳಿಗಾಲದಲ್ಲಿದ್ದೇವೆ. ಈ ಕಾಲದಲ್ಲಿ ಸಿಗುವ ಹಣ್ಣು, ತರಕಾರಿಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾಗಿದೆ. ಅದರಲ್ಲೂ ಈಗ ಮೂಲಂಗಿಯ ಸೀಸನ್. ಮೂಲಂಗಿಯಿಂದ ಪರಾಠ, ಪಲ್ಯ, ಸಲಾಡ್ ಮುಂತಾದ ಬಗೆಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಆದರೆ ಮೂಲಂಗಿ ಅಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲಿರುವ ಸಲ್ಫರ್‌ನಿಂದಾಗಿ, ಮೂಲಂಗಿ ಕಟು ಪರಿಮಳ, ನಾಲಿಗೆ ಸುಡುವ ರುಚಿ ಪಡೆದುಕೊಂಡಿದೆ. ಹಾಗಾಗಿ ಕೆಲವರಿಗೆ ಮೂಲಂಗಿ ತಿನ್ನಬೇಕೆನಿಸಿದರೂ ಅದರಿಂದ ದೂರವೇ ಇರುತ್ತಾರೆ. ಚಳಿಗಾಲಕ್ಕೆ ಮೂಲಂಗಿ ಒಳ್ಳೆಯ ತರಕಾರಿ. ಅದು ಕರುಳಿನ ಚಲನೆಯನ್ನು ಹೆಚ್ಚಿಸಿ, ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನುಒದಗಿಸುತ್ತದೆ. ಹಸಿ ಮೂಲಂಗಿಗೆ ಸ್ವಲ್ಪ ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ ತಿನ್ನುವುದು ದೇಹಕ್ಕೆ ಉತ್ತಮವಾಗಿದೆ. ಆದರೆ, ಅದರ ಕಟು ರುಚಿ ಮತ್ತು ತೀಕ್ಷ್ಣ ಪರಿಮಳದಿಂದಾಗಿ ತಿನ್ನುವ ಮೊದಲು ಯೋಚಿಸುವವರೇ ಹೆಚ್ಚು. ಅದಕ್ಕಾಗಿ ಇಲ್ಲಿ ಕೆಲವು ಟ್ರಿಕ್ಸ್‌ಗಳನ್ನು ನೀಡಲಾಗಿದೆ. ಈ ಸಲಹೆ, ಸೂಚನೆಗಳನ್ನು ಪಾಲಿಸಿ, ಮೂಲಂಗಿ ರುಚಿ ಸವಿಯಲು ಸಿದ್ಧರಾಗಿ.
ಸಿಪ್ಪೆ ತೆಗೆಯಿರಿ
ಮೂಲಂಗಿಯ ಸಿಪ್ಪೆಯು ಎಮ್‌ಟಿಬಿಐಟಿಸಿ ಎಂಬ ಕಿಣ್ವಗಳಿಂದ ಕೂಡಿದೆ. ಅದು ಮೂಲಂಗಿಗೆ ತೀಕ್ಷ್ಣ ಪರಿಮಳ ಮತ್ತು ಕಟು ರುಚಿ ನೀಡುತ್ತದೆ. ಹಾಗಾಗಿ ಮೂಲಂಗಿಯ ಸಿಪ್ಪೆ ತೆಗೆದ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಆಗ ಅದರ ತೀಕ್ಷ್ಣತೆ ಕಡಿಮೆಯಾಗುತ್ತದೆ. ನಂತರ, ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ ಹಸಿ ಮೂಲಂಗಿಯನ್ನೇ ಸವಿಯಬಹುದು.
ನೀರಿನಲ್ಲಿ ನೆನೆಸಿ
ಸಿಪ್ಪೆ ತೆಗೆದ ನಂತರೂ ಕೆಲವು ಮೂಲಂಗಿಗಳು ತೀಕ್ಷ್ಣ ಪರಿಮಳ ಮತ್ತು ಕಟು ರುಚಿಯನ್ನೇ ನೀಡುತ್ತಿದ್ದರೆ, ಆಗ ಅದನ್ನು ನೀರಿನಲ್ಲಿ ನೆನೆಸಿ. ಒಂದೆರಡು ಐಸ್ ಕ್ಯೂಬ್‌ಗಳನ್ನು ಸೇರಿಸಿದರೆ ಇನ್ನೂ ಉತ್ತಮ. ಐಸ್‌ಕ್ಯೂಬ್ ಎಮ್‌ಟಿಬಿಐಟಿಸಿ ಕಿಣ್ವಗಳನ್ನು ತಟಸ್ಥಗೊಳಿಸುತ್ತದೆ. ಈಗ ನೀವು ಮೂಲಂಗಿ ಸಲಾಡ್ ಕೂಡಾ ತಯಾರಿಸಿಬಹುದು.
ಇದನ್ನೂ ಓದಿ: ಸಲಾಡ್, ಕೇಸರಿಬಾತ್‌ಗೆ ಮಾತ್ರವಲ್ಲ ನಿಮ್ಮ ಚರ್ಮ ಲಕ ಲಕ ಅಂತ ಹೊಳೆಯೋಕೂ ಬೇಕು ಪೈನಾಪಲ್; ಹೀಗೆ ಬಳಸಿ
ಉಪ್ಪು ಸೇರಿಸಿ
ಮೂಲಂಗಿಯ ಕಟು ವಾಸನೆ ಮತ್ತು ರುಚಿ ಹೋಗಲಾಡಿಸಲು ನೀವು ಉಪ್ಪನ್ನು ಸೇರಿಸಬಹುದು. ಸಿಪ್ಪೆ ತೆಗೆದು ನಿಮಗೆ ಬೇಕಾದ ಹಾಗೆ ಕತ್ತರಿಸಿ, ಅದಕ್ಕೆ ಉಪ್ಪು ಸೇರಿಸಿ ಸ್ವಲ್ಪ ಸಮಯ ಬಿಡಿ. ಕನಿಷ್ಠ ಅರ್ಧ ಗಂಟೆ ಬಿಡಿ. ಉಪ್ಪು, ಮೂಲಂಗಿಯಲ್ಲಿರುವ ಎಮ್‌ಟಿಬಿಐಟಿಸಿ ಕಿಣ್ವಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಧಾನವಾಗಿ ಮೂಲಂಗಿಯನ್ನು ಒತ್ತಿ ನೀರು ಹೊರತೆಗೆಯಿರಿ. ನಂತರ ಇನ್ನೊಮ್ಮೆ ನೀರಿನಿಂದ ತೊಳೆಯಿರಿ. ಈಗ ಮೂಲಂಗಿಯನ್ನು ನಿಮ್ಮ ಅಡುಗೆಗೆ ಬಳಸಿಕೊಳ್ಳಿ.
ಸಲಾಡ್ ತಯಾರಿಸುವ ಮೊದಲು ಹೀಗೆ ಮಾಡಿ
ನೀವು ಮೂಲಂಗಿಯ ಸಲಾಡ್ ತಯಾರಿಸಬೇಕೆಂದಿದ್ದರೆ, ಮೊದಲು ಮೂಲಂಗಿಯ ಸಿಪ್ಪೆ ತೆಗೆಯಿರಿ, ಅದನ್ನು ನೀರಿನಿಂದ ತೊಳೆದು, ತುರಿಯಿರಿ. ನಂತರ ಅರ್ಧ ಗಂಟೆ ಹಾಗೆಯೇ ಇಡಿ. ನಂತರ ಅದನ್ನು ಸ್ವಲ್ಪ ಸ್ಕ್ವೀಜ್ ಮಾಡಿ, ನೀರು ಹೊರೆತೆಗೆಯಿರಿ. ಮೂಲಂಗಿ ತುರಿದಾಗ, ಎಮ್‌ಟಿಬಿಐಟಿಸಿ ಕಿಣ್ವಗಳು ಸಡಿಲಗೊಳ್ಳುತ್ತವೆ. ಈಗ ನಿಮ್ಮಿಷ್ಟದ ಸಲಾಡ್ ತಯಾರಿಸಿ.
ವಿನೇಗರ್‌ನಲ್ಲಿ ನೆನೆಸಿ
ನೀವು ಮೂಲಂಗಿಯ ಉಪ್ಪಿನಕಾಯಿ ತಯಾರಿಸಬೇಕೆಂದಿದ್ದರೆ ಅದನ್ನು ವಿನೇಗರ್‌ನಲ್ಲಿ ನೆನೆಸಿಡಿ. ಮೂಲಂಗಿಯನ್ನು ಉದ್ದುದ್ದ ಆಕಾರದಲ್ಲಿ ಹೆಚ್ಚಿ, ಅವನ್ನು ವಿನೇಗರ್ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ವಿನೇಗರ್ ಮೂಲಂಗಿಯಲ್ಲಿರುವ ತೀಕ್ಷ್ಣ ಪರಿಮಳ ಮತ್ತು ಕಟು ರುಚಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ನಂತರ ಅದಕ್ಕೆ ಅರಿಶಿಣ, ಮೆಣಸಿನ ಪುಡಿ, ಉಪ್ಪು, ಸ್ವಲ್ಪ ಮಸಾಲೆ ಸೇರಸಿ ಉಪ್ಪಿನಕಾಯಿ ತಯಾರಿಸಿ.