ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸುವ ಸುಲಭ ವಿಧಾನ; ಹಾನಿಕಾರಕ ರಾಸಾಯನಿಕ ಬಳಸದೇ ಕಡಿಮೆ ಸಮಯದಲ್ಲಿ ಹೀಗೆ ಸ್ವಚ್ಛ ಮಾಡಿ
Kitchen Sink Cleaning Tips: ಅಡುಗೆಮನೆಯ ಸಿಂಕ್ ಅನ್ನು ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲೇ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಸ್ವಚ್ಛ ಮಾಡಲು ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್, ಇದನ್ನು ನೀವೂ ಟ್ರೈ ಮಾಡಿ. (ಬರಹ: ಅರ್ಚನಾ ವಿ. ಭಟ್)
ನಮ್ಮ ಮನೆಯ ಹೃದಯದ ಭಾಗ ಅಡುಗೆಮನೆಯೆಂದಾದರೆ, ಕಿಚನ್ ಸಿಂಕ್ ಅನ್ನುವುದು ವಿಶೇಷ ಕಾಳಜಿ ವಹಿಸಬೇಕಾದ ಭಾಗ. ಪ್ರತಿದಿನ ಕಠಿಣ ಸಾಸ್‌ನ ಕಲೆಗಳು, ಜಿಡ್ಡಿನ ಪದಾರ್ಥಗಳು, ಟೀ–ಕಾಫಿಯ ಕಲೆಗಳು, ಗಾಢ ಬಣ್ಣದ ತರಕಾರಿ ಮತ್ತು ಹಸಿ ಮಾಂಸಗಳನ್ನು ತೊಳೆದ ನೀರಿನಿಂದಾದ ಕಲೆ ಹೀಗೆ ಮುಂತಾದವುದಗಳಿಂದ ಸಿಂಕ್ ಕೊಳಕಾಗುತ್ತಲೆ ಇರುತ್ತದೆ. ಹಾಗಾಗಿ ಅದನ್ನು ಸಂಪೂರ್ಣ ಸ್ವಚ್ಛಗೊಳಿಸಲು ಬಹಳ ಸಮಯ ತಗುಲಿದರೆ ಆಶ್ಚರ್ಯವೇನಿಲ್ಲ. ವಾರಕ್ಕೊಮ್ಮೆಯಾದರೂ ಕಿಚನ್ ಸಿಂಕ್ ಅನ್ನು ಸಂಪೂರ್ಣ ಕ್ಲೀನ್ ಮಾಡಲೇ ಬೇಕು. ಕಾರಣ ಆಹಾರದ ಉಳಿಕೆಯಿಂದ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುವ ತಾಣವಾಗಬಹುದು ಮತ್ತು ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.
ಕಠಿಣ ರಾಸಾಯನಿಕಗಳ ಬಳಕೆಯು ಕೆಲವು ಅಡ್ಡಪರಿಣಾಮಗಳನ್ನು ತರಬಹುದು. ಮನೆಯಲ್ಲಿಯೇ ಸಿಗುವ ಪದಾರ್ಥಗಳಾದ ಅಡುಗೆ ಸೋಡಾ, ನಿಂಬೆ ಮತ್ತು ವೈಟ್‌ವಿನೆಗರ್ ಮುಂತಾದವುಗಳನ್ನು ವಿಷಕಾರಿ ಕ್ಲೆನ್ಸ್‌ರ್ಗಗಳ ಬದಲಾಗಿ ಉಪಯೋಗಿಸಬಹುದಾಗಿದೆ. ಕೆಲವು ಸುಲಭವಾಗಿ ಶುಚಿಗೊಳಿಸುವ ತಂತ್ರಗಳನ್ನು ಅನುಸರಿಸುವ ಮೂಲಕ ಕಸವನ್ನು ವಿಲೇವಾರಿ ಮಾಡಬಹುದು. ಕಿತ್ತಳೆ ಹಣ್ಣಿನ ಸಿಪ್ಪೆಗಳ ಬಳಕೆಯಿಂದ ದುರ್ವಾಸನೆಯನ್ನು ಹೋಗಲಾಡಿಸಬಹುದು.
ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಲು ಬೇಕಾಗುವ ಪದಾರ್ಥಗಳು ಮತ್ತು ಸುಲಭ ತಂತ್ರಗಳು
ಬಹುಬೇಗನೆ ಕೀಟಾಣುಗಳು ಬೆಳೆಯುವ ಜಾಗಗಳಲ್ಲಿ ಅಡುಗೆಮನೆಯ ಸಿಂಕ್ ಸಹ ಒಂದು. ವಾರಕ್ಕೊಮ್ಮೆ ಸಂಪೂರ್ಣವಾಗಿ ಸ್ವಚ್ಛಗೊಳಿಸದಿದ್ದರೆ ನಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಲ್ಲದು.
ಅಡುಗೆಮನೆ ಸಿಂಕ್ ಸ್ವಚ್ಛಗೊಳಿಸಲು ಬೇಕಾಗುವ ವಸ್ತುಗಳೆಂದರೆ,
- ಮೃದುವಾದ ಸ್ಪೋಂಜ್
- ಕಡಿಮೆ ಹಾನಿಕಾರಕ ಹೊಂದಿರುವ ಡಿಶ್ ಸೋಪ್
- ಹಳೆಯ ಟೂತ್‌ಬ್ರೆಶ್
- ಬೇಕಿಂಗ್ ಸೋಡಾ
- ನಿಂಬು
- ವೈಟ್‌ವಿನೇಗಾರ್
- ಲೆಮನ್ ಆಯಿಲ್ (ಬೇಕಿದ್ದರೆ)
ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸುವ ಸುಲಭ ತಂತ್ರಗಳು
- ಮೊದಲಿಗೆ ಸಿಂಕ್‌ಅನ್ನು ಸಂಪೂರ್ಣವಾಗಿ ಖಾಲಿ ಮಾಡಿ. ಸ್ಟ್ರೈನರ್‌ನಲ್ಲಿರುವ ಆಹಾರದ ಕಣಗಳನ್ನು ಸ್ವಚ್ಛಗೊಳಿಸಿ.
- ಒಂದು ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಸೌಮ್ಯ ಡಿಶ್ ಸೋಪ್ ಅಥವಾ ಜೆಲ್‌ಅನ್ನು ಬೆಚ್ಚಗಿನ ನೀರಿನೊಂದಿಗೆ ಸೇರಿಸಿ ದ್ರಾವಣ ತಯಾರಿಸಿಕೊಳ್ಳಿ. ಆ ದ್ರಾವಣದಲ್ಲಿ ಮೃದುವಾದ ಸ್ಪೋಂಜ್‌ಅನ್ನು ಅದ್ದಿ, ನಾಲ್ಕೂ ಭಾಗಳನ್ನು ಒಳಗೊಂಡಂತೆ ಸಂಪೂರ್ಣ ಬೇಸಿನ್ ಅನ್ನು ಉಜ್ಜಿ.
- ಸಿಂಕ್‌ನ ಕೊಳಕಾದ ಡ್ರೈನ್ ಭಾಗವನ್ನು ಹಳೆಯ ಹಲ್ಲುಜ್ಜುವ ಬ್ರಷ್‌ಅನ್ನು ಸೋಪ್ ದ್ರಾವಣದಲ್ಲಿ ಅದ್ದಿ, ಅದರ ಸಹಾಯದಿಂದ ಉಜ್ಜಿ. ಅಂಗಡಿಯಲ್ಲಿ ದೊರೆಯುವ ಲೋಹದ ಡ್ರೈನ್ ಕವರ್ ಅನ್ನು ಸ್ಕ್ರಬ್ ಮಾಡಲು ಬಳಸಬಹುದು.
- ನಂತರ ಸಿಂಕ್‌ನ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ಮೃದುವಾದ ಸ್ಪೋಂಜ್ ಸಹಾಯದಿಂದ ಪೂರ್ತಿ ಸಿಂಕ್ ಅನ್ನು ಉಜ್ಜಿ. ನೆನಪಿಡಿ ವೃತ್ತಾಕಾರದಲ್ಲಿ ಉಜ್ಜಿದರೆ ಸ್ಟೇನ್‌ಲೆಸ್ ಸ್ಟೀಲ್‌ನ ಸಿಂಕ್‌ನ ಹೊಳಪು ಮಾಸುವುದಿಲ್ಲ.
- ಸಿಂಕ್‌ನ ಒಳಗಡೆ ಉಂಟಾದ ಕಠಿಣ ಕಲೆಗಳನ್ನು ತೆಗೆದುಹಾಕಲು ವೈಟ್‌ವಿನೇಗರ್‌ನಿಂದ ತೊಳೆಯಿರಿ. ಅದು ಅಡುಗೆ ಸೋಡಾದ ಜೊತೆ ಸೇರಿ ನೊರೆ ಉತ್ಪತ್ತಿ ಮಾಡುತ್ತದೆ. ಇದರಿಂದ ಸಿಂಕ್ ಅನ್ನು ಸುಲಭವಾಗಿ ತೊಳೆಯಬಹುದಾಗಿದೆ. ನಂತರ ಸಿಂಕ್ ಅನ್ನು ನೀರಿನಿಂದ ತೊಳೆಯಿರಿ.
- ಸಿರಾಮಿಕ್ ಸಿಂಕ್‌ನಲ್ಲಿನ ಹಠಮಾರಿ ಕಲೆಗಳನ್ನು ತೆಗೆಯಲು ಟೇಬಲ್ ಸಾಲ್ಟ್‌ಅನ್ನು ಕಲೆಯಾದ ಜಾಗಕ್ಕೆ ಸಿಂಪಡಿಸಿ. ಅರ್ಧ ನಿಂಬೆ ಹಣ್ಣಿನ ರಸವನ್ನು ಆ ಭಾಗದ ಮೇಲೆ ಹಾಕಿ ಮತ್ತು ಉಜ್ಜಿ, ನಂತರ ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ. ನಿಮ್ಮ ಸಿಂಕ್ ಬಿಳಿಯ ಬಣ್ಣದ್ದಾಗಿದ್ದರೆ ಅದನ್ನು ವೈಟ್‌ವಿನೇಗರ್‌ನಿಂದ ಸ್ವಚ್ಛಗೊಳಿಸಿ.
- ನಿಮ್ಮ ಸಿಂಕ್ ಹೊಸತರಂತೆ ಹೊಳೆಯಬೇಕೆಂದಿದ್ದರೆ ಒಂದು ಹನಿ ಆಲಿವ್ ಎಣ್ಣೆಯನ್ನು ಒಂದು ಚಿಕ್ಕ ಬಟ್ಟೆಯಲ್ಲಿ ತೆಗೆದುಕೊಂಡು ಸಿಂಕ್‌ನ ಒಳ ಮತ್ತು ಹೊರ ಭಾಗದಲ್ಲಿ ಉಜ್ಜಿ, ನಂತರ ಬೇರೊಂದು ಬಟ್ಟೆಯ ಸಹಾಯದಿಂದ ಒರೆಸಿ. ಹಾಗೆಯೇ ನಿಮ್ಮ ಸಿಂಕ್ ಸಿರಾಮಿಕ್‌ನದಾಗಿದ್ದರೆ ಅದಕ್ಕೆ ನಿಂಬೂ ಎಣ್ಣೆ ಸೂಕ್ತವಾಗಿರುತ್ತದೆ.
ಸಿಂಕ್‌ನ ನಲ್ಲಿ (ಟ್ಯಾಪ್) ಸ್ವಚ್ಛಗೊಳಿಸುವ ವಿಧಾನ
- ಸೋಪಿನ ದ್ರಾವಣದಲ್ಲಿ ಅದ್ದಿದ ಸ್ಫೋಂಜ್‌ನಿಂದ ನಲ್ಲಿ ಮತ್ತು ಹಿಡಿಕೆಯನ್ನು ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.
- ನಲ್ಲಿ ಮತ್ತು ಹಿಡಿಕೆಯ ಮೇಲಾದ ಸುಣ್ಣದ ಕಲೆಗಳನ್ನು ಹೋಗಲಾಡಿಸಲು ವೈಟ್‌ವಿನೇಗರ್ ಅನ್ನು ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆಯಿರಿ.
- ನಲ್ಲಿ ಮತ್ತು ಹಿಡಿಕೆಯ ಮೇಲಾಗುವ ಕಲೆಗಳನ್ನು ತಡೆಗಟ್ಟಲು ನೀರಿನಿಂದ ತೊಳೆದ ನಂತರ ಅದನ್ನು ಸಂಪೂರ್ಣವಾಗಿ ಒಣಗಿಸಿ.
ಗಾರ್ಬೇಜ್ ಡಿಸ್ಪೋಸಲ್ ಸ್ವಚ್ಛಗೊಳಿಸುವ ವಿಧಾನ
ಗಾರ್ಬೇಜ್ ಡಿಸ್ಪೋಸಲ್ ಸ್ವಚ್ಛಗೊಳಿಸಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ. ಅದನ್ನು ಸ್ವಚ್ಛಗೊಳಿಸಲು ಪ್ರತಿದಿನ ಹೀಗೆ ಮಾಡಿ. ಕೆಲವು ಐಸ್ ಕ್ಯೂಬ್‌ಗಳನ್ನು ತೆಗೆದುಕೊಳ್ಳಿ. ಅದಕ್ಕೆ ಅಡುಗೆ ಸೋಡಾ, ವೈಟ್‌ವಿನೇಗರ್ ಸೇರಿಸಿ. 10 ನಿಮಿಷ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಕಿತ್ತಳೆ ಹಣ್ಣಿನ ಕೆಲವು ಸಿಪ್ಪೆಗಳನ್ನು ಹಾಕಿ ದುರ್ವಾಸನೆ ಹೋಗಲಾಡಿಸಿ, ತಾಜಾ ಪರಿಮಳ ಪಡೆಯಿರಿ.
(ಬರಹ: ಅರ್ಚನಾ ವಿ. ಭಟ್)
ವಿಭಾಗ