ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ಹಾಗಿದ್ರೆ ಈ 6 ಸಿಂಪಲ್‌ ಟಿಪ್ಸ್‌ ಟ್ರೈ ಮಾಡಿ ನೋಡಿ

Kitchen Tips: ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ಹಾಗಿದ್ರೆ ಈ 6 ಸಿಂಪಲ್‌ ಟಿಪ್ಸ್‌ ಟ್ರೈ ಮಾಡಿ ನೋಡಿ

ದುಬಾರಿ ಬೆಲೆ ತೆತ್ತು, ಉತ್ತಮ ಗುಣಮಟ್ಟದ ಮಿಕ್ಸರ್‌ ಗ್ರೈಂಡರನ್ನು ಮನೆಗೆ ತಂದಿದ್ತೀರಿ, ಆದರೆ ಅದರ ಜಾರನ್ನು ಸ್ವಚ್ಛಗೊಳಿಸೋದೆ ಚಿಂತೆ ಆಗಿರುತ್ತೆ. ಯಾಕೆಂದರೆ ಕೆಲವೊಮ್ಮೆ ಮಿಕ್ಸಿ ಜಾರನ್ನು ಎಷ್ಟೇ ತೊಳೆದ್ರು ಕ್ಲೀನ್‌ ಆಗಿರಲ್ಲ. ಆದ್ರೆ ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಮಿಕ್ಸಿ ಜಾರ್‌ ಪಳಪಳ ಹೊಳೆಯುವಂತೆ ಮಾಡಬಹುದು.

ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗುತ್ತಿಲ್ವಾ? ಹಾಗಿದ್ರೆ ಈ 6 ಸಿಂಪಲ್‌ ಟಿಪ್ಸ್‌ ಟ್ರೈ ಮಾಡಿ
ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗುತ್ತಿಲ್ವಾ? ಹಾಗಿದ್ರೆ ಈ 6 ಸಿಂಪಲ್‌ ಟಿಪ್ಸ್‌ ಟ್ರೈ ಮಾಡಿ

ರುಚಿರುಚಿಯಾದ ದೋಸೆಹಿಟ್ಟು ಮಾಡಿಕೊಳ್ಳಲು, ಖಾರವಾದ ಚಟ್ನಿ, ಸಾಂಬಾರ್‌ಗೆ ಮಸಾಲೆ ರುಬ್ಬಿಕೊಳ್ಳಲು, ಬಾಯಾರಿದಾಗ ಜ್ಯೂಸ್‌, ಮಿಲ್ಕ್‌ಶೇಕ್‌ ತಯಾರಿಸಲು ಹೀಗೆ ಅಡುಗೆ ಕೆಲಸಗಳನ್ನು ಸುಲಭಗೊಳಿಸುವಲ್ಲಿ ಮಿಕ್ಸರ್ ಗ್ರೈಂಡರ್‌ನ ಪಾತ್ರ ಬಹಳ ಮುಖ್ಯವಾದುದು. ಹೀಗೆ ಮಿಕ್ಸರ್ ಗ್ರೈಂಡರ್ ಕೆಲಸ ಕಾರ್ಯಗಳನ್ನು ನಾವೆಷ್ಟು ಬಾರಿ ಹೊಗಳಿದರೂ, ಅದರ ಜಾರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ವಿಫಲರಾಗುತ್ತಲೇ ಇದ್ದೇವೆ.

ಟ್ರೆಂಡಿಂಗ್​ ಸುದ್ದಿ

ನಿತ್ಯವೂ ಏನಿಲ್ಲವೆಂದರೆ ನಾಲ್ಕಾರು ಬಾರಿ ಮಿಕ್ಸರ್ ಗ್ರೈಂಡರ್ ಬಳಸುವ ನಾವು ಅದರ ಜಾರ್‌ಗಳನ್ನು ಅದೆಷ್ಟು ಸ್ವಚ್ಛವಾಗುವಂತೆ ತೊಳೆದರೂ, ಕೊಳೆಗಳು ನಡುವೆಯೇ ಉಳಿದುಕೊಂಡುಬಿಡುತ್ತದೆ. ಇದರಿಂದಾಗಿ ಜಾರ್‌ಗಳು ಬಹುಬೇಗನೆ ಕೆಟ್ಟುಹೋಗುತ್ತವೆ. ಮನೆಯಲ್ಲಿಯೇ ಮಿಕ್ಸರ್‌ ಗ್ರೈಂಡರ್‌ಗಳ ಜಾರ್‌ಗಳನ್ನು ಸ್ವಚ್ಛಗೊಳಿಸಲು 6 ಸುಲಭ ವಿಧಾನಗಳು ಜೊತೆಗೆ ಜಾರ್‌ಗಳ ಬ್ಲೇಡ್‌ಗಳು ಎಂದಿಗೂ ಹರಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬೆಲ್ಲದರ ಮಾಹಿತಿ ಇಲ್ಲಿದೆ.

ದ್ರವ ರೂಪದ ಡಿಟರ್ಜೆಂಟ್‌ಗಳ ಬಳಕೆ ಮಾಡಿ

ಪ್ರಾರಂಭದಲ್ಲಿ ದ್ರವ ರೂಪದ ಡಿಟರ್ಜೆಂಟನ್ನು ಮಿಕ್ಸರ್‌ ಜಾರ್‌ಗೆ ಹಾಕಿ. ನಂತರ ಮಿಕ್ಸರನ್ನು ಆನ್‌ ಮಾಡಿ. ಇದರಿಂದ ಜಾರ್‌ನ ಸಂದುಗಳಲ್ಲಿ ಇರುವ ಕೊಳೆ ಸುಲಭವಾಗಿ ಹೊರಬರುತ್ತದೆ. ನೊರೆಯಂತಿರುವ ಡಿಟರ್ಜೆಂಟನ್ನು ಬಳಸಿ ಜಾರ್‌ನ ಹೊರಭಾಗವನ್ನು ತೊಳೆಯಿರಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ, ಕಿಚನ್‌ ಟವೆಲ್‌ ಅಥವಾ ಯಾವುದಾದರೂ ಒಣ ಬಟ್ಟೆಯಿಂದ ಜಾರನ್ನು ಸ್ವಚ್ಛಗೊಳಿಸಿಕೊಳ್ಳಿ.

ವಾಶಿಂಗ್‌ ಪೌಡರ್‌ ಬಳಕೆ

ಸ್ವಲ್ಪ ವಾಶಿಂಗ್‌ ಪೌಡರನ್ನು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಸ್ಪಂಜಿನ ಸಹಾಯದಿಂದ ಮಿಕ್ಸರ್‌ ಜಾರಿನ ಒಳ ಹಾಗೂ ಹೊರಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಟಾಪಿನ ನೀರಿನ ಹರಿವಿನಲ್ಲಿ ಜಾರನ್ನು ತೊಳೆದರೆ, ನೀರಿನ ರಭಸಕ್ಕೆ ಎಲ್ಲ ಕಲ್ಮಶಗಳೂ ಸರಾಗವಾಗಿ ಹೋಗಿಬಿಡುತ್ತದೆ. ಮತ್ತೆ ಜಾರ್‌ ಬಳಸಲು ಸಿದ್ಧವಾಗುತ್ತದೆ.

ವಿನೇಗರ್‌ ಬಳಸಿ ಜಾರನ್ನು ಹೊಳೆಯುವಂತೆ ಮಾಡಿ

ಬಿಳಿ ವಿನೆಗರ್‌ಗೆ ಸ್ವಲ್ಪ ನೀರನ್ನು ಸೇರಿಸಿ ಜಾರ್‌ಗೆ ಹಾಕಿ. ಜಾರಿನ ಮುಚ್ಚಳ ಹಾಕಿ ಚೆನ್ನಾಗಿ ಕುಲುಕಿಸಿ. ನಂತರ ಸ್ಪಾಂಜ್‌ ಬಳಸಿ ಜಾರಿನ ಒಳಭಾಗ ಹಾಗೂ ಹೊರಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನೀರಿನಿಂದ ಕೊಳೆ ತೊಳೆದುಕೊಳ್ಳಿ. ಒಣಗಿನ ಬಟ್ಟೆಯಿಂದ ಜಾರ್‌ ಒರೆಸಿಕೊಂಡರೆ, ಜಾರ್‌ ಸ್ವಚ್ಛವಾಗುವ ಜೊತೆಗೆ ಪಳಪಳ ಹೊಳೆಯುತ್ತದೆ.

ಜಾರ್‌ ಕ್ಲೀನ್‌ ಮಾಡಲು ಬೇಕಿಂಗ್‌ ಪೌಡರ್‌ ಉತ್ತಮ

ಬೇಕಿಂಗ್‌ ಪೌಡರ್‌ ಅದೆಷ್ಟು ಉಪಕಾರಿಯೆಂದರೆ, ಮಿಕ್ಸಿ ಜಾರ್‌ ಸ್ವಚ್ಛಗೊಳಿಸಲು ಮಾತ್ರವಲ್ಲದೆ, ಜಾರ್‌ನ ಒಳಭಾಗದ ಕೆಟ್ಟ ವಾಸನೆಯನ್ನು ಸಹ ತೊಡೆದುಹಾಕಬಲ್ಲುದು. ಇದಕ್ಕಾಗಿ ಬೇಕಿಂಗ್‌ ಪೌಡರ್‌ಗೆ ನೀರು ಮಿಶ್ರ ಮಾಡಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಜಾರಿನ ಒಳ ಹಾಗೂ ಹೊರಭಾಗಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಈಗ ಒಣ ಬಟ್ಟೆಯಿಂದ ಜಾರನ್ನು ಚೆನ್ನಾಗಿ ಕ್ಲೀನ್‌ ಮಾಡಿಕೊಂಡು, ನೀರಿನಿಂದ ತೊಳೆದುಕೊಳ್ಳಿ. ಜಾರು ಹೊಸದರಂತೆ ಕಾಣುವುದರಲ್ಲಿ ಸಂದೇಹವಿಲ್ಲ.

ಆಲ್ಕೊಹಾಲ್‌ನಿಂದ ಇಂತಹ ಉಪಯೋಗವೂ ಇದೆ

ಆಲ್ಕೊಹಾಲ್‌ಗೆ ನೀರು ಸೇರಿಸಿ, ಸ್ಪಾಂಜ್‌ ಬಳಸಿಕೊಂಡು ಇಡೀ ಜಾರನ್ನು ಚೆನ್ನಾಗಿ ಉಜ್ಜಿಕೊಳ್ಳಿ. 5 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ನೀರಿನಿಂದ ಜಾರನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಜಾರ್‌ ಬೇಗನೆ ಸ್ವಚ್ಛವಾಗುತ್ತದೆ.

ನಿಂಬೆಹಣ್ಣಿನ ಸಿಪ್ಪೆ ಬೇಡವೆಂದು ಎಸೆಯದಿರಿ

ಮಿಕ್ಸಿ ಜಾರನ್ನು ಸ್ವಚ್ಛಗೊಳಿಸುವ ವಿಶಿಷ್ಟ ವಿಧಾನವನ್ನು ನೀವು ತಿಳಿಯಲೇಬೇಕು. ನಿಂಬೆಹಣ್ಣಿನ ಸಿಪ್ಪೆಯಿಂದ ಮಿಕ್ಸ್‌ ಜಾರ್‌ನ ಒಳ ಹಾಗೂ ಹೊರಭಾಗವನ್ನು ಚೆನ್ನಾಗಿ ಉಜ್ಜಿಕೊಂಡು 5 ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬಹುದು. ಇಲ್ಲವಾದರೆ ನಿಂಬೆ ಸಿಪ್ಪೆಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒಂದೆರಡು ಬಾರಿ ಗ್ರೈಂಡ್‌ ಮಾಡಿಕೊಳ್ಳಿ. ಇದರಿಂದ ಜಾರ್‌ ಬಹು ಬೇಗನೆ ಸ್ವಚ್ಛವಾಗುತ್ತದೆ. ಕೀಟಾಣುಗಳಿಂದ ಮುಕ್ತವಾಗುತ್ತದೆ ಮಾತ್ರವಲ್ಲದೆ ಜಾರ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಮಾಯವಾಗುತ್ತದೆ.

ಇದಿಷ್ಟೇ ಅಲ್ಲದೆ ಜಾರ್‌ನ ಬ್ಲೇಡ್‌ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ಹರಿತಗೊಳಿಸುವುದಕ್ಕಾಗಿ ಒಂದು ಹಿಡಿ ಕಲ್ಲುಪ್ಪು ತೆಗೆದುಕೊಂಡು ಮಿಕ್ಸಿ ಜಾರಿನಲ್ಲಿ ಹಾಕಿ ಒಂದೆರಡು ಬಾರಿ ಗ್ರೈಂಡ್‌ ಮಾಡಿಕೊಳ್ಳಿ. ಇದರಿಂದ ಬ್ಲೇಡ್‌ ಹೊಸತರಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇನ್ಯಾಕೆ ತಡ, ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮನೆಯ ಮಿಕ್ಸರ್‌ ಗ್ರೈಂಡರ್‌ ಜಾರನ್ನು ಸುಲಭವಾಗಿ ಸ್ವಚ್ಛಗೊಳಿಸಿಕೊಳ್ಳಿ.

ವಿಭಾಗ