ಈರುಳ್ಳಿ ದರ ಜಾಸ್ತಿ ಆಗ್ತಿದೆ ಅಂತ ಚಿಂತಿಸಬೇಡಿ, ಅಡುಗೆ ರುಚಿ ಹೆಚ್ಚಿಸಲು ಈರುಳ್ಳಿ ಬದಲು ಏನೆಲ್ಲಾ ಬಳಸಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈರುಳ್ಳಿ ದರ ಜಾಸ್ತಿ ಆಗ್ತಿದೆ ಅಂತ ಚಿಂತಿಸಬೇಡಿ, ಅಡುಗೆ ರುಚಿ ಹೆಚ್ಚಿಸಲು ಈರುಳ್ಳಿ ಬದಲು ಏನೆಲ್ಲಾ ಬಳಸಬಹುದು ನೋಡಿ

ಈರುಳ್ಳಿ ದರ ಜಾಸ್ತಿ ಆಗ್ತಿದೆ ಅಂತ ಚಿಂತಿಸಬೇಡಿ, ಅಡುಗೆ ರುಚಿ ಹೆಚ್ಚಿಸಲು ಈರುಳ್ಳಿ ಬದಲು ಏನೆಲ್ಲಾ ಬಳಸಬಹುದು ನೋಡಿ

ಸದ್ಯದಲ್ಲೇ ಈರುಳ್ಳಿ ದರ ಶತಕ ದಾಟುತ್ತೆ ಅಂತ ಹೇಳಲಾಗುತ್ತಿದೆ. ಪದೇ ಪದೇ ದರ ಏರಿಕೆಯಾಗಿ ಈರುಳ್ಳಿ ಕತ್ತರಿಸದೇ ಇದ್ದರೂ ಕಣ್ಣೀರು ಬರುವಂತಾಗಿದೆ. ಆದರೆ ಈರುಳ್ಳಿ ಬಳಸದೇ ಅಡುಗೆ ರುಚಿಯಾಗಾದ್ರೂ ಹೇಗೆ ಅಂತ ಕೇಳಬಹುದು. ಅದಕ್ಕಾಗಿ ಈರುಳ್ಳಿ ಬದಲು ನೀವು ಈ ಪರ್ಯಾಯಗಳನ್ನ ಬಳಸಬಹುದು. ಇದರಿಂದ ಅಡುಗೆರುಚಿ ಕಾಪಾಡಿಕೊಳ್ಳಬಹುದು ನೋಡಿ.

ಈರುಳ್ಳಿಗೆ ಪರ್ಯಾಯಗಳು
ಈರುಳ್ಳಿಗೆ ಪರ್ಯಾಯಗಳು (PC: Canva)

ಟೊಮೆಟೊ ಹಾಗೂ ಈರುಳ್ಳಿ ಈ ಎರಡೂ ಇಲ್ಲ ಅಂದ್ರೆ ಭಾರತೀಯ ಅಡುಗೆ ಸಾಧ್ಯವೇ ಇಲ್ಲ, ಅಷ್ಟರ ಮಟ್ಟಿಗೆ ನಾವು ಈರುಳ್ಳಿ ಹಾಗೂ ಟೊಮೆಟೊ ರುಚಿಗೆ ಹೊಂದಿಕೊಂಡಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಟೊಮೆಟೊ ಹಾಗೂ ಈರುಳ್ಳಿ ದರ ಏರಿಕೆಯಾಗಿ ಜನರು ತತ್ತರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಟೊಮೆಟೊ ದರ ಏರಿಕೆಯಾಗಿತ್ತು. ಇದೀಗ ಈರುಳ್ಳಿ ದರ ಹೆಚ್ಚಳವಾಗಿದೆ. ಸದ್ಯದಲ್ಲಿ ಬೆಂಗಳೂರಿನಲ್ಲಿ ಈರುಳ್ಳಿ ದರ 100ರೂ ದಾಟುತ್ತದೆ ಎಂದು ಹೇಳಲಾಗುತ್ತಿದೆ. ದರ ಏರಿಕೆಯಾಗಿದಂತ ಅನ್ನೋ ಕಾರಣಕ್ಕೆ ಅಡುಗೆ ರುಚಿಯಾಗಿ ಮಾಡದೇ ಇರೋಕೆ ಆಗುತ್ತಾ, ಅದಕ್ಕಾಗಿ ಈರುಳ್ಳಿಗೆ ಬದಲಾಗಿ ಪರ್ಯಾಯಗಳನ್ನು ಬಳಸಿ ಈರುಳ್ಳಿ ರುಚಿ ಹೆಚ್ಚಿಸಬೇಕು. ಹಾಗಾದರೆ ಈರುಳ್ಳಿಗೆ ಪರ್ಯಾಯ ಏನಿದೆ ನೋಡಿ.

ಶಲೋಟ್‌

ಇದು ಈರುಳ್ಳಿಯಂತೆ ಕಾಣುತ್ತದೆ, ಆದರೆ ಈರುಳ್ಳಿಯಲ್ಲ. ಸೌಮ್ಯವಾದ, ಸೂಕ್ಷ್ಮ ಪರಿಮಳ ಹೊಂದಿರುವ ಸಣ್ಣ ಈರುಳ್ಳಿಗಳಾಗಿವೆ. ಇದು ಕೊಂಚ ಸಿಹಿ ರುಚಿಯನ್ನು ಹೊಂದಿರುತ್ತದೆ. ಸೂಪ್, ಸಲಾಡ್‌ಗಳಿಗೆ ಹೆಚ್ಚಾಗಿ ಬಳಸುವ ಶಲೋಟ್ ಅನ್ನು ಈರುಳ್ಳಿಗೆ ಪರ್ಯಾಯವಾಗಿ ಬಳಸಬಹುದು.

ಸ್ಪ್ರಿಂಗ್ ಆನಿಯನ್

ಭಾರತೀಯ ಅಡುಗೆಗಳಲ್ಲಿ ಇದರ ಬಳಕೆ ಕಡಿಮೆಯಾದರೂ ಪಾಶ್ಚಾತ್ಯ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಿಂದಿಯಲ್ಲಿ ಇದನ್ನು ಹರಾ ಪ್ಯಾಜ್ ಎಂದು ಕರೆಯುತ್ತಾರೆ. ಇದು ಒಂದು ರೀತಿ ಸೊಪ್ಪಿನ ದಂಟಿನಂತಿರುತ್ತದೆ. ಇದರ ರುಚಿಯೂ ಚೆನ್ನಾಗಿರುತ್ತದೆ, ಇದನ್ನು ನೀವು ಈರುಳ್ಳಿ ಬದಲು ಅಡುಗೆಯ ರುಚಿಯ ಹೆಚ್ಚಿಸಲು ಬಳಸಬಹುದು.

ಸೋಂಪು

ಈರುಳ್ಳಿ ಬದಲು ಸೋಂಪನ್ನು ಕೂಡ ಬಳಸಬಹುದು. ಇದು ಒಂದು ರೀತಿ ಅದೇ ಪರಿಮಳವನ್ನು ನೀಡುತ್ತದೆ. ಸಾಸ್‌ ಅಥವಾ ಗ್ರೇವಿಗೆ ಸೋಂಪು ಬಳಸುವುದರಿಂದ ಈರುಳ್ಳಿ ಬಳಸಿಲ್ಲ ಎಂಬ ಅನುಭವವೇ ತಿಳಿಯುವುದಿಲ್ಲ. ಇದು ಒಂದು ರೀತಿಯ ವಿಭಿನ್ನ ರುಚಿಯನ್ನು ನೀಡುತ್ತದೆ.

ಸೆಲರಿ

ಕೊತ್ತಂಬರಿ ಸೊಪ್ಪಿನಂತೆ ಕಾಣುವ ಸೆಲರಿ ದಪ್ಪ ದಂಟನ್ನು ಹೊಂದಿರುತ್ತದೆ. ಇದನ್ನು ಕೂಡ ಈರುಳ್ಳಿಗೆ ಪರ್ಯಾಯವಾಗಿ ಬಳಸಬಹುದು. ಒಂದು ಮಧ್ಯಮ ಗಾತ್ರದ ಈರುಳ್ಳಿ ರುಚಿಗೆ 2 ರಿಂದ 3 ರಷ್ಟು ಸೆಲರಿ ಕಾಂಡಗಳನ್ನು ಬಳಸಿ. ಇದು ಆಹಾರದ ರುಚಿಯನ್ನು ದುಪ್ಪಟ್ಟಾಗಿಸುತ್ತದೆ. ಭಾರತದಲ್ಲಿ ಇದನ್ನು ಶರಲಿ, ಅಜ್‌ಮುಡ್ ಎಂದೆಲ್ಲಾ ಕರೆಯುತ್ತಾರೆ.

ಚೀವ್ಸ್

ಇದನ್ನು ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಪರ್ಯಾಯವಾಗಿ ಬಳಸಬಹುದು. ಇದು ನೋಡಲು ಸ್ಪ್ರಿಂಗ್ ಆನಿಯನ್‌ನಂತೆ ಕಾಣುತ್ತದೆ. ಜಪಾನ್‌ ದೇಶದಲ್ಲಿ ಇದರ ಬಳಕೆ ಹೆಚ್ಚು, ಇದನ್ನು ಕಿಮ್ಮಿ ರೂಪದಲ್ಲಿ ಸೇವಿಸಲಾಗುತ್ತದೆ. ನೀವು ಈರುಳ್ಳಿ ಬದಲು ಅಡುಗೆಗೆ ಇದನ್ನು ಬಳಸಬಹುದು. ಸೂಪರ್‌ಮಾರ್ಕೆಟ್‌ಗಳಲ್ಲಿ ಇದು ಲಭ್ಯವಿದೆ.

ಈರುಳ್ಳಿ ಪುಡಿ

ಈಗ ಯಾವುದಕ್ಕೂ ಪರ್ಯಾಯವಿಲ್ಲ ಎಂಬ ಮಾತೇ ಇಲ್ಲ. ಈರುಳ್ಳಿ ದರ ಜಾಸ್ತಿ ಆಯ್ತು, ಈರುಳ್ಳಿ ರುಚಿ ಇಲ್ಲ ಅಂದ್ರೆ ಊಟ ಸೇರೊಲ್ಲ ಅನ್ನೋರು ಚಿಂತೆ ಮಾಡಬೇಕು ಅಂತಿಲ್ಲ. ಈರುಳ್ಳಿ ಪುಡಿಯನ್ನು ಅಡುಗೆಗೆ ಬಳಸಬಹುದು. ಒಂದು ಕಪ್‌ ಈರುಳ್ಳಿ ಜಾಗದಲ್ಲಿ 1 ಚಮಚ ಈರುಳ್ಳಿ ಪುಡಿ ಬಳಸಬಹುದು.

ಈರುಳ್ಳಿ ಫ್ಲೇಕ್‌

ಈಗ ಮಾರುಕಟ್ಟೆಗಳಲ್ಲಿ ಹೆಚ್ಚಿಟ್ಟ ಈರುಳ್ಳಿ ಸಿಗುತ್ತದೆ. ಈರುಳ್ಳಿ ಹೆಚ್ಚಿ ಒಣಗಿಸಿ ಪ್ಯಾಕ್ ಮಾಡಿರಲಾಗುತ್ತದೆ. ಅದನ್ನು ಈರುಳ್ಳಿ ಫ್ಲೇಕ್‌ ಅಥವಾ ಆನಿಯನ್ ಫ್ಲೇಕ್ ಎಂದು ಕರೆಯುತ್ತಾರೆ. ಇದು ಅಡುಗೆಗೆ ಈರುಳ್ಳಿಯ ಅದ್ಭುತ ಪರಿಮಳವನ್ನು ನೀಡುತ್ತದೆ. ಒಂದು ಮಧ್ಯಮ ಗಾತ್ರ ಈರುಳ್ಳಿಗೆ 3 ಟೇಬಲ್‌ ಚಮಚ ಈರುಳ್ಳಿ ಫ್ಲೇಕ್ಸ್ ಸಮ.

ದೊಣ್ಣೆ ಮೆಣಸು

ಈರುಳ್ಳಿಗೆ ಪರ್ಯಾಯವಾಗಿ ದೊಣ್ಣೆ ಮೆಣಸನ್ನು ಕೂಡ ಬಳಸಬಹುದು. ಇದು ಆಹಾರದಲ್ಲಿ ಈರುಳ್ಳಿ ಬಳಸಿಲ್ಲ ಎಂಬ ಅಂಶ ತಿಳಿಯದಂತೆ ಮಾಡುತ್ತದೆ. ಈರುಳ್ಳಿ ಬದಲಿಗೆ ಕೆಂಪು, ಹಸಿರು ದೊಣ್ಣೆಮೆಣಸನ್ನು ಬಳಸಬಹುದು.

ಈರುಳ್ಳಿ ಪೇಸ್ಟ್ ‌

ಈರುಳ್ಳಿ ದರ ಆಗಾಗ ಏರಿಕೆಯಾಗುತ್ತಲೇ ಇರುತ್ತದೆ. ಅದಕ್ಕಾಗಿ ನೀವು ಈರುಳ್ಳಿ ಪೇಸ್ಟ್ ಮಾಡಿ ಫ್ರಿಜ್‌ನಲ್ಲಿಟ್ಟುಕೊಂಡರೆ ಕೆಲವು ದಿನಗಳವರೆಗೆ ಬಳಸಬಹುದು. ಇದು ಕೂಡ ಈರುಳ್ಳಿಗೆ ಪರ್ಯಾಯ ಅನ್ನೋದು ಸುಳ್ಳಲ್ಲ.

ಆದರೆ ಕೆಲವೊಮ್ಮೆ ಈರುಳ್ಳಿ ಪೇಸ್ಟ್‌ನಂತಹ ಪರ್ಯಾಯಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಪರ್ಯಾಯಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

Whats_app_banner