ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯಾ: ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯಾ: ಈ ಸಲಹೆ ಪಾಲಿಸಿ

ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯಾ: ಈ ಸಲಹೆ ಪಾಲಿಸಿ

ಮನೆಯನ್ನು ಸ್ವಚ್ಛಗೊಳಿಸುವ ಮತ್ತು ಅಲಂಕರಿಸುವ ಚಿಂತೆ ನಿಮ್ಮನ್ನು ಕಾಡುತ್ತಿದೆಯಾ. ದೀಪಾವಳಿ ಹಬ್ಬ ಇನ್ನೇನು ಹತ್ತಿರದಲ್ಲಿದೆ. ಲಕ್ಷ್ಮೀಯನ್ನು ಬರಮಾಡಿಕೊಳ್ಳಲು ಮನೆಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮನೆಯನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂಬ ಬಗ್ಗೆ ಇಲ್ಲಿದೆ ಸಲಹೆ.

ಕೊನೆಯ ಕ್ಷಣದ ಬದಲಾಗಿ ದೀಪಾವಳಿಗೆ ಸ್ವಲ್ಪ ದಿನ ಇರುವಾಗ ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ.
ಕೊನೆಯ ಕ್ಷಣದ ಬದಲಾಗಿ ದೀಪಾವಳಿಗೆ ಸ್ವಲ್ಪ ದಿನ ಇರುವಾಗ ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. (PC: Canva)

ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ದೇಶದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಸಂಭ್ರಮದ ಹಬ್ಬ ಇದು. ದೀಪಾವಳಿ ಬಂದ್ರೆ ಸಾಕು ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿರುತ್ತದೆ. ಹೆಂಗಳೆಯರು ಸಂತೋಷ, ಉತ್ಸಾಹದಿಂದ ಮನೆಕೆಲಸದಲ್ಲಿ ತೊಡಗುತ್ತಾರೆ. ಹಬ್ಬದಡುಗೆಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದೇ ಹೆಣ್ಮಕ್ಕಳಿಗೆ ದೊಡ್ಡ ಟಾಸ್ಕ್. ಬೆಳಕಿನ ಹಬ್ಬವಾದರಿಂದ ಮನೆಯ ಮೂಲೆ ಮೂಲೆಗಳಲ್ಲಿ ದೀಪವನ್ನಿಡಬೇಕು. ಹೀಗಾಗಿ ಎಲ್ಲಾ ಕಡೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ.

ಪ್ರಾಚೀನ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಸ್ವಾಗತಿಸಲು, ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಮತ್ತು ದೀಪಗಳಿಂದ ಅಲಂಕರಿಸಬೇಕು. ಇದಕ್ಕಾಗಿಯೇ ದೀಪಾವಳಿಯ ಸಂದರ್ಭದಲ್ಲಿ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸುವುದು. ಸಹಜವಾಗಿ, ಈ ಕೆಲಸವು ಆಯಾಸವನ್ನುಂಟು ಮಾಡುತ್ತದೆ. ಆದರೆ, ವ್ಯವಸ್ಥಿತವಾಗಿ ಸ್ವಚ್ಛಗೊಳಿಸುವ ಮೂಲಕ, ದಣಿದಿಲ್ಲದೆ ಮನೆಯನ್ನು ಸುಲಭವಾಗಿ ಹೊಳೆಯುವಂತೆ ಮಾಡಬಹುದು.

ಹಬ್ಬದ ಮುನ್ನಾ ದಿನ ಕೆಲಸ ಮಾಡುವ ಬದಲು, ಬಹಳ ದಿನ ಅಥವಾ ತಿಂಗಳು ಮುಂಚಿತವಾಗಿ ಮನೆಗೆಲಸ ಮಾಡಲು ಮುಂದಾಗುವುದು ಬಹಳ ಮುಖ್ಯ. ಇದಕ್ಕಾಗಿ ಪ್ರತಿದಿನ ಒಂದೊಂದೇ ಕೆಲಸಗಳನ್ನು ಮಾಡಿಕೊಂಡು ಬರಬೇಕು. ನೀವು ಯಾವುದೇ ಒತ್ತಡವಿಲ್ಲದೆ ಹಬ್ಬವನ್ನು ಆನಂದಿಸಲು ಬಯಸಿದರೆ, ಕೊನೆಯ ಕ್ಷಣದ ಬದಲಾಗಿ ದೀಪಾವಳಿಗೆ ಸ್ವಲ್ಪ ದಿನ ಇರುವಾಗ ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ.

ಮನೆಪೂರ್ತಿ ಸ್ವಚ್ಛಗೊಳಿಸಿ: ಮಳೆಗಾಲದ ನಂತರ ದೀಪಾವಳಿ ಬರುವುದರಿಂದ ತೇವಾಂಶ ಇರುವುದು ಸಹಜ. ಹೀಗಾಗಿ ತೇವವನ್ನು ಪತ್ತೆಹಚ್ಚಲು ಇಡೀ ಮನೆಯನ್ನು ಗುಡಿಸುವುದು ಬಹಳ ಮುಖ್ಯ. ಇದಕ್ಕಾಗಿ ಸರಿಯಾಗಿ ಯೋಜನೆ ಮತ್ತು ಕೆಲಸವನ್ನು ವಿಭಜಿಸಬೇಕು. ಒಂದು ಸಮಯದಲ್ಲಿ ಸ್ವಚ್ಛಗೊಳಿಸಲು ಮನೆಯ ಒಂದು ಭಾಗವನ್ನು ಮಾತ್ರ ಆಯ್ಕೆ ಮಾಡುವುದು ಉತ್ತಮ. ಇದರಿಂದ ನೀವು ಯಾವುದೇ ಆಯಾಸವಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತದೆ.

ವಾರ್ಡ್ರೋಬ್ ಸ್ವಚ್ಛಗೊಳಿಸಿ: ಮನೆ ಪೂರ್ತಿ ಗುಡಿಸಿದ ಬಳಿಕ ಬೀರುವನ್ನು ಸ್ವಚ್ಛಗೊಳಿಸಬೇಕು. ಬಟ್ಟೆಯ ಸಹಾಯದಿಂದ, ಬೀರು ಮೇಲೆ ಸಂಗ್ರಹವಾದ ಧೂಳನ್ನು ಸ್ವಚ್ಛಗೊಳಿಸಿ, ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿ. ನಂತರ ಎಲ್ಲಾ ಬಟ್ಟೆಗಳನ್ನು ಮಡಚಿ ತೆಳುವಾದ ಬಟ್ಟೆಯಲ್ಲಿ ಕಟ್ಟಿಡಿ. ನೀವು ದೀರ್ಘಕಾಲ ಧರಿಸದ ಬಟ್ಟೆಗಳಿದ್ದರೆ, ಅವುಗಳನ್ನು ತೆಗೆದು ಪ್ರತ್ಯೇಕವಾಗಿ ಇರಿಸಿ. ವಾರ್ಡ್ರೋಬ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಸುಗಂಧ ದ್ರವ್ಯವನ್ನು ಸಿಂಪಡಿಸಿ, ಬಟ್ಟೆಗಳನ್ನು ಜೋಡಿಸಿಡಿ.

ಗೋಡೆಗಳನ್ನು ಸ್ವಚ್ಛಗೊಳಿಸಿ: ಉದ್ದನೆಯ ಪೊರಕೆಯ ಸಹಾಯದಿಂದ ಪ್ರತಿ ಕೋಣೆಯ ಗೋಡೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಧೂಳು ಮತ್ತು ಜೇಡರ ಬಲೆಗಳನ್ನು ತೆಗೆದುಹಾಕಬೇಕು. ಫ್ಯಾನ್‌ಗಳನ್ನು ಬಟ್ಟೆಯಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಮನೆಯ ಮೂಲೆಯಲ್ಲಿ ಬೇಡವಾದ ವಸ್ತುಗಳನ್ನು ಇರಿಸಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಇರಿಸಲಾದ ವಸ್ತುಗಳನ್ನು ವಿಂಗಡಿಸಿ, ಅನುಪಯುಕ್ತ ವಸ್ತುಗಳನ್ನು ಎಸೆಯಿರಿ.

ಅಡುಗೆ ಮನೆ ಶುಚಿಗೊಳಿಸಿ: ಅಡುಗೆ ಮನೆಯನ್ನು ಸ್ವಚ್ಛಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎಣ್ಣೆಯ ಬಳಕೆ ಮತ್ತು ಅಡುಗೆ ಮಾಡುವಾಗ ಉಂಟಾಗುವ ಹೊಗೆಯಿಂದ ಅಡುಗೆ ಮನೆ ಜಿಗುಟಾದಂತಾಗುತ್ತದೆ. ಹೀಗಾಗಿ ಅಡುಗೆ ಮನೆಯನ್ನು ಸೂಕ್ಷ್ಮವಾಗಿ ಸ್ವಚ್ಛಗೊಳಿಸಬೇಕು. ಚಿಮಣಿಯನ್ನು ಮುಂಚಿತವಾಗಿ ಸರ್ವಿಸ್ ಮಾಡಿ. ಎಕ್ಸಾಸ್ಟ್ ಫ್ಯಾನ್ ಅನ್ನು ತೆಗೆದು, ಸೀಮೆಎಣ್ಣೆಯಿಂದ ಸ್ವಚ್ಛಗೊಳಿಸಿ. ಪಾತ್ರೆ ರ್ಯಾಕ್ ಅನ್ನು ಖಾಲಿ ಮಾಡಿ, ಎಲ್ಲಾ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಮತ್ತೆ ಅವುಗಳ ಸ್ಥಳದಲ್ಲೇ ಇರಿಸಿ. ಕಿಚನ್ ಸ್ಲ್ಯಾಬ್‍ಗಳು, ಕಪಾಟನ್ನು ಬಿಸಿ ನೀರು ಅಥವಾ ಕಿಚನ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಬಹುದು.

ಇನ್ನು ಬಳಕೆಯಾಗದ ಪ್ಲಾಸ್ಟಿಕ್ ಪಾತ್ರೆಗಳು, ಒಡೆದ ಕಪ್‌ಗಳು, ಹಾಳಾದ ಆಹಾರ ಪದಾರ್ಥಗಳನ್ನು ಎಸೆಯಿರಿ. ರೆಫ್ರಿಜರೇಟರ್‌ನಿಂದ ಎಲ್ಲಾ ವಸ್ತುಗಳನ್ನು ಹೊರತೆಗೆದು, ಬಿಸಿನೀರು ಮತ್ತು ವಿನೆಗರ್ ದ್ರಾವಣದಿಂದ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಅಡಿಗೆ ಸೋಡಾ ಮತ್ತು ನಿಂಬೆರಸದಿಂದ ನೆಲವನ್ನು ಸ್ವಚ್ಛಗೊಳಿಸಿ. ಇದರಿಂದ ತೈಲ ಕಲೆಗಳನ್ನು ಸಂಪೂರ್ಣವಾಗಿ ತೆಗೆಯಬಹುದು. ಅಡಿಗೆ ಸೋಡಾ ಮತ್ತು ವಿನೆಗರ್‌ನಿಂದ ಮೈಕ್ರೊವೇವ್ ಅನ್ನು ಸ್ವಚ್ಛಗೊಳಿಸಬಹುದು.

ಸ್ನಾನಗೃಹದ ಸ್ವಚ್ಛತೆ: ಸಾಮಾನ್ಯ ದಿನಗಳಲ್ಲಿ ಸ್ನಾನದ ನೆಲವನ್ನು ಸ್ವಚ್ಛಗೊಳಿಸಿದರೆ ಸಾಕಾಗುತ್ತದೆ. ಆದರೆ, ದೀಪಾವಳಿ ಸಮಯದಲ್ಲಿ ಸ್ನಾನಗೃಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಸಾಬೂನು, ಎಣ್ಣೆ ಮತ್ತು ಶಾಂಪೂ ಸೇರಿದಂತೆ ಎಲ್ಲಾ ವಸ್ತುಗಳನ್ನು ಹೊರತೆಗೆಯಿರಿ. ಲಿಕ್ವಿಡ್ ಕ್ಲೀನರ್‌ನಿಂದ ಬಾತ್ರೂಮ್ ಕ್ಯಾಬಿನೆಟ್ ಅನ್ನು ಸ್ವಚ್ಛಗೊಳಿಸಿ. ಶವರ್ ಹೆಡ್ ಅನ್ನು ಸ್ವಚ್ಛಗೊಳಿಸಲು ಪಾಲಿಥಿನ್‌ನಲ್ಲಿ ಬಿಳಿ ವಿನೆಗರ್ ಅನ್ನು ತುಂಬಿಸಿ. ಶವರ್ ಹೆಡ್‌ಗೆ ಅನ್ವಯಿಸಿ ಒಂದು ಗಂಟೆ ಹಾಗೆಯೇ ಬಿಡಿ. ನಂತರ ಅದನ್ನು ನೀರಿನಿಂದ ತೊಳೆದರೆ, ಹೊಸದರಂತೆ ಶವರ್ ಹೊಳೆಯುತ್ತದೆ. ವಿನೆಗರ್ ಸಹಾಯದಿಂದ ಟ್ಯಾಪ್ ಅನ್ನು ಸ್ವಚ್ಛಗೊಳಿಸಬಹುದು. ಬಿಳಿ ವಿನೆಗರ್ ಅಥವಾ ಬಾತ್ರೂಮ್ ಕ್ಲೀನರ್ ಅನ್ನು ಟೈಲ್ಸ್ ಮೇಲೆ ಸುರಿಯಿರಿ. ಸ್ವಲ್ಪ ಸಮಯ ಬಿಟ್ಟು ಬ್ರಷ್ ಸಹಾಯದಿಂದ ಸ್ಕ್ರಬ್ ಮಾಡಿ, ಶುದ್ಧ ನೀರಿನಿಂದ ತೊಳೆಯಿರಿ. ಲಿಕ್ವಿಡ್ ಕ್ಲೀನರ್ ಸಹಾಯದಿಂದ ಸ್ನಾನದ ನೆಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಬಾಹ್ಯ ಶುಚಿಗೊಳಿಸುವಿಕೆ: ಮನೆಯ ಒಳಗೆ ಮಾತ್ರವಲ್ಲ ಹೊರಗೆ ಕೂಡ ಶುಚಿಗೊಳಿಸುವುದು ಬಹಳ ಮುಖ್ಯ. ಹಿಂದಿನ ಕಾಲದಲ್ಲಿ, ಜನರು ತಮ್ಮ ಮನೆಗಳಿಗೆ ಪ್ರತಿ ವರ್ಷ ಸುಣ್ಣಬಣ್ಣವನ್ನು ಬಳಿಯುತ್ತಿದ್ದರು. ಇದರಿಂದ ಮನೆಯು ಹೊಚ್ಚಹೊಸದಾಗಿ ಕಾಣುತ್ತಿತ್ತು. ಆದರೀಗ ಕಾಲ ಬದಲಾಗಿದ್ದು ಮನೆಗಳಿಗೆ ಸುಣ್ಣ-ಬಣ್ಣವಲ್ಲ ದುಬಾರಿ ಪೇಂಟಿಂಗ್ ಬಳಿಯಲಾಗುತ್ತದೆ. ಹೀಗಾಗಿ ಪ್ರತಿವರ್ಷ ಪೇಂಟಿಗ್‌ಗೆ ಹಣವನ್ನು ವ್ಯಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗೋಡೆಗಳಲ್ಲಿ ಇರುವ ಧೂಳು, ಬಲೆಗಳನ್ನು ತೆಗೆದು, ನೀರಿನಿಂದ ಸ್ವಚ್ಛಗೊಳಿಸಿ. ಸಾಧ್ಯವಿದ್ದಲ್ಲಿ ಬಾಗಿಲು ಮತ್ತು ಕಿಟಕಿಗಳಿಗೆ ಮತ್ತೆ ಬಣ್ಣವನ್ನು ಬಳಿಯಬಹುದು. ಹೀಗೆ ಮಾಡುವುದರಿಂದ ಮನೆಯ ಹೊಳಪು ಹೆಚ್ಚುತ್ತದೆ.

ಲೋಹ ಮತ್ತು ಗಾಜಿನ ವಸ್ತುಗಳನ್ನು ಶುಚಿಗೊಳಿಸಿ: ಲೋಹದ ದೀಪಗಳು ಅಥವಾ ಗಾಜಿನ ವಸ್ತುಗಳು, ಹಿತ್ತಾಳೆ ಹೂದಾನಿಗಳು, ಬೆಳ್ಳಿಯ ಪೂಜಾ ಸಾಮಾಗ್ರಿಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸ್ವಲ್ಪ ಹೆಚ್ಚು ಶ್ರಮ ಮತ್ತು ಗಮನ ಬೇಕಾಗುತ್ತದೆ. ಇದಕ್ಕಾಗಿ ಬಿಳಿ ವಿನೆಗರ್‌ಗೆ ಸಮಾನ ಪ್ರಮಾಣದಲ್ಲಿ ನೀರನ್ನು ಹಾಕಿ ಮಿಶ್ರಣ ಮಾಡಿ. ಇದರಿಂದ ಕಿಟಕಿ ಗಾಜುಗಳನ್ನು ಶುಚಿಗೊಳಿಸಿ. ಪತ್ರಿಕೆ ಅಥವಾ ಟಿಶ್ಯೂ ಪೇಪರ್ ಸಹಾಯದಿಂದ ಒರೆಸಬಹುದು. ಗಾಜಿನ ಪಾತ್ರೆಯನ್ನು ಕೂಡ ಈ ದ್ರಾವಣದಿಂದ ಸ್ವಚ್ಛಗೊಳಿಸಿ, ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಹಿತ್ತಾಳೆಯ ಪಾತ್ರೆಗಳು, ಹೂದಾನಿಗಳು, ದೀಪಗಳು ಹೆಚ್ಚಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನು ಸ್ವಚ್ಛಗೊಳಿಸಲು, ವಿನೆಗರ್, ಉಪ್ಪು ಮತ್ತು ಹಿಟ್ಟಿನ ಪೇಸ್ಟ್ ಅನ್ನು ತಯಾರಿಸಿ. ಹಿತ್ತಾಳೆಯ ಪಾತ್ರೆಗಳನ್ನು ಹುಣಸೆಹಣ್ಣಿನ ಹುಳಿಯಿಂದಲೂ ತೊಳೆಯಬಹುದು. ಬೆಳ್ಳಿಯ ಪೂಜಾ ಸಾಮಾಗ್ರಿಗಳು, ವಿಗ್ರಹಗಳು ಮತ್ತು ಪಾತ್ರೆಗಳನ್ನು ತೊಳೆಯಲು, ಅವುಗಳ ಮೇಲೆ ಟೂತ್‌ಪೇಸ್ಟ್ ಅನ್ನು ಹಾಕಿ, ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಲಘುವಾಗಿ ಉಜ್ಜಿ, ನೀರಿನಿಂದ ತೊಳೆಯಿರಿ.

ವೃತ್ತಿಪರರ ಸಹಾಯ ತೆಗೆದುಕೊಳ್ಳಿ: ಅಯ್ಯೋ ಇಷ್ಟೆಲ್ಲಾ ಕೆಲಸ ಯಾರು ಮಾಡುತ್ತಾರಪ್ಪಾ. ನಿಮ್ಮಿಂದ ಆಗುವುದಿಲ್ಲ ಎಂದಾದರೆ ವೃತ್ತಿಪರರ ಸಹಾಯ ತೆಗೆದುಕೊಳ್ಳಬಹುದು. ಈಗೆಲ್ಲಾ ಮನೆಯನ್ನು ಸ್ವಚ್ಛಗೊಳಿಸಲೆಂದೇ ಶುಚಿಗೊಳಿಸುವ ಪರಿಣಿತರು ಇದ್ದಾರೆ. ಇದಕ್ಕಾಗಿ ಹಲವು ಅಪ್ಲಿಕೇಷನ್‌ಗಳಿವೆ. ಅಥವಾ ಸ್ವಚ್ಛಗೊಳಿಸಲು ಉಪಕರಣಗಳನ್ನು ಬಾಡಿಗೆಗೆ ಸಹ ಪಡೆಯಬಹುದು.

Whats_app_banner