ಚಳಿಗಾಲದಲ್ಲಿ ತೆಂಗಿನೆಣ್ಣೆ ಹೆಪ್ಪುಗಟ್ಟದೇ ಇರಲು ಏನು ಮಾಡಬೇಕು? ಈ ಟಿಪ್ಸ್ ಬಳಸಿ ಸುಲಭದಲ್ಲಿ ಕರಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ತೆಂಗಿನೆಣ್ಣೆ ಹೆಪ್ಪುಗಟ್ಟದೇ ಇರಲು ಏನು ಮಾಡಬೇಕು? ಈ ಟಿಪ್ಸ್ ಬಳಸಿ ಸುಲಭದಲ್ಲಿ ಕರಗುತ್ತೆ

ಚಳಿಗಾಲದಲ್ಲಿ ತೆಂಗಿನೆಣ್ಣೆ ಹೆಪ್ಪುಗಟ್ಟದೇ ಇರಲು ಏನು ಮಾಡಬೇಕು? ಈ ಟಿಪ್ಸ್ ಬಳಸಿ ಸುಲಭದಲ್ಲಿ ಕರಗುತ್ತೆ

Frozen Coconut Oil: ತೆಂಗಿನ ಎಣ್ಣೆ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ನೀವು ಬಯಸಿದಾಗ ಅದನ್ನು ತತ್‌ಕ್ಷಣ ತೆಗೆದು ಬಳಸಲು ಆಗುವುದಿಲ್ಲ. ಇದನ್ನು ಬಿಸಿ ಮಾಡಿ ಕರಗಿಸಿ ನಂತರ ಬಳಸಲಾಗುತ್ತದೆ. ಶೀತ ವಾತಾವರಣದಲ್ಲಿ ಕೊಬ್ಬರಿ ಎಣ್ಣೆ ಹೆಪ್ಪುಗಟ್ಟದಂತೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ.

ಚಳಿಗಾಲದಲ್ಲಿ ತೆಂಗಿನೆಣ್ಣೆ ಹೆಪ್ಪುಗಟ್ಟದೇ ಇರಲು ಏನು ಮಾಡಬೇಕು?
ಚಳಿಗಾಲದಲ್ಲಿ ತೆಂಗಿನೆಣ್ಣೆ ಹೆಪ್ಪುಗಟ್ಟದೇ ಇರಲು ಏನು ಮಾಡಬೇಕು? (Shutterstock)

Frozen Coconut Oil: ತೆಂಗಿನೆಣ್ಣೆಯನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ಕೇರಳ, ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಖಾದ್ಯಗಳಿಗೆ ಹೆಚ್ಚಾಗಿ ಕೊಬ್ಬರಿ ಎಣ್ಣೆಯನ್ನೇ ಬಳಸುತ್ತಾರೆ. ತೆಂಗಿನೆಣ್ಣೆಯ ಆರೋಗ್ಯ ಪ್ರಯೋಜನದಿಂದಾಗಿ ಕರಾವಳಿಯಲ್ಲದೆ ಇತರ ಕಡೆಗಳಲ್ಲೂ ಹಲವರು ಅಡುಗೆಗೆ ಕೊಬ್ಬರಿ ಎಣ್ಣೆ ಬಳಸಲು ಒಲವು ತೋರುತ್ತಿದ್ದಾರೆ. ಅಷ್ಟೇ ಅಲ್ಲದೆ ತಲೆ, ದೇಹಕ್ಕೆ ಮಸಾಜ್ ಮಾಡಲು ಸಹ ಬಹುತೇಕ ಮಂದಿ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಚಳಿಗಾಲ ಬಂತೆಂದರೆ ಕೊಬ್ಬರಿ ಎಣ್ಣೆಯನ್ನು ಬಳಸಲು ಕೊಂಚ ಕಷ್ಟವಾಗುತ್ತದೆ. ಯಾಕೆಂದರೆ ತೆಂಗಿನೆಣ್ಣೆ ತುಂಬಿಸಿಟ್ಟಿರುವ ಡಬ್ಬದಲ್ಲಿ ಈ ಎಣ್ಣೆ ಹೆಪ್ಪುಗಟ್ಟಿರುತ್ತದೆ. ಇದರಿಂದ ಗೃಹಿಣಿಯರು ಕಷ್ಟಪಡುತ್ತಾರೆ. ಹೀಗಾಗಿ ಚಳಿಗಾಲದಲ್ಲಿ ತೆಂಗಿನೆಣ್ಣೆಯನ್ನು ಹೆಪ್ಪುಗಟ್ಟುವುದನ್ನು ತಪ್ಪಿಸಲು ಈ ಟಿಪ್ಸ್ ಅನುಸರಿಸಬಹುದು.

ತೆಂಗಿನ ಎಣ್ಣೆಯನ್ನು ಬಹುತೇಕ ಮಂದಿ ತೆಳುವಾದ ಬಾಟಲಿಗಳು ಮತ್ತು ಕ್ಯಾನ್‌ಗಳಲ್ಲಿ ಸಂಗ್ರಹಿಸುತ್ತಾರೆ. ಚಳಿಗಾಲದಲ್ಲಿ ತೆಂಗಿನೆಣ್ಣೆ ಗಟ್ಟಿಯಾಗಿ ಬಿಡುತ್ತದೆ. ಹೀಗಾಗಿ ಬಳಸಲು ಹಲವರು ಒದ್ದಾಡುತ್ತಾರೆ. ಯಾರು ಕಷ್ಟಪಡುವುದು ಅಂತ ಕೆಲವರು ಬೇರೆ ಅಡುಗೆ ಎಣ್ಣೆಯನ್ನು ಬಳಸುತ್ತಾರೆ. ನೀವು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಇದನ್ನು ಅನುಸರಿಸುವುದರಿಂದ ಚಳಿಗಾಲದಲ್ಲೂ ತೆಂಗಿನೆಣ್ಣೆಯನ್ನು ಸುಲಭವಾಗಿ ಬಳಸಬಹುದು. ಹೆಪ್ಪುಗಟ್ಟಿದ ತೆಂಗಿನ ಎಣ್ಣೆಯನ್ನು ತ್ವರಿತವಾಗಿ ಕರಗಿಸಲು ಏನು ಮಾಡಬೇಕು ಎಂಬ ಬಗ್ಗೆಯೂ ಇಲ್ಲಿ ತಿಳಿದುಕೊಳ್ಳಿ.

ತೆಂಗಿನೆಣ್ಣೆಯನ್ನು ಚಳಿಗಾಲದಲ್ಲಿ ಈ ರೀತಿ ಸಂಗ್ರಹಿಸಿ

ಶೀತ ವಾತಾವರಣದಲ್ಲಿ ತೆಂಗಿನ ಎಣ್ಣೆಯು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಹೀಗಾಗಿ ಅದನ್ನು ಬೆಚ್ಚಗಿಡಲು ಸರಿಯಾದ ಸ್ಥಳದಲ್ಲಿ ಸಂಗ್ರಹಿಸುವುದು ಅವಶ್ಯಕ. ಚಳಿಗಾಲದಲ್ಲಿ, ತೆಂಗಿನ ಎಣ್ಣೆಯನ್ನು ಅಡುಗೆಮನೆಯ ಗ್ಯಾಸ್ ಸಿಲಿಂಡರ್ ಬಳಿ ಅಥವಾ ಫ್ರಿಜ್ ಮೇಲೆ ಇರಿಸಬಹುದು. ಫ್ರಿಜ್ ಮೇಲೆ ಸ್ಟೆಬಿಲೈಝರ್ ಇರುವುದರಿಂದ ಅದು ಸ್ವಲ್ಪ ಬೆಚ್ಚಗಿರುತ್ತದೆ. ಹೀಗಾಗಿ ಅಲ್ಲಿ ಕೊಬ್ಬರಿ ಎಣ್ಣೆಯ ಬಾಟಲ್ ಅನ್ನು ಇಡಬಹುದು. ಆದರೆ, ನೀವು ಇಟ್ಟಿರುವ ಪಾತ್ರೆ ಅಥವಾ ಬಾಟಲ್ ಸೋರಿಕೆಯಾಗುತ್ತಿದೆಯಾ ಎಂಬದನ್ನು ಗಮನಿಸಿ. ಸೋರಿಕೆಯಾಗದ ಡಬ್ಬ ಅಥವಾ ಬಾಟಲ್ ಅನ್ನು ಫ್ರಿಡ್ಜ್ ಮೇಲೆ ಇರಿಸಬಹುದು. ಇಲ್ಲದಿದ್ದಲ್ಲಿ ಅಪಾಯ ಎದುರಾಗಬಹುದು.

ಇತರೆ ಎಣ್ಣೆಯನ್ನು ಸೇರಿಸಬಹುದು

ಚಳಿಗಾಲದಲ್ಲಿ ತೆಂಗಿನ ಎಣ್ಣೆ ಘನೀಕರಿಸುವುದನ್ನು ತಡೆಯಲು ಮತ್ತೊಂದು ಮಾರ್ಗವಿದೆ. ತೆಂಗಿನ ಎಣ್ಣೆ ಹೆಪ್ಪುಗಟ್ಟಿದರೂ, ಇತರ ಕೆಲವು ಎಣ್ಣೆಗಳು ಹೆಪ್ಪುಗಟ್ಟುವುದಿಲ್ಲ. ತೆಂಗಿನ ಎಣ್ಣೆಗೆ ಬೇರೆ ಎಣ್ಣೆಯನ್ನು ಸೇರಿಸಿ ಸಂಗ್ರಹಿಸಬಹುದು. ತೆಂಗಿನ ಎಣ್ಣೆಗೆ ಸ್ವಲ್ಪ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ, ನೆಲ್ಲಿಕಾಯಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸೇರಿಸಬಹುದು. ಈ ಎಣ್ಣೆಗಳು ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದ ಅವಧಿಯಲ್ಲಿ ಮೇಲೆ ತಿಳಿಸಿದ ಎಣ್ಣೆಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಸೇರಿಸಬಹುದು. ಈ ರೀತಿ ಮಾಡುವುದರಿಂದ ತೆಂಗಿನೆಣ್ಣೆ ಹೆಪ್ಪುಗಟ್ಟುವುದಿಲ್ಲ.

ತೆಳುವಾದ ಡಬ್ಬದಲ್ಲಿ ಸಂಗ್ರಹಿಸಬಾರದು

ತೆಂಗಿನ ಎಣ್ಣೆಯನ್ನು ತೆಳುವಾದ ಡಬ್ಬದಲ್ಲಿ ಸಂಗ್ರಹಿಸಬಾರದು. ವಿಶೇಷವಾಗಿ ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ಇಟ್ಟರೆ ಅದು ಬೇಗನೆ ಹೆಪ್ಪುಗಟ್ಟುತ್ತದೆ. ಅಗಲವಾದ ಬಾಯಿ ಹೊಂದಿರುವ ದೊಡ್ಡ ಡಬ್ಬದಲ್ಲಿ ಸಂಗ್ರಹಿಸಬಹುದು. ಇದು ಹೆಪ್ಪುಗಟ್ಟಿದರೂ ಬೇಗನೆ ಕರಗಬಹುದು ಹಾಗೂ ಬೇಕೆಂದಾಗ ಎಣ್ಣೆ ತೆಗೆಯುವುದು ಕೂಡ ಸುಲಭ. ಇದನ್ನು ಮಣ್ಣಿನ ಮಡಕೆ, ಗಾಜಿನ ಬಾಟಲಿ ಅಥವಾ ಸ್ಟೀಲ್ ಪಾತ್ರೆ, ಸೆರಾಮಿಕ್ ಜಾರ್‌ನಲ್ಲಿ ಸಂಗ್ರಹಿಸಲು ಬಳಸಬಹುದು. ಹೊರಗಿನ ತಾಪಮಾನವು ಒಳಗಿನ ಎಣ್ಣೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಈ ರೀತಿಯೂ ಕರಗಿಸಬಹುದು

ತೆಂಗಿನ ಎಣ್ಣೆ ಸಂಪೂರ್ಣವಾಗಿ ಹೆಪ್ಪುಗಟ್ಟಿದ್ದರೆ (Frozen Coconut Oil) ಮತ್ತು ಸುಲಭವಾಗಿ ತೆಗೆಯಲು ಸಾಧ್ಯವಾಗದಿದ್ದರೆ, ಮೊದಲು ಬಾಣಲೆಯಲ್ಲಿ ನೀರನ್ನು ಬಿಸಿ ಮಾಡಿ. ಗ್ಯಾಸ್ ಆಫ್ ಮಾಡಿದ ನಂತರ ಎಣ್ಣೆ ಬಾಟಲಿಯನ್ನು ಬಿಸಿ ನೀರಿನಲ್ಲಿ ಮುಳುಗಿಸಿ. ಇದು ಎಣ್ಣೆ ಸುಲಭವಾಗಿ ಕರಗಲು ಸಹಾಯ ಮಾಡುತ್ತದೆ. ಇದಲ್ಲದೆ, ಎಣ್ಣೆಯನ್ನು ಕರಗಿಸಲು ಹೇರ್ ಡ್ರೈಯರ್ ಅನ್ನು ಸಹ ಬಳಸಬಹುದು. ಹೇರ್ ಡ್ರೈಯರ್ ಅನ್ನು ಕೂದಲು ಒಣಗಿಸಲು ಬಳಸಲಾಗುತ್ತದೆ. ಇದರಲ್ಲಿ ಬಿಸಿ ಗಾಳಿ ಬರುವುದರಿಂದ ಇದನ್ನು ಕ್ಯಾನ್‌ಗೆ ಸ್ವಲ್ಪ ಮೇಲಿಂದ ಹಿಡಿದು ಹೇರ್ ಡ್ರೈಯರ್ ಆನ್ ಮಾಡಬಹುದು. ಈ ಮೂಲಕವೂ ಕರಗಿಸಲು ಸಹಾಯ ಮಾಡುತ್ತದೆ. ಬಿಸಿಲು ಇದ್ದಲ್ಲಿ ಹೊರಾಂಗಣದಲ್ಲಿ ಇಡಬಹುದು. ಇದರಿಂದ ಸುಲಭವಾಗಿ ಕರಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner