ಮೈಕ್ರೋವೇವ್ನಲ್ಲಿ ಈ 5 ವಸ್ತುಗಳನ್ನು ತಪ್ಪಾಗಿಯೂ ಕೂಡಾ ಇಡಬೇಡಿ; ಇಲ್ಲವಾದರೆ ಸ್ಪೋಟಗೊಳ್ಳುವುದು ಖಚಿತ
ಆಹಾರವನ್ನು ಬಿಸಿ ಮಾಡುವುದು, ‘ರೆಡಿ ಟು ಈಟ್’ ಆಹಾರಗಳನ್ನು ಬೇಯಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮೈಕ್ರೋವೇವ್ ತುಂಬಾ ಸುಲಭಗೊಳಿಸಿದೆ. ಮೈಕ್ರೋವೇವ್ ಓವನ್ ಬಳಸುವವರು ತಿಳಿದಿರಬೇಕಾದ ಅತಿಮುಖ್ಯ ಸುರಕ್ಷಾ ಸಲಹೆಗಳಿವು (ಬರಹ: ಅರ್ಚನಾ ವಿ. ಭಟ್)

ಆಗೊಂದು ಕಾಲವಿತ್ತು, ಮೈಕ್ರೋವೇವ್ ಓವನ್ ಎನ್ನುವುದು ಐಷಾರಾಮಿ ವಸ್ತು ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ಮೈಕ್ರೋವೇವ್ ಅನ್ನು ಕಾಣಬಹುದಾಗಿದೆ. ಇದು ಈಗ ಅಡುಗೆಮನೆಯ ಅಗತ್ಯ ವಸ್ತುಗಳ ಸಾಲಿಗೆ ಸೇರಿಕೊಂಡಿದೆ. ಆಹಾರವನ್ನು ಬೇಗ ಬೇಯಿಸುವ, ಬೇಗ ಬಿಸಿ ಮಾಡುವಂತಹ ಅನೇಕ ಕೆಲಸಗಳನ್ನು ಮೈಕ್ರೋವೇವ್ ಸುಲಭಗೊಳಿಸಿದೆ. ಕೆಲಸಕ್ಕೆ ಹೋಗುವವರಿಗೆ ಮೈಕ್ರೋವೇವ್ ಅನ್ನುವುದು ವರದಾನವಿದ್ದಂತೆ. ಮೈಕ್ರೋವೇವ್ನಿಂದ ಅನುಕೂಲ ಎಷ್ಟಿದೆಯೋ, ಅದನ್ನು ಬಳಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ವಾಸ್ತವವಾಗಿ, ಮೈಕ್ರೋವೇವ್ನಲ್ಲಿ ಬೇಯಿಸುವಾಗ ಅತ್ಯಂತ ಅಪಾಯಕಾರಿಯಾಗಬಹುದಾದ ಕೆಲವು ವಿಷಯಗಳೂ ಇವೆ. ಅದರಲ್ಲಿ ಬೇಯಿಸಲು ಇಡುವ ಆಹಾರ ಪದಾರ್ಥಗಳಿಂದ ಅದು ಸ್ಪೋಟಗೊಳ್ಳುವ ಅಪಾಯವೂ ಇದೆ. ನೀವು ಮೈಕ್ರೋವೇವ್ ಬಳಸುತ್ತಿದ್ದರೆ, ಇಲ್ಲವೇ ಹೊಸದಾಗಿ ಖರೀದಿಸಲು ಬಯಸುತ್ತಿದ್ದರೆ ಈ ಸುರಕ್ಷತಾ ಸಲಹೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಮೈಕ್ರೋವೇವ್ನಲ್ಲಿ ಯಾವ ವಸ್ತುಗಳನ್ನು ಬೇಯಿಸಬಹುದು ಹಾಗೂ ಯಾವುದಕ್ಕೆ ಬಳಸಬಾರದು ಎಂದು ತಿಳಿಯುವುದು ಅತ್ಯವಶ್ಯಕ.
ಮೈಕ್ರೋವೇವ್ನಲ್ಲಿ ಮೊಟ್ಟೆಗಳನ್ನು ಕುದಿಸಬೇಡಿ
ಮೈಕ್ರೋವೇವ್ನಲ್ಲಿ ಮೊಟ್ಟೆಗಳನ್ನು ಎಂದಿಗೂ ಬೇಯಿಸಬಾರದು. ನೀವು ಮೊಟ್ಟೆಯನ್ನು ಅದರ ಚಿಪ್ಪಿನೊಂದಿಗೆ ಕುದಿಸಲು ಅಥವಾ ಬೇಯಿಸಲು ಮೈಕ್ರೋವೇವ್ನಲ್ಲಿ ಇಟ್ಟಾಗ, ಅದು ಸ್ಪೋಟಕ್ಕೆ ಕಾರಣವಾಗಬಹುದು. ಮೊಟ್ಟೆಯನ್ನು ಬೇಯಿಸಿದಾಗ, ಮೈಕ್ರೋವೇವ್ನಲ್ಲಿ ಉಗಿ (ಆವಿ ಅಥವಾ ಹಬೆ) ರೂಪುಗೊಳ್ಳುತ್ತದೆ. ಈ ಉಗಿ ಮತ್ತು ಒತ್ತಡದಿಂದಾಗಿ, ಮೊಟ್ಟೆಯು ಕೆಲವೊಮ್ಮೆ ಅದರ ಚಿಪ್ಪಿನೊಂದಿಗೆ ಸಿಡಿಯಬಹುದು. ಇದು ಮೈಕ್ರೋವೇವ್ ಸ್ಪೋಟಗೊಳ್ಳಲು ಕಾರಣವಾಗಬಹುದು. ಇದರಿಂದ ನಿಮ್ಮ ಮೈಕ್ರೋವೇವ್ ಹಾಳಾಗಬಹುದು. ಜೊತೆಗೆ ನಿಮಗೂ ಅಪಾಯವಾಗಬಹುದು.
ಮೈಕ್ರೋವೇವ್ನಲ್ಲಿ ಉಕ್ಕಿನ ಪಾತ್ರೆಗಳನ್ನು ಇಡಬೇಡಿ
ಮೈಕ್ರೋವೇವ್ನಲ್ಲಿ ಅಡುಗೆ ಮಾಡಲು ಮತ್ತು ಬೇಯಿಸಲು ಉಕ್ಕಿನ ಪಾತ್ರೆಗಳನ್ನು (ಸ್ಟೀಲ್) ಎಂದಿಗೂ ಬಳಸಬಾರದು. ಉಕ್ಕಿನ ಪಾತ್ರೆ ಬಳಸುವುದರಿಂದ ಮೈಕ್ರೋವೇವ್ನಲ್ಲಿ ಕಿಡಿಗಳು ಹೊತ್ತಿಕೊಳ್ಳಬಹುದು ಮತ್ತು ಹಲವು ಸಂದರ್ಭಗಳಲ್ಲಿ, ಸ್ಫೋಟದ ಅಪಾಯವೂ ಇರಬಹುದು. ಆದ್ದರಿಂದ, ನೀವು ಮೈಕ್ರೋವೇವ್ನಲ್ಲಿ ಏನನ್ನಾದರೂ ಅಡುಗೆ ಮಾಡುತ್ತಿದ್ದರೆ, ಮೈಕ್ರೋವೇವ್ ಸುರಕ್ಷಿತ ಪ್ಲಾಸ್ಟಿಕ್ ಅಥವಾ ಬೇಕಲೈಟ್ ಪಾತ್ರೆಗಳನ್ನೇ ಬಳಸಿ.
ಮೈಕ್ರೋವೇವ್ನಲ್ಲಿ ನೀರು ಬಿಸಿ ಮಾಡಬೇಡಿ
ಕೆಲವರು ನೀರನ್ನು ಬಿಸಿಮಾಡಲು ಮೈಕ್ರೋವೇವ್ ಬಳಸುತ್ತಾರೆ ಏಕೆಂದರೆ ಅದು ನೀರನ್ನು ಬೇಗನೆ ಬಿಸಿ ಮಾಡುತ್ತದೆ. ಆದರೆ ಈ ಅನುಕೂಲತೆಯು ನಿಮಗೆ ದುಬಾರಿಯೂ ಆಗಬಹುದು. ಏಕೆಂದರೆ, ಮೈಕ್ರೋವೇವ್ನಲ್ಲಿ ನೀರನ್ನು ಬಿಸಿ ಮಾಡಿದಾಗ, ಅದು ಪಾತ್ರೆಯಿಂದ ಹೊರಗೆ ಚೆಲ್ಲುವ ಅಪಾಯವಿರುತ್ತದೆ. ಇದು ನಿಮ್ಮ ಮೈಕ್ರೋವೇವ್ ಹಾನಿಗೊಳಗಾಗುವ ಅಥವಾ ಯಾವುದೇ ರೀತಿಯ ಅಪಘಾತ ಸಂಭವಿಸುವ ಅಪಾಯವನ್ನು ಹೆಚ್ಚಿಸುತ್ತದೆ.
ಮುಚ್ಚಿದ ಪಾತ್ರೆಗಳನ್ನು ಮೈಕ್ರೋವೇವ್ನಲ್ಲಿ ಇಡಬೇಡಿ
ನೀವು ಮೈಕ್ರೋವೇವ್ನಲ್ಲಿ ಅಡುಗೆ ಮಾಡುತ್ತಿದ್ದರೆ ಅಥವಾ ಏನನ್ನಾದರೂ ಬಿಸಿ ಮಾಡುತ್ತಿದ್ದರೆ, ಪಾತ್ರೆಯನ್ನು ಮುಚ್ಚುವ ತಪ್ಪನ್ನು ಮಾಡಬೇಡಿ. ನಿಮ್ಮ ಪಾತ್ರೆಯು ಪ್ಲಾಸ್ಟಿಕ್ ಆಗಿರಲಿ ಅಥವಾ ಗಾಜಿನದಾಗಿರಲಿ, ಅದನ್ನು ಯಾವಾಗಲೂ ತೆರೆದಿಡಿ. ವಾಸ್ತವವಾಗಿ, ಬಿಸಿ ಮಾಡಿದಾಗ, ಪಾತ್ರೆಯೊಳಗಿನ ಉಗಿ ವಿಸ್ತರಿಸಲು ಪ್ರಯತ್ನಿಸುತ್ತದೆ. ಇದರಿಂದಾಗಿ ಒತ್ತಡವು ಹೆಚ್ಚಿ ಪಾತ್ರೆ ಸಿಡಿಯುವ ಅಪಾಯವೂ ಹೆಚ್ಚಾಗುತ್ತದೆ.
ಅಲ್ಯೂಮಿನಿಯಂ ಫಾಯಿಲ್ ಬಳಸಬೇಡಿ
ಮೈಕ್ರೋವೇವ್ನಲ್ಲಿ ಅಲ್ಯೂಮಿನಿಯಂ ಫಾಯಿಲ್ ಬಳಸುವುದು ಸಹ ಅಪಾಯಕಾರಿ. ವಾಸ್ತವವಾಗಿ, ಮೈಕ್ರೋವೇವ್ನ ಮೇಲ್ಮೈ ಕೂಡ ಲೋಹದಿಂದ ಮಾಡಲ್ಪಟ್ಟಿದೆ. ಅದೇ ರೀತಿ ಅಲ್ಯೂಮಿನಿಯಂ ಫಾಯಿಲ್ ಕೂಡ ಲೋಹದಿಂದಲೇ ಮಾಡಲ್ಪಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ, ಮೈಕ್ರೋವೇವ್ ತರಂಗಗಳು ಅದಕ್ಕೆ ಡಿಕ್ಕಿ ಹೊಡೆದು ಕಿಡಿಗಳನ್ನು ಉಂಟುಮಾಡಬಹುದು. ಇದು ಕಿಡಿ ಅಥವಾ ಸಂಭವನೀಯ ಬೆಂಕಿ ಅಥವಾ ಮೈಕ್ರೋವೇವ್ನಲ್ಲಿ ಸ್ಪೋಟಕ್ಕೆ ಕಾರಣವಾಗಬಹುದು.
ವಿಭಾಗ