Kitchen Tips: ಈ ದೀಪಾವಳಿಗೆ ಅಡುಗೆಮನೆ ಪಳ ಪಳ ಹೊಳೆಯುವಂತೆ ಮಾಡಬೇಕಾ? ಅಡುಗೆ ಸೋಡಾ ಬಳಸಿ ನೋಡಿ
ಅಡುಗೆಮನೆ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಹಬ್ಬಹರಿದಿನಗಳ ಸ್ಚಚ್ಛತೆ ಎಂದರೆ ಇನ್ನೂ ಕಷ್ಟ. ಅಡುಗೆಮನೆ ಸ್ವಚ್ಚತೆಗೆ ನಮ್ಮ ಅಡುಗೆಮನೆಯಲ್ಲಿಯೇ ಇರುವ ಯಾವುದಾದರೂ ವಸ್ತುಗಳಿದ್ದರೆ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಸುಲಭದ ಉತ್ತರ ಅಡುಗೆ ಸೋಡಾ. ಈ ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಿಮ್ಮ ಅಡುಗೆಮನೆ ಹೊಳೆಯುಂತೆ ಮಾಡಿ. (ಬರಹ: ಅರ್ಚನಾ ವಿ. ಭಟ್)
ದೀಪಾವಳಿಗೆ ಮನೆ ಸ್ವಚ್ಛ ಮಾಡುವುದು ರೂಢಿ. ದೀಪಾವಳಿಗೆ ಒಂದು ವಾರವಿರುವಾಗಲೇ ಮನೆ ಸ್ವಚ್ಛ ಮಾಡಲು ಪ್ರಾರಂಭಿಸುತ್ತಾರೆ. ಮನೆಯ ಉಳಿದೆಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುವುದು ಅಷ್ಟೇನೂ ಕಷ್ಟವಲ್ಲ, ಆದರೆ ಅಡುಗೆ ಮನೆ? ಅದಕ್ಕೆ ಬಹಳಷ್ಟು ಸಮಯ ತಗಲುತ್ತದೆ. ಪ್ರತಿದಿನ ಸ್ವಚ್ಚಮಾಡುವ ಜಾಗಗಳಲ್ಲಿ ಅಡಗುಮನೆ ಒಂದಾದರೂ ಸಹ, ಕೊಳೆ, ಕಲೆಗಳು ಅಲ್ಲಿ ಸ್ವಲ್ಪ ಜಾಸ್ತಿಯೇ. ಧೂಳು ತುಂಬುವ ಪಾತ್ರೆ, ಡಬ್ಬಿಗಳನ್ನಿಡುವ ಕಪಾಟು, ಮಸಾಲೆ ಕಲೆಗಳಿರುವ ಗೋಡೆ ಟೈಲ್ಸ್ ಮತ್ತು ಸ್ಟೋವ್, ಕಟ್ಟೆ ಮೇಲಿರುವ ಎಣ್ಣೆ ಜಿಡ್ಡಿನ ಕಲೆ, ಫ್ರಿಜ್ ಹೀಗೆ ಎಲ್ಲಾ ಸ್ವಚ್ಛಗೊಳಿಸುವ ಹೊತ್ತಿಗೆ ಸುಸ್ತಾಗುವುದಂತು ಖಂಡಿತ.
ಅಡುಗೆಮನೆ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಹಬ್ಬಹರಿದಿನಗಳ ಸ್ಚಚ್ಛತೆ ಎಂದರೆ ಇನ್ನೂ ಕಷ್ಟ. ಅಡುಗೆಮನೆ ಸ್ವಚ್ಚತೆಗೆ ನಮ್ಮ ಅಡುಗೆಮನೆಯಲ್ಲಿಯೇ ಇರುವ ಯಾವುದಾದರೂ ವಸ್ತುಗಳಿದ್ದರೆ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಸುಲಭದ ಉತ್ತರ ಅಡುಗೆ ಸೋಡಾ. ಎಲ್ಲರ ಅಡುಗೆಮನೆಯಲ್ಲಿ ಬಳಸುವ ಖಾಯಂ ವಸ್ತು ಅದು. ಇದು ಕಠಿಣ ಕಲೆಗಳನ್ನು ತೆಗೆದು ಪಳ ಪಳ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಅಡುಗೆಮನೆ ಸ್ವಚ್ಛತೆಯಲ್ಲಿ ಅಡುಗೆ ಸೋಡಾ ಬಳಸುವುದು ಹೇಗೆ? ಅದನ್ನು ಯಾವು ವಸ್ತುಗಳ ಜೊತೆ ಸೇರಿಸಿದರೆ ನಿಮ್ಮ ಕೆಲಸ ಸುಲಭವಾಗುತ್ತದೆ. ಅದರ ಬಗ್ಗೆ ಒಂದೊಂದಾಗಿ ತಿಳಿಯೋಣ. ಮತ್ತೊಂದು ಮುಖ್ಯ ಸೂಚನೆ ಎಂದರೆ, ಅಡುಗೆಮನೆ ಸ್ವಚ್ಛಗೊಳಿಸುವಾಗ ನಿಮ್ಮ ಕೈಗಳಿಗೆ ಗ್ಲೌಸ್ ಹಾಕಿಕೊಳ್ಳಿ. ಅದು ನಿಮ್ಮ ಕೈ ತ್ವಚೆಗೆ ರಕ್ಷಣೆ ಒದಗಿಸುತ್ತದೆ.
ಎಣ್ಣೆ ಜಿಡ್ಡು ತೆಗೆಯಲು ಬಳಸಿ ಅಡುಗೆ ಸೋಡಾ ಮತ್ತು ವಿನೇಗರ್
ಸ್ಟೌವ್, ಟೈಲ್ಸ್ ಮತ್ತು ಕಪಾಟಿನ ಕೆಳಭಾಗದಲ್ಲಿ ಹೆಚ್ಚಾಗಿ ಕಾಣಿಸುವ ಕಲೆಗಳೆಂದರೆ ಅದು ಎಣ್ಣೆ ಜಿಡ್ಡಿನ ಕಲೆ. ಅದನ್ನು ಹೋಗಲಾಡಿಸುವುದ ಸ್ವಲ್ಪ ಕಷ್ಟ. ಒದ್ದೆ ಬಟ್ಟೆ ಅಥವಾ ಸ್ಕ್ರಬ್‌ನಿಂದ ಉಜ್ಜುವ ಬದಲು ಅವುಗಳ ಮೇಲೆ ಅಡುಗೆ ಸೋಡಾ ಸಿಂಪಡಿಸಿ. ಅರ್ಧ ಗಂಟೆ ಬಿಟ್ಟು ಬಿಸಿಮಾಡಿದ ವಿನೇಗರ್ ಹಾಕಿ. ಇದು ಸ್ವಲ್ಪ ಕಷ್ಟದ ಕೆಲಸ ಎಂದೆನಿಸಿದರೆ, ಅಡುಗೆ ಸೋಡಾ ಮತ್ತು ವಿನೇಗರ್ ಸೇರಿಸಿ ದ್ರಾವಣ ಮಾಡಿಕೊಳ್ಳಿ. ಅದನ್ನು ಕಲೆ ಇರುವ ಜಾಗದ ಮೇಲೆ ಸ್ಪ್ರೇಯರ್ ಸಹಾಯದಿಂದ ಸಿಂಪಡಿಸಿ. ಸ್ವಲ್ಪ ಹೊತ್ತು ಬಿಡಿ. ನೀವು ಉಪಯೋಗಿಸುವ ಸ್ಕ್ರಬ್ ತೆಗೆದುಕೊಂಡು ಅವುಗಳನ್ನು ಉಜ್ಜಿ. ಅಡುಗೆ ಸೋಡಾ ಮತ್ತು ವಿನೇಗರ್ ದ್ರಾವಣ ಕಲೆಯನ್ನು ಸಡಿಲಗೊಳಿಸುತ್ತದೆ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. ಎಣ್ಣೆ ಜಿಡ್ಡನ್ನು ಹೀಗೆ ಸುಲಭವಾಗಿ ಸ್ವಚ್ಛಗೊಳಿಸಿ.
ಸ್ಟೀಲ್ ಸಿಂಕ್ ಹೊಳೆಯುವಂತೆ ಮಾಡತ್ತೆ ಅಡುಗೆ ಸೋಡಾ ಮತ್ತು ಲಿಂಬು
ಅಡುಗೆಮನೆಯ ಸ್ಟೀಲ್ ಸಿಂಕ್ ನೀರಿನ ಕಲೆಗಳಿಂದ ಮಸಕಾಗಿದ್ದರೆ ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ಲಿಂಬು ಬಳಸಿ. ಹೇಗೆಂದರೆ, ಮೊದಲಿಗೆ ಅಡುಗೆ ಸೋಡಾ ಮತ್ತು ಲಿಂಬು ರಸ ಸೇರಸಿ ಮಿಶ್ರಣ ತಯಾರಿಸಿ. ಅದನ್ನು ಪೂರ್ತಿ ಸಿಂಕ್ ಮತ್ತು ಮೇಲಿನ ಗೋಡೆಗೆ ಸಿಂಪಡಿಸಿ. 15 ನಿಮಿಷಗಳ ನಂತರ ಸ್ಕ್ರಬ್‌ಗೆ ಸ್ವಲ್ಪ ಲಿಂಬು ರಸ ಹಾಕಿಕೊಂಡು ಉಜ್ಜಿ. ನಂತರ ನೀರಿನಿಂದ ತೊಳೆದು ಒಣಗಿಸಿ.
ಡ್ರೈನ್ ಸ್ವಚ್ಛಗೊಳಿಸುವುದು ಹೇಗೆ
ಸಿಂಕ್ ಸ್ವಚ್ಛಗೊಳಿಸಿದ ನಂತರ ಸ್ವಚ್ಛ ಮಾಡಬೇಕಾಗಿರುವುದು ಡ್ರೈನ್ ಅನ್ನು. ಡ್ರೈನ್ ತೆರೆದು ಅದಕ್ಕೆ 2 ಚಮಚ ಅಡುಗೆ ಸೋಡಾ ಹಾಕಿ. 10 ನಿಮಿಷಗಳ ನಂತರ ಬಿಸಿ ನೀರು ಹಾಕಿ. ಡ್ರೈನ್ ನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಅದು ಕೊಲ್ಲುತ್ತದೆ ಮತ್ತು ವಾಸನೆ ಹೋಗಲಾಡಿಸುತ್ತದೆ. ನಂತರ ಟ್ಯಾಪ್ ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ.
ಒವನ್ ಹೀಗೆ ಸ್ವಚ್ಛ ಮಾಡಿ
ಒವನ್ ಒಳಭಾಗದಲ್ಲಿ ಎಣ್ಣೆ ಜಿಡ್ಡು ಅಥವಾ ನೀರಿನ ಕಲೆ ಇರುವುದು ಸಾಮಾನ್ಯ. ಮೈಕ್ರೋವೇವ್ ಅನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸೂಕ್ಷ್ಮ ಜೀವಿಗಳು ಬೆಳೆಯುವ ತಾಣವಾಗಬಲ್ಲದು. ಆಗಾಗ ಬಿಸಿಮಾಡುವುದು, ಎಣ್ಣೆ ಮತ್ತು ಮಸಾಲೆಯಿಂದ ಅದು ಹೆಚ್ಚು ಕೊಳೆಯಾಗಿ ಬಿಡುತ್ತದೆ. ಅಡುಗೆ ಸೋಡಾ ಮತ್ತು ಬಿಳಿ ವಿನೇಗರ್ ಸೇರಿಸಿ ದ್ರಾವಣ ತಯಾರಿಸಿಕೊಳ್ಳಿ. ಸ್ಪ್ರೇ ಬಾಟಲಿಗೆ ತುಂಬಿಸಿ. ಒವನ್‌ನ ಒಳಭಾಗ ಮತ್ತು ಮತ್ತು ಸುತ್ತ ಸಿಂಪಡಿಸಿ. 15 ರಿಂದ 20 ನಿಮಿಷ ಬಿಡಿ. ನಂತರ ಒವನ್ ಒರೆಸುವ ಬಟ್ಟೆಯಲ್ಲಿ ಒರೆಸಿ. ಆಗ ನೋಡಿ ನಿಮ್ಮ ಒವನ್ ಈ ದೀಪಾವಳಿಯಲ್ಲಿ ಹೊಸದರಂತೆ ಹೊಳೆಯುವುದು.
ಕಪಾಟುಗಳ ಸ್ವಚ್ಛತೆ
ಪಾತ್ರೆ ಮತ್ತು ಡಬ್ಬಗಳನ್ನಿಡುವ ಕಪಾಟು, ಧೂಳು ಮತ್ತು ವಾಸನೆಯಿಂದ ಕೂಡಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಳಸಿ. ಮೊದಲು ಅಡುಗೆ ಸೋಡಾವನ್ನು ಕಪಾಟಿನ ಸುತ್ತ ಸಿಂಪಡಿಸಿ. 15 ನಿಮಿಷ ಬಿಡಿ ನಂತರ ಒದ್ದೆ ಬಟ್ಟೆಯಿಂದ ಒರೆಸಿ. ಹೀಗೆ ಸುಲಭವಾಗಿ ಕಪಾಟು ಸ್ವಚ್ಛಗೊಳಿಸಿ.
ನಿಮ್ಮ ಅಡುಗೆಮನೆಯನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ. ಹೊಳೆಯುವ ಸ್ವಚ್ಛ ಅಡುಗೆಮನೆಯಲ್ಲಿ ದೀಪಾವಳಿ ಆಚರಿಸಿ.