ಮಾರುಕಟ್ಟೆಯಲ್ಲಿ ಶುರುವಾಗಿದೆ ನಕಲಿ ಆಲೂಗೆಡ್ಡೆ ಹಾವಳಿ, ತಿಂದ್ರೆ ಆರೋಗ್ಯ ಕೆಡೋದು ಪಕ್ಕಾ; ಅಸಲಿ ಬಟಾಟೆ ಗುರುತಿಸುವುದು ಹೇಗೆ?
ಮಾರುಕಟ್ಟೆಯಲ್ಲಿ ಈಗ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿದೆ. ಇದೀಗ ನಕಲಿ ಆಲೂಗೆಡ್ಡೆಯು ಬರುತ್ತಿದೆ. ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಕಲಬೆರಕೆ ಆಲೂಗೆಡ್ಡೆಯನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಹಾನಿಗೊಳಗಾದ ಆಲೂಗೆಡ್ಡೆಯನ್ನು ರಾಸಾಯನಿಕ ಬಳಸಿ ತಾಜಾವಾಗಿ ಮಾಡಲಾಗುತ್ತಿದೆ. ಹಾಗಾದರೆ ನಕಲಿ ಆಲೂಗೆಡ್ಡೆ ಗುರುತಿಸುವುದು ಹೇಗೆ?
ಆಲೂಗೆಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಬಹುದು. ಬಹುತೇಕ ರಾಷ್ಟ್ರಗಳಲ್ಲಿ ಅದನ್ನು ಮುಖ್ಯ ಆಹಾರದ ಭಾಗವಾಗಿ ಬಳಸಲಾಗುತ್ತದೆ. ಇದನ್ನು ಯಾವುದೇ ತರಕಾರಿ ಜೊತೆ ಬೆರೆಸಿ ಸಾಂಬಾರ್ ಮಾಡಬಹುದು. ಇದರ ರುಚಿಯೂ ಅದ್ಭುತ. ಆಲೂಗೆಡ್ಡೆಗೆ ಬೇಡಿಕೆ ಹೆಚ್ಚಿರುವ ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ನಕಲಿ ಆಲೂಗೆಡ್ಡೆಯ ಹಾವಳಿ ಶುರುವಾಗಿದೆ. ಲಾಭ ಗಳಿಸುವ ಉದ್ದೇಶದಿಂದ ಖದೀಮರು ನಕಲಿ ಆಲೂಗೆಡ್ಡೆಯನ್ನು ತಾಜಾ ಆಲೂಗೆಡ್ಡೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ.
ಏನಿದು ನಕಲಿ ಆಲೂಗೆಡ್ಡೆ?
ನಕಲಿ ಆಲೂಗೆಡ್ಡೆ ಈಗಾಗಲೇ ಕೊಳೆತು ಹೋಗಿರುವ ಅಥವಾ ಕೆಟ್ಟಿರುವ ಆಲೂಗೆಡ್ಡೆಗೆ ರಾಸಾಯನಿಕಗಳನ್ನು ಬಳಸಿ ಅದು ತಾಜಾವಾಗುವಂತೆ ಮಾಡಲಾಗುತ್ತದೆ. ಇದನ್ನು ತಾಜಾ ಆಲೂಗೆಡ್ಡೆಗಳ ಜೊತೆ ಮಿಶ್ರಣ ಮಾಡುವುದರಿಂದ ನಮಗೆ ಅಸಲಿ ಯಾವುದು, ನಕಲಿ ಯಾವುದು ತಿಳಿಯುವುದಿಲ್ಲ. ಹಾಗಾದರೆ ನಕಲಿ ಆಲೂಗೆಡ್ಡೆ ಯಾವುದು ಎಂದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಟ್ರಿಕ್ಸ್, ನೀವೂ ಟ್ರೈ ಮಾಡಿ.
ಆಲೂಗೆಡ್ಡೆ ಕತ್ತರಿಸುವುದು
ಆಲೂಗೆಡ್ಡೆ ಅಸಲಿಯೂ ನಕಲಿಯೋ ತಿಳಿಯಬೇಕು ಅಂದ್ರೆ ಆಲೂಗೆಡ್ಡೆ ಕತ್ತರಿಸಿ. ಮಧ್ಯಕ್ಕೆ ಕತ್ತರಿಸಿದಾಗ ಆಲೂಗೆಡ್ಡೆ ಹೊರ ಭಾಗ (ಸಿಪ್ಪೆ ತೆಗೆದ ನಂತರ), ಒಳ ಭಾಗ ಎರಡೂ ಒಂದೇ ಬಣ್ಣ ಇದ್ದರೆ ಅದು ಅಸಲಿ ಎಂದರ್ಥ. ನಕಲಿ ಆಲೂಗೆಡ್ಡೆಯಾಗಿದ್ದರೆ ಒಳಗಿನ ಬಣ್ಣ ಬದಲಾಗಿರುತ್ತದೆ.
ಮಣ್ಣಿನಿಂದ ಗುರುತಿಸಿ
ನಿಜವಾದ ಮತ್ತು ನಕಲಿ ಆಲೂಗಡ್ಡೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಆಲೂಗಡ್ಡೆಯ ಮೇಲಿನ ಮಣ್ಣನ್ನು ನೆನಪಿಡಿ. ನಿಜವಾದ ಆಲೂಗೆಡ್ಡೆಯನ್ನು ಸ್ವಚ್ಛಗೊಳಿಸಲು, ಅದನ್ನು ಹಲವಾರು ಬಾರಿ ಉಜ್ಜಬೇಕು ಮತ್ತು ನಂತರ ಮಾತ್ರ ಮಣ್ಣು ಶುದ್ಧವಾಗುತ್ತದೆ. ಆದರೆ ನಕಲಿ ಆಲೂಗಡ್ಡೆಯನ್ನು ನೀರಿನಲ್ಲಿ ಹಾಕಿದಾಗ, ಮಣ್ಣು ಕರಗುತ್ತದೆ.
ವಾಸನೆಯಿಂದ ಗುರುತಿಸಿ
ನೀವು ಆಲೂಗಡ್ಡೆಯ ವಾಸನೆ ಮಾಡಿದಾಗ, ಅವು ನೈಸರ್ಗಿಕ ಪರಿಮಳವನ್ನು ಹೊಂದಿರುತ್ತವೆ. ನೀವು ನಕಲಿ ಆಲೂಗೆಡ್ಡೆಯನ್ನು ಮೂಸಿ ನೋಡಿದರೆ, ಅದು ರಾಸಾಯನಿಕಗಳ ವಾಸನೆಯನ್ನು ನೀಡುತ್ತದೆ. ಇದಲ್ಲದೆ, ಮೊದಲೇ ಹೇಳಿದಂತೆ ನಕಲಿ ಆಲೂಗಡ್ಡೆಯ ಬಣ್ಣವು ಕೂಡ ವಾಸನೆಗೆ ತಕ್ಕಂತೆ ಬದಲಾಗುತ್ತದೆ.
ನೀರಿನಲ್ಲಿ ಅದ್ದಿ ಮತ್ತು ಪರಿಶೀಲಿಸಿ
ಅಸಲಿ ಮತ್ತು ನಕಲಿ ಆಲೂಗಡ್ಡೆಗಳನ್ನು ನೀರಿನಲ್ಲಿ ಮುಳುಗಿಸುವ ಮೂಲಕ ಪ್ರತ್ಯೇಕಿಸಬಹುದು. ನೈಜ ಆಲೂಗಡ್ಡೆ ನೀರಿನಲ್ಲಿ ಮುಳುಗುತ್ತದೆ, ಆದರೆ ರಾಸಾಯನಿಕಗಳ ಉಪಸ್ಥಿತಿಯಿಂದಾಗಿ ನಕಲಿ ಆಲೂಗಡ್ಡೆ ಕೆಲವೊಮ್ಮೆ ತೇಲಬಹುದು. ಈ ಮೂಲಕ ಆಲೂಗೆಡ್ಡೆ ಅಸಲಿಯತ್ತು ತಿಳಿಯಬಹುದು.
ನಕಲಿ ಆಲೂಗೆಡ್ಡೆ ತಿಂದ್ರೆ ಏನಾಗುತ್ತೆ
ನಕಲಿ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ತಿನ್ನುವುದರಿಂದ ಕಿಡ್ನಿ, ಕರುಳು, ಲಿವರ್, ಕಿವಿ, ಮೂಗು, ಕಣ್ಣುಗಳಿಗೂ ಹಾನಿಯಾಗುತ್ತದೆ. ಇದಲ್ಲದೆ, ಹೊಟ್ಟೆ ನೋವು, ಮಲಬದ್ಧತೆ ಮತ್ತು ಹಸಿವಿನ ಕೊರತೆಯಂತಹ ಸಮಸ್ಯೆಗಳು ಎದುರಾಗಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ