ಮನೆಯಲ್ಲಿ ತಯಾರಿಸಿದ ರಾಗಿ ಚಿಪ್ಸ್ ಚೆನ್ನಾಗಿ ಬರುತ್ತಿಲ್ಲ ಎಂದು ಬೇಸರಿಸದಿರಿ: ಗರಿಗರಿಯಾಗಿ ಬರಲು ಈ 5 ಟಿಪ್ಸ್ ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ತಯಾರಿಸಿದ ರಾಗಿ ಚಿಪ್ಸ್ ಚೆನ್ನಾಗಿ ಬರುತ್ತಿಲ್ಲ ಎಂದು ಬೇಸರಿಸದಿರಿ: ಗರಿಗರಿಯಾಗಿ ಬರಲು ಈ 5 ಟಿಪ್ಸ್ ಅನುಸರಿಸಿ

ಮನೆಯಲ್ಲಿ ತಯಾರಿಸಿದ ರಾಗಿ ಚಿಪ್ಸ್ ಚೆನ್ನಾಗಿ ಬರುತ್ತಿಲ್ಲ ಎಂದು ಬೇಸರಿಸದಿರಿ: ಗರಿಗರಿಯಾಗಿ ಬರಲು ಈ 5 ಟಿಪ್ಸ್ ಅನುಸರಿಸಿ

ರಾಗಿ ಆರೋಗ್ಯಕರ ಎಂದು ಹಲವರು ಇದರಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸುತ್ತಾರೆ. ರಾಗಿಯಿಂದ ರುಚಿಕರ ಚಿಪ್ಸ್ ಕೂಡ ತಯಾರಿಸಬಹುದು. ರಾಗಿ ಚಿಪ್ಸ್ ಸರಿಯಾಗಿ ಬರಲು ಈ 5 ಸಲಹೆಗಳನ್ನು ಅನುಸರಿಸಿ.

ರಾಗಿ ಚಿಪ್ಸ್ ಗರಿಗರಿಯಾಗಿ ಬರಲು ಈ 5 ಟಿಪ್ಸ್ ಅನುಸರಿಸಿ
ರಾಗಿ ಚಿಪ್ಸ್ ಗರಿಗರಿಯಾಗಿ ಬರಲು ಈ 5 ಟಿಪ್ಸ್ ಅನುಸರಿಸಿ (PC: Flickr)

ರಾಗಿಯು ಅದರ ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಒಂದು ಸೂಪರ್‌ಫುಡ್ ಎಂದೇ ಗುರುತಿಸಲ್ಪಟ್ಟಿದೆ. ರಾಗಿಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ರಾಗಿಯಿಂದ ಸಂಜೆ ಸ್ನಾಕ್ಸ್‌ಗೆ ಕುರುಕುಲು ತಿಂಡಿಯನ್ನೂ ಸಹ ಮಾಡಬಹುದು. ಇದು ಬಹಳ ರುಚಿಕರವಾಗಿರುತ್ತದೆ. ರಾಗಿ ಚಿಪ್ಸ್‌ನಲ್ಲಿ ನಾರಿನಂಶ, ಕ್ಯಾಲ್ಸಿಯಂ ಮತ್ತು ಗ್ಲುಟನ್ ಮುಕ್ತ ಗುಣಗಳನ್ನು ಹೊಂದಿವೆ.

ಇದು ಆರೋಗ್ಯಕರ ಆಯ್ಕೆಯಾಗಿರುವುದರ ಜೊತೆಗೆ, ಈ ಗರಿಗರಿಯಾದ ಚಿಪ್ಸ್ ಅನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾ ಸರಳ. ಆದರೆ, ಕೆಲವೊಮ್ಮೆ ಮನೆಯಲ್ಲಿ ಮಾಡಿದ ಚಿಪ್ಸ್ ಸರಿಯಾಗಿ ಬರುವುದಿಲ್ಲ ಎಂದು ಹಲವರು ದೂರುತ್ತಾರೆ. ರಾಗಿ ಚಿಪ್ಸ್ ಸರಿಯಾಗಿ ಬರಲು ಈ ಸರಳ ಸಲಹೆಗಳನ್ನು ಅನುಸರಿಸಿ.

ರಾಗಿ ಚಿಪ್ಸ್ ಸರಿಯಾಗಿ ಬರಲು 5 ಸಲಹೆ

ಸರಿಯಾದ ಪದಾರ್ಥಗಳನ್ನು ಆರಿಸುವುದು: ಚಿಪ್ಸ್ ತಯಾರಿಸಲು ಉತ್ತಮ ಗುಣಮಟ್ಟದ, ರಾಗಿ ಹಿಟ್ಟನ್ನು ಬಳಸಬೇಕು. ರಾಗಿ ಹಿಟ್ಟಿಗೆ ಅಕ್ಕಿ ಹಿಟ್ಟು, ಕಡಲೆಹಿಟ್ಟು ಮತ್ತು ಗೋಧಿ ಹಿಟ್ಟಿನಂತಹ ಇತರ ಹಿಟ್ಟುಗಳನ್ನು ಸಹ ಮಿಶ್ರಣ ಮಾಡಬಹುದು. ರಾಗಿ ಚಿಪ್ಸ್ ತಯಾರಿಸಲು ಬಳಸುವ ಇತರ ಪದಾರ್ಥಗಳು ಉಪ್ಪು, ನೀರು, ಎಣ್ಣೆ, ಚಾಟ್ ಮಸಾಲೆ, ಅರಿಶಿನ ಪುಡಿ, ಜೀರಿಗೆ ಪುಡಿ, ಓಂಕಾಳು ಮತ್ತು ಕೆಂಪು ಮೆಣಸಿನ ಪುಡಿಯಂತಹ ಮಸಾಲೆಗಳನ್ನು ಸರಿಯಾಗಿ ಬೆರೆಸಿ.

ಹಿಟ್ಟಿನ ತಯಾರಿ: ಮೊದಲ ಹಂತವೆಂದರೆ ರಾಗಿ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಅಳತೆ ಪ್ರಕಾರ ತೆಗೆದುಕೊಳ್ಳಬೇಕು. ಮಸಾಲೆಗಳನ್ನು ಹಿಟ್ಟಿಗೆ ಬೆರೆಸಿದ ನಂತರ ಸ್ವಲ್ಪ ಸ್ವಲ್ಪವೇ ನೀರು ಬೆರೆಸಿ. ಹಿಟ್ಟು ತುಂಬಾ ಗಟ್ಟಿಯಾಗದಂತೆ ಹಾಗೂ ತುಂಬಾ ತೆಳುವಾಗದಂತೆ ನೋಡಿಕೊಳ್ಳಬೇಕು. ಹಿಟ್ಟನ್ನು ಚೆನ್ನಾಗಿ ಕಲಸಿ 15 ರಿಂದ 30 ನಿಮಿಷ ಕಾಲ ಹಾಗೆಯೇ ಮುಚ್ಚಿಡಿ.

ಹಿಟ್ಟನ್ನು ತೆಳುವಾಗಿ ಲಟ್ಟಿಸುವುದು, ಆಕಾರ ನೀಡುವುದು: ಹಿಟ್ಟನ್ನು ತೆಳುವಾಗಿ ಲಟ್ಟಿಸಬೇಕು. ನಂತರ ಹಿಟ್ಟನ್ನು ಬೇಕಾದ ಆಕಾರಕ್ಕೆ ಕತ್ತರಿಸಬೇಕು. ಪಿಜ್ಜಾ ಕಟ್ಟರ್, ಚಾಕು ಅಥವಾ ಕುಕೀ ಕಟ್ಟರ್ ಬಳಸಿ ಚಿಪ್ಸ್ ಅನ್ನು ಚೌಕ, ತ್ರಿಕೋನ ಅಥವಾ ವೃತ್ತಕಾರವಾಗಿ ಕತ್ತರಿಸಬಹುದು. ನೀವು ಸಾಂಪ್ರದಾಯಿಕವಾಗಿ ಕಾಣುವ ಚಿಪ್ಸ್ ಮಾಡಲು ಬಯಸಿದರೆ, ನೀವು ಚಕ್ಲಿ ಮೇಕರ್ ಅನ್ನು ಸಹ ಬಳಸಬಹುದು.

ಬೇಕಿಂಗ್: ಈಗ ಬೇಕಿಂಗ್ ಟ್ರೇ ಮೇಲೆ ಪಾರ್ಚ್‌ಮೆಂಟ್ ಪೇಪರ್‌ ಇಟ್ಟು ಓವನ್ ಅನ್ನು 175° ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ. ಬೇಕಿಂಗ್ ಟ್ರೇನಲ್ಲಿ, ಚಿಪ್ಸ್ ಅನ್ನು ಒಂದೇ ಪದರದಲ್ಲಿ ಜೋಡಿಸಿ. 15 ರಿಂದ 20 ನಿಮಿಷಗಳ ಕಾಲ ಬೇಯಿಸಿ. ಮಧ್ಯದಲ್ಲಿ ಅಥವಾ ಅವು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಅವುಗಳನ್ನು ತಿರುಗಿಸಿ.

ಎಣ್ಣೆಯಲ್ಲಿ ಕರಿಯುವುದು: ಓವೆನ್ ಇಲ್ಲದಿದ್ದರೆ ಎಣ್ಣೆಯಲ್ಲೂ ಕರಿಯಬಹುದು. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಒಂದೊಂದಾಗಿ ಎಣ್ಣೆಗೆ ಹಾಕಿ ಕರಿಯಿರಿ. ಚಿಪ್ಸ್ ಅನ್ನು ಎಣ್ಣೆಯಲ್ಲಿ ನಿಧಾನವಾಗಿ ಹಾಕಿ. ಅದು ಗರಿಗರಿಯಾದ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಬೇಯಿಸಿ. ನಂತರ ಇದನ್ನು ಟಿಶ್ಯೂ ಪೇಪರ್ ಇಟ್ಟ ತಟ್ಟೆಗೆ ತೆಗೆದುಹಾಕಿ. ಇಷ್ಟು ಮಾಡಿದರೆ ಗರಿಗರಿಯಾದ ಚಿಪ್ಸ್ ಸಿದ್ಧವಾಗುತ್ತದೆ.

ಚಿಪ್ಸ್ ಸಂಗ್ರಹಣೆ: ರಾಗಿ ಚಿಪ್ಸ್ ತಯಾರಿಸುವಾಗ, ನೀವು ಸರಿಯಾದ ಶೇಖರಣಾ ವಿಧಾನಗಳನ್ನು ಅನುಸರಿಸಬೇಕು. ಏಕೆಂದರೆ ಕುರುಕಲು ಮತ್ತು ತಾಜಾತನವನ್ನು ಕಾಪಾಡಿಕೊಳ್ಳಲು ಶೇಖರಣಾ ವಿಧಾನದ ಆಯ್ಕೆ ಮುಖ್ಯ. ಅವುಗಳನ್ನು ತಯಾರಿಸಿದ ನಂತರ, ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಚಿಪ್ಸ್ ಅನ್ನು ಸಂಗ್ರಹಿಸಲು ಗಾಳಿಯಾಡದ ಪಾತ್ರೆಯನ್ನು ಬಳಸಿ. ಅವುಗಳ ಗರಿಗರಿಯಾದ ವಿನ್ಯಾಸವನ್ನು ಕಾಪಾಡಿಕೊಳ್ಳಲು ನೇರ ಸೂರ್ಯನ ಬೆಳಕು ಬೀಳದಂತೆ ತಂಪಾದ, ಶುಷ್ಕ ಸ್ಥಳದಲ್ಲಿ ಅವುಗಳನ್ನು ಸಂಗ್ರಹಿಸಿ.

Priyanka Gowda

eMail
Whats_app_banner