Kitchen Tips: ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿಡುವ ಅಭ್ಯಾಸ ನಿಮಗಿದ್ಯಾ; ಹಾಗಿದ್ರೆ ಈ ವಿಚಾರ ತಿಳಿದಿರಲೇಬೇಕು
ಎಲ್ಲಾ ತರಕಾರಿಗಳಂತೆ ಈರುಳ್ಳಿಗಳನ್ನೂ ನೀವು ರೆಫ್ರಿಜರೇಟರ್ನಲ್ಲಿ ಇಡುತ್ತಿದ್ದೀರೇ..? ಹಾಗಿದ್ದರೆ ನಿಮಗೆ ತಿಳಿಯದ ಹಾಗೆ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ. ಮಾರುಕಟ್ಟೆಯಿಂದ ತಂದ ಈರುಳ್ಳಿಯ ತಾಜಾತನವನ್ನು ಉಳಿಸಿಕೊಳ್ಳಲು ನೀವು ಮಾಡಬೇಕಾಗಿರೋದು ಇಷ್ಟು.
ಈರುಳ್ಳಿ ಒಂದು ರೀತಿಯಲ್ಲಿ ಅಡುಗೆ ಮನೆಯ ಹೀರೋ ಇದ್ದಂತೆ. ಯಾವುದೇ ಮಸಾಲೆಯುಕ್ತ ಪದಾರ್ಥಗಳಿದ್ದರೂ ಅಲ್ಲಿ ಈರುಳ್ಳಿ ಇರಲೇಬೇಕು. ಮಾಂಸಾಹಾರಿ ಭಕ್ಷ್ಯಗಳಿಗಂತೂ ಈರುಳ್ಳಿ ಇಲ್ಲವೆಂದರೆ ಆಗುವುದೇ ಇಲ್ಲ. ಪ್ರತಿನಿತ್ಯದ ಅಡುಗೆಗೆ ಈರುಳ್ಳಿ ಬಳಕೆ ಅನಿವಾರ್ಯವಾಗಿರುವ ಕಾರಣ ನಾವು ಹೆಚ್ಚಿನ ಈರುಳ್ಳಿಯನ್ನು ಒಮ್ಮೆಲೆ ಮನೆಗೆ ತರುತ್ತೇವೆ. ಆದರೆ ಹೀಗೆ ಕೆಜಿಗಟ್ಟಲೇ ತಂದ ಈರುಳ್ಳಿಯನ್ನು ಹಾಳಾಗದಂತೆ ಸಂಗ್ರಹಿಸಿ ಇಡುವುದು ಹೇಗೆ..? ಅವುಗಳು ಕೊಳೆಯದೇ, ಮೊಳಕೆ ಬಾರದಂತೆ ನೋಡಿಕೊಳ್ಳುವುದು ಹೇಗೆ..? ಎಂಬ ಪ್ರಶ್ನೆ ಉದ್ಭವಿಸಿದಾಗ ಅನೇಕರು ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸೋಕೆ ಹೋಗುತ್ತಾರೆ. ಬೇರೆ ತರಕಾರಿಗಳಂತೆ ಈರುಳ್ಳಿ ಕೂಡ ಫ್ರಿಡ್ಜ್ನಲ್ಲಿದ್ದರೆ ತಾಜಾ ಇರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ವಿಷಯ ಅದಲ್ಲ. ರೆಫ್ರಿಜರೇಟರ್ನಲ್ಲಿ ಈರುಳ್ಳಿಯನ್ನು ಎಂದಿಗೂ ಸಂಗ್ರಹಿಸಿ ಇಡಬಾರದು. ಯಾಕೆ ಎನ್ನುವುದಕ್ಕೆ ಕಾರಣ ಇಲ್ಲಿದೆ ನೋಡಿ.
ಫ್ರೆಶ್ ಆಗಿರುವ ಈರುಳ್ಳಿ ಸಿಗುತ್ತೆ ಎಂಬ ಕಾರಣಕ್ಕೆ ನೀವು ರೆಫ್ರಿಜರೇಟರ್ನಲ್ಲಿ ಎಲ್ಲಾ ಈರುಳ್ಳಿಯನ್ನು ಇಟ್ಟಿರಿ ಎಂದುಕೊಳ್ಳೋಣ. ಆದರೆ ನೀವು ಫ್ರಿಡ್ಜ್ ಬಾಗಿಲು ತೆರೆದು ನೋಡಿದಾಗ ಈರುಳ್ಳಿಯ ಕತೆ ಬೇರೆಯೇ ಆಗಿರುತ್ತದೆ. ಫ್ರಿಡ್ಜ್ನ ತೇವಾಂಶದಿಂದಾಗಿ ಈರುಳ್ಳಿ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಇಂಥಾ ಈರುಳ್ಳಿಯನ್ನು ಸೇವಿಸಿದಾಗ ಎದೆಯುರಿ, ಜಠರದಲ್ಲಿ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ: Kitchen Tips: ಈರುಳ್ಳಿ ಕೊಳೆಯದೇ, ಬೇರು ಮೂಡದಂತೆ ಬಹಳ ದಿನ ಇರ್ಬೇಕು ಅಂದ್ರೆ ಈ 5 ಸಿಂಪಲ್ ಟಿಪ್ಸ್ ಅನುಸರಿಸಿ
ಶೀತ ಮತ್ತು ತೇವಾಂಶ: ಹಸಿರು ತರಕಾರಿಗಳು ಹಾಗೂ ಎಲೆಗಳು ಮತ್ತು ಹಣ್ಣುಗಳನ್ನು ತಾಜಾ ರೀತಿಯಲ್ಲಿ ಇಡಲು ಫ್ರಿಡ್ಜ್ ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ ಈರುಳ್ಳಿಯು ಒಣ ಪ್ರದೇಶದಲ್ಲಿ ಮಾತ್ರ ತಾಜಾ ರೀತಿಯಿಂದ ಇರಲು ಸಾಧ್ಯ. ಈರುಳ್ಳಿಗೂ ತೇವಾಂಶಕ್ಕೂ ಆಗಿ ಬರುವುದಿಲ್ಲ. ಹೀಗಾಗಿ ರೆಫ್ರಿಜರೇಟರ್ನಲ್ಲಿ ಈರುಳ್ಳಿಯನ್ನು ಇಟ್ಟಾಕ್ಷಣ ತ್ವರಿತವಾಗಿ ತೇವಾಂಶವನ್ನು ಹೀರಿಕೊಳ್ಳಲು ಆರಂಭಿಸುತ್ತದೆ.
ಈರುಳ್ಳಿ ಕತ್ತಲೆ ಪ್ರಿಯ: ಈರುಳ್ಳಿಗಳು ಬೇರುಗಳಲ್ಲಿ ಬೆಳೆಯುವ ತರಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಅವುಗಳು ಕತ್ತಲೆಯಲ್ಲಿ ಬೆಳೆಯುತ್ತವೆ. ಈರುಳ್ಳಿಯ ಒಣ ಚರ್ಮದಿಂದಾಗಿ ಇವುಗಳು ಟೊಮೆಟೊ, ಸೌತೆಕಾಯಿಯಂತಹ ತರಕಾರಿಗಳಿಗಿಂತ ಭಿನ್ನ ಎನಿಸಿಕೊಳ್ಳುತ್ತದೆ. ಹೀಗಾಗಿ ಈರುಳ್ಳಿಯನ್ನು ಬಾಸ್ಕೆಟ್ಗಳಲ್ಲಿ, ರಂಧ್ರವಿರುವ ಬುಟ್ಟಿಗಳಲ್ಲಿ ಸಂಗ್ರಹಿಸಿ ಇಡುವುದು ಉತ್ತಮ. ತೇವಾಂಶ ಇರದ ಹಾಗೂ ಗಾಳಿಯಾಡುವಂತಹ ಸ್ಥಳಗಳಲ್ಲಿ ಈರುಳ್ಳಿ ತನ್ನ ತಾಜಾತನವನ್ನು ಉಳಿಸಿಕೊಳ್ಳುತ್ತದೆ.
ಸ್ಪ್ರಿಂಗ್ ಆನಿಯನ್ಗೆ ಇವುಗಳು ಅನ್ವಯಿಸುವುದಿಲ್ಲ. ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ಗಿಡಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಇವುಗಳನ್ನು ನೀವು ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಇಡಬಹುದು. ಇವುಗಳಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ಫ್ರಿಡ್ಜ್ನ ಅವಶ್ಯಕತೆ ಇರುತ್ತದೆ.
ಈರುಳ್ಳಿಯನ್ನು ಸಂಗ್ರಹಿಸಿಡುವ ಬೆಸ್ಟ್ ವಿಧಾನ ಯಾವುದು..?
ಸೂಕ್ತ ತಾಪಮಾನ : ಈರುಳ್ಳಿಯ ಶೇಖರಣೆಗೆ ಸರಿಯಾದ ತಾಪಮಾನವು 45 ರಿಂದ 50 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದಷ್ಟು ಪ್ಲಾಸ್ಟಿಕ್ ಚೀಲಗಳಲ್ಲಿ ಈರುಳ್ಳಿಗಳನ್ನು ಸಂಗ್ರಹಿಸಿ ಇಡುವುದನ್ನು ತಪ್ಪಿಸಿ. ಈರುಳ್ಳಿಯು ಗಾಳಿಯಾಡುವ ಪ್ರದೇಶಗಳಲ್ಲಿ ಮಾತ್ರ ತನ್ನ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಅಲ್ಲದೇ ಈರುಳ್ಳಿಯನ್ನು ಎಂದಿಗೂ ಆಲೂಗಡ್ಡೆಯೊಂದಿಗೆ ಇಡಬೇಡಿ. ಏಕೆಂದರೆ ಆಲೂಗಡ್ಡೆಯು ತೇವಾಂಶವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಈರುಳ್ಳಿಯು ಬೇಗನೆ ಕೆಡುತ್ತದೆ.
ಮೊಳಕೆಯೊಡೆಯಲು ಅವಕಾಶ ಕೊಡಬೇಡಿ: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನೀಡಿರುವ ಮಾಹಿತಿಯ ಪ್ರಕಾರ ಈರುಳ್ಳಿಯನ್ನು 40-45 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಿಸಿ ಇಡಬೇಕು. ಇದಕ್ಕಿಂತ ಕಡಿಮೆ ತಾಪಮಾನದಲ್ಲಿ ಈರುಳ್ಳಿಯನ್ನು ಇರಿಸಿದಾಗ ಅಂದರೆ 10 ರಿಂದ 25 ಡಿಗ್ರಿ ತಾಪಮಾನದಲ್ಲಿ ಈರುಳ್ಳಿಯು ಮೊಳಕೆಯೊಡೆಯುವ ಸಾಧ್ಯತೆಯು ಹೆಚ್ಚಿರುತ್ತದೆ. ಅಲ್ಲದೇ ಇದು ಈರುಳ್ಳಿ ಅಡುಗೆಗೆ ಬಳಸಲು ಯೋಗ್ಯವಾಗಿಲ್ಲ ಎಂಬುದಕ್ಕೆ ಸಿಗುವ ಸಂಕೇತವಾಗಿದೆ.
ಈರುಳ್ಳಿಯನ್ನು ಈ ರೀತಿ ಸಂಗ್ರಹಿಸಿ: ಈರುಳ್ಳಿಯನ್ನು ಶೇಖರಿಸಿ ಇಡುವ ಕಡೆಯಲ್ಲಿ 40 ರಿಂದ 45 ಡಿಗ್ರಿ ತಾಪಮಾನ ಇರುವಂತೆ ನೋಡಿಕೊಳ್ಳಿ. ಚೆನ್ನಾಗಿ ಗಾಳಿಯಾಡುವ, ಶುಷ್ಕ ಪ್ರದೇಶಗಳಲ್ಲಿ ಈರುಳ್ಳಿಯನ್ನು ಸಂಗ್ರಹಿಸಿ ಇಡಿ. ಪ್ಲಾಸ್ಟಿಕ್ಗಳಲ್ಲಿ ಎಂದಿಗೂ ಈರುಳ್ಳಿಯನ್ನು ಸುತ್ತಿ ಇಡಬೇಡಿ. ಗಾಳಿಯು ಚೆನ್ನಾಗಿ ಓಡಾಡುವಂತಹ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ಆಗಾಗ ಈರುಳ್ಳಿಯನ್ನು ಬಿಸಿಲಿಗೆ ಹಾಕಿ ಒಣಗಿಸಿ.
ವಿಭಾಗ