ಅಡುಗೆಮನೆಯಲ್ಲೇ ಸಾಕಷ್ಟು ಸಮಯ ವ್ಯರ್ಥ ಆಗ್ತಾ ಇದ್ಯಾ? ಅಡುಗೆ ಕಷ್ಟವೆನಿಸಲು ಈ 5 ಸಾಮಾನ್ಯ ತಪ್ಪುಗಳೇ ಪ್ರಮುಖ ಕಾರಣ-kitchen tips how is your time wasted in the kitchen 5 common mistakes that mess up your kitchen time saving tips arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಮನೆಯಲ್ಲೇ ಸಾಕಷ್ಟು ಸಮಯ ವ್ಯರ್ಥ ಆಗ್ತಾ ಇದ್ಯಾ? ಅಡುಗೆ ಕಷ್ಟವೆನಿಸಲು ಈ 5 ಸಾಮಾನ್ಯ ತಪ್ಪುಗಳೇ ಪ್ರಮುಖ ಕಾರಣ

ಅಡುಗೆಮನೆಯಲ್ಲೇ ಸಾಕಷ್ಟು ಸಮಯ ವ್ಯರ್ಥ ಆಗ್ತಾ ಇದ್ಯಾ? ಅಡುಗೆ ಕಷ್ಟವೆನಿಸಲು ಈ 5 ಸಾಮಾನ್ಯ ತಪ್ಪುಗಳೇ ಪ್ರಮುಖ ಕಾರಣ

Kitchen Tips: ಅಡುಗೆ ಮಾಡಲು ನಿಮಗೆ ಸಾಕಷ್ಟು ಸಮಯ ಹಿಡಿತಾ ಇದ್ಯಾ ಅಥವಾ ಅಡುಗೆ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಹುಡುಕಲು ಹೆಚ್ಚು ಸಮಯ ತಗಲುತ್ತದೆಯಾ? ಒಟ್ಟಾರೆ ಅಡುಗೆ ಮನೆಯಲ್ಲಿ ಹೆಚ್ಚು ಸಮಯವಂತೂ ವ್ಯರ್ಥವಾಗುತ್ತಿದೆ ಅಲ್ಲವೇ? ಅದಕ್ಕೆ ನೀವು ಮಾಡುವ ಈ 5 ಸಾಮಾನ್ಯ ತಪ್ಪುಗಳೇ ಕಾರಣವಾಗಿರಬಹುದು.

ಅಡುಗೆ ಕಷ್ಟವೆನಿಸಲು ಈ 5 ಸಾಮಾನ್ಯ ತಪ್ಪುಗಳೇ ಪ್ರಮುಖ ಕಾರಣ
ಅಡುಗೆ ಕಷ್ಟವೆನಿಸಲು ಈ 5 ಸಾಮಾನ್ಯ ತಪ್ಪುಗಳೇ ಪ್ರಮುಖ ಕಾರಣ

ಕೆಲವರಿಗೆ ಅಡುಗೆ ಮಾಡುವುದೆಂದರೆ ಬಹಳ ಖುಷಿ. ಹೊಸ ಹೊಸ ರುಚಿಗಳನ್ನು ಪ್ರಯತ್ನಿಸಿ ಮನೆಮಂದಿಗೆಲ್ಲ ಉಣಬಡಿಸುವುದೆಂದರೆ ಅವರಿಗೆ ಬಹಳ ಸಂತೋಷ. ಇದು ಮನಸ್ಸನ್ನು ಸಂತೋಷಗೊಳಿಸುವ ಉತ್ತಮ ಚಟುವಟಿಕೆಯೂ ಹೌದು. ಹೀಗಾಗಲು ಮೊದಲು ಅಡುಗೆ ತಯಾರಿಸುವ ಕ್ರಿಯೆ ಬಹಳ ಸುಲಭವಾಗಿಯೂ, ಸರಳವಾಗಿಯೂ ಇರಬೇಕು. ಇಲ್ಲದಿದ್ದರೆ ಅಡುಗೆ ಕಷ್ಟವೆನಿಸಲು ಪ್ರಾರಂಭವಾಗುತ್ತದೆ. ನೀವು ಅಡುಗೆ ಮನೆಯಲ್ಲಿ ಹೇಗೇಗೋ ಕೆಲಸ ಮಾಡಿದರೆ ಅಡುಗೆ ಮಾಡಲು ಅಗತ್ಯವಿರುವ ಸಮಯಕ್ಕಿಂತಲೂ ಎರಡು, ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆಗ ಅಡುಗೆ ದೊಡ್ಡ ಸವಾಲಿನ ಕೆಲಸವಾಗಿಬಿಡುತ್ತದೆ. ಕಾರಣ ಏನಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ?

ಅಡುಗೆ ಮಾಡಲು ನಿಮಗೆ ಬಹಳ ಸಮಯ ತಗಲುತ್ತಿದೆಯಾ? ಅಥವಾ ಅಡುಗೆ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು ಹೆಚ್ಚು ಸಮಯ ತಗಲುತ್ತದೆಯಾ? ಈಗಿನ ಧಾವಂತದ ಜೀವನದಲ್ಲಿ ಅಡುಗೆಮನೆಗೂ ಇರುವುದು ಸೀಮಿತ ಅವಧಿಯೇ. ಅಡುಗೆ ಮನೆಯಲ್ಲಿ ನೀವು ಮಾಡುವ ಸಣ್ಣ ಪುಟ್ಟ ಸಾಮಾನ್ಯ ತಪ್ಪುಗಳು ನಿಮ್ಮ ಸಮಯ ಹಾಳುಮಾಡುವುದರ ಜೊತೆಗೆ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಸಾಮಾನ್ಯ ತಪ್ಪುಗಳು ಬಹಳ ದೊಡ್ಡ ಸಮಸ್ಯೆಯಂತೆ ಕಾಣಿಸುತ್ತದೆ. ಅವು ಅಡುಗೆ ಕೆಲಸದಲ್ಲಿ ಅಡ್ಡಿಪಡಿಸುತ್ತವೆ. ನಿಮ್ಮ ಅಮೂಲ್ಯ ಸಮಯ ಅಡುಗೆ ಮನೆಯಲ್ಲಿ ವ್ಯರ್ಥವಾಗುವಂತಾಗುತ್ತದೆ. ಅದಕ್ಕಾಗಿ ಅಡುಗೆಮನೆಯ ಕೆಲಸಗಳು ಸರಾಗವಾಗಿ ನಡೆಯುವಂತಾಗಲು ಮೊದಲು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

ಅಡುಗೆಮನೆಯಲ್ಲಿ ನೀವು ಮಾಡುವ 5 ಸಣ್ಣ ತಪ್ಪುಗಳು

ವಸ್ತುಗಳನ್ನು ಅದರ ಜಾಗದಲ್ಲಿಯೇ ಇಡದಿರುವುದು: ಕೆಲವರಿಗೆ ಈ ಅಭ್ಯಾಸ ಇರುತ್ತದೆ ಅದೇನೆಂದರೆ ಅಡುಗೆ ಮಾಡುವಾಗ ಬೇಕಾಗುವ ಎಲ್ಲಾ ಸಮಾನು, ಡಬ್ಬಗಳನ್ನು ಒಮ್ಮೆಲೇ ತೆಗೆದು ಕಟ್ಟೆಯ ಮೇಲೆ ಇಡುವುದು. ಅಡುಗೆಗೆ ಸಾಮಗ್ರಿಗಳನ್ನು ಬಳಸಿದ ನಂತರವೂ ಅವುಗಳು ಹಾಗೆಯೇ ಇರುತ್ತವೆ. ಹೀಗೆ ಮಾಡುವುದರಿಂದ ಕಟ್ಟೆಯ ಮೇಲೆ ಜಾಗವೇ ಇರುವುದಿಲ್ಲ. ಒಂದಕ್ಕೊಂದು ಪಾತ್ರೆ, ಡಬ್ಬಗಳು ತಗುಲಿ ಚೆಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ಅಡುಗೆಗೆ ಬಳಸಿದ ನಂತರ ಡಬ್ಬ, ಪಾತ್ರೆಗಳನ್ನು ಅದರ ಮೊದಲಿನ ಸ್ಥಳದಲ್ಲಿಯೇ ಇಡುವುದನ್ನು ರೂಢಿಸಿಕೊಳ್ಳಿ. ಆಗ ಅರ್ಧದಷ್ಟು ಗೊಂದಲ ಕಡಿಮೆಯಾಗುತ್ತದೆ. ಅನಾವಶ್ಯಕವಾಗಿ ಸ್ವಚ್ಛಮಾಡುವ ಕೆಲಸ ತಪ್ಪುತ್ತದೆ. ಅದು ನಿಮ್ಮ ಸಮಯ ಉಳಿಸುತ್ತದೆ. ಜೊತೆಗೆ ಬಾಕ್ಸ್‌, ಪಾತ್ರೆಗಳನ್ನು ಅದರ ನಿರ್ದಿಷ್ಟ ಜಾಗದಲ್ಲಿ ಇಡುವುದರಿಂದ ಮತ್ತೆ ಅಡುಗೆ ಮಾಡುವಾಗ ಹುಡುಕುವ ಸಮಯ ಉಳಿಯುತ್ತದೆ. ಇದು ಅಡುಗೆಮನೆಯಲ್ಲಿನ ಗೊಂದಲದ ಸನ್ನಿವೇಶವನ್ನು ದೂರ ಮಾಡುತ್ತದೆ.

ಫ್ರಿಜ್‌ನಲ್ಲಿರುವ ಅನಗತ್ಯ ಆಹಾರಗಳನ್ನು ಹೊರತೆಗೆಯದೇ ಹಾಗೆ ಬಿಟ್ಟಿರುವುದು: ಈಗಿನ ಕಾಲದಲ್ಲಿ ಅಡುಗೆ ಮಾಡಲು ಬೇಕಾದ ಅದೆಷ್ಟೋ ಸಮಾಗ್ರಿಗಳು ಫ್ರಿಜ್‌ನಲ್ಲಿಯೇ ಕಾಣಬಹುದು. ಹಾಗಾಗಿ ಫ್ರಿಜ್‌ನಲ್ಲಿ ಸಾಮಾನುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡದಿದ್ದರೆ ಆಗ ವಸ್ತುಗಳನ್ನು ಹುಡುಕುವುದು ಒಂದು ದೊಡ್ಡ ತಲೆನೋವಾಗಿಬಿಡುತ್ತದೆ. ಯಾವ ವಸ್ತು ಎಲ್ಲಿದೆ ಎಂದು ಹುಡುಕುವುದರಲ್ಲೇ ಸಮಯ ಕೆಳೆದುಹೋಗುತ್ತದೆ. ಮೊದಲು ಫ್ರಿಜ್‌ ಅನ್ನು ಸ್ವಚ್ಛವಾಗಿಡಿಸಿ. ಇದರ ಮೂಲಭೂತ ನಿಯಮವೆಂದರೆ ಹಳೆಯ ಆಹಾರಗಳನ್ನು ಫ್ರಿಜ್‌ನಿಂದ ಬೇರ್ಪಡಿಸುವುದು. ಆಗ ಫ್ರಿಜ್‌ನಲ್ಲಿ ಪದಾರ್ಥಗಳನ್ನು ಸಂಗ್ರಹಿಸಿಡಲು ಬೇಕಾದಷ್ಟು ಜಾಗ ಸಿಗುತ್ತದೆ. ನೀವು ಖಚಿತವಾಗಿ ಸೇವಿಸುವ ಆಹಾರಗಳನ್ನು ಮಾತ್ರ ಅದರಲ್ಲಿಡಿ, ಬೇಡದ ಆಹಾರಗಳನ್ನು ಖಂಡಿತ ಸಂಗ್ರಹಿಸಿಡಬೇಡಿ. ನಿಮ್ಮ ಫ್ರಿಜ್‌ ಅಚ್ಚುಕಟ್ಟಾಗಿದ್ದರೆ ಅದೆಷ್ಟೊ ಸಮಯ ಉಳಿಯುತ್ತದೆ.

ಡಬ್ಬಗಳಿಗೆ ಲೇಬಲ್‌ ಮಾಡದೇ ಇಟ್ಟಿರುವುದು: ಸಾಮಾನ್ಯವಾಗಿ ಎಲ್ಲರೂ ಆಹಾರ ಸಾಮಗ್ರಿಗಳನ್ನು ಡಬ್ಬಗಳಲ್ಲಿಯೇ ಸಂಗ್ರಹಿಸಿಟ್ಟಿರುತ್ತಾರೆ. ನೀವು ಬಾಕ್ಸ್‌ಗಳಿಗೆ ಲೇಬಲ್‌ ಮಾಡದೇ ಇಟ್ಟರೆ, ಅದು ನಿಮ್ಮ ಕೆಲಸವನ್ನು ನಿಧಾನಗೊಳಿಸುತ್ತದೆ. ಹೇಗೆಂದರೆ ನಿಮಗೆ ಬೇಕಾದ ವಸ್ತು ತೆಗೆದುಕೊಳ್ಳಲು ನೀವು ಎಲ್ಲಾ ಡಬ್ಬಗಳನ್ನು ತೆರೆದು ನೊಡಬೇಕಾಗುತ್ತದೆ. ಇದರಲ್ಲಿಯೇ ನಿಮ್ಮ ಸಮಯ ವ್ಯರ್ಥವಾಗಿಬಿಡುತ್ತದೆ. ಮಸಾಲೆಗಳಿಂದ ಹಿಡಿದು ಬೇಳೆಕಾಳುಗಳವರೆಗಿನ ಎಲ್ಲಾ ಡಬ್ಬಗಳಿಗೂ ಮೊದಲು ಲೇಬಲ್‌ ಮಾಡಿ. ಲೇಬಲ್‌ ನೋಡಿದ ತಕ್ಷಣವೇ ನಿಮಗೆ ಬೇಕಾದ ವಸ್ತು ಅದರಲ್ಲಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದುಬಿಡುತ್ತದೆ. ಇದು ನಿಮ್ಮ ಬಹಳಷ್ಟು ಸಮಯ ಉಳಿಸುತ್ತದೆ.

ಅಡುಗೆಮನೆಯ ಕಟ್ಟೆಯ ಮೇಲೆ ದಿನಸಿಗಳನ್ನು ಇಡುವುದು: ಅಡುಗೆಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ಖರೀದಿಸಿ ತಂದಿರುತ್ತಾರೆ. ಹಣ್ಣು, ತರಕಾರಿಗಳು, ಬ್ರೆಡ್‌, ಮೊಟ್ಟೆ, ಬೆಣ್ಣೆ ಮುಂತಾದವುಗಳನ್ನು ಖರೀದಿಸುತ್ತಾರೆ. ಅದನ್ನು ತಂದು ಅಡುಗೆಮನೆಯ ಕಟ್ಟೆಯ ಮೇಲೆ ಹಾಗೆ ಬಿಡುತ್ತಾರೆ. ಇವೆಲ್ಲಾ ವಸ್ತುಗಳು ಇನ್ನೇನು ಅಡುಗೆಗೆ ಬೇಕು ಎಂದು ಅವುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡದೇ ಅವುಗಳನ್ನು ಹಾಗೆಯೇ ಇಟ್ಟರೆ ಆಗ ಅದು ನಿಮ್ಮ ಗೊಂದಲಕ್ಕೆ ಕಾರಣವಾಗುತ್ತದೆ. ಅದರಲ್ಲೂ ಅಡುಗೆ ಮನೆ ಚಿಕ್ಕದಾಗಿದ್ದರೆ ಕೈಕಾಲು ಆಡಿಸಲೂ ಜಾಗ ಸಾಲುವುದಿಲ್ಲ. ಅಡುಗೆಮನೆ ಮತ್ತು ಕಟ್ಟೆ ಅದೆಷ್ಟೇ ಚಿಕ್ಕದಾಗಿದ್ದರೂ ವ್ಯವಸ್ಥಿತವಾಗಿ ಜೋಡಿಸಿಟ್ಟಾಗ ಅಡುಗೆ ಮಾಡಲು ಸಮಯೂ ಹೆಚ್ಚು ತಗಲುವುದಿಲ್ಲ.

ಅಡುಗೆ ಮನೆಗೆ ಸಂಬಂಧಿಸದ ವಸ್ತುಗಳನ್ನಿಡುವುದು: ಕೆಲವರಿಗೆ ಅದೊಂದು ಹವ್ಯಾಸವಿರುತ್ತದೆ. ಅಡುಗೆ ಮನೆಯೇತರ ವಸ್ತುಗಳನ್ನು ತಂದು ಅಡುಗೆ ಮನೆಯಲ್ಲಿಯೇ ಇರಿಸಿಕೊಳ್ಳುವುದು. ಕೆಲವೊಮ್ಮೆ ಅಡುಗೆಮನೆ ಗೋಡನ್‌ ರೀತಿಯಲ್ಲಿ ಕಾಣಿಸುತ್ತದೆ. ಅಡುಗೆಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಅಲ್ಲಿರಿಸಿ. ಆಗ ಹೆಚ್ಚು ಸ್ಥಳ ನಿಮ್ಮ ಬಳಕೆಗೆ ಸಿಗುತ್ತದೆ. ಅಡುಗೆಯ ಕೆಲಸವು ಬಹಳ ಸುಲಭವಾಗಿ ನಡೆಯುತ್ತದೆ.

ಈ ಮೇಲಿನ ಕ್ರಮಗಳು ನಿಮಗೆ ಸರಳ ಅನ್ನಿಸಬಹುದು, ಆದ್ರೆ ಅಡುಗೆಮನೆಯಲ್ಲಿ ನಿಮ್ಮ ಸಮಯವನ್ನು ಸಾಕಷ್ಟು ಹಾಳು ಮಾಡುವುದು ಈ ವಿಚಾರಗಳೇ. ಹಾಗಾಗಿ ಈ ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಂಡರೆ ಆದಷ್ಟು ಚುರುಕಾಗಿ ಅಡುಗೆ ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)