ಅಣಬೆ ಖಾದ್ಯ ತಿನ್ನಲು ಎಷ್ಟು ರುಚಿಕರವಾಗಿರುತ್ತದೆಯೋ, ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ; ಇಲ್ಲಿದೆ ಶುಚಿಗೊಳಿಸುವ ವಿಧಾನ
ಅಣಬೆ ಅಂದ್ರೆ ಕೆಲವರಿಗೆ ತುಂಬಾನೇ ಫೇವರಿಟ್. ಫಟಾಫಟ್ ಅಂತಾ ಮಶ್ರೂಮ್ ಬಳಸಿ,ರುಚಿಕರ ಖಾದ್ಯ ತಯಾರಿಸಲಾಗುತ್ತದೆ. ಅಣಬೆಯನ್ನು ಸರಿಯಾದ ಕ್ರಮದಲ್ಲಿ ಶುಚಿಗೊಳಿಸದಿದ್ದರೆ ಅದರಿಂದ ಅಡುಗೆಯ ರುಚಿಕೆಡಬಹುದು,ಆರೋಗ್ಯಕ್ಕೂ ಸಮಸ್ಯೆಯಾಗಬಹುದು. ಅಣಬೆಯನ್ನು ಕ್ಲೀನ್ ಮಾಡುವುದು ಹೇಗೆ?ಬಾಣಸಿಗ ರಣವೀರ್ ನೀಡಿರುವ ಟಿಪ್ಸ್ ಇಲ್ಲಿದೆ.
ಅಣಬೆ ಅಥವಾ ಮಶ್ರೂಮ್ ಪೆಪ್ಪರ್, ಡ್ರೈ, ಮಸಾಲಾ, ಮಶ್ರೂಮ್ ಪಲಾವ್, ಬಿರಿಯಾನಿ, ಫ್ರೈಡ್ ರೈಸ್ ಹೀಗೆ ಹಲವು ರುಚಿಕರ ಖಾದ್ಯಗಳನ್ನು ಅಣಬೆ ಬಳಸಿ ತಯಾರಿಸಲಾಗುತ್ತದೆ. ಅಣಬೆಯಲ್ಲಿರುವ ಫಾಲಿಕ್ ಅಸಿಡ್ ಮತ್ತು ಕಬ್ಬಿಣದ ಅಂಶ ದೇಹಕ್ಕೆ ಅಗತ್ಯವಾದ ಹಿಮೊಗ್ಲೋಬಿನ್ ಸಂಖ್ಯೆಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ಅಡುಗೆಗೆ ಮಶ್ರೂಮ್ ರುಚಿ ನೀಡುವುದಷ್ಟೇ ಅಲ್ಲ, ಅದರಿಂದ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳಿವೆ. ಅಣಬೆಯನ್ನು ಸರಿಯಾದ ಕ್ರಮದಲ್ಲಿ ಶುಚಿಗೊಳಿಸಿ, ಸೂಕ್ತ ರೀತಿ ಬೇಯಿಸಿ ಅಡುಗೆ ಮಾಡಿದರಷ್ಟೇ ಅದರ ರುಚಿ ಸವಿಯಲು ಸಾಧ್ಯ. ಅಣಬೆ ಸ್ವಚ್ಛಗೊಳಿಸುವ ಸರಿಯಾದ ಕ್ರಮ ಯಾವುದು? ಬಾಣಸಿಗ ರಣವೀರ್ ಅವರ ಟಿಪ್ಸ್ ಇಲ್ಲಿದೆ ನೋಡಿ.
ಅಣಬೆ ಸ್ವಚ್ಛಗೊಳಿಸುವುದು ಹೇಗೆ?
ಮೊದಲಿಗೆ ಪಾತ್ರೆಯೊಂದರಲ್ಲಿ ಅಣಬೆ ಹಾಕಬೇಕು. ಅದಕ್ಕೆ ಅಕ್ಕಿಹಿಟ್ಟು ಅಥವಾ ಗೋಧಿ ಪುಡಿ ಸೇರಿಸಿ ಎಲ್ಲಾ ಹೊಂದಿಕೊಳ್ಳೂವಂತೆ ಮಿಕ್ಸ್ ಮಾಡಿ. ಇದರಿಂದ, ಅಣಬೆ ಮೇಲಿರುವ ಕೊಳೆ ಸುಲಭದಲ್ಲಿ ಹೋಗುತ್ತದೆ. ಮೃದುವಾಗಿ ಉಜ್ಜಿದ ಬಳಿಕ, ಮಶ್ರೂಮ್ ಅನ್ನು ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡಿದರೆ ಅಣಬೆ ಸ್ವಚ್ಛವಾಗುತ್ತದೆ.
ಹೆಚ್ಚಿನ ಶಾಖದಲ್ಲಿ ಅಣಬೆ ಬೇಯಿಸಿ
ಅಣಬೆಯಿಂದ ಯಾವುದೇ ಅಡುಗೆ ತಯಾರಿಸುವಾಗ, ನಿಮಗೆ ಗರಿಗರಿಯಾಗಿ ಕ್ರಿಸ್ಪಿ ಅಣಬೆ ಬೇಕು ಎಂದಾದರೆ ಅದನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಬೇಕು. ಆಗ, ಮಶ್ರೂಮ್‌ನಲ್ಲಿರುವ ನೀರು ಹೊರಬರುವುದಿಲ್ಲ. ಇದರಿಂದ ಅಣಬೆ ಕ್ರಿಸ್ಪಿಯಾಗಿರುತ್ತದೆ. ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಸೇರಿಸಿದರೆ, ಅಣಬೆ ಕಂದು ಬಣ್ಣಕ್ಕೆ ತಿರುಗುತ್ತದೆ.
ಪಾನ್‌ನಲ್ಲಿ ಅಣಬೆ ಬೇಯಿಸಬೇಡಿ
ಅಣಬೆ ಬೇಯುವಾಗ ಎಲ್ಲ ಕಡೆಯೂ ಒಂದೇ ರೀತಿಯ ಶಾಖ ದೊರೆಯಬೇಕು. ಅಣಬೆ ಚೆನ್ನಾಗಿ ಬೇಯಲು, ಅದನ್ನು ತಿರುಗಿಸುತ್ತಿರಿ. ಸೂಕ್ತ ಮಿಶ್ರಣದಲ್ಲಿ ಉರಿಯಲ್ಲಿ ಬೆಂದರೆ ಮಾತ್ರ ತಿನ್ನಲು ರುಚಿಕರ. ಹೀಗಾಗಿ ಸಣ್ಣ ಪಾನ್ ಇದ್ದರೆ, ಅದರಲ್ಲಿ ಅಣಬೆ ಸರಿಯಾಗಿ ಬೇಯದೇ ಇರಬಹುದು. ಅದಕ್ಕಾಗಿ ದೊಡ್ಡ ಪಾತ್ರೆ ಅಗತ್ಯ.
ಅವಧಿ ಮುಗಿದ ದಿನಾಂಕ ಗಮನಿಸಿ
ಇಂದು ಮಾರುಕಟ್ಟೆಯಲ್ಲಿ ಅಣಬೆ ಸುಲಭವಾಗಿ ಸಣ್ಣ ಪ್ಯಾಕ್‌ಗಳಲ್ಲಿ ದೊರೆಯುತ್ತದೆ. ಅಣಬೆ ಖರೀದಿಸುವಾಗ, ಪ್ಯಾಕೆಟ್‌ನಲ್ಲಿ ತಯಾರಿಕೆಯ ದಿನಾಂಕ ಮತ್ತು ಅವಧಿ ಮುಗಿದ ದಿನಾಂಕ ಇರುವುದನ್ನು ಗಮನಿಸಿ, ತೆಗೆದುಕೊಳ್ಳಿ. ಅದನ್ನು ಗಮನಿಸದೇ ಹೋದರೆ, ಅಣಬೆ ಕೆಲವೊಮ್ಮೆ ಹಾಳಾಗಿರುವ ಸಾಧ್ಯತೆಯಿರುತ್ತದೆ. ಹೀಗಾಗಿ ಎಚ್ಚರಿಕೆ ಅಗತ್ಯ.
ಬ್ರೇಕ್‌ಫಾಸ್ಟ್, ಸ್ಟಾರ್ಟರ್‌ಗೆ ಬೆಸ್ಟ್
ಅಣಬೆ ಬಳಸಿಕೊಂಡು, ಕಡಿಮೆ ಸಮಯದಲ್ಲೇ ಸುಲಭದಲ್ಲಿ ರುಚಿಕರ ಖಾದ್ಯ ತಯಾರಿಸಬಹುದು. ಮಶ್ರೂಮ್ ಬಿರಿಯಾನಿ, ಫ್ರೈಡ್ ರೈಸ್, ಮಶ್ರೂಮ್ ಪಲಾವ್ ಬ್ರೇಕ್‌ಫಾಸ್ಟ್‌ಗೆ ಬೆಸ್ಟ್. ಅಗತ್ಯ ಪೋಷಕಾಂಶ ಮತ್ತು ರುಚಿಯೂ ಇರುವುದರಿಂದ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಮಶ್ರೂಮ್ ಗೋಬಿ, ಫ್ರೈ, ಕಬಾಬ್ ಕೂಡ ಬಹಳಷ್ಟು ಚಾಟ್ ಸೆಂಟರ್‌ಗಳಲ್ಲಿ ಫೇಮಸ್ ಆಗಿದೆ. ಸಂಜೆಯ ತಿನಿಸು, ರಾತ್ರಿಯ ಊಟಕ್ಕೆ ಸ್ಟಾರ್ಟರ್ ಆಗಿಯೂ ಅಣಬೆಯಿಂದ ರೆಸಿಪಿ ತಯಾರಿಸಬಹುದು.
ಐದೇ ನಿಮಿಷದಲ್ಲಿ ಮಶ್ರೂಮ್ ಡ್ರೈ ರೆಸಿಪಿ ತಯಾರಾಗುತ್ತದೆ
ಮಶ್ರೂಮ್ ಫ್ರೈ ಮತ್ತು ಪೆಪ್ಪರ್ ಡ್ರೈ ಐಟಂಗಳನ್ನು ಐದು ನಿಮಿಷದಲ್ಲೇ ತಯಾರಿಸಲು ಸಾಧ್ಯವಾಗುವುದರಿಂದ, ಮನೆಗೆ ದಿಢೀರನೆ ಅತಿಥಿಗಳು ಬಂದರೆ, ಅಡುಗೆ ಮಾಡಿ ಬಡಿಸುವುದು ಬಹಳ ಸುಲಭ.