ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ, ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡಿ: ಹೇಗೆ ಅಂದ್ರಾ? ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ, ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡಿ: ಹೇಗೆ ಅಂದ್ರಾ? ಇಲ್ಲಿದೆ ಟಿಪ್ಸ್

ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ, ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡಿ: ಹೇಗೆ ಅಂದ್ರಾ? ಇಲ್ಲಿದೆ ಟಿಪ್ಸ್

ಆಹಾರದ ಕಲಬೆರಕೆ ಸಾಮಾನ್ಯ ಸಮಸ್ಯೆ ಎಂಬ ಮಟ್ಟಿಗೆ ಬೆಳೆದು ಈಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ನಿತ್ಯ ಬದುಕಿನಲ್ಲಿ ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ ಎಲ್ಲವೂ ಕಲಬೆರಕೆಗೆ ಒಳಗಾಗಿವೆ. ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡೋದಕ್ಕೆ ಅನುಸರಿಸಬಹುದಾದ ಟ್ರಿಕ್ಸ್‌ ಇಲ್ಲಿವೆ ನೋಡಿ.

ಆಹಾರದ ಕಲಬೆರಕೆ ಪತ್ತೆಗೆ ಟ್ರಿಕ್ಸ್  (ಸಾಂಕೇತಿಕ ಚಿತ್ರ)
ಆಹಾರದ ಕಲಬೆರಕೆ ಪತ್ತೆಗೆ ಟ್ರಿಕ್ಸ್ (ಸಾಂಕೇತಿಕ ಚಿತ್ರ) (HT Telugu)

ತಿರುಪತಿ ಲಡ್ಡು ಪ್ರಸಾದಕ್ಕೆ ಬಳಕೆಯಾದ ಕಲಬೆರಕೆ ತುಪ್ಪದ ವಿಚಾರ ಈಗ ಮನೆಮಾತು. ಹೌದು, ಆಹಾರದ ಕಲಬೆರಕೆ ಸದ್ಯ ನಾವು ನೀವು ಎಲ್ಲರೂ ಎದುರಿಸುತ್ತಿರುವ ನಿತ್ಯದ ಸಮಸ್ಯೆ, ಸವಾಲುಗಳ ಪೈಕಿ ಪ್ರಮುಖವಾದುದು. ಕಡಿಮೆ ವೆಚ್ಚದಲ್ಲಿ ಹೆಚ್ಚು ಗಳಿಸಬೇಕು ಎಂಬ ದುರಾಸೆಯಿಂದ ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡಿ ಮನಬಂದಂತೆ ಮಾರಾಟ ಮಾಡಲಾಗುತ್ತಿದೆ. ಹಾಲಿನಿಂದ ಹಿಡಿದು ಧಾನ್ಯಗಳವರೆಗೆ, ಜೀರಿಗೆಯಿಂದ ಹಿಡಿದು ಚಹಾದವರೆಗೆ ಕಲಬೆರಕೆ ಯಥೇಚ್ಚವಾಗಿ ನಡೆಯುತ್ತಿದೆ. ಹಾಲಿಗೆ ನೀರು ಸೇರಿಸುವುದು, ಬೆಣ್ಣೆಗೆ ಪಿಷ್ಟವನ್ನು ಸೇರಿಸುವುದು ಅಥವಾ ಗುಣಮಟ್ಟದ ಧಾನ್ಯಗಳನ್ನು ಕಡಿಮೆ ಗುಣಮಟ್ಟದ ಧಾನ್ಯಗಳೊಂದಿಗೆ ಕಲಬೆರಕೆ ಮಾಡುವುದು ಸಾಮಾನ್ಯ. ಆದರೆ ಈ ಕಲಬೆರಕೆಯನ್ನು ಹೇಗೆ ಪತ್ತೆ ಹಚ್ಚುವುದು. ಅದಕ್ಕೇನು ಉಪಾಯ ಅಂತ ತಿಳಿಯೋದು ಮುಖ್ಯ.

ಕಲಬೆರಕೆ ಆಹಾರ ತಿಳಿಯುವ ಉಪಾಯ ಇದು..

1) ಜೇನು: ಒಂದು ಲೋಟ ನೀರಿಗೆ ಕೆಲವು ಹನಿ ಜೇನುತುಪ್ಪ ಸೇರಿಸಿ. ಜೇನುತುಪ್ಪವು ನೀರಿನ ತಳ ಸೇರಿದರೆ ಅದು ಶುದ್ಧವಾಗಿದೆ ಎಂದರ್ಥ. ಜೇನುತುಪ್ಪಕ್ಕೆ ಸಾಮಾನ್ಯವಾಗಿ ಸಕ್ಕರೆ ಅಥವಾ ಬೆಲ್ಲದ ಪಾಕ ಸೇರಿಸಲಾಗುತ್ತದೆ. ಹಾಗೆ ಮಾಡಿದರೆ ಅದು ನೀರಿನಲ್ಲಿ ಕರಗುತ್ತದೆ.

2) ಅರಿಶಿನ ಮತ್ತು ಮೆಣಸಿನ ಪುಡಿ: ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಅರಿಶಿನ ಪುಡಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಬಿಡಿ. ಶುದ್ಧ ಹಳದಿ ನೀರು ಲೋಟದ ಕೆಳಗೆ ಸಂಗ್ರಹವಾಗಿ ಉಳಿದ ಭಾಗ ಪಾರದರ್ಶಕವಾಗುತ್ತದೆ. ಕಲಬೆರಕೆಯಾಗಿದ್ದರೆ ನೀರಿನ ಬಣ್ಣ ಬದಲಾಗುತ್ತೆ. ಇದೇ ತಂತ್ರ ಕರಿಮೆಣಸಿನ, ಕೆಂಪು ಮೆಣಸಿನ ಪುಡಿಗೂ ಬಳಸಬಹುದು.

3) ಹಾಲು: ಯಾವುದೇ ಪಾತ್ರೆಯ ಮೇಲೆ ಒಂದು ಹನಿ ಹಾಲನ್ನು ಹಾಕಿ . ಹಾಲು ಯಾವುದೇ ಕಲೆ ಇಲ್ಲದೆ ಕೆಳಗೆ ಬಿದ್ದರೆ, ಹಾಲಿಗೆ ನೀರು ಸೇರಿದೆ ಎಂದು ಅರ್ಥ. ಅಲ್ಲದೆ ಹಾಲು ಚೆನ್ನಾಗಿ ಕಲಸಿ ನೊರೆ ಬಂದರೆ ಕಲಬೆರಕೆ ಎಂದು ತಿಳಿಯಬಹುದು.

4) ಚಹಾ, ಕಾಫಿ: ಒದ್ದೆ ಕಾಗದದ ಮೇಲೆ ಸ್ವಲ್ಪ ಟೀ ಪುಡಿ ಉದುರಿಸಿ. ಅಲ್ಲಿ ಇನ್ನೇನಾದರೂ ಬಣ್ಣ ಕಾಣಿಸಿಕೊಂಡರೆ, ಚಹಾ ಪುಡಿಗೆ ಬಣ್ಣ ಸೇರಿಸಲಾಗಿದೆ ಎಂದು ಅರ್ಥ. ಕಾಫಿ ಪುಡಿ ಪರೀಕ್ಷಿಸಲು, ನೀರಿಗೆ ಸ್ವಲ್ಪ ಕಾಫಿ ಪುಡಿ ಸೇರಿಸಿ. ಶುದ್ಧ ಕಾಫಿ ಕೆಳಭಾಗಕ್ಕೆ ತಲುಪುವ ಮೊದಲು ಕೆಲ ಸೆಕೆಂಡು ನೀರಿನ ಮೇಲೆ ತೇಲುತ್ತದೆ. ಕಲಬೆರಕೆ ಬೇಗ ತಳ ಮುಟ್ಟುತ್ತದೆ.

5) ತರಕಾರಿ: ಹಣ್ಣು ಮತ್ತು ಕೆಲವು ತರಕಾರಿ ಕಲಬೆರಕೆಯಾಗಿದೆ ಎಂಬ ಅನುಮಾನ ಇದ್ದರೆ, ಹತ್ತಿ ಉಂಡೆಯನ್ನು ನೀರು ಅಥವಾ ಎಣ್ಣೆಯಲ್ಲಿ ಅದ್ದಿ ತರಕಾರಿ ಅಥವಾ ಹಣ್ಣುಗಳ ಮೇಲೆ ಉಜ್ಜಿ. ಹತ್ತಿಯ ಬಣ್ಣ ಬದಲಾದರೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂದರ್ಥ.

6) ಗೋಧಿ ಹಿಟ್ಟು: ಒಂದು ಲೋಟ ನೀರಿಗೆ ಒಂದು ಚಮಚ ಹಿಟ್ಟು ಮಿಕ್ಸ್ ಮಾಡಿ. ಕಲಬೆರಕೆ ಮಾಡದ ಹಿಟ್ಟು ನೀರಿನ ತಳಕ್ಕೆ ಇಳಿಯುತ್ತದೆ. ನೀರು ಸ್ಪಷ್ಟವಾಗಿ ಕಾಣುತ್ತದೆ. ಕಲಬೆರಕೆ ಇದ್ದರೆ ನೀರಿನ ಬಣ್ಣ ಬದಲಾಗುತ್ತೆ.

7) ಬೆಣ್ಣೆ: ಒಂದು ಚಮಚ ಬೆಣ್ಣೆ ಕರಗಿಸಿ. ಶುದ್ಧ ಬೆಣ್ಣೆ ಕರಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕಲಬೆರಕೆ ಬೆಣ್ಣೆಯು ಕರಗಲು ಹೆಚ್ಚು ಸಮಯ ಬೇಕು. ಕೊನೆಗೆ ಬಿಳಿ ಅವಶೇ‍ಷ ಇರುತ್ತೆ.

8) ತೆಂಗಿನ ಎಣ್ಣೆ: ಫ್ರಿಡ್ಜ್‌ನಲ್ಲಿ ಸ್ವಲ್ಪ ಎಣ್ಣೆ ಇಡಿ. ಎಣ್ಣೆ ಗಟ್ಟಿಯಾದರೆ ಅದು ಶುದ್ಧವಾಗಿದೆ ಎಂದರ್ಥ. ಇತರ ಎಣ್ಣೆಗಳೊಂದಿಗೆ ಕಲಬೆರಕೆ ಮಾಡಿದ ತೆಂಗಿನ ಎಣ್ಣೆ ಹೆಪ್ಪುಗಟ್ಟುವುದಿಲ್ಲ.

ಕಲಬೆರಕೆಯ ಪರಿಣಾಮ: ಆಹಾರ ಕಲಬೆರಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಫುಡ್ಸ್ ಜರ್ನಲ್ 2023 ರಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಹೆಚ್ಚು ಕಲಬೆರಕೆ ಆಹಾರವನ್ನು ಸೇವಿಸುವ ಜನರು ಅತಿಸಾರ, ಹೃದ್ರೋಗ, ಅಲರ್ಜಿಗಳು, ವರ್ಟಿಗೋ, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

Whats_app_banner