Curd-Making Errors; ಮನೆಯಲ್ಲಿ ಹಾಲು ಹೆಪ್ಪು ಹಾಕಿದ ನಂತರ ಈ ತಪ್ಪು ಮಾಡದಿದ್ದರೆ ಗಟ್ಟಿ ಮೊಸರು ರೆಡಿ ಆಗುತ್ತೆ
How to Make Perfect Curd; ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ ಎಂಬುದು ಹಲವರ ಸಹಜ ಕುತೂಹಲದ ಪ್ರಶ್ನೆ. ಮನೆಯಲ್ಲಿ ಹಾಲು ಹೆಪ್ಪು ಹಾಕಿದ ನಂತರ ಈ ತಪ್ಪು ಮಾಡದಿದ್ದರೆ ಗಟ್ಟಿ ಮೊಸರು ರೆಡಿ ಆಗುತ್ತೆ. ಹೌದು 5 ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ. ಅವನ್ನು ಗಮನಿಸಿ ಸಾಕು.
ಹೋಟೆಲ್, ರೆಸ್ಟೋರಂಟ್‌ಗೆ ಊಟಕ್ಕೆ ಹೋದರೆ ಅಲ್ಲಿ ಮಣ್ಣಿನ ಗಡಿಗೆಯಲ್ಲಿ, ಕಪ್‌ನಲ್ಲಿ ಗಟ್ಟಿ ಮೊಸರು ತಂದು ಕೊಟ್ಟರೆ ಅದನ್ನು ಸವಿಯುವಾಸೆ ಎಂಥವರಿಗೂ ಆಗುತ್ತೆ. ಮಕ್ಕಳಂತೂ, “ಅಮ್ಮ ನಂಗೆ ಇದೇ ತರ ಮೊಸರು ಮನೆಯಲ್ಲೂ ಮಾಡಿಕೊಡು” ಅಂತ ದಂಬಾಲು ಬೀಳುವುದನ್ನೂ ಗಮನಿಸಿರಬಹುದು.
ಪ್ರತಿ ಮನೆಯಲ್ಲೂ ಮೊಸರು ಬಳಕೆ ಇದ್ದೇ ಇರುತ್ತೆ. ಮಜ್ಜಿಗೆ, ಲಸ್ಸಿ, ರಾಯ್ತ ಮುಂತಾದವುಗಳಿಗೆ ಮೊಸರು ಬೇಕೇ ಬೇಕು. ಪ್ರಮುಖ ಡೇರಿ ಉತ್ಪನ್ನಗಳ ಬ್ರ್ಯಾಂಡ್‌ಗಳು ಗಟ್ಟಿಮೊಸರನ್ನು ಗ್ರಾಹಕರಿಗೆ ತಲುಪಿಸುತ್ತವೆ. ಜನ ಸಾಮಾನ್ಯರಿಗೆ ಈ ಮಾದರಿ ಬ್ರಾಂಡೆಡ್ ಮೊಸರು ಸ್ವಲ್ಪ ಹೊರೆಯಾಗಬಹುದು. ಬಜೆಟ್ ನೋಡುವವರು ಸಾಮಾನ್ಯವಾಗಿ ಮನೆಯಲ್ಲೇ ಇಂತಹ ಗಟ್ಟಿ ಮೊಸರು ತಯಾರಿಸಲು ಪ್ರಯತ್ನಿಸುತ್ತಾರೆ. ಅನೇಕರು ಇದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ಹಲವರಿಗೆ ಗಟ್ಟಿ ಮೊಸರು ಮಾಡುವ ‘ರಹಸ್ಯ ಕೌಶಲ’ ಕರಗತವಾಗಿಲ್ಲ. ಗಟ್ಟಿ ಮೊಸರು ಮಾಡುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು ಅದಕ್ಕೆ ಕಾರಣ. ಆಗ ಹತಾಶರಾಗುತ್ತಾರೆ. ನಿಜವಾಗಿ ಹತಾಶರಾಗಬೇಕಾದ್ದಿಲ್ಲ. ಇಂದು ಹಾಲಿಗೆ ಹಪ್ಪು ಹಾಕಿ ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸಿ, ಅರಿವಿಲ್ಲದೇ ಆಗುವ ತಪ್ಪುಗಳನ್ನು ಸರಿಪಡಿಸಿದರೆ ಸಾಕು. ನಾಳೆಯೇ ನೀವು ಗಟ್ಟಿಮೊಸರು ಸವಿಯಬಹುದು.
ಮನೆಯಲ್ಲಿ ಗಟ್ಟಿಮೊಸರು ಮಾಡುವಾಗ ಮಾಡಬಾರದ ತಪ್ಪುಗಳಿವು
1) ಅರ್ಧ ಲೀಟರ್ ಹಾಲಿಗೆ ಅರ್ಧ ಲೀಟರ್ ನೀರು ಸೇರಿಸಬೇಡಿ- ಅರ್ಧ ಲೀಟರ್ ಹಾಲಿಗೆ ಅರ್ಧ ಲೀಟರ್ ನೀರು ಸೇರಿಸಿ ಕುದಿಸಿ, ಉಗುರುಬೆಚ್ಚಗಿನ ಸ್ಥಿತಿ ಬಂದಾಗ ಹೆಪ್ಪು ಹಾಕಿ ಗಟ್ಟಿ ಮೊಸರು ಆಗಲಿಲ್ಲ ಎಂದು ಬೈಯ್ಕೋಬೇಡಿ. ಹಾಲು ಕೂಡ ಮಂದವಾಗಿರಬೇಕು. ಅಂದರೆ ಅದಕ್ಕೆ ಇನ್ನೇನೋ ಮಿಕ್ಸ್ ಮಾಡಬೇಕು ಅಂತ ಅಲ್ಲ. ಹಾಲಿಗೆ ನೀರು ಸೇರಿಸದೇ ತಾಜಾ ಹಾಲನ್ನು ಗಟ್ಟಿ ಮೊಸರು ಮಾಡಲು ಬಳಸಬೇಕು.
2) ಹಸಿ ಹಾಲಿಗೆ ಹೆಪ್ಪು ಹಾಕಬೇಡಿ - ಹೌದು ಗಟ್ಟಿ ಮೊಸರು ಮಾಡಬೇಕಾದರೆ ಹಸಿ ಹಾಲಿಗೆ ಹೆಪ್ಪು ಹಾಕಬೇಡಿ. ಕುದಿಸಿದ ಹಾಲಿಗೆ ಹೆಪ್ಪು ಹಾಕಬೇಕು. ಹಾಗಂತ ಕುದಿಸಿದ ಹಾಲಿಗೆ ನೇರವಾಗಿ ಹೆಪ್ಪು ಹಾಕಿದರೆ ಹಾಲು ಒಡೆದು ಹೋದಿತು. ಕುದಿಸಿದ ಹಾಲು ಉಗುರುಬೆಚ್ಚಗಿನ ಸ್ಥಿತಿಗೆ ಬಂದಾಗ ಹೆಪ್ಪು ಹಾಕಬೇಕು.
3) ತಣ್ಣನೆ ಹಾಲಿಗೆ ಹೆಪ್ಪು ಹಾಕಬೇಡಿ- ಪೂರ್ತಿ ತಣ್ಣಗಾಗಿರುವ ಹಾಲಿಗೆ ಹೆಪ್ಪು ಹಾಕಬೇಡಿ. ಹಾಕಿದರೆ ಮೊಸರಾಗುತ್ತೆ. ಆದರೆ ಗಟ್ಟಿ ಮೊಸರು ಆಗಲ್ಲ. ಒಂದೊಮ್ಮೆ ಕುದಿಸಿದ ಹಾಲು ರಾತ್ರಿ ಹೊತ್ತಿಗೆ ತಣ್ಣಗಾಗಿದ್ದರೆ, ಅದನ್ನು ಲೈಟಾಗಿ ಬಿಸಿ ಮಾಡಬೇಕು (ಉಗುರುಬೆಚ್ಚಗಿನ ಬಿಸಿ). ನಂತರ ಹೆಪ್ಪು ಹಾಕಬೇಕು.
4) ಹೆಪ್ಪಿನ ಪ್ರಮಾಣದ ಕಡೆಗೂ ಗಮನಕೊಡಿ- ಅರ್ಧ ಲೀಟರ್ ಹಾಲಿಗೆ 50 ಮಿಲ್ಲಿ ಮೊಸರು / ಮಜ್ಜಿಗೆ ಹೆಪ್ಪು ಹಾಕಿದರೆ ಆಗದು. ಅದು ಮೊಸರಿನ ರುಚಿ ಕೆಡಿಸುತ್ತೆ ಅಂದರೆ ಸಿಕ್ಕಾಪಟ್ಟೆ ಹುಳಿಯಾಗುವಂತೆ ಮಾಡುತ್ತದೆ. ಹೀಗಾಗಿ ಅರ್ಧ ಲೀಟರ್ ಹಾಲಿಗೆ ಪುಟ್ಟ ಚಮಚದಲ್ಲಿ ಒಂದು ಚಮಚ ಮೊಸರು ಹಾಕಿ.
5) ಹಾಲಿಗೆ ಹೆಪ್ಪು ಹಾಕಿದ ಕೂಡಲೆ ಮುಚ್ಚಿಡಬೇಡಿ- ಉಗುರುಬೆಚ್ಚಗಿನ ಹಾಲಿಗೆ ಹೆಪ್ಪು ಹಾಕಿದ ಕೂಡಲೇ ಮುಚ್ಚಿಡಬೇಡಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಎರಡು ಪಾತ್ರೆಗಳನ್ನು ಬಳಸಿಕೊಂಡು ಹೆಪ್ಪು ಹಾಕಿದ ಹಾಲನ್ನು ಆ ಪಾತ್ರದಿಂದ ಈ ಪಾತ್ರಕ್ಕೆ, ಈ ಪಾತ್ರದಿಂದ ಆ ಪಾತ್ರಕ್ಕೆ ಒಂದು ಐದು ಸಲ ಮಿಕ್ಸ್ ಮಾಡಿ (ಪಾನಕದಲ್ಲಿ ಸಕ್ಕರೆ ಕರಗಿಸಲು ಮಾಡತ್ತೇವಲ್ಲ ಆ ರೀತಿ). ನಂತರ ಹೆಪ್ಪು ಹಾಕಿದ ಹಾಲನ್ನು ಮುಚ್ಚಿ ಇಡಿ.
ಗಟ್ಟಿ ಮೊಸರು ಬೇಕಾದರೆ ಹೀಗೆ ಮಾಡಿದರೆ ಸಾಕು
ಗಟ್ಟಿ ಮೊಸರು ಮಣ್ಣಿನ ಗಡಿಗೆಯಲ್ಲಿ ಅಥವಾ ಪುಟ್ಟ ಸ್ಟೀಲ್ ಪಾತ್ರೆಯಲ್ಲಿ ಲೋಟದಲ್ಲಿ ಬೇಕು ಎಂದಾದರೆ ಆ ಹೆಪ್ಪು ಹಾಕಿದ ಹಾಲನ್ನು ಗಡಿಗೆ, ಸ್ಟೀಲ್ ಲೋಟ ಮುಂತಾದವುಗಳಿಗೆ ಸುರಿದು ಮುಚ್ಚಿ ಇಡಿ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸಿಗುವ ಅದೇ ಮಾದರಿಯ ಗಟ್ಟಿ ಮೊಸರು ಮನೆಯಲ್ಲೂ ಸಿದ್ಧವಾಗಿರುತ್ತದೆ.
ಈ ಸಾಮಾನ್ಯ ತಪ್ಪುಗಳಿಗೆ ಗಮನ ಕೊಟ್ಟು ಸರಿ ಮಾಡಿದರೆ ಸಾಕು. ಮನೆಯಲ್ಲಿ ನೀವು ನಿತ್ಯವೂ ನಿಮ್ಮ ಆಹಾರದ ಜೊತೆಗೆ ಗಟ್ಟಿ ಮೊಸರು ಸವಿಯಬಹುದು, ಕೆನೆ ಮೊಸರು ಊಟ ಮಾಡಬಹುದು.
ವಿಭಾಗ