ಮಸಾಲೆ ದೋಸೆ ತಯಾರಿಸೋಕೆ ಹೋಟೆಲ್‌ನಲ್ಲಿ ಬಳಸೋದು ಇದೇ ರೀತಿಯ ತವಾ; ಕಬ್ಬಿಣದ ಕಾವಲಿ ಪಳಗಿಸುವ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಸಾಲೆ ದೋಸೆ ತಯಾರಿಸೋಕೆ ಹೋಟೆಲ್‌ನಲ್ಲಿ ಬಳಸೋದು ಇದೇ ರೀತಿಯ ತವಾ; ಕಬ್ಬಿಣದ ಕಾವಲಿ ಪಳಗಿಸುವ ವಿಧಾನ ಇಲ್ಲಿದೆ

ಮಸಾಲೆ ದೋಸೆ ತಯಾರಿಸೋಕೆ ಹೋಟೆಲ್‌ನಲ್ಲಿ ಬಳಸೋದು ಇದೇ ರೀತಿಯ ತವಾ; ಕಬ್ಬಿಣದ ಕಾವಲಿ ಪಳಗಿಸುವ ವಿಧಾನ ಇಲ್ಲಿದೆ

ಪರ್ಫೆಕ್ಟ್‌ ದೋಸೆ ಮಾಡಬೇಕೆಂದರೆ ಹಿಟ್ಟು ತಯಾರಿಕೆಯಷ್ಟೇ ತಯಾರಿಸುವ ಕಾವಲಿಯೂ ಅಷ್ಟೇ ಮುಖ್ಯವಾಗಿರುತ್ತದೆ. ಹೋಟೆಲ್‌ಗಳಲ್ಲಿ ಕಬ್ಬಿಣದ ಕಾವಲಿ ಬಳಸುತ್ತಾರೆ. ನೀವೂ ಕಬ್ಬಿಣದ ಕಾವಲಿ ಬಳಸಿದರೆ ಹೋಟೆಲ್‌ನಷ್ಟೇ ರುಚಿಯಾದ , ಕ್ರಿಸ್ಪಿ ಮಸಾಲೆ ದೋಸೆ ತಯಾರಿಸಬಹುದು, ಕಬ್ಬಿಣದ ಬಾಣಲಿಯನ್ನು ಮನೆಗೆ ತಂದ ನಂತರ ಅದನ್ನು ಪಳಗಿಸಬೇಕು, ವಿಧಾನ ಇಲ್ಲಿದೆ.

ಕಬ್ಬಿಣದ ಕಾವಲಿ ಪಳಗಿಸುವ ವಿಧಾನ (ಸಾಂದರ್ಭಿಕ ಚಿತ್ರ)
ಕಬ್ಬಿಣದ ಕಾವಲಿ ಪಳಗಿಸುವ ವಿಧಾನ (ಸಾಂದರ್ಭಿಕ ಚಿತ್ರ)

ದೋಸೆ, ಬಹುತೇಕ ಜನರ ಅಚ್ಚುಮೆಚ್ಚಿನ ತಿಂಡಿ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ಸ್ನಾಕ್ಸ್‌, ರಾತ್ರಿ ಊಟ ಯಾವಾಗಲಾದರೂ ದೋಸೆಯನ್ನು ಸವಿಯಬಹುದು. ಹಿಂದಿನ ದಿನ ದೋಸೆ ಹಿಟ್ಟು ರುಬ್ಬಿ ಫರ್ಮೆಂಟ್‌ ಆಗಲು ಬಿಟ್ಟರೆ ಸಾಕು ಮರುದಿನ ಚಟ್ನಿ ಮಾಡಿ ದೋಸೆ ಹೊಯ್ದುರೆ, ಕೆಲಸವೂ ಸುಲಭ, ಒಂದೊಳ್ಳೆ ಬ್ರೇಕ್‌ಫಾಸ್ಟ್‌ ತಿಂದ ಖುಷಿ. ಸುಲಭವಾಗಿ, ಕಡಿಮೆ ಅವಧಿಯಲ್ಲಿ ರುಚಿಯಾಗಿ ತಯಾರಾಗುವ ತಿಂಡಿಗಳಲ್ಲಿ ದೋಸೆಯೂ ಒಂದು.

ಹಿಟ್ಟು ಹದವಾಗಿರುವ ಜೊತೆಗೆ ದೋಸೆ ಮಾಡಲು ಒಳ್ಳೆ ಕಾವಲಿಯೂ ಅಗತ್ಯ

ಈಗಂತೂ ಹೋಟೆಲ್‌ಗಳಲ್ಲಿ ವೆರೈಟಿ ವೆರೈಟಿ ದೋಸೆ ದೊರೆಯುತ್ತದೆ. ಖಾಲಿ ದೋಸೆ, ಮಸಾಲೆ ದೋಸೆ, ಪನೀರ್‌ ದೋಸೆ, ಬಟರ್‌ ದೋಸೆ, ರವೆ ದೋಸೆ, ಈರುಳ್ಳಿ ದೋಸೆ. ಹೀಗೆ ಹೋಟೆಲ್‌ಗೆ ಹೋದರೆ ಆಲೂಗಡ್ಡೆ ಪಲ್ಯದ ಜೊತೆ ಕೊಡುವ ಕಂದು ಬಣ್ಣದ ಕ್ರಿಸ್ಪಿ ದೋಸೆ ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಆದರೆ ಮನೆಯಲ್ಲಿ ಅದೇ ರೀತಿ ಮಾಡಲು ಹೋದರೆ ಏಕೆ ಬರುವುದಿಲ್ಲ? ಹೋಟೆಲ್‌ನಲ್ಲಿ ಬಳಸುವಂತೆಯೇ ನಾವೂ ಸರಿಯಾದ ಸಾಮಗ್ರಿಗಳನ್ನು ಬಳಸುತ್ತೇವೆ, ಹಿಟ್ಟು ರುಬ್ಬುತ್ತೇವೆ, ಅದನ್ನು ಹುದುಗಲು ಬಿಡುತ್ತೇವೆ. ಆದರೂ ಹೋಟೆಲ್‌ನಂತೆ ಕಂದು ಬಣ್ಣದ ದೋಸೆ ಏಕೆ ಬರುವುದಿಲ್ಲ, ಎಲ್ಲಿ ತಪ್ಪು ಆಗುತ್ತಿದೆ ಎಂದು ಯೋಚಿಸುವವರಿಗೆ ಇಲ್ಲಿದೆ ಉತ್ತರ. ಎಲ್ಲಾ ಸಾಮಗ್ರಿಗಳನ್ನೂ ಬಳಸುತ್ತಿದ್ದೀರಿ, ಆದರೆ ಒಳ್ಳೆ ದೋಸೆ ಕಾವಲಿ?

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ನಾನ್‌ಸ್ಟಿಕ್‌ ತವಾ ಬಳಸುತ್ತಾರೆ. ಕೆಲವರು ಚಪಾತಿ, ರೊಟ್ಟಿ ಮಾಡುವ ತವಾವನ್ನು ದೋಸೆ ಮಾಡಲು ಕೂಡಾ ಬಳಸುತ್ತಾರೆ. ದೋಸೆ ರುಚಿಯಾಗಿರಬೇಕು, ಕಂದು ಬಣ್ಣ ಬರಬೇಕು ಎಂದರೆ ಅದಕ್ಕೆ ಒಂದಿಷ್ಟಾದರೂ ತುಪ್ಪ ಅಥವಾ ಎಣ್ಣೆ ಹಾಕಬೇಕು, ಆದರೆ ನಾನ್‌ಸ್ಟಿಕ್‌ ತವಾಗೆ ಅಷ್ಟು ಎಣ್ಣೆ ಹಾಕುವಂತಿಲ್ಲ. ಇನ್ನು ರೊಟ್ಟಿ, ಚಪಾತಿ ಮಾಡಿದ ತವಾಗಳು ಹಾಳಾಗಿರುತ್ತವೆ. ಅದರಲ್ಲೇ ನೀವು ದೋಸೆ ಹಾಕಲು ಪ್ರಯತ್ನಿಸಿದರೆ, ಆ ದೋಸೆ, ತವಾ ಬಿಟ್ಟು ಮೇಲೆ ಏಳುವುದೇ ಇಲ್ಲ. ಆದ್ದರಿಂದ ನೀವು ದೋಸೆ ಹೊಯ್ಯಲು ಬಳಸಬೇಕಾದದ್ದು ಕಬ್ಬಿಣದ ಕಾವಲಿ. ನೀವು ಮುಂದಿನ ಬಾರಿ ಹೋಟೆಲ್‌ಗೆ ಹೋದರೆ ಅಲ್ಲಿ ಗಮನಿಸಿ. ಅಲ್ಲಿ ಬಳಸುವುದೇ ಕಬ್ಬಿಣದ ಕಾವಲಿ, ಯಾವ ಹೋಟೆಲ್‌ನಲ್ಲೂ ನಾನ್‌ಸ್ಟಿಕ್‌ ತವಾ ಬಳಸುವುದಿಲ್ಲ.

ಕಬ್ಬಿಣದ ಕಾವಲಿ ಪಳಗಿಸುವ ವಿಧಾನ

ನೀವೂ ಕೂಡಾ ಮನೆಗೆ ಕಬ್ಬಿಣದ ಕಾವಲಿ ಕೊಂಡು ತನ್ನಿ, ಆಗ ಹೋಟೆಲ್‌ಗಿಂತ ರುಚಿಯಾದ ಮಸಾಲೆ ದೋಸೆಯನ್ನು ಮನೆಯಲ್ಲೇ ತಯಾರಿಸಬಹುದು. ಆದರೆ ನೀವು ಮಾರ್ಕೆಟ್‌ನಿಂದ ತಂದ ಕಬ್ಬಿಣದ ಕಾವಲಿಯನ್ನು ಆಗಿಂದಾಗ್ಗೆ ಬಳಸಲು ಸಾಧ್ಯವಿಲ್ಲ. ಅದಕ್ಕೂ ಮುನ್ನ ಅದನ್ನು ಪಳಗಿಸಬೇಕು.

  • ಕಬ್ಬಿಣದ ಕಾವಲಿಯನ್ನು ಪಳಗಿಸುವ ವಿಧಾನ ಹೀಗಿದೆ.
  • ಮೊದಲಿಗೆ ಕಾವಲಿಯನ್ನು ಅಕ್ಕಿ ತೊಳೆದ ನೀರಿನಲ್ಲಿ ಒಂದು ದಿನ ಪೂರ್ತಿ ನೆನೆಸಬೇಕು.
  • ಮರುದಿನ ಸ್ಟೌವ್‌ ಮೇಲೆ ಕಾವಲಿ ಬಿಸಿ ಮಾಡಿ ಎಣ್ಣೆ ಸವರಿ ಸ್ಟೌವ್‌ ಆಫ ಮಾಡಬೇಕು.
  • ಕಾವಲಿ ತಣ್ಣಗಾದ ನಂತರ ಮತ್ತೆ ಬಿಸಿ ಮಾಡಿ ಎಣ್ಣೆ ಸವರಿ ಇಡಬೇಕು, ಇದೇ ರೀತಿ 5-6 ಸಲ ರಿಪೀಟ್‌ ಮಾಡಿ.
  • ಕಾವಲಿಗೆ ಈ ರೀತಿ ಎಣ್ಣೆ ಸವರುವುದರಿಂದ ಕಾವಲಿಯ ಮೇಲ್ಮೈ ನುಣುಪು ಆಗುತ್ತದೆಇದಾದ ನಂತರ ಒಮ್ಮ ಕಾವಲಿಯನ್ನು ತೊಳೆದು ಮತ್ತೆ ಎಣ್ಣೆ ಸವರಿ ದೋಸೆ ಹೊಯ್ಯಬಹುದು.
  • ಅಥವಾ ಕಾವಲಿ ಕಾದ ನಂತರ ನೀರು ಚಿಮುಕಿಸಿ ದೋಸೆ ಹೊಯ್ದು ನಂತರ ಅದರ ಮೇಲೆ ಎಣ್ಣೆ/ತುಪ್ಪ ಸವರಬಹುದು.
  • ಈ ರೀತಿ ಮಾಡಿದರೆ ದೋಸೆ ಕ್ರಿಸ್ಪಿಯಾಗಿ, ಕಂದು ಬಣ್ಣಕ್ಕೆ ಬರೋದು ಗ್ಯಾರಂಟಿ.
  • ಪ್ರತಿ ಬಾರಿ ದೋಸೆ ಮಾಡಿ ಮುಗಿಸಿದ ನಂತರ ಕಾವಲಿಯನ್ನು ತೊಳೆದು ಒರೆಸಿ ಸ್ವಲ್ಪ ಎಣ್ಣೆ ಸವರಿ ಇಡಿ.

ಕಬ್ಬಿಣದ ಕಾವಲಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ, ಆರೋಗ್ಯಕ್ಕೂ ಒಳ್ಳೆಯದು

Whats_app_banner